‘ಸಿಗರೇಟನ್ನು ನಾವು ಮೊದಲು ಸುಡುತ್ತೇವೆ. ನಂತರ ಸಿಗರೇಟು ನಮ್ಮನ್ನು ಸುಡುತ್ತದೆ’ ಎಂಬ ಮಾತು ದುಶ್ಚಟಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಮ್ಮ ಸುಂದರ ಬದುಕು ಹೇಗೆ ನರಕವಾಗುತ್ತದೆ, ನಾಶವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ” ಬೆಂಕಿ ದೇಹವನ್ನು ನಾಶ ಮಾಡಿದರೆ, ಕುಡಿತ ನಮ್ಮ ದೇಹ ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು ಗಾಂಧೀಜಿಯವರು ಹೇಳಿದ್ದಾರೆ. ಇಂಥ ವ್ಯಸನಗಳು ಸಾಮಾಜಿಕ ಕಂಟಕಗಳಾಗಿ ಪರಿಣಮಿಸಿ, ಯುವಜನತೆಯನ್ನು ಅಧ:ಪತನದತ್ತ ಕೊಂಡೊಯ್ಯುತ್ತಿರುವುದು ನಿಜಕ್ಕೂ ಆತಂಕಕಾರಿ. ಇಂಥ ಸನ್ನಿವೇಶದಲ್ಲಿ ಈ ದುಶ್ಚಟಗಳ ವಿರುದ್ಧ ದೊಡ್ಡ ಆಂದೋಲನವನ್ನು ರೂಪಿಸಿದವರು ಡಾ. ಮಹಾಂತ ಶಿವಯೋಗಿಗಳು.
ಜಗತ್ತಿನ ಯುವಶಕ್ತಿಯ ಕೇಂದ್ರವೆಂದರೆ ಭಾರತ. ನಮ್ಮ ದೇಶದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಯುವಕರೇ ತುಂಬಿಕೊಂಡಿದ್ದಾರೆ. ಚೈತನ್ಯ, ಚಟುವಟಿಕೆ ಮತ್ತು ಕ್ರಿಯಾಶಕ್ತಿಯ ಸಂಗಮವಾಗಿರುವ ಈ ಯುವಕರು ನಾಳಿನ ನಾಡಿನ ನಾಯಕರು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಯುವಕರೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ ಬೆಳವಣಿಯಾಗಿದೆ. ದೇಶದ ಆಸ್ತಿ ಆಗಬೇಕಾದವರು, ಭವಿಷ್ಯವಾಗಬೇಕಾದವರು ವ್ಯಸನಗಳಿಗೆ ಅಂಟಿಕೊಂಡು ತಮ್ಮ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಚಟಕ್ಕೆ ಬಲಿಯಾದವರು ಹಣದೊಂದಿಗೆ ಆರೋಗ್ಯ ಮತ್ತು ಬದುಕನ್ನೂ ಕಳೆದುಕೊಳ್ಳುತ್ತಾರೆ.ತಮ್ಮನ್ನು ನಂಬಿದ ಕುಟುಂಬವನ್ನು ನಡು ನೀರಿನಲ್ಲಿ ಕ್ಕೆ ಬಿಟ್ಟು ಹೋಗುತ್ತಾರೆ. ಸಮಾಜದ ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಾ. ಮಹಾಂತ ಶಿವಯೋಗಿಗಳು 1975 ರಿಂದಲೇ ‘ಮಹಾಂತ ಜೋಳಿಗೆ’ ಕಾರ್ಯಕ್ರಮ ಆರಂಭಿಸಿದರು.
ಸ್ವಾಮೀಜಿಗಳು ಭಕ್ತರಿಂದ ಸಾಮಾನ್ಯವಾಗಿ ಧನ, ದವಸ, ಧಾನ್ಯ ಇತ್ಯಾದಿಗಳನ್ನು ಭಿಕ್ಷೆಯ ರೂಪದಲ್ಲಿ ಪಡೆಯುತ್ತಾರೆ. ಅದರ ಸಹಾಯದಿಂದ ಮಠದ ದೈನಂದಿನ ಕಾರ್ಯಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ. ಆದರೆ ಡಾ. ಮಹಾಂತ ಶಿವಯೋಗಿಗಳು ತಮ್ಮ ಜೋಳಿಗೆಯಲ್ಲಿ ಜನರಿಂದ ದುಶ್ಚಟಗಳನ್ನು ಭಿಕ್ಷೆಯಾಗಿ ಬೇಡಿದರು.
