Site icon ಒಡನಾಡಿ

ಗುಡ್ಡ ಕುಸಿತದ ವಿಚಾರದಲ್ಲಿ ರಾಜಕೀಯ ಪ್ರೇರಿತ ಮಾತನಾಡೋದು ಸರಿಯಲ್ಲ : ಆರ್. ವಿ. ದೇಶಪಾಂಡೆ

ಅಂಕೋಲಾ: ಅಂಕೋಲಾ ತಾಲೂಕಿನ ಶಿರೂರಿನ ಬಳಿ ನಡೆದ ಗುಡ್ಡ ಕುಸಿತದ ಘಟನಾ ಸ್ಥಳಕ್ಕೆ ರವಿವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ , ಶಾಸಕ ಆರ್. ವಿ. ದೇಶಪಾಂಡೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದ ಆರ್. ವಿ. ದೇಶಪಾಂಡೆಯವರು ಆಗಿರುವ ವಿದ್ಯಮಾನಗಳನ್ನು ಪರಿವೀಕ್ಷಿಸಿದರು. ನಡೆಯುತ್ತಿರುವ ಮಣ್ಣು ತೆರವು ಕಾರ್ಯಾಚರಣೆ ಹಾಗೂ ಜಿಲ್ಲಾಡಳಿತ ಮತ್ತು ಎಲ್ಲಾ ಇಲಾಖೆಯ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೇಶಪಾಂಡೆಯವರು ಈ ಘಟನೆಯಿಂದ ಸಂಕಷ್ಟಕೊಳಗಾಗಿರುವ ಸಂತ್ರಸ್ತರಿಗೆ ಮುಖ್ಯಮಂತ್ತಿಗಳ ಜೊತೆ ಚರ್ಚಿಸಿ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲ ಸಂದರ್ಭದಲ್ಲೂ ಕೂಡ ರಾಜಕೀಯ ಮಾಡುವುದು ಸರಿಯಲ್ಲ. ಇಲ್ಲೊಂದು ದುರಂತ ಸಂಭವಿಸಿದೆ. ಈ ದುರಂತಕ್ಕೆ ನಾವು ಮನ ಮಿಡಿಯಬೇಕು. ಸಂತಾಪ ಹೇಳಬೇಕು. ಸಾಂತ್ವನ ನುಡಿಯಬೇಕು. ಸರಕಾರ ಸಹಾಯ ಮಾಡಿದೆ. ಹಾಗೆಯೇ ಉಳ್ಳವರು ಎಲ್ಲರೂ ಕೂಡ ತಮ್ಮಿಂದಾದ ಸಹಾಯವನ್ನು ಸಂತ್ರಸ್ತರಿಗೆ ಮಾಡಬೇಕು. ಅದನ್ನ ಬಿಟ್ಟು ಬೇರೆ ಯಾವುದೋ ಕಾರಣಕ್ಕಾಗಿ ಅಥವಾ ತಮ್ಮ ರಾಜಕೀಯ ಲಾಭಕ್ಕಾಗಿ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡುವುದು, ದುರಂತದಲ್ಲೂ ರಾಜಕಾರಣ ಮಾಡುವುದು ಯಾರಿಗೂ ಕೂಡ ಶೋಭೆ ತರುವುದಿಲ್ಲ ಎಂದರು.

