ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ಕಳೆದ ವರ್ಷದ ಎಸ್. ಎಸ್. ಎಲ್. ಸಿ. ಪರೀಕ್ಷಾ ವಿಶ್ಲೇಷಣೆ, ಪ್ರಗತಿ ಪರಿಶೀಲನೆ ಮತ್ತು ನಿವೃತ್ತ ಅಧಿಕಾರಿಗಳಿಗೆ, ಮುಖ್ಯಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಯಟ್ ಪ್ರಾಚಾರ್ಯರು ಹಾಗೂ ಉಪ ನಿರ್ದೇಶಕರು (ಅಭಿವೃದ್ಧಿ) ಆದ ಎನ್.ಜಿ. ನಾಯಕರವರು ಪ್ರೌಢಶಾಲೆಯಲ್ಲಿ ಮುಖ್ಯಾಧ್ಯಾಪಕರ ಕ್ರಿಯಾಯೋಜನೆ ಸಮರ್ಪಕವಾಗಿ ಇದ್ದಲ್ಲಿ ಶಾಲೆ ಸರ್ವತೋಮುಖ ಅಭಿವೃದ್ಧಿಯನ್ನು ಹೊಂದುತ್ತದೆ. ಎಲ್ಲರೂ ಸಮನ್ವಯತೆಯಿಂದ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಪ್ರಯತ್ನಿಸಿ ವಿದ್ಯಾರ್ಥಿಗಳಿಗೆ ಕಲಿಕಾ ಪೂರಕ ವಾತಾವರಣ ನಿರ್ಮಿಸಬೇಕು ಎಂದರು.
ಇದು ನಿಮ್ಮ odanadi.com
ಹೊನ್ನಾವರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕರು ಮಾತನಾಡಿ ಹೊನ್ನಾವರ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಎಲ್ಲಾ ಶಿಕ್ಷಕರ, ಮುಖ್ಯಾಧ್ಯಾಪಕರ ಕಾರ್ಯಕ್ಷಮತೆ ಕಾರಣವಾಗಿದೆ ಎಂದರು. ಕುಮಟಾ ಡಯಟನ ಹಿರಿಯ ಉಪನ್ಯಾಸಕ ಜಿ. ಎಸ್. ಭಟ್ಟರವರು ಶಿಕ್ಷಣ ಇಲಾಖೆ ನಿರೂಪಿಸಿದ ಹತ್ತು ಅಂಶಗಳ ಕಾರ್ಯಕ್ರಮ, ಶಾಲೆಯಲ್ಲಿ ನಿರೂಪಿಸಬಹುದಾದ ವಿಶೇಷ ಕಾರ್ಯಕ್ರಮ ಮತ್ತು ಗುಣಮಟ್ಟದ ಫಲಿತಾಂಶ ಪಡೆಯುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿವರಿಸಿದರು. ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿ ವಿ.ಟಿ. ನಾಯಕರು ತಮ್ಮ ಇಲಾಖೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಗತಿ ಪರಿಶೀಲನೆ ಮತ್ತು ಫಲಿತಾಂಶ ವಿಶ್ಲೇಷಣೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಶತ 100 ರಷ್ಟು ಫಲಿತಾಂಶ ಪಡೆದ ಶಾಲೆಗಳನ್ನು ಗೌರವಿಸಲಾಯಿತು.
ನಂತರ ನಿವೃತ್ತರಾಗುತ್ತಿರುವ ಡಯಟ ಪ್ರಾಚಾರ್ಯರಾದ ಎನ್.ಜಿ.ನಾಯಕ, ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ಡಿ. ಮೊಗೇರ, ಶಾರದಾಂಬ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಜಿ.ಎಂ. ಮುಕ್ರಿ, ಕರಾವಳಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ. ಎಚ್. ನಾಯ್ಕರನ್ನ ಹೊನ್ನಾವರ ತಾಲೂಕಿನ ಪ್ರಾಥಮಿಕ, ಪ್ರೌಢ, ಮತ್ತು ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ ಮತ್ತು ತಾಲೂಕಾ ನೌಕರರ ಸಂಘದಿಂದ ಸನ್ಮಾನಿಸಿ, ಅಭಿನಂದಿಸಲಾಯಿತು ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ ಐದು ತಾಲೂಕಿನಲ್ಲಿ ಹೊನ್ನಾವರ ತಾಲೂಕು ಪ್ರಥಮ ಸ್ಥಾನ ಪಡೆದಿರುವ ಕಾರಣಕ್ಕೆ ಹೊನ್ನಾವರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಸ್. ನಾಯ್ಕರನ್ನು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕರಾದ ಲತಾ ನಾಯಕರವರು ಮಾತನಾಡಿ ನಿರಂತರ ಪ್ರಾಮಾಣಿಕ ಸೇವೆಯನ್ನು ಸಮಾಜಕ್ಕೆ ನೀಡಿದವರನ್ನ ಸನ್ಮಾನಿಸುವ ಈ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿ, ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ವಿವರಿಸಿದರು. ಬರುವ ಶೈಕ್ಷಣಿಕ ವರ್ಷದಲ್ಲೂ ನಮ್ಮ ಜಿಲ್ಲೆ ಎಸ್. ಎಸ್. ಎಲ್. ಸಿ. ಫಲಿತಾಂಶದಲ್ಲಿ ಗರಿಷ್ಠ ಸ್ಥಾನ ಬರಲು ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಕುಮಟಾದ ಹಿರಿಯ, ಕಿರಿಯ ಉಪನ್ಯಾಸಕರು, ಎಸ್. ಎಸ್. ಎಲ್. ಸಿ. ನೋಡಲ್ ಅಧಿಕಾರಿಯಾದ ಭಾಸ್ಕರ್ ಗಾಂವ್ಕರ್, ನೌಕರರ ಸಂಘದ ಅಧ್ಯಕ್ಷರಾದ ಆರ್. ಟಿ. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ. ನಾಯ್ಕ, ಜಿಲ್ಲಾ ಗೌರವಾಧ್ಯಕ್ಷ ಸುಧೀಶ್ ನಾಯ್ಕ, ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಭಾಕರ ಬಂಟ, ಮುಖ್ಯಾಧ್ಯಾಪಕ ಸಂಘದ ಅಧ್ಯಕ್ಷ ಎಲ್.ಎಮ್.ಹೆಗಡೆ, ಅನುದಾನಿತ ಪ್ರೌಢಶಾಲಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ, ಜಿಲ್ಲಾ ಸಂಚಾಲಕ ಎಮ್.ಟಿ.ಗೌಡ, ನ್ಯೂ ಇಂಗ್ಲಿಷ್ ಸ್ಕೂಲಿನ ಮುಖ್ಯಾಧ್ಯಾಪಕ ಜಯಂತ ನಾಯ್ಕ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಪ್ರಕಾಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್.ಕೊರವರ ವಂದಿಸಿದರು.
ವರದಿ: ಎಲ್.ಎಮ್. ಹೆಗಡೆ