Site icon ಒಡನಾಡಿ

ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಅಕ್ಷತಾ ಕೃಷ್ಣಮೂರ್ತಿ

“ಅಕ್ಷತಾ” ಈ ಹೆಸರು ಅನೇಕ ಅರ್ಥಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಅಕ್ಷತಾ ಎಂದರೆ ಶಾಶ್ವತ. ಕೊನೆಯೇ ಇಲ್ಲವೆಂಬ ಅರ್ಥವಿದೆ. ಶುಭ ಕಾರ್ಯದಲ್ಲಿ ಸಂತಸ ಕೊನೆಯಾಗದಿರಲಿ ಎಂದು ಅಕ್ಷತೆ ಹಾಕುವರು. ಸೃಜನಾತ್ಮಕ, ಸಕ್ರಿಯ,ಅದೃಷ್ಟ ,ಸ್ನೇಹಿ, ಸಮರ್ಥ ಎಂಬ ಹಲವು ಅರ್ಥಗಳ ಸರದಾರಿ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು. ‘ಅ’ ಅಕ್ಷರ ಮೊದಲಿರುವಂತೆ ಎಲ್ಲಾ ಸೃಜನಶೀಲ ಕಾರ್ಯದಲ್ಲೆಲ್ಲ ಈ ಅಕ್ಷತಾ ಮೊದಲಿಗರೆಂದು ಪ್ರೀತಿಯಿಂದ ಹೇಳಬಹುದು. ಕಲಿಸುವ ಶಾಲೆ, ಕಲಿಯುವ ಮಕ್ಕಳು, ಕಲಿತು,ಕಲಿಸುತ್ತಿರುವ ಅಕ್ಷತಾ ನಾಡು ಕಂಡ ಒಬ್ಬ ಅಪರೂಪದ ಅಕ್ಕೂರು.

ಕಾಡಿನಿಂದ ಆವೃತ್ತವಾದ ದೂರದ ಜೋಯಿಡಾ ತಾಲೂಕಿನ ಅಣಶಿ ಹಿರಿಯ ಪ್ರಾಥಮಿಕ ಶಾಲೆಯ ಹೆಸರನ್ನು ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಶಾಲೆಯ ಪ್ರಗತಿ ಮೌಲ್ಯ ಮೌಲ್ಯದಲ್ಲಿಯೂ ಪ್ರತಿಧ್ವನಿಸುವ ಇವರ ಗೆಜ್ಜೆಯ ಸಪ್ಪಳ, ಮಕ್ಕಳೊಂದಿಗಿನ ಪಿಸುಮಾತು, ನಾವಿನ್ಯಯುತ ಚಟುವಟಿಕೆಯ ಕೇಂದ್ರ ಬಿಂದುವಾಗಿ “ಇಸ್ಕೂಲು”ಪ್ರತಿಯ ಮೂಲಕ ಹಳ್ಳಿಯ ಶಾಲೆಯ ಕಥೆಯೊಂದು ತೆಗೆದುಕೊಳ್ಳುತ್ತಾ ಸಂಗ್ರಹ ಯೋಗ್ಯ ಕೃತಿಯಾಗಿ ಪ್ರಕಟಗೊಂಡಿದೆ.

ಮೂಲತ: ಅಂಕೋಲ ತಾಲೂಕಿನ ಬೇಲೇಕೇರಿಯ “ಅಕ್ಷತಾ”ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಹೆಜ್ಜೆ ಗುರುತೊಂದನ್ನು ಮೂಡಿಸಿದ ಅಪರೂಪದ ಸಾಧಕಿ. ಇವರ “ಅಬ್ಬೋಲಿ”ಕಥೆ ಮೈಸೂರು ವಿಶ್ವವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ ಎಂದರೆ ಇಡೀ ಶಿಕ್ಷಕ ಸಮುದಾಯ ಹೆಮ್ಮೆಪಡುವ ವಿಷಯವಾಗಿದೆ. ಜೋಡಿ ತಾಲೂಕಿನ ಅಣಶಿ ಶಾಲೆಯನ್ನೇ ಸಾಹಿತ್ಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿಕೊಂಡು ಶಾಲೆಗೆ ಬರುವ ಮಕ್ಕಳಲ್ಲಿ ಅಕ್ಷರ ಬೀಜ ಬಿತ್ತುತ್ತ ಮಕ್ಕಳ ಪಾಲಿನ ಆರಾಧ್ಯ ಗುರುಮಾತೆಯಾಗಿ ನಾಡಿನ ಗಮನ ಸೆಳೆದಿರುವುದು ಇವರ ಕೃತ್ರತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.

