ಬೆಂಗಳೂರು: ಸರ್ವೇ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರವರು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
“ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು ಹಾಗೂ 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 100ಕ್ಕೂ ಅಧಿಕ ಪರವಾನಗಿ ಹೊಂದಿರುವ ಖಾಸಗಿ ಸರ್ವೇಯರ್ ಹಾಗೂ 35 ಎ.ಡಿ.ಎಲ್.ಆರ್ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮುಂದಿನ 3 ರಿಂದ 6 ತಿಂಗಳ ಒಳಗಾಗಿ ಈ ಎಲ್ಲಾ ಹುದ್ದೆಗಳನ್ನೂ ನ್ಯಾಯಸಮ್ಮತವಾಗಿ ಭರ್ತಿ ಮಾಡುವಂತೆ ಕೆಪಿಎಸ್‌ಸಿ ಗೆ ಸೂಚಿಸಲಾಗಿ” ಎಂದು ತಿಳಿಸಿದ್ದಾರೆ. ಮುಂದುವರೆದು, “ಸರ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಸ್ವಾಭಾವಿಕವಾಗಿ ಸರ್ವೇ ಇಲಾಖೆಗೆ ಬಲ ಬರಲಿದೆ. ಈ ಹುದ್ದೆಗಳಲ್ಲದೆ, ಹೆಚ್ಚುವರಿಯಾಗಿ ಹೊಸ ಹುದ್ದೆಗಳ ಸೃಷ್ಟಿಗೂ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದ್ದು ಮತ್ತಷ್ಟು ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರ ಸಿದ್ದವಾಗಿದೆ” ಎಂದಿದ್ದಾರೆ.
“ಇದರ ಜೊತೆಗೆ ನಮ್ಮ ಸಿಬ್ಬಂದಿಗಳ ಕೆಲಸದ ವೇಗ ಹೆಚ್ಚಾಗಲು ಮೂರು ಪಟ್ಟು ಸರ್ವೇ ಕೆಲಸದ ವೇಗ ಪಡೆಯಲು ಆಧುನಿಕ ಉಪಕರಣವಾದ ರೋವರ್ ಬಳಸಿ ಸರ್ವೇ ನಡೆಸಲೂ ಸೂಚಿಸಲಾಗಿದೆ. ಈ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಸರ್ವೇ ಇಲಾಖೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ” ಎಂದು ಮಾಹಿತಿ ನೀಡಿದ್ದಾರೆ. ರೈತರು ಸಂಕಷ್ಟಕ್ಕೀಡಾಗಿರುವುದು ನಮ್ಮ ಗಮನದಲ್ಲಿದೆ ಸರ್ವೇ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿರುವುದು ನಮ್ಮ ಗಮನದಲ್ಲಿದೆ. ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.