Site icon ಒಡನಾಡಿ

ಮಕ್ಕಳಲ್ಲಿ ಜೀವನ ಮೌಲ್ಯ ವೃದ್ಧಿಸುವ “ನೆರಳಿಗೂ ಕೊಡಲಿ” ಕೃತಿ ಬಿಡುಗಡೆ

ವಾಟ್ಸಪ್ ನಲ್ಲಿ ಬರುವ ಕಥೆ ಕವನಗಳಿಗೆ ಜೀವಂತಿಕೆ ಇರುವುದಿಲ್ಲ.ಕೃತಿ ಪ್ರಕಟನೆಯಾದಾಗ ಮಾತ್ರ ಕೃತಿಕಾರ ಶಾಶ್ವತವಾಗಿ ನೆಲೆ ನಿಲ್ಲಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಹೇಳಿದರು.

ಇತ್ತೀಚೆಗೆ ಹೊನ್ನಾವರದ ಹೊಸಾಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಕ್ಷಿ ಶಿಕ್ಷಕರ ಬಳಗದ ಕಲಿಯೋಣ, ಕಲಿಸೋಣ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಓದು ಮತ್ತು ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯ. ಶಿಕ್ಷಕನಾದವನು ನಿರಂತರ ಓದುವ ಮತ್ತು ಬರೆಯುವ ವಿದ್ಯಾರ್ಥಿಯಾಗಿದ್ದಾಗ ಮಾತ್ರ ಇಂತಹ ಸಶಕ್ತ ಕೃತಿ ಪ್ರಕಟಿಸಲು ಸಾಧ್ಯ. ಬಾಲು ಪಟಗಾರವರ ಮೊದಲ ಕೃತಿ ಮಕ್ಕಳಿಂದಲೇ ಬಿಡುಗಡೆಗೊಳಿಸಿರುವುದು ತುಂಬಾ ಸಂತಸ ತಂದಿದೆ. ಉತ್ತಮ ಲೇಖಕರಾಗಿ ಗುರುತಿಸಿಕೊಂಡ ಬಾಲು ಪಟಗಾರವರಿಂದ ಇನ್ನಷ್ಟು ಕೃತಿ ಪ್ರಕಟಗೊಳ್ಳಲಿ. ಸಾಹಿತ್ಯ ಕ್ಷೇತ್ರದಲ್ಲಿ ಮಿನುಗುವ ತಾರೆಯಾಗಿ ಶೋಭಿಸಲಿ ಎಂದು ಹಾರೈಸಿದರು.

