Site icon ಒಡನಾಡಿ

ಪ್ರಕಾಶ ನಾಯ್ಕರ ಮುಡಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಓರ್ವ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕರಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಿ ದಣಿವರಿಯದೆ ದುಡಿದು, ಚಿತ್ತಾರದಂತಹ ಅಪ್ಪಟ ಗ್ರಾಮೀಣ ಬದುಕಿನ ಮಕ್ಕಳ ಪಾಲಿನ ಆರಾಧ್ಯ ಗುರುಗಳೆನಿಸಿಕೊಂಡವರು. ಚಿತ್ತಾರದ ಚಿತ್ರದಲ್ಲಿ ಸದಾ ಪ್ರಕಾಶಿಸುವ ವ್ಯಕ್ತಿಯಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡವರು ಅಳ್ವೆದಂಡೆಯ ಪ್ರಕಾಶ ದಯಾನಂದ ನಾಯ್ಕರವರು.

“ಮುರಿದುಕೊಳ್ಳುವುದಕ್ಕಿಂತ ಬಾಗುವುದೇ ಲೇಸು” ಎಂಬುದನ್ನು ಒಪ್ಪಿಕೊಂಡಿರುವ ಅವರು ಅಜಾತಶತ್ರು. ಬದುಕು ಮತ್ತು ಬದುಕಗೊಡು ಎಂಬ ಹಿರಿಯರ ಮಾತಿನಂತೆ, ತಾನು ಬದುಕುತ್ತಾ ಇತರರಿಗೂ ಬದುಕಲು ದಾರಿ ತೋರಿಸುತ್ತಾ, ಮಕ್ಕಳ ಬದುಕಿನಲ್ಲಿ ಬಣ್ಣದ ಚಿತ್ತಾರ ತುಂಬಿದವರು. “ಸಾಮಾನ್ಯ ಶಿಕ್ಷಕರು ಹೇಳುತ್ತಾರೆ. ಉತ್ತಮ ಶಿಕ್ಷಕರು ವಿವರಿಸುತ್ತಾರೆ. ಅತ್ಯುತ್ತಮ ಶಿಕ್ಷಕರು ಪ್ರಯೋಗ ಮಾಡಿ ತೋರಿಸುತ್ತಾರೆ. ಶ್ರೇಷ್ಠ ಶಿಕ್ಷಕರು ಪ್ರಭಾವ ಬೀರುತ್ತಾರೆ. ಅತ್ಯುತ್ಕೃಷ್ಟ ಶಿಕ್ಷಕರು ಪ್ರೇರಣೆಯಾಗುತ್ತಾರೆ, ಸ್ಪೂರ್ತಿಯಾಗುತ್ತಾರೆ”. ಶಿಕ್ಷಕರ ಕುರಿತಾದ ಹೇಳಿಕೆಯ ಕೊನೆಯ ಪ್ರಕಾರದ ವೃತ್ತಿ ಬದುಕಿಗೆ ಪ್ರಕಾಶ ನಾಯ್ಕರು ಸಾಕ್ಷಿಯಾಗುತ್ತಾರೆ.

ಗುಣಮಟ್ಟದ ಶಿಕ್ಷಣಕ್ಕಾಗಿ ಸತತ ಪರಿಶ್ರಮದ ಮೂಲಕ ಅಧ್ಯಾಪನ, ಅಧ್ಯಾಪಕರಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಸ್ಪೂರ್ತಿ ನೀಡುತ್ತಾ ನಾವಿನ್ಯಯುತ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಮಾರ್ಗದರ್ಶಕರಾಗಿ ದುಡಿದ ಅನುಭವ ಇವರದ್ದಾಗಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣ, ಚಟುವಟಿಕೆ ಆಧಾರಿತ ಶಿಕ್ಷಣ, ಶಿಕ್ಷಣದಲ್ಲಿ ರಂಗಕಲೆ ಅಳವಡಿಸಿ ಪಾಠ ನಾಟಕದ ಮೂಲಕ ಮಾದರಿ ಪಾಠ ಬೋಧಿಸುವ ಇವರು ಅಧ್ಯಾಪಕರಿಗೆ ಮಾದರಿಯಾಗಿರುತ್ತಾರೆ. ಪಾಠ ಮತ್ತು ನಾಟಕ ಎರಡು ಕ್ಷೇತ್ರದಲ್ಲಿ ಆಳವಾದ ಅನುಭವ ಇರುವವರು ಮಾತ್ರ ಈ ಪ್ರಯತ್ನವನ್ನು ಸರಳವಾಗಿ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಪ್ರಯೋಗಿಸಬಲ್ಲರು. ನಾಟಕಗಳಿಗೆ ರೂಪಕದ ಶಕ್ತಿ ಇರುತ್ತದೆ. ಹಲವಾರು ಕ್ರಿಯೆಗಳು ಸಾಂಕೇತಿಕವಾಗಿರುತ್ತದೆ. ಇಂತಹ ಸೂಕ್ಷ್ಮ ಸಂವೇದನೆಯನ್ನು ಕಟ್ಟಿಕೊಡುವಲ್ಲಿ ಪ್ರಕಾಶ ನಾಯ್ಕರವರು ರಚಿಸಿದ ನಾಟಕಗಳು ತುಂಬಾ ಪರಿಣಾಮಕಾರಿಯಾಗಿದೆ.

