Site icon ಒಡನಾಡಿ

‘ಎದೆಯೇ ಇಲ್ಲದ ನಿನಗೆ ಬೇರೇನು ಇದ್ದರೂ ನನ್ನ ಪಾಲಿಗೆ ನೀನು ಬರೀ ವೇದನೆ’ – ವಿ.ಗ. ನಾಯಕ

“ಪಾಪದ ಚೆಂಡುಗಳು
ಯಾರ್ಯಾರದೋ
ಕಾಲ್ತುಳಿತಕ್ಕೆ ಸಿಕ್ಕಿ ಮುದ್ದೆ
ಚರ್ಮವಾಗಿ ಹೋಗುತ್ತವೆ
ಆದರೂ
ಅದೇ ಜನ ಮತ್ತೆ ಬರುತ್ತಾರೆ
ಗಾಳಿ ಹಾಕುತ್ತಾರೆ
ಅಷ್ಟಕ್ಕೇ
ಅವು ಎಲ್ಲಾ ಮರೆತು
ನಗುತ್ತವೆ ಮೈದುಂಬಿ ಗೊಳ್ಳುತ್ತವೆ
ಯಥಾ ಪ್ರಕಾರ ಒದೆತಕ್ಕೆ ಬಲಿಯಾಗುತ್ತವೆ.”

ಸಮಾಜದಲ್ಲಿನ ನಾನಾ ರೀತಿಯ ತಾರತಮ್ಯದಿಂದಾಗಿ ಪಾಪದ ಚೆಂಡುಗಳಂತೆ ಯಾರ್ಯಾರದೋ ಕಾಲ್ತುಳಿತಕ್ಕೆ ಸಿಕ್ಕಿ ಶೋಷಣೆಗೊಳಗಾದ ನೂರೆಂಟು ಜಾತಿಗಳ ಬಗ್ಗೆ ಕವಿ ಒಪ್ಪುವುದಿಲ್ಲ. ಅವರ ಭಾವನೆಯಂತೆ ಇರುವುದು ಎರಡೇ ಜಾತಿ: “ಎದೆಗಾರರದ್ದೊಂದು
ಎದೆ
ಗಾರವಾದವರದ್ದೊಂದು”

ನೇರ, ನಿಷ್ಠುರ, ಅಪ್ಪಟ ಮಾನವತವಾದವನ್ನು ತಮ್ಮ ಗದ್ಯ, ಪದ್ಯ,ಲೇಖನಗಳಲ್ಲಿ ಹರಿಯ ಬಿಟ್ಟು ನಾಡಿನ ಓದುಗರ, ವಿದ್ವಾಂಸರ ಮೆಚ್ಚುಗೆಯನ್ನು ಪಡೆದು ವಿ.ಗ ನಾಯಕ ಎಂದೇ ನಾಡಿಗೆ ಪರಿಚಿತರಾದವರು ಹೊನ್ನಾವರ ಕರ್ಕಿಕೋಡಿಯ ವಿನಾಯಕ ಗಣಪತಿ ನಾಯಕರು.

೧೯೫೦ ರಲ್ಲಿ ಗಣಪತಿ ನಾಯ್ಕ ಮತ್ತು ಸೀತಾದೇವಿಯವರ ಮಗನಾಗಿ ಜನಿಸಿದರು. ಅಮ್ಮನ ಸ್ವಾರಸ್ಯಕರ ಕಥೆಗಳ ಮೂಲಕ, ಕಂದಾಯ ಇಲಾಖೆಯಲ್ಲಿದ್ದರೂ ಪುಸ್ತಕ ಪ್ರೇಮಿಯಾಗಿದ್ದ ಅಪ್ಪನ ಅಧ್ಯಯನ- ಜ್ಞಾನಗಳ ಪ್ರಭಾವದ ಮೂಲಕ ಅಮೂಲ್ಯ ಗ್ರಂಥಗಳ ಸಹವಾಸ, ಎಳವೆಯಲ್ಲೇ ಓದುವ ಹಸಿವನ್ನು, ಬರೆಯುವ ಪ್ರೀತಿಯನ್ನು, ಹುಡುಕುವ- ಸಂಗ್ರಹಿಸುವ ಆಸಕ್ತಿಯನ್ನು ಹುಟ್ಟು ಹಾಕಿತು. ಹದಿನೆಂಟರ ಹರೆಯದಲ್ಲೇ ಮೊದಲ ಕವನ ಸಂಕಲನ ಹೊನ್ನೂರ ಜಾಜಿ ಪ್ರಕಟವಾಯಿತು.