ಬಾಗಲಕೋಟೆ ಜಿಲ್ಲೆಯ ಚಿತ್ತರಗಿಯ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಪತಿಯಾಗಿದ್ದ ಸ್ವಾಮೀಜಿಗಳು ಈ ವಿಶೇಷ ಆಂದೋಲನಕ್ಕೆ ಚಾಲನಾ ಶಕ್ತಿಯಾಗಿ ತಾವು ಲಿಂಗೈಕ್ಯರಾಗುವವರೆಗೂ ನಿರಂತರವಾಗಿ ‘ಮಹಾಂತ ಜೋಳಿಗೆ’ ಕಾರ್ಯಕ್ರಮದ ಮೂಲಕ ಸಮಾಜದ ಸ್ವಾಸ್ಥ್ಯ ರಕ್ಷಣೆಗಾಗಿ ನಾಡಿನೆಲ್ಲೆಡೆ ಸಂಚರಿಸಿದರು. ‘ಹೆಂಡ-ಸರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ’ ಎಂಬಂತೆ ಕುಡಿತದ ಚಟಕ್ಕೆ ಬಲಿಯಾಗಿದ್ದ ಯುವಕನೊಬ್ಬನನ್ನು ಆ ಕುಡಿತವೇ ಬಲಿ ತೆಗೆದುಕೊಂಡಿತ್ತು.ಆ ಯುವಕನ ನಿಧನದ ಸುದ್ದಿ ತಿಳಿದ ಸ್ವಾಮೀಜಿಯವರು ಆತನ ಕುಟುಂಬಕ್ಕೆ ಸಾಂತ್ವನ ಹೇಳಲು, ಅವರ ಕೇರಿಗೆ ತೆರಳಿದ್ದರು. ಅಲ್ಲಿ ಆತನ ಪತ್ನಿ,ಮಕ್ಕಳು ಮತ್ತು ಕುಟುಂಬದವರ ಶೋಚನೀಯ ಪರಿಸ್ಥಿತಿ ನೋಡಿ ಸ್ವಾಮೀಜಿ ಅವರ ಮನಸ್ಸು ಮಮ್ಮಲ ಮರಗಿತು. ಇದು ಕೇವಲ ಒಂದು ಕುಟುಂಬದ ಸಮಸ್ಯೆಯಾಗಿರಲಿಲ್ಲ. ಇಂಥ ಹಲವು ಘಟನೆಗಳಿಂದ ನೊಂದಿದ್ದ ಸ್ವಾಮೀಜಿಯವರು, ಈ ದುಶ್ಚಟಗಳ ವಿರುದ್ಧ ಮೌನ ಸಂಗ್ರಾಮಕ್ಕೆ ಅಣಿಯಾದರು. ತಾವು ಹೋದ ಕಡೆಗಳೆಲ್ಲ ದುಶ್ಚಟಗಳು ಮತ್ತು ದುರ್ವ್ಯಸನಗಳಿಂದಾಗುವ ತೊಂದರೆ ಅನಾನುಕೂಲಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಅವರ ಮನ ಪರಿವರ್ತನೆ ಮಾಡಿ ಅವರ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಪಡೆದು ಅವರನ್ನು ವ್ಯಸನಗಳಿಂದ ಮುಕ್ತ ಮಾಡಿದರು. ಚಟಗಳಿಗೆ ಬಲಿಯಾದವರು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿಯವರ ಬಟ್ಟೆಯ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಮುಟ್ಟುವುದಿಲ್ಲ ಎಂದು ಪ್ರತಿಜ್ಞೆಗೈದರು.ಇದು ಉತ್ತರ ಕರ್ನಾಟಕದ ಭಾಗದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿ ಸಮಾಜ ಪರಿವರ್ತನೆ ಆಂದೋಲನದ ಮೊದಲ ಮೆಟ್ಟಿಲಾಯಿತು.
ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆಗಸ್ಟ್ 1, 1930ರಲ್ಲಿ ಜನಿಸಿದ ಡಾ. ಮಹಾಂತ ಶಿವಯೋಗಿಗಳು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು. ಕಾಶಿಯ ಕ್ವಿನ್ಸ್ ಕಾಲೇಜ್, ಗದಗನ ವೀರೇಶ್ವರ ಪುಣ್ಯಾಶ್ರಮಗಳಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಅಧ್ಯಯನ ಮಾಡಿದರು. ಅದೇ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭೀಕರ ಬರಗಾಲದಿಂದಾಗಿ ಸ್ವಾಮಿಗಳು, ನೂರಾರು ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಿ ದಾಸೋಹ ಮಾಡಿ ನೊಂದವರ ಕಣ್ಣೀರು ಒರೆಸಿದರು. ಮೂಕ ಪ್ರಾಣಿಗಳಿಗಾಗಿ ಗೋಶಾಲೆಗಳನ್ನು ಆರಂಭಿಸಿ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿ ಮಾನವೀಯತೆಯ ಹರಿಕಾರರಾದರು.