ಸ್ವತಃ ನಾಟಕದ ಕರ್ತೃವಾಗಿ, ನಿರ್ದೇಶಕರಾಗಿ ಹಲವು ಪುರಸ್ಕಾರ ಪಡೆದಿರುತ್ತಾರೆ. “ಪ್ರೇಮಕ್ಕೆ ಸೋತ ಕ್ರೌರ್ಯ”, “ಮರೆಯಲಾಗದ ಮಾಣಿಕ್ಯ”, “ರಾಣಿ ಅಬ್ಬಕ್ಕ”, “ದಣಿಯದಿರಲಿ ಧರಣಿ”, “ವಿಮೋಚನೆ”,”ಭೂಮಿಗೆ ಜ್ವರ ಬಂದಿದೆ”,”ಮೂಕ ರೋಧನೆ” ಮುಂತಾದ ನಾಟಕಗಳು ನಾಡಿನ ವಿವಿಧ ಸ್ಥಳಗಳಲ್ಲಿ ಪ್ರದರ್ಶನಗೊಂಡಿದೆ.

“ಸೃಜನಶೀಲ ಮಕ್ಕಳ ರಂಗಭೂಮಿ” ಮಕ್ಕಳ ನಾಟಕ ತಂಡ ರಚಿಸಿ, ಆಸಕ್ತ ಮಕ್ಕಳಿಗೆ ಅಭಿನಯ, ರಂಗ ಸಜ್ಜಿಕೆ, ರಂಗ ಪರಿಕರಗಳ ತರಬೇತಿ ನೀಡಿ ಆರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ, ೭೫ ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯ, ವಿಭಾಗ, ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಇಂಗ್ಲೀಷ್ ಭಾಷಾ ಶಿಕ್ಷಕರಾದ ಇವರು ಇಂಗ್ಲಿಷ್ ಕಿರು ನಾಟಕಗಳಾದ Charms and challenges of adolescence-ಚಿತ್ರದುರ್ಗದಲ್ಲೂ, Nutrition food and will being- ಬೆಂಗಳೂರಿನಲ್ಲೂ ಪ್ರದರ್ಶನ ಕಂಡಿದೆ. ,”ಪರಿಸರ ಜಾಗೃತಿ”ಜನಪದ ರೂಪಕ ರಚಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಮಹಾರಾಷ್ಟ್ರದ ಪೂನಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಆರು ವಿದ್ಯಾರ್ಥಿಗಳು ಭಾಗವಹಿಸಿದ ಹೆಗ್ಗಳಿಕೆ ಇವರಿದ್ದಾಗಿದೆ. ಇವರು ರಚಿಸಿದ ನಾಟಕಗಳಾದ “ದಣಿಯದಿರಲಿ ಧರಣಿ” ಮತ್ತು “ವಿಮೋಚನೆ” ಕಾರವಾರ ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರವಾಗಿದೆ.