ಆರ್ಥಿಕವಾಗಿ ತೀರ ಹಿಂದುಳಿದ ಮಕ್ಕಳ ಪಾಲಿನ ಆದರ್ಶ ಶಿಕ್ಷಕಿ ತನ್ನ ಬದುಕಿನ ಬಹುಪಾಲು ಸಮಯವನ್ನು ಮಕ್ಕಳೊಂದಿಗೆ ಮಕ್ಕಳಾಗಿ ಕಲಿಯುವ, ಕಲಿಸುವ, ಕಲಿಸಿ ಕಲಿಯುವ ಗುರುಮಾತೆಯಾಗಿ ಜೋಯಿಡಾ ತಾಲೂಕಿನ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸಿದೆ.

ಕಾದಬೇಕು ತಮ್ಮ ಈ ಬದುಕಿನಲ್ಲಿ
ಮತ್ತೆ ಕಾಯಬೇಕು-ಕಾದು ಅರಳಬೇಕು
ಕೆರಳಿ, ಕಾದು, ಅರಳಿ ಪರಿಮಳಿಸಬೇಕು-ಡಾ. ಎನ್ ಆರ್ ನಾಯಕರು ಕವನದ ಸಾಲು. ಪ್ರತಿಯೊಬ್ಬರ ಬದುಕಿನಲ್ಲಿ ಒಂದೊಂದು ಅವಕಾಶಗಳು ಅವರಿಗರಿವಿರದೆ ಕಾಯುತ್ತಲೇ ಇರುತ್ತದೆ. ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಕಾದು ಕುಳಿತ ಅವಕಾಶಗಳು ನೂರೆಂಟು. ಏಕೆಂದರೆ ನಮ್ಮ ನಡುವಿನ ಮಕ್ಕಳು ಹಾಗೂ ಪಾಲಕರು ಸುತ್ತಮುತ್ತಲಿನ ಸಮಾಜ ನಮಗೆ ದೊಡ್ಡ ಆಸ್ತಿಯಾಗಿರುವುದರಿಂದ ಅಲ್ಲೆಲ್ಲ ಅವಕಾಶಗಳು ಬಂದು ನಮ್ಮ ಕಾಲಿಗೆ ಕಸನ ಬಳ್ಳಿಯಂತೆ ಆಗುತ್ತಲೇ ಇರುತ್ತದೆ. ಆದರೆ ತಾಗಿದ ಬಳ್ಳಿಗೆ ಹಸಿರಿನ ಉಸಿರು ನೀಡುವಲ್ಲಿ ಎಡರುವ ಅದೆಷ್ಟೋ ಶಿಕ್ಷಕರು ಯಾರು ಅರಿವಿಗೂ ಬಾರದೆ ಬಂದ ಪುಟ್ಟ ಹೋದ ಪುಟ್ಟ ಎನ್ನುವ ರೀತಿಯಲ್ಲಿ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರುವ ಅನೇಕರ ಮಧ್ಯೆ “ಅಕ್ಷತಾ” ಅಕ್ಷರ ಕ್ರಾಂತಿಗೆ ಕಾದು ಅರಳಿದ ಕೆಂಡಸಂಪಿಗೆಯಾಗಿ ನಾಡಿನ ತುಂಬೆಲ್ಲ ತನ್ನ ಕಾರ್ಯ ಸಾಧನೆ ಮೂಲಕ ಘಮಘಮಿಸುತ್ತ ಇಡೀ ಶಿಕ್ಷಣ ಸಮೂಹಕ್ಕೆ ಮಾದರಿಯಾದ ವ್ಯಕ್ತಿತ್ವ ಇವರದ್ದಾಗಿದೆ.

ಕಾದು ಅರಳುತ್ತಿರುವ ಕರಾವಳಿ ಮುಂಜಾವು ದಿನಪತ್ರಿಕೆಯ ಅಂಕಣಗಾತಿಯಾಗಿ ಬರಹಗಳ ಮೂಲಕ ಪ್ರಸಿದ್ಧಿಗೆ ಬಂದವರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ೧೭ ವಸಂತಗಳನ್ನು ಪೂರೈಸಿದರೂ, ಇವರ ಸಾಧನೆ ೭೦ ವಸಂತಗಳನ್ನು ಮೀರಿಸುವಂತಿದೆ.