6ನೇ ತರಗತಿ ವಿದ್ಯಾರ್ಥಿ ಕುಮಾರಿ ಪ್ರತಿಕ್ಷಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿ,ನೆರಳಿಗೂ ಕೊಡಲಿ ಎಂಬ ಕತೆಯನ್ನು ಸುಂದರವಾಗಿ ಹೇಳುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನನ್ನ ಓದಿನ ಜೀವನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಮಾಡಿಕೊಟ್ಟ ಸಾಕ್ಷಿ ಶಿಕ್ಷಕರ ಬಳಗಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಕೃತಿ ಪರಿಚಯಿಸಿ ಶಿಕ್ಷಕ ಪಿ.ಆರ್. ನಾಯ್ಕ ಮಾತನಾಡಿ, ಮಕ್ಕಳ ಕಥೆಗಳು ಕಲಿಕೆಯ ಪ್ರಕ್ರಿಯೆಯನ್ನು ಉತ್ತೇಜಿಸಿ, ಅವರ ಕಲಿಕೆಗೆ ಜೀವಂತಿಕೆ ನೀಡುವಂತಿರಬೇಕು.ಈ ನಿಟ್ಟಿನಲ್ಲಿ ಬಾಲು ಪಟಗಾರವರ ನೆರಳಿಗೂ ಕೊಡಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಜೊತೆಗೆ, ಇಲ್ಲಿರುವ ಕಥೆಗಳು ಮಕ್ಕಳ ಸುತ್ತಮುತ್ತಲಿನ ಸಂಗತಿಗಳಿಂದಲೂ, ಅಲ್ಲಿರುವ ವ್ಯಕ್ತಿ, ವಿಷಯಗಳಿಗೂ ಹಾಗೂ ಮಕ್ಕಳ ಬದುಕಿಗೆ ತೀರ ಆಪ್ತವಾಗಿ ಬಿಡುವ ಕಥಾ ಸಂಕಲನ ಇದಾಗಿದೆ. ವಿದ್ಯಾರ್ಥಿಗಳ ಕಲ್ಪನಾ ಲೋಕಕ್ಕೆ ಇನ್ನಷ್ಟು ಪುಷ್ಟಿ ಒದಗಿಸಬಲ್ಲ ಹಲವು ಕಥೆಗಳ ಗುಚ್ಚ ಬಾಲು ಪಟಗಾರವರ ಬಹುತೇಕ ಕಥೆಗಳಲ್ಲಿ ಸಮ್ಮೀಳಿತಗೊಂಡಿದೆ ಎಂದರು. ನಾಡಿನ ಭರವಸೆಯ ಕಥೆಗಾರರ ಸಾಲಿನಲ್ಲಿ ನಿಲ್ಲುವ ಎಲ್ಲಾ ಅರ್ಹತೆಗಳು ಅವರ ಸಾಹಿತ್ಯದಲ್ಲಿ ಅಡಗಿದೆ.ಸಂಗ್ರಹ ಯೋಗ್ಯವಾದ ಈ ಕೃತಿ ಮಕ್ಕಳ ಮನಸ್ಸಿಗೆ ಮುದ ನೀಡುವ, ಜೀವನ ಮೌಲ್ಯಗಳನ್ನು ಉತ್ತೇಜಿಸುವುದರಿಂದ ಪ್ರತಿಯೊಬ್ಬ ಶಿಕ್ಷಕರೂ ಕೃತಿಯನ್ನು ಓದಿ ಮಕ್ಕಳಿಗೆ ಅರ್ಥೈಸಿ, ಅವರ ಮನಸ್ಸನ್ನು ಗೆದ್ದಾಗ ಮಾತ್ರ ಕೃತಿಕಾರರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

ಚಿಂತನ ರಂಗ ಕೇಂದ್ರದ ಕಿರಣ ಭಟ್ ಮಾತನಾಡಿ, ಮಕ್ಕಳ ಸಾಹಿತ್ಯ ಲೋಕಕ್ಕೆ ಕೃತಿ ನೀಡಿದ ಬಾಲು ಪಟಗಾರರವರನ್ನು ಅಭಿನಂದಿಸಿ ಮಾತನಾಡಿ, ಓದುವ ಆಟದ ಮೂಲಕ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ರೂಢಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಮೊಬೈಲ್ ಬದಲಾಗಿ ಮಕ್ಕಳ ಕೈಗೆ ಪುಸ್ತಕ ನೀಡುವಂತಾದರೆ ಸಾಕ್ಷಿ ಕಾರ್ಯಕ್ರಮಗಳು ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಸಾಧನಾ ಬಗಿ೯ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸಿದಾಗ ಮಾತ್ರ ಮುಂದೆ ಅವರೊಬ್ಬ ಅತ್ಯುತ್ತಮ ಸಾಹಿತಿಯಾಗಿ ಬೆಳಗಲು ಸಾಧ್ಯ ಎಂದರು. ವೇದಿಕೆಯಲ್ಲಿ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಉಷಾ ನಾಯಕ, ಶಿಕ್ಷಕ ಸಂಘದ ಪ್ರತಿಮಾ ಹೆಗಡೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಾಲೂಕಾ ಕಸಾಪ ಅಧ್ಯಕ್ಷ ಎಸ್. ಎಚ್. ಗೌಡ ಮಾತನಾಡಿ, ಒಬ್ಬ ಅತ್ಯುತ್ತಮ ಕಥೆಗಾರರಿಂದ ಪ್ರಕಟಗೊಂಡ ಕೃತಿ ಇದಾಗಿರುವುದರಿಂದ ಎಲ್ಲರೂ ಓದಿ ಅವರನ್ನು ಹುರಿದುಂಬಿಸಬೇಕಾಗಿದೆ. ಇಂತಹ ಕೃತಿಗಳನ್ನು ಓದಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಒಲವು ಮೂಡಲು ಸಾಧ್ಯ ಎಂದರು.

