ದಾಂಡೇಲಿ: ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ಬಾಕಿ ಉಳಿದವರಿಗೆ ಖಾಯಮಾತಿ ಆದೇಶ ನೀಡಲು ಕ್ಯಾಬಿನೆಟ್ ವಿಶೇಷ ನಿರ್ಣಯ ಮಾಡುವಂತೆ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್ ಹಾಗೂ ಜಿಲ್ಲಾ ಮ್ಯಾನುಅಲ್ ಸ್ಕ್ಯಾವೆಂಜರ್ ನಿವಾರಣೆ ಸಮಿತಿ ಸದಸ್ಯೆ, ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ , ಶಾಸಕ ಆರ್.ವಿ. ದೇಶಪಾಂಡೆಯವರಲ್ಲಿ ಲಿಖಿತ ಮನವಿ ಮಾಡಿದ್ದಾರೆ.
ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಪೌರಾಡಳಿತಕ್ಕೆ ಒಳಪಟ್ಟು 597 ಪೌರ ಕಾರ್ಮಿಕ ಹುದ್ದೆ ಇದ್ದು.
ಇತ್ತೀಚೆಗೆ 171 ಪೌರ ಕಾರ್ಮಿಕರು ಖಾಯಮಾತಿಗೆ ಆಯ್ಕೆಯಾದರು, ಆದರೆ ಅವರ ಪೈಕಿ 133 ಜನರಿಗೆ
ಅನುಮೋದಿಸಿ ಖಾಯಂ ಆದೇಶ ಮಾಡಲಾಗಿದೆ. ಇನ್ನುಳಿದ ಆಕಾಂಕ್ಷಿಗಳಿಗೆ ಸಿಂಧುತ್ವ ಪ್ರಮಾಣ ಪತ್ರದೊಂದಿಗೆ ಖಾಯಮಾತಿ ಮಾಡಬೇಕು.
ನೈರ್ಮಲ್ಯ ಕೆಲಸದಲ್ಲಿ ನೈಜವಾಗಿ ಹಗಲಿರುಳು ತೊಡಗಿರುವ ಸುಮಾರು 40 ಕಾರ್ಮಿಕರಿಗೆ ಅನ್ಯಾಯವಾಗಿದೆ. ಕೆಲವರಿಗೆ ಕುಟುಂಬದ ಭಾಷೆಯ ಮಾಧ್ಯಮ ಮುಂದಿಟ್ಟು,
ಕೆಲವರಿಗೆ ಜಾತಿ ಪ್ರಮಾಣಪತ್ರ ಮತ್ತು ವ್ಯಾಸಂಗ, ವಿಳಾಸ ಇತ್ಯಾದಿ ದಾಖಲೆಗಳ ಪೂರೈಕೆಯಲ್ಲಾದ ಚಿಕ್ಕಪುಟ್ಟ ಲೋಪದೋಷದಿಂದ ಸಿಂಧುತ್ವ ನೀಡಿಲ್ಲ. ರಾಜ್ಯದಲ್ಲೂ ಕೂಡ ಇದೇ ರೀತಿಯ ಯಾವುದೇ ವಿಳಂಬವಾಗಿದ್ದಲ್ಲಿ ಅವರನ್ನೂ ಖಾಯಂಮಾಡಲು ವಿನಂತಿಸುತ್ತೇವೆ. ಈ ಕುರಿತು ಯಾವುದೇ ತಾಂತ್ರಿಕ ತೊಂದರೆಗಳಿದ್ದಲ್ಲಿ, ದಯವಿಟ್ಟು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಚಿವ ಸಂಪುಟ ನಿರ್ಣಯದ ಮೂಲಕ ಖಾಯಮಾತಿ ಮಾಡಬೇಕು. ಕ್ಯಾಬಿನೆಟ್ ನಿರ್ಣಯ ಮಾಡಲು ತಾವು ಮಧ್ಯಪ್ರವೇಶ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.