“ಹನ್ನೆರಡು ದಡೆ ಬೆಲ್ಲ”,”ನಾನು ದೀಪ ಹಚ್ಚಬೇಕೆಂದಿದ್ದೆ”, “ಕೋಲ್ಗಂಬ” ಎಂಬ ಮೂರು ಕವನ ಸಂಕಲನ,”ಅಬ್ಬೋಲಿ” ಕಥಾಸಂಕಲನ, “ಮಧುರ ಚನ್ನ” “ಮಕ್ಕಳಿಗಾಗಿ ಸುಕ್ರಿ ಬೊಮ್ಮಗೌಡ”ವ್ಯಕ್ತಿ ಪರಿಚಯ,”ಹಾಲಕ್ಕಿ ಒಕ್ಕಲಿಗರು”ಜನಾಂಗೀಯ ಬರಹ, “ಇಸ್ಕೂಲು”ಅಂಕಣ ಬರಹ,”ಕೇದಿಗೆಯ ಕಂಪು” ವಿಮರ್ಶಾ ಕೃತಿ, “ಹಾಲಕ್ಕಿ ಕೋಗಿಲೆ” ಸಂಪಾದಿತ ಕೃತಿ ಮುಂತಾದ ಹಲವು ವೈಶಿಷ್ಟ ಪೂರ್ಣ ಕೃತಿ ರಚಿಸಿ ಸಾಹಿತ್ಯ ಲೋಕದಲ್ಲಿ ಹೆಜ್ಜೆ ಗುರುತೊಂದನ್ನು ಮೂಡಿಸಿರುತ್ತಾರೆ.

ಅತಿ ಚಿಕ್ಕ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಅಪ್ಪಟ ಗ್ರಾಮೀಣ ಪ್ರತಿಭೆ “ಅಕ್ಷತಾ” ರವರ ಮುಡಿಗೇರಿದ ಪುರಸ್ಕಾರಗಳು ಹಲವು. ಕಂಡೆಗೋಡ್ಲು ಶಂಕರ ಭಟ್ಟರ ಕಾವ್ಯ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಯುವ ಪ್ರಶಸ್ತಿ, ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಅನುಪಮಾ ನಿರಂಜನ ಕಥಾ ಬಹುಮಾನ, ಫೀನಿಕ್ಸ್ ಕಥಾರತ್ನ ಪ್ರಶಸ್ತಿ, ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ, ಎರಡು ಬಾರಿ ಸಂಕ್ರಮಣ ಕಾವ್ಯ ಪ್ರಶಸ್ತಿ,ಮಯೂರವರ್ಮ ಪ್ರಶಸ್ತಿ,ನೀಲಗಂಗಾ ದತ್ತಿ ಕಾವ್ಯ ಪ್ರಶಸ್ತಿ,ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಇನ್ನೂ ಹಲವು ಪ್ರಶಸ್ತಿಗಳ ಸಾಲಿನಲ್ಲಿ “ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” ಮುಡಿಗೇರಿಸಿಕೊಂಡ ಪ್ರಾಥಮಿಕ ಶಾಲಾ ಶಿಕ್ಷಕಿಯ ಪಯಣದ ದಾರಿ ತುಂಬಾ ವೈಶಿಷ್ಟ ಪೂರ್ಣವಾಗಿದೆ.

ತಂದೆ ಅನಿಲ ನಾಯಕ, ತಾಯಿ ಮಾಲಿನಿಯವರ ಮುದ್ದಿನ ಮಗಳಿಗೀಗ ೪೨ ರ ಹರೆಯ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಬರೋಬ್ಬರಿ ೧೭ ವಸಂತಗಳನ್ನು ಪೂರೈಸಿ, ಸಾಧನೆಯ ಒಂದೊಂದೇ ಮೆಟ್ಟಿಲೇರುತ್ತ, ಏರಿದ ಪ್ರತಿಯೊಂದು ಹೆಜ್ಜೆಯೂ ಇತಿಹಾಸ ಪುಟದಲ್ಲಿ ದಾಖಲಾಗುವ ಗಮನಾರ್ಹ ಸಾಧನೆ ಮಾಡುತ್ತಾ ಅಜ್ಜ ನಾರಾಯಣ ಕಲಗುದ್ದಿಯ ಹೆಮ್ಮೆಯ ಮೊಮ್ಮಗಳಾದ ಅಕ್ಷತಾರವರ ಪತಿ ಕೃಷ್ಣಮೂರ್ತಿ. ಮಗ ಕನಿಷ್ಕ ನಾಯಕ ಪ್ರಥಮ ವರ್ಷದ ವಿಜ್ಞಾನ ವಿದ್ಯಾರ್ಥಿ. ಅಕ್ಕರೆಯ ಅಣಶಿ ಶಾಲೆಯ “ಮಕ್ಕಳ ತಾಯಿಯಾಗಿ” “ಆರಾಧ್ಯ ಗುರುಮಾತೆ”ಯಾಗಿ ನಾಡಿಗೆ ನಾಡೇ ಹೆಮ್ಮೆ ಪಡುವ “ಅಕ್ಷತಾ” ಆಧುನಿಕ ಜಗತ್ತಿನ ಅಕ್ಷರ ಲೋಕದ ಧ್ರುವತಾರೆಯಾಗಿ ಮಿನುಗಲೆಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ
ನಲಿ-ಕಲಿ ಶಿಕ್ಷಕ, ಹೊನ್ನಾವರ.

Exit mobile version