ವಿ.ಗ. ನಾಯಕರು ನಡೆದು ಬಂದ ದಾರಿ ಹೂವಿನ ಹಾಸಿಗೆ ಆಗಿರಲಿಲ್ಲ. ಜೀವನದ ಪ್ರತಿಯೊಂದು ಘಟ್ಟವನ್ನು ಆತ್ಮವಿಶ್ವಾಸದಿಂದ ಜಯಿಸುತ್ತಾ ಮೇಲಕ್ಕೆರಿದವರು.ಅವರ ಜೀವನ ಅನುಭವವೇ ಸಾಹಿತ್ಯದ ವಿವಿಧ ಪ್ರಕಾರಗಳಾಗಿ ನಾಡಿಗೆ ನಾಡಿಗೆ ಹೆಮ್ಮೆಪಡುವ ಕೃತಿ ಪ್ರಕಟಗೊಳ್ಳಲು ಕಾರಣವಾಯಿತು. ಜಾತಿಯತೆ ಹಾಗೂ ಯಜಮಾನ ಶಾಯಿ ದೌರ್ಜನ್ಯ ಅವರ ಬಾಲ್ಯದ ದಿನಗಳಲ್ಲಿ ಕಾಡಿದೆ. ಆ ಕಾರಣಕ್ಕಾಗಿ ದಲಿತ ಬಂಡಾಯ ಸಾಹಿತ್ಯ ಪಥದತ್ತ ಹೆಚ್ಚು ಪ್ರಭಾವಕ್ಕೊಳಗಾಗಿ ಶೋಷಿತ ವರ್ಗದ ಗಟ್ಟಿ ಧ್ವನಿಯಾಗಿ ಅವರ ಸಾಹಿತ್ಯ ಹುಟ್ಟಿಕೊಂಡಿದೆ. ಮಹಾನ್ ಮಾನವತಾವಾದಿ ಪಾಂಡೇಶ್ವರ ಗಣಪತಿ ರಾಯರ ಸಂಪರ್ಕದಿಂದಾಗಿ ಸಾಹಿತ್ಯ ನನ್ನೆಡೆಗೆ ಬೆಳಕಿನ ಬೀಜದಂತೆ ಹರಿದು ಬಂತು ಎನ್ನುತ್ತಾರೆ ವಿ.ಗ. ನಾಯಕರು.

ಕಾಣುವುದಿಲ್ಲ ಬೆಳಕು
ತೋರುವುದಿಲ್ಲ ದಾರಿ
ಎಂದು ಕೈಕಟ್ಟಿ
ಕೂರುವುದು ನೂಕು
ಹೊಕ್ಕು ಎದೆ
ಒಳ
ಕಾಡು
ಕೊಂಡುಕೋ ದಾರಿ
ನಿನಗೆ ನೀನೇ ಬೆಳಕು-ನೆಲಗುಮ್ಮ

ವಿ.ಗ. ನಾಯಕರ ನೂರು ಹನಿಗಳ ಒಂದು ಗುಚ್ಚ ನೆಲಗುಮ್ಮ. ಆಕಾರದಲ್ಲಿ ಕಿರಿದಾಗಿದ್ದರು ಇಲ್ಲಿನ ಹನಿಗವನಗಳು ಧ್ವನಿ ಪೂರ್ಣ ಪ್ರತಿಮೆಗಳಾಗಿವೆ. ಜೀವನ ಅನುಭವದ ಕೆನೆಗಳಾಗಿವೆ. ನಿನಗೆ ನೀನೇ ಬೆಳಕು ಎನ್ನುವ ಅರ್ಥಪೂರ್ಣ ಸಾಲು ಇಂದಿನ ಯುವಕರು ತನಗೆ ತಾನೇ ದಾರಿ ಕಂಡುಕೊಂಡು ಇತರರಿಗೆ ಬೆಳಕಾಗುವಂತೆ ಸಲಹೆ ನೀಡುತ್ತಾರೆ.

ಇಲ್ಲಿ
ಇವರ ಚಿಪ್ಪುಗಳು
ಕರಕಿ ಸುಣ್ಣವಾಗುತ್ತವೆ!
ಉಳ್ಳವರ ಗೋಡೆಗಳಿಗೆ
ಬಣ್ಣವಾಗುತ್ತವೆ.