ಗುಡ್ಡ ಕುಸಿತ ಹೇಗಾಯಿತು. ಕಾಮಗಾರಿ ವೈಜ್ಞಾನಿಕವೋ, ಅವೈಜ್ಞಾನಿಕವೋ ಎಂದು ತೀರ್ಮಾನಿಸುವ ಬಗ್ಗೆ ನಾನು ತಂತ್ರಜ್ಞನಲ್ಲ. ಈ ಕಾಮಗಾರಿ ಮಾಡುವ ಸಂದರ್ಭದಲ್ಲಿಯೇ ಎಲ್ಲ ತಾಂತ್ರಿಕ ವಿಚಾರಗಳನ್ನ ಗಮನಿಸಬೇಕಿತ್ತು. ನಾನು ಪಡೆದಿರುವ ಮಾಹಿತಿ ಪ್ರಕಾರ ಗುಡ್ಡವನ್ನ 45 ಡಿಗ್ರಿ ಓರೆಯಾಗಿ ಕೊರೆಯಬೇಕಿತ್ತು, ಆದರೆ ಇವರು 90 ಡಿಗ್ರಿ ನೇರವಾಗಿ ಕೊರೆದಿದ್ದಾರೆ ಇದರಿಂದ ಗುಡ್ಡ ಕುಸಿದಿದೆ ಎಂಬ ಮಾಹಿತಿ ಪಡೆದಿದ್ದೇನೆ. ಈ ಘಟನೆಯಲ್ಲಿ ಯಾರೇ ತಪ್ಪಿತಸ್ಥ ಇದ್ದರೂ ಕೂಡ ಕ್ರಮ ವಹಿಸಲಾಗುವುದು. ಹಾಗೆಂದು ಘಟನೆಗೆ ಇದೇ ಕಾರಣ ಎಂದು ನಿರ್ದಿಷ್ಟವಾಗಿ ಹೇಳಲು ನಾನು ತಂತ್ರಜ್ಞನೂ ಅಲ್ಲ ಎಂದರು.

ಪ್ರಕೃತಿಯ ಮೇಲೆ ಯಾರೂ ಕೂಡ ದಾಳಿಯನ್ನು ಮಾಡಬಾರದು. ನಾವು ಮನುಷ್ಯರು. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಹಲವು ದಾಳಿಗಳನ್ನು ಮಾಡುತ್ತಿದ್ದೇವೆ. ಅಭಿವೃದ್ಧಿ ಬೇಕು ನಿಜ. ಹಾಗೆಂದು ಪ್ರಕೃತಿಯನ್ನು ನಾಶಪಡಿಸಿ ಅಭಿವೃದ್ಧಿ ಮಾಡುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟ ಆರ್.ವಿ. ದೇಶಪಾಂಡೆಯವರು ಈ ಘಟನೆಯ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಒಂದು ಸಕಾರಾತ್ಮಕವಾದ ನಿರ್ಧಾರಕ್ಕೆ ಬರಲಾಗುವುದು ಎಂದರು

ಇದೇ ಸಂದರ್ಭದಲ್ಲಿ ಈ ದುರ್ಘಟನೆಯಲ್ಲಿ ಸಾವನಪ್ಪಿದವರಿಗೆ ಸಂತಾಪ ಸೂಚಿಸಿದ ದೇಶಪಾಂಡೆಯವರು ಮಣ್ಣಿನಲ್ಲಿ ಹುದುಗಿದೆ ಎನ್ನಲಾಗಿರುವ ಬೆಂಜ್ ಲಾರಿ ಹಾಗೂ ಅದರೊಳಗಡೆ ಇರುವ ಚಾಲಕನ ರಕ್ಷಣೆಯ ಬಗ್ಗೆ ಈಗಾಗಲೇ ಕಾರ್ಯಾಚರಣೆ ಮುಂದುವರಿದಿದೆ ಎಂದರು. ನಂತರ ಅವರು ಈ ಗುಡ್ಡ ಕುಸಿತದಿಂದ ಹಾನಿಗೊಳಗಾದ ಪಕ್ಕದ ದಂಡೆಯ ಉಳವರೆಗೆ ಭೇಟಿ ನೀಡಿ, ಅಲ್ಲಿ ಸಂಭವಿಸಿದ ನಷ್ಟವನ್ನು ಪರಿಶೀಲಿಸಿದರು. ತದನಂತರ ಅಲ್ಲಿ ಗಾಯಗೊಂಡವರು ಸದ್ಯ ಚಿಕಿತ್ಸೆ ಪಡೆಯುತ್ತಿರುವ ಕುಮಟಾದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ವಾಸರ ಕುದ್ರಿಫೆ ಗ್ರಾಮ ಪಂಚಾಯತ ಅಧ್ಯಕ್ಷ ಪ್ರದೀಪ ನಾಯಕ, ಕುಮಟಾ ಕಾಂಗ್ರೆಸ್ ಮುಖಂಡ ಹೊನ್ನಪ್ಪ ನಾಯಕ, ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ವಿನೋದ ಬಾದಗೋಡ ಮುಂತಾದವರು ಇದ್ದರು.

Exit mobile version