ಕೃತಿ ರಚನಾಕಾರ ಬಾಲು ಪಟಗಾರವರು ಎಲ್ಲರನ್ನೂ ಅಭಿನಂದಿಸಿ ಮಾತನಾಡಿದರು. ಸಾಕ್ಷಿ ಬಳಗದ ಸಂಚಾಲಕ ಜನಾರ್ಧನ ಹರ್ನಿರು ಸಾಕ್ಷಿ ಬೆಳೆದು ಬಂದ ದಾರಿಯನ್ನು ವಿವರಿಸಿ, ಪ್ರಾಸ್ತಾವಿಕ ಮಾತನಾಡಿದರು‌.

ಪ್ರಾರಂಭದಲ್ಲಿ ಮುಖ್ಯಾಧ್ಯಾಪಕಿ ವೀಣಾ ಹೆಗಡೆ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಜಿ.ಎಸ್.ಹೆಗಡೆ ವಂದಿಸಿದರು. ಶಿಕ್ಷಕ ಲಕ್ಷ್ಮೀಶ ಹೆಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಎರಡನೆಯ ತರಗತಿ ವಿದ್ಯಾರ್ಥಿ ಧನ್ವಿತ ,”ಜಿಂಕೆ ಮರಿಯ ಮೊಬೈಲ್ ಹುಚ್ಚು” ಕತೆ ಹೇಳಿ ಎಲ್ಲರನ್ನು ರಂಜಿಸಿದಳು.

ಸಭೆಯಲ್ಲಿ ಶಿಕ್ಷಕ ಸಾಹಿತಿಗಳಾದ ಸಿ.ಡಿ. ಪಡುವಣಿ, ಅನಿಲ ಕಾಮತ, ಎಂ. ಎಸ್. ಹೆಗಡೆ, ವಿ.ಜಿ.ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣ ಅಂಬಿಗ, ಶಶಿಧರ ದೇವಾಡಿಗ, ಪದ್ಮಾವತಿ ನಾಯ್ಕ, ನಾಶೀರ ಖಾನ್, ರಾಘವೇಂದ್ರ ಆಚಾರಿ, ವಿಷ್ಣು ಪಟಗಾರ, ಸತೀಶ ನಾಯ್ಕ, ಜಗದೀಶ ಪಟಗಾರ, ವಿ.ಜಿ. ನಾಯ್ಕ, ರತ್ನ ಪಟಗಾರ,ಹರ್ಷಿತ ಪಟಗಾರ, ಲಕ್ಷ್ಮಣ ಆಚಾರಿ, ಶೋಭಾ ಹೆಗಡೆ, ಈಶ್ವರ ಭಟ್, ಶೇಖರ ನಾಯ್ಕ, ಸರಸ್ವತಿ ಭಟ್, ಸುಮಿತ್ರ ಭಟ್ ಮುಂತಾದವರು ಉಪಸ್ಥಿತರಿದ್ದರು.

ನಂತರ ಕ್ರಾಫ್ಟ್, ಹಾಡು, ಕಥೆ ರಚನೆ, ಇಂಗ್ಲಿಷ್ ಕಲಿಕೆ, ಪೇಂಟಿಂಗ್, ಭಾಷಣ ಕಲೆ, ಅಕ್ಷರ ಬರವಣಿಗೆ, ಓದುವ ಆಟ ಮುಂತಾದ ವಿಷಯಗಳ ಕುರಿತು ಎರಡು ದಿನಗಳ ಕಾಲ ಕಲಿಯೋಣ, ಕಲಿಸೋಣ ಕಾರ್ಯಕ್ರಮವು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳ ಕಲಿಕೆಗೆ ಉತ್ತೇಜಿಸುವಂತಿತ್ತು.

Exit mobile version