ಕನ್ನಡ ಸಾಹಿತ್ಯ ಪರಿಷತ್ತಿನ ಜಲ್ಲಾ ಮಟ್ಟದ ಆಜೀವ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕಪತ್ರ ಮಂಡಿಸಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ಕೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಲಿಖಿತ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಅಗಸ್ಟ್ 6 ರಂದು ದಾಂಡೇಲಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಕರೆದಿದ್ದ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಆ ಸಭೆಯಲ್ಲಿ 2021-22 ಹಾಗೂ 2022-23 ನೇ ಸಾಲಿನ ಲೆಕ್ಕಪತ್ರವನ್ನು ಆಡಿಟ್ ವರದಿ ಸಹಿತ ಕಸಾಪ ಆಜೀವ ಸದಸ್ಯರು ಹಾಗೂ ಮಾಧ್ಯಮದವರ ಎದುರು ಮಂಡಿಸಿದ್ದರು. ಇದು ಆಜೀವ ಸದಸ್ಯರ ಹಾಗೂ ಜಿಲ್ಲೆಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಇದನ್ನು ಮಾದ್ಯಮಗಳ ವರದಿಯ ಮೂಲಕ ತಿಳಿದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಗಿಸಿ , ಅಭಿನಂದಿಸಿ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರಿಗೆ ಲಿಖಿತ ಪ್ರಶಂಸನಾ ಪತ್ರ ಬರೆದಿದ್ದಾರೆ.
ಪ್ರಶಂಸನಾ ಪತ್ರದಲ್ಲೇನಿದೆ…:
“ಕನ್ನಡ ಸಾಹಿತ್ಯ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎನ್. ವಾಸರೆಯವರು ದಾಂಡೇಲಿಯಲ್ಲಿ ೦೬-೦೮-೨೦೨೩ ರಂದು ಪರಿಷತ್ತಿನ ಜಿಲ್ಲಾ ಮಟ್ಟದ ಆಜೀವ ಸದಸ್ಯರ ಸಭೆ ಕರೆದು ೨೦೨೧-೨೨ ಹಾಗೂ ೨೦೨೨- ೨೩ನೇ ಸಾಲಿನ ವಾರ್ಷಿಕ ಅನುದಾನ ಮತ್ತು ಒಟ್ಟು ಖರ್ಚಿನ ಲೆಕ್ಕಪತ್ರ ಮಂಡನೆಯನ್ನು ಮಾಡಿರುವುದು ನಿಜಕ್ಕೂ ಪ್ರಶಂಸನಾರ್ಹ ಕಾರ್ಯವಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎನ್. ವಾಸರೆಯವರ ಹಾಗೂ ಅವರ ಸಮಿತಿಯ ಈ ನಿಲುವು ಅತ್ಯಂತ ಸಂತಸದಾಯಕವಾದುದು.
ಒಂದು ಸಂಘಟನೆ ಮತ್ತು ಸಾರ್ವಜನಿಕ ಸಂಸ್ಥೆಗಳು ಆರ್ಥಿಕ ವ್ಯವಹಾರವನ್ನು ಪಾರದರ್ಶಕವಾಗಿ ಇಟ್ಟುಕೊಳ್ಳುವುದು ಹಾಗೂ ಆಗಿರುವ ಆರ್ಥಿಕ ವ್ಯವಹಾರವನ್ನು ಸಾರ್ವಜನಿಕವಾಗಿ ಮಂಡಿಸುವುದು ಮಾದರಿಯದ ಕಾರ್ಯ ಹಾಗೂ ಸಂಘಟನೆಯ ಯಶಸ್ಪೂ ಕೂಡಾ. ಅದನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆಯವರು ಮಾಡಿದ್ದಾರೆ. ಮಾಧ್ಯಮಗಳಲ್ಲಿ ಬಂದ ವರದಿಯ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ನಡೆದಿದ್ದು ಹಾಗೂ ಆ ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿದ್ದು ನಿಜಕ್ಕೂ ಒಂದು ದಾಖಲಾರ್ಹವಾಗಿದೆ. ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲಿಯೂ ಕೂಡ ಈ ರೀತಿ ಆಜೀವ ಸದಸ್ಯರ ಸಭೆ ನಡೆಸಿ, ಲೆಕ್ಕಪತ್ರಗಳನ್ನು ಮಂಡಿಸಿರುವ ಬಗ್ಗೆ ಮಾಹಿತಿಯಿಲ್ಲ. ಹಾಗಾಗಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆಯವರ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷನಾಗಿ ನಾನು ಸ್ವಾಗತಿಸಿ, ಅಭಿನಂದಿಸುತ್ತಿದ್ದೇನೆ ಹಾಗೂ ಇದು ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರಿಗೂ ಒಂದು ಮಾದರಿಯಾದ ಕಾರ್ಯವಾಗಿದೆ ಎನ್ನುವುದನ್ನು ಕೂಡ ಇದೇ ಸಂದರ್ಭದಲ್ಲಿ ಹೇಳಬಯಸುತ್ತೇನೆ.