ವ್ಯಸನ ಮುಕ್ತ ಸಮಾಜದ ಜೊತೆ ಜೊತೆಗೆ, ಸಮಾಜದಲ್ಲಿರುವ ಇನ್ನಷ್ಟು ಮೌಢ್ಯ, ಕಂದಾಚಾರಗಳನ್ನು ತೊಡೆದು ಹಾಕಲು ಅವರು ಶ್ರಮಿಸಿದರು. ದೇವದಾಸಿ ಪದ್ಧತಿಯ ವಿಮೋಚನೆಗಾಗಿ ಸಂಸ್ಥೆಯೊಂದನ್ನು ಆರಂಭಿಸಿ, ಅವರ ಮಕ್ಕಳ ಅಭಿವೃದ್ಧಿಗಾಗಿ ಟ್ರಸ್ಟ್ ಸ್ಥಾಪನೆ ಮಾಡಿದರು. ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಕಾರಿಯನ್ನಾಗಿ ನೇಮಿಸಿದರು. ಪ.ಜಾತಿ ಮತ್ತು ಪಂಗಡಗಳ ಯುವಕರಿಗೆ ಧರ್ಮ ಸಂಸ್ಕಾರ ನೀಡಿ ಅವರನ್ನು ಶಾಖಾ ಮಠಗಳಿಗೆ ಪಟ್ಟಾಭಿಷೇಕ ಮಾಡಿದರು. ನಿರಂತರ ಅನ್ನ ದಾಸೋಹ, ವಚನ ಮಾಂಗಲ್ಯ, ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ, ನಿಸರ್ಗ ಚಿಕಿತ್ಸೆ ಮತ್ತು ಯೋಗ ಕೇಂದ್ರ ಇತ್ಯಾದಿಗಳನ್ನು ಸ್ಥಾಪನೆ ಮಾಡಿ ಲಕ್ಷಾಂತರ ಜನರ ಬದುಕಿಗೆ ನೆರವಾದರು. ಮಠದ ನೂರಾರು ಎಕರೆ ಭೂಮಿಯನ್ನು ಆಯಾ ಗ್ರಾಮಗಳ ರೈತರಿಗೆ ನೀಡಿ, ಅವರು ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದರು. ಜಾತಿ-ಮತ-ಧರ್ಮ-ಭಾಷೆ-ಪಂಗಡ-ದೇಶಗಳ ಗಡಿಗಳನ್ನು ಮೀರಿ ತಮ್ಮ ಮಾನವತೆಯ ಕೈಂಕರ್ಯಗಳನ್ನು ವಿಸ್ತರಿಸಿದರು. ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲೂ ತಮ್ಮ ಮಹಾಂತ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು. ಶ್ರೀಗಳ ಸೇವೆ ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿದಂತೆ ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗಳು ಅರಸಿ ಬಂದಿವೆ.
‘ಮಹಾಂತ ಜೋಳಿಗೆ ಸ್ವಾಮೀಜಿ’ ಎಂದೇ ಹೆಸರಾದ ಮಹಾಂತ ಶ್ರೀಗಳ ಜನ್ಮದಿನವನ್ನು ನಮ್ಮ ರಾಜ್ಯದಲ್ಲಿ ‘ವ್ಯಸನಮುಕ್ತ ದಿನ’ ಎಂದು ಆಚರಿಸಲಾಗುತ್ತಿದೆ. ಬಸವ ತತ್ವ ಅನುಷ್ಠಾನ, ವೈಚಾರಿಕತೆ, ದುಶ್ಚಟಗಳ ನಿರ್ಮೂಲನೆ, ಸಾಮಾಜಿಕ ಕ್ರಾಂತಿ, ಮೌಡ್ಯ – ಕಂದಾಚಾರ ವಿರೋಧಿ ಆಂದೋಲನ ಹೀಗೆ ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಛಾಪು ಮೂಡಿಸಿದ್ದ ಶ್ರೀಗಳು 2018 ರ ಮೇ 19 ರಂದು ಲಿಂಗೈಕ್ಯರಾದರು. ಇದು ಕೇವಲ ಆಚರಣೆಗಷ್ಟೇ ಸೀಮಿತವಾಗದೆ, ಕರ್ನಾಟಕ ರಾಜ್ಯದ ಜೊತೆಗೆ ಇಡೀ ಭಾರತ ದೇಶ ವ್ಯಸನ ಮುಕ್ತವಾಗಲು ದಾರಿದೀಪವಾಗಲಿ. ಯುವಜನರು ಮತ್ತು ಸಾರ್ವಜನಿಕರು ದುಶ್ಚಟಗಳಿಂದ ಮುಕ್ತರಾಗಿ ಸುಖ ಶಾಂತಿ ಸಮೃದ್ಧಿಯ ಬಾಳುವೆ ನಡೆಸಲು ಈ ದಿನಾಚರಣೆಯು ಪ್ರೇರಣೆಯಾಗಲಿ. ಆ ಮೂಲಕ ಮಹಾಂತ ಶ್ರೀಗಳ ಕನಸು ನನಸಾಗಲಿ.