ಮೂಲತ: ಕುಮಟಾ ತಾಲೂಕಿನ ಅಳ್ವೆದಂಡೆಯ ನಿವಾಸಿಯಾಗಿದ್ದು,ತಂದೆ ದಯಾನಂದ ನಾಯ್ಕ, ತಾಯಿ ಶಾಂತಿ ನಾಯ್ಕರ ಮಗನಾಗಿ ಜನಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ವಿಶಿಷ್ಟ ಮೈಲುಗಲ್ಲಾಗಿದೆ. ೨೦೦೪ ರಲ್ಲಿ ಹಾಸನ ತಾಲೂಕಿನ ಅರಕಲಗೂಡಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಬದುಕನ್ನು ಆರಂಭಿಸಿ, ಅಲ್ಲಿ ಏಳು ವರ್ಷ ಸೇವೆ ಸಲ್ಲಿಸಿ, ೨೦೧೧ ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕಾರ್ಕಳ ತಾಲೂಕಿನ ಬೈಲೂರಿಗೆ ವರ್ಗವಾಗಿ ಬಂದರು. ಅಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ೨೦೧೫ ರಿಂದ ಹೊನ್ನಾವರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಚಿತ್ತಾರದಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸದಾ ಕ್ರಿಯಾಶೀಲ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು,ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾದ, ಸುಜ್ಞಾನಿಯಾದ ಪ್ರಕಾಶ ನಾಯ್ಕರು ಮಕ್ಕಳ ನಾಡಿ ಅರಿತು ಸ್ವರ್ಗ ಸದೃಶ ಕಲಿಕಾ ವಾತಾವರಣ ನಿರ್ಮಿಸಿ ಕಲಿಕೆಯಲ್ಲಿ ವಿವಿಧ ಬೋಧನಾ ತಂತ್ರಗಳನ್ನು ಅಳವಡಿಸಿ ವಿದ್ಯಾರ್ಥಿಗಳ ಕಲಿಕೆಗೆ ಸ್ವರ್ಣ ಪಥವನ್ನು ನಿರ್ಮಿಸಿದ ಸಾಧಕ ಶಿಕ್ಷಕರು. ಇಂಗ್ಲಿಷ್ ನಲ್ಲಿ ಆಗಾದ ಪಾಂಡಿತ್ಯ, ಕನ್ನಡದಲ್ಲಿ ಶ್ರೇಷ್ಠ ಸಂವಹನ ಕಲೆ,ಹೃದಯಕ್ಕೆ ನಾಟುವ ಸಚ್ಚಾರಿತ್ರ್ಯದ ವ್ಯಕ್ತಿತ್ವ, ನಿರ್ಮಲ ಪ್ರೀತಿ ತುಂಬಿದ ಆದರ್ಶ ಶಿಕ್ಷಕ. ಇಂಗ್ಲೀಷ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ದೂರದರ್ಶನದಲ್ಲಿ ಪಾಠ ಮಾಡಿದ ಆಧ್ಯಾಪಕ. ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಫೋನ್ ಇನ್ ಕಾರ್ಯಕ್ರಮ, ಸಿ.ಸಿ.ಎ. ಚಟುವಟಿಕೆ ಪುಸ್ತಕ ಸಮಿತಿ ಸದಸ್ಯ,ವಿಭಾಗೀಯ ಗುರು ಪ್ರೇರಣಾ ತರಬೇತಿ ಸಾಹಿತ್ಯ ಸದಸ್ಯ, ಜಿಲ್ಲಾ ವರ್ಕ್ ಬುಕ್ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಅದರ ಅನುಭವ ಪಡೆದು,ಚಿತ್ತಾರದ ಮಕ್ಕಳಲ್ಲಿ ಪ್ರೇರಕ ಶಕ್ತಿ ತುಂಬಿ ಸ್ಪೂರ್ತಿಯ ಸೆಲೆಯಾದರು.

ಶೈಕ್ಷಣಿಕ, ಸಾಮಾಜಿಕ ಜಾಗೃತಿ, ರಾಷ್ಟ್ರ ಜಾಗೃತಿ, ಪರಿಸರ ಜಾಗೃತಿ, ಮತದಾನ ಜಾಗೃತಿ ಮುಂತಾದ ವಿಷಯಗಳ ಕುರಿತು ೫೦ ಕ್ಕೂ ಹೆಚ್ಚು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಪರಿಸರ ಸ್ನೇಹಿಯಾಗಿ ಹಲವಾರು ಪರಿಸರ ಕಾರ್ಯಕ್ರಮ ಸಂಘಟಿಸಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿರುತ್ತಾರೆ. ಇವರ ಸೇವೆಯನ್ನು ಪರಿಗಣಿಸಿ ಹಲವು ಪ್ರಶಸ್ತಿಗಳು ಇವರನ್ನರಸಿ ಬಂದಿವೆ. ಜಿಲ್ಲಾ, ವಿಭಾಗ ಮಟ್ಟದ ಉತ್ತಮ ರಂಗಭೂಮಿ ನಿರ್ದೇಶಕ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಕಾರ್ಕಳ ತಾಲೂಕಾ ಸಾಧಕ ಶಿಕ್ಷಕ ಪ್ರಶಸ್ತಿ,ಎನ್.ಸಿ.ಇ. ಆರ್. ಟಿ. ನವದೆಹಲಿ ಪ್ರಸಂಶನಾ ಪತ್ರ, ಅರಬಿಂದೋ ಸೊಸೈಟಿ ನವದೆಹಲಿ ಇನ್ನೋವೇಟಿವ್ ಟೀಚರ್ ಮುಂತಾದ ಹಲವು ಪುರಸ್ಕಾರ ಸಂದಿವೆ.

“ನಿಗ್ರೋದ್ ಬೀಜಂ ಕೆಲಂ ಸಿಡಿದುಂ ಪೆರ್ಮರವಾಗವೇ
ಎಳಗರುಂ ಎತ್ತಾಗದೇ ಲೋಕದೊಳ್” ಎಂಬ ಉಕ್ತಿಯು ಪ್ರಕಾಶ ನಾಯ್ಕರಿಗೆ ಅನ್ವಯಿಸುತ್ತದೆ. ಎರಡು ದಶಕಗಳ ಕಾಲ ಸಲ್ಲಿಸಿದ ಶಿಕ್ಷಕ ಸೇವೆ ಇಡಿ ಶಿಕ್ಷಕ ಸಮುದಾಯಕ್ಕೆ ಮಾದರಿಯಾದದ್ದು. ಯಾವುದೇ ಪ್ರಚಾರ ,ಪ್ರಸಿದ್ಧಿ ಬಯಸದ ಕಾಯಕಯೋಗಿಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ ಎಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ
ನಲಿ-ಕಲಿ ಶಿಕ್ಷಕ ಹೊನ್ನಾವರ.

Exit mobile version