Site icon ಒಡನಾಡಿ

ಸೂಪಾ ಜಲಾಶಯ ಭರ್ತಿಗೆ ಇನ್ನೆಷ್ಟು ದಿನ…?  ನದಿ ತಟದ ಜನರಿಗೆ ಎಚ್ಚರಿಕೆ ನೀಡಿದ ವಿದ್ಯುತ್ ನಿಗಮ

ಸೂಪಾ ಜಲಾಶಯ ತನ್ನ ಗರಿಷ್ಠ ಮಟ್ಟವನ್ನು ತಲುಪಲು ಇನ್ನು ಕೇವಲ ಎಂಟು ಮೀಟರ್ ಬಾಕಿ ಉಳಿದಿದ್ದು,  ಕರ್ನಾಟಕ ವಿದ್ಯುತ್ ನಿಗಮದವರು  ನದಿ ತಟದ ಜನರಿಗೆ  ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತರ ತನ್ನ ಎರಡನೆಯ ಎಚ್ಚರಿಕೆಯ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಸೂಪಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಕಾನೇರಿ ಸೇರಿದಂತೆ ಈ ಜಲಾಶಯವನ್ನು ಸೇರುವ ಹಲವು ನದಿಗಳು ತುಂಬಿ ಹರಿಯುತ್ತಿವೆ.  ಪರಿಣಾಮ  ಜಲಾಶಯದ ಒಳಹರಿವು ಹೆಚ್ಚುತ್ತಿದೆ. ಶನಿವಾರ 40,466 ಕ್ಯುಸೆಕ್ ಮೀಟರ್ ಒಳಹರಿವಿದೆ. 3,534  ಕ್ಯುಸೆಕ್ ನೀರು ಮಾತ್ರ ಹೊರ ಹರಿವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ಸೂಪಾ ಜಲಾಶಯ ದಿನದಿಂದ ದಿನಕ್ಕೆ ಮೈದುಂಬಿಕೊಳ್ಳುತ್ತಿದೆ.

ಸಮುದ್ರ ಮಟ್ಟದಿಂದ  564 ಮೀಟರ್ ಗರಿಷ್ಠ ಮಟ್ಟವನ್ನು ಹೊಂದಿರುವ ಸೂಪಾ ಜಲಾಶಯ ಆಗಸ್ಟ್ 3 ರಂದು 556.46ರಷ್ಟು ಭರ್ತಿಯಾಗಿದೆ. 147.55 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿರುವ ಈ ಜಲಾಶಯದಲ್ಲಿ ಆಗಸ್ಟ್ ಎರಡರಂದು 116 ಟಿಎಂಸಿ ಯಷ್ಟು  ನೀರು ಸಂಗ್ರಹಣೆಯಾಗಿದೆ. ಅಂದರೆ ಜಲಾಶಯ ತನ್ನ ಒಟ್ಟು ಸಾಮರ್ಥ್ಯದ ಶೇ. 79ರಷ್ಟು ಭರ್ತಿಯಾಗಿದೆ. ಜಲಾಶಯ ತನ್ನ ಗರಿಷ್ಟ ಮಟ್ಟ  ತಲುಪಲು ಕೇವಲ 8ಮೀ. ಮಾತ್ರ ಬಾಕಿ ಇದ್ದು,  ಈ ಮಳೆ ಹೀಗೆಯೇ ಮುಂದುವರೆದರೆ ಕೆಲವೇ ದಿನದಲ್ಲಿ ಜಲಾಶಯ ಭರ್ತಿಯಾಗಿ ಧುಮ್ಮಿಕ್ಕುವ ಸಾಧ್ಯತೆಯಿದೆ.

ಸೂಫಾ ಜಲಾಶಯದ ನಿರ್ಮಾಣದ ನಂತರ ಮೂರು ಬಾರಿ ಮಾತ್ರ ಗರಿಷ್ಟ ಮಟ್ಟ ತಲುಪಿ ಧುಮ್ಮಿಕ್ಕಿದೆ. ಈ ಬಾರಿ ಹೀಗೆಯೇ ಮಳೆ ಮುಂದುವರೆದರೆ ಮತ್ತೆ ಜಲಾಶಯ ಭರ್ತಿಯಾಗಿ ನೀರು ಹೊರ ಬಿಡುವ ಸಾಧ್ಯತೆಯಿದೆ. ಈ ಬಾರಿ ಜಲಾಶಯ ಭರ್ತಿಯಾಗಿ ಗೇಟ್ ಮೂಲಕ ನೀರು ಹೊರಬಿಟ್ಟರೆ ನಾಲ್ಕನೆಯ ಬಾರಿ ಜಲಾಶಯದಿಂದ ನೀರನ್ನು ಹೊರಬಿಟ್ಟಂತಾಗಲಿದೆ.

ವಿದ್ಯುತ್ ನಿಗಮದಿಂದ ಎಚ್ಚರಿಕೆ

ಸೂಪಾ ಜುಲಾಶಯ ದಿನದಿಂದ ದಿನಕ್ಕೆ ತನ್ನ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದವರು ನದಿ ದಂಡೆಯ ಜನರಿಗೆ ‘ಯಾವುದೇ ಸಂದರ್ಭದಲ್ಲಿ ಜಲಾಶಯದ ನೀರನ್ನು ಹೊರಬಿಡುವ ಸಾಧ್ಯತೆ ಇದೆ’ ಎಂದು ಎರಡನೆಯ ಎಚ್ಚರಿಕೆಯನ್ನು ಹೊರಡಿಸಿದ್ದಾರೆ. ಜಲಾಶಯದ ಕೆಳಭಾಗದಲ್ಲಿರುವ ನದಿ ದಂಡೆಯ ಜನ ತಮ್ಮ ಜನ ಹಾಗೂ ಜಾನುವಾರಗಳ ಜೊತೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು.  ನದಿಯಲ್ಲಿ ಯಾವುದೇ ಮೀನುಗಾರಿಕೆ,  ಜಲ ಸಾಹಸ ಕ್ರೀಡೆ, ದೋಣಿ ವಿಹಾರ,  ಹಾಗೂ ಇನ್ನಿತರ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸುವ ಹಾಗಿಲ್ಲ. ಎಚ್ಚರಿಕೆ ನಡೆವೆಯೂ ಇಂತಹ ಚಟುವಟಿಕೆಗಳನ್ನು ನಡೆಸಿ ಅವಘಡಗಳು ಉಂಟಾದರೆ ಅದಕ್ಕೆ ನಿಗಮ ಯಾವುದೇ ರೀತಿಯ ಜವಾಬ್ದಾರಿಯಾಗಿರುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿರುತ್ತಾರೆ.

Exit mobile version