Site icon ಒಡನಾಡಿ

ಭಾರಿ ಮಳೆ ನಡುವೆಯೂ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಒಂದು ಕಡೆ ಅರ್ಧ ಕುಸಿದ ಗುಡ್ಡ. ಇನ್ನೊಂದು ಕಡೆ ಮಣ್ಣು ತೆರೆಯುವ ಕಾರ್ಯಾಚರಣೆ. ಮತ್ತೊಂದು ಕಡೆ ಭೋರ್ಗರೆಯುತ್ತಿರುವ ಮಳೆ. ಇಂತಹ ಸಂರ್ಭದಲ್ಲಿಯೇ ಸಿ.ಎಮ್. ಸಿದ್ದರಾಮಯ್ಯ ಶಿರೂರು ಗುಡ್ಡ ಕುಸಿತ ಘಟನಾ ಸ್ಥಳಕ್ಕೆ ರವಿವಾರ ತೆರಳಿ ಪರಿಶೀಲನೆ ನಡೆಸಿದರು.

ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ SDRF ಮತ್ತು NDRF ತಂಡಗಳ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು ಸಿಬ್ಬಂದಿಯ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗುಡ್ಡ ಕುಸಿತದಿಂದ ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಕುಸಿತದ ಗುಡ್ಡ, ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಗಂಗಾವಳಿ ನದಿ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ ಎಂದು ಮುಖ್ಯಮಂತ್ರಿಗಳು ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.

ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ, ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ , ಶಾಸಕ ಸತೀಶ ಸೈಲ, ಮುಖ್ಯಮಂತ್ರಿಗಳಿಗೆ ವಿವರಿಸಿದರು.

ತುರ್ತು ಕಾರ್ಯಾಚರಣೆ ನಡೆಯುತ್ತಿರುವ ಜಾಗ ಮತ್ತು ಮಣ್ಣು ತುಂಬಿರುವ ರಸ್ತೆಯೂ ಕುಸಿಯುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಎಚ್ಚರಿಸಿದರು.

ಗುಡ್ಡ ಕುಸಿತದ ಸ್ಥಳ ಒಂದು ರೀತಿ ದ್ವೀಪದಂತಾಗಿದೆ. ಸುತ್ತಲೂ ಗಂಗಾವಳಿ ನದಿ ಭೋರ್ಗರೆದು ಹರಿಯುತ್ತಿದೆ. ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ. ಹೀಗಾಗಿ ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು ತಂತ್ರಜ್ಞಾನದ ನೆರವು ಪಡೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಸತೀಶ್ ಸೈಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್ , ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.‌

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು ನಾನು ಇಲ್ಲಿ ಜನತಿಗಾಗಿರುವ ಸಮಸ್ಯೆ ಪರಿಹರಿಸಲು ಬಂದಿದ್ದೇನೆ. ಈ ವಿಷಯದಲ್ಲಿ ಯಾರೇ ರಾಜಕಾರಣ ಮಾಡಿದರೂ ನಾನು ಮಾಡಲಾರೆ. ಘಟನೆ ನಡೆದ ದಿನದಿಂದ ಎಲ್ಲ ಖಾರ್ಯಾಚರಣೆಗಳೂ ಕೂಡಾ ವ್ಯವಸ್ಥಿತವಾಗಿ ನಡೆಯುತ್ತಿವೆ. ಮುಂದೆ ಸೇನಾ ಕಾರ್ಯಾಚರಣೆಯೂ ನಡೆಯಲಿದೆ. ಮಣ್ಣಿನೊಳಗಡೆ ಇದ್ದಾರೆನ್ನುವವರನ್ನು ರಕ್ಷಿಸಲು ಎಲ್ಲರೀತಿಯ ಕಾರ್ಯಾಚರಣೆ ನಡೆಯುತ್ತಿದೆ ಎಂದರು.

Exit mobile version