- ಶ್ರೀಧರ ಶೇಟ್ ಶಿರಾಲಿ
ಲೇಖಕರ ಪರಿಚಯ : ಭಟ್ಕಳ ತಾಲೂಕಿನ ಶಿರಾಲಿಯ ಶ್ರೀಧರ ಶೇಟ್ ರವರು ಕವಿ, ಲೇಖಕ, ಅಂಕಣಕಾರ, ಚಿತ್ರ ಕಲಾವಿದ, ವ್ಯಂಗ್ಯಚಿತ್ರಕಾರ, ಕಾರ್ಯಕ್ರಮ ನಿರೂಪಕ ಹೀಗೆ ಬಹುಮುಖ ಪ್ರತಿಭೆಯಿಂದ
ಜನಮನ್ನಣೆ ಗಳಿಸಿದ್ದಾರೆ. ಭಟ್ಕಳದ ಸರಕಾರಿ ಪ್ರೌಢಶಾಲೆ ಜಾಲಿಯಲ್ಲಿ ಇಂಗ್ಲೀಷ್ ಭಾಷಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 01-03-2018 ರಂದು ಚಿತ್ರಾಪುರದಲ್ಲಿ ನಡೆದ ಭಟ್ಕಳ ತಾಲ್ಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿರುತ್ತಾರೆ.ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ‘ಹಸಿವು ಸಾಯುವುದಿಲ್ಲ'(ಕವನ ಸಂಕಲನ), ಬೇಲಿಯ ಹೂವು(ಮಕ್ಕಳ ಕವಿತೆಗಳು),ಬೆರಳ ಸಂಧಿಯಿಂದ( ಹನಿಗವಿತೆಗಳು), ಕಾವ್ಯ ಜ್ಯೋತಿ (ಬದುಕು ಬೆಳಗುವ ಬರಹಗಳ ಸಂಕಲನ) ಅವರಿಗೆ ಹೆಸರು ತಂದುಕೊಟ್ಟ ಕೃತಿ ಗಳು.ರಾಜ್ಯ ಮಟ್ಟದ ‘ಸಂಕ್ರಮಣ ಕಾವ್ಯ’ ಪ್ರಶಸ್ತಿಯಿಂದ ಎರಡು ಬಾರಿ ಪುರಸ್ಕೃತರಾಗಿರುವ ಹೆಮ್ಮೆ ಇವರದ್ದು.”ಕರಾವಳಿ ಪ್ರಭಾ” ಪತ್ರಿಕೆಯ ‘ಕಾವ್ಯ ಜ್ಯೋತಿ’ ಅಂಕಣದಲ್ಲಿ ನಿರಂತರವಾಗಿ ಬರೆಯುತ್ತಿದ್ದಾರೆ. ಭಟ್ಕಳ ತಾಲ್ಲೂಕು ಆಡಳಿತವು ಇವರ ಸಾಹಿತ್ಯ ಸೇವೆಗಾಗಿ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ಉತ್ತಮ ಶಿಕ್ಷಕ’ ಪ್ರಶಸ್ತಿ, “ಅತ್ಯುತ್ತಮ ಕಾರ್ಯಕ್ರಮ ನಿರೂಪಕ”ಪ್ರಶಸ್ತಿಗಳು
ಇವರಿಗೆ ಒಲಿದು ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ, ಯುವಜನ ಮೇಳ, ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ, ಗ್ರಾಮ ಪಂಚಾಯತ್ ಶಿರಾಲಿ, ದೈವಜ್ಞ ಯುವಕ ಸಂಘ ಬೆಂಗಳೂರು,
ಸುವರ್ಣಕಾರರ ಕೋ-ಆಪ್ ಸೊಸೈಟಿ ಹೊನ್ನಾವರ, ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಮಂಗಳೂರು ಮುಂತಾದ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.
ಶಿರಾಲಿಯ ಗುರು ನಮನ ಬಳಗದ ಅಧ್ಯಕ್ಷರಾಗಿದ್ದಾರೆ . ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿದ್ದಾರೆ. ಭಟ್ಕಳ ತಾಲೂಕ ಆಂಗ್ಲ ಭಾಷಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ. ಮೊದಲ ಬಾರಿ ಒಡನಾಡಿ.ಕಾಂ ಗೆ ಅವರ ಲೇಖನ…. .