ಈ ಹಿಂದೆ, ಅಂದರೆ ೨೦೨೨ ರ ಡಿಸೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೨೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉಳಿವಿಯಲ್ಲಿ ನಡೆದ ಸಂದರ್ಭದಲ್ಲಿಯೂ ಕೂಡ ಶ್ರೀ ಬಿ.ಎನ್. ವಾಸರೆಯವರು ಆ ಸಮ್ಮೇಳನದ ಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಾಧ್ಯಮದವರೆದುರು ಮಂಡಿಸಿರುವುದು ಕೂಡ ನನ್ನ ಗಮನಕ್ಕಿದೆ. ಅಷ್ಟೇ ಅಲ್ಲ, ಉತ್ತರಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರುಗಳು ಕೂಡ ಜಿಲ್ಲಾಧ್ಯಕ್ಷ ವಾಸರೆಯವರ ನಿರ್ದೇಶನದಂತೆ ತಮ್ಮ ತಮ್ಮ ಸಮ್ಮೇಳನಗಳ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸಿರುವುದರ ಬಗ್ಗೆ ತಿಳಿದಿದ್ದೇನೆ. ನಿಜಕ್ಕೂ ಕೂಡ ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಈ ಪಾರದರ್ಶಕ ಆಡಳಿತದ ಬಗ್ಗೆ ಹಾಗೂ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸಾಹಿತ್ಯದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಈ ಪ್ರಶಂಸನಾ ಪತ್ರವನ್ನು ಗೌರವ ಪೂರಕವಾಗಿ ನೀಡಲ್ಪಡುತ್ತಿದ್ದೇನೆ. ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಬಿ.ಎನ್. ವಾಸರೆ ಅವರ ಈ ಸುತ್ಯಾರ್ಹ ಕಾರ್ಯವನ್ನು ಪರಿಷತ್ತಿನ ಉಳಿದೆಲ್ಲ ಜಿಲ್ಲಾ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರುಗಳು ನೆರವೇರಿಸುವಂತಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಶಿಸುತ್ತೇನೆ ” ಎಂದು ಪ್ರಶಂಸನಾ ಪತ್ರದಲ್ಲಿ ನಾಡೋಜ ಡಾ. ಮಹೇಶ ಜೋಶಿ ದಾಖಲಿಸಿರುತ್ತಾರೆ.
ಜವಾಬ್ದಾರಿ ಹೆಚ್ಚಿಸಿದೆ
ನಾನು ಕಸಾಪ ಚುನಾವಣೆಯ ಸಂದರ್ಭದಲ್ಲಿಯೇ ಅಜೀವ ಸದಸ್ಯರ ಸಭೆ ಕರೆದು ವಾರ್ಷಿಕ ಲೆಕ್ಕ ನೀಡುವುದಾಗಿ ಹೇಳಿದ್ದೆ. ಅಂತೆಯೇ ಆಜೀವ ಸದಸ್ಯರ ಸಭೆ ಕರೆದು ಲೆಕ್ಕ ಒಪ್ಪಿಸಿದ್ದೆ. ಜಿಲ್ಲೆಯೆಲ್ಲಡೆಯಿಂದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ನಮ್ಮ ಈ ಕಾರ್ಯವನ್ನು ಮೆಚ್ಚಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಕಸಾಪ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿಯೂ ಉಲ್ಲೇಖಿಸಿ, ಅಭಿನಂದಿಸಿದ್ದರು. ಇದೀಗ ಉ.ಕ. ಜಿಲ್ಲಾ ಕಸಾಪ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿರುವುದು ನಮಗೆ ಇನ್ನಷ್ಟು ಖುಶಿ ತಂದಿದೆ. ಜಿಲ್ಲೆಯ ಕಸಾಪ ಇತಿಹಾಸದಲ್ಲಿಯೇ ಇಂತಹದ್ದೊಂದು ಪ್ರಶಂಸನಾ ಪತ್ರ ಮೊದಲ ಬಾರಿ ಬಂದಿದ್ದು, ಇದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇದು ನಮ್ಮ ಜಿಲ್ಲಾ ಸಮಿತಿಗೆ ಸಂದ ಗೌರವವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಆಜೀವ ಸದಸ್ಯರ ಸಭೆಯ ಚಿತ್ರಗಳು