ಎಂದು ಮರಗುವ ಅವರು ಆಡಿಸುವವರ ಮಜಕ್ಕೆ ಬುಗುರಿ ಆಗಿ ಒಡ್ಡಿಕೊಂಡು ತಲೆ ಸುತ್ತಿ ಬೀಳದಂತೆ ಎಚ್ಚರ ವಹಿಸುವ ಕಾಳಜಿಯನ್ನು ತಮ್ಮ ಹನಿಗವನದಲ್ಲಿ ಕಟ್ಟಿಕೊಟ್ಟಿರುತ್ತಾರೆ. ದೀನ ದಲಿತರ ಕಡಗಣನೆ ಮತ್ತು ಅಮಾನವೀಯತೆಗಳನ್ನು ಖಂಡಿಸಿ ತುಳಿತಕ್ಕೆ ಒಳಗಾಗಿರುವವರ ಕಡೆಗೆ ಅವರ ಕವನದ ತುಣುಕು ಜಾಗೃತಿಗಾಗಿ ಮಿಡಿಯುತ್ತಿದೆ.
ಮೇಲೇರಿದವರು
ಇನ್ನೇನು ಮಾಡುತ್ತಾರೆ
ಸಿಕ್ಕಷ್ಟು ಕಾಯ
ಕಿತ್ತುಕೊಳ್ಳುತ್ತಾರೆ
ಹೌದೇ!

ಉಳ್ಳವರೆನಿಸಿಕೊಂಡವರು ಇಲ್ಲದವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಾ ಅವರ ಬದುಕನ್ನು ಕಂಡು ಖುಷಿ ಪಡುವ ವಿಕೃತ ಮನಸ್ಸುಗಳನ್ನು ಬಹು ಮಾರ್ಮಿಕವಾಗಿ ತಮ್ಮ ಹನಿಗವನದ ಮೂಲಕ ಚಿತ್ರಿಸಿದ್ದಾರೆ.

“ಎತ್ತರೆತ್ತರ
ಬೆಳೆಯುವವುಗಳೇ
ಮರೆಯಬೇಡಿ ಬೀಗಿ
ಸಿಡಿಲು ಬಡಿಯುವುದು
ಮೊದಲು
ನಿಮ್ಮ ತಲೆಗೆ ತಾಗಿ”

ಎತ್ತರತರಕ್ಕೆ ಬೆಳೆದು ಬೀಗುವವರಿಗೆ ಬಲವಾದ ಹೊಡೆತದ ಮೂಲಕ ಎಚ್ಚರ ಧ್ವನಿ ವಿ.ಗ.ನಾ.ರವರ ಕವನದ ವಿಶೇಷವಾಗಿದೆ.ಮಿಂಚಿನಂತೆ ಕ್ಷಣಾರ್ಧದಲ್ಲಿ ಬೆಳಕು ನೀಡಿ ಹೊರಟು ಹೋಗುವಾಗ ಬಡಿಯುವ ಗುಡುಗಿನ ಶಬ್ದಕ್ಕೆ ತಲೆ ಬಾಗಲೇಬೇಕು.

ಕೇವಲ ಪ್ರಾಸಕ್ಕೆ ಜೋತು ಬಿದ್ದು ಕವನ ರಚಿಸಿ ಸಂತಸ ಪಡುವ ನಮ್ಮ ನಡುವಿನ ಓದದ ಕವಿಗಳು “ಗೊಲಗುಮ್ಮಟ” ಮತ್ತು “ನೆಲಗುಮ್ಮ” ಹನಿ ಕವನ ಸಂಕಲನಗಳನ್ನು ಓದಬೇಕು. ಶಬ್ದಗಳ ದುಡಿತದ ಮೂಲಕ ಭಾಷೆಯಲ್ಲಿ ಹಿಡಿತ ಸಾಧಿಸುವ ಇವರ ಹನಿ ಕವಿತೆಗಳು ಕನ್ನಡದಲ್ಲಿ ಬಂದ ಹನಿಗವನ ಪ್ರಕಾರದ ಕವಿತೆಗಳಲ್ಲಿ ವಿಶಿಷ್ಟವಾದವುಗಳಾಗಿವೆ. ಅವರೊಬ್ಬ ಉತ್ತಮ ವಿಮರ್ಶಕರು, ಅಧ್ಯಯನ ನಿಷ್ಠೆ, ಅಪೂರ್ವ ಒಳನೋಟ, ಸಂಯಮದ ಬರವಣಿಗೆ ಇವರ ವಿಶೇಷತೆ. “ಬೀಸೇ ಕುಂಕುಮದ ತೆನೆ ಗಾಳಿ”,” ಮದುವೆ ಮನೆ ಚಂದ”,” ಗಂಧದ ಮರವೇ ನೆರಳಾಗು”, ನಿಮ್ಮ ಸೃಷ್ಟಿ ನಮ್ಮ ದೃಷ್ಟಿ”, “ದಿಬ್ಬಣ”, “ನೆಲೆದೇವಿದಿನ ಗೌರಿಯ ಮಗನ ಗಣಪನ”, “ಸ್ವಾಗತವನೆ ಕೋರಿದೆ ಹರ್ಷ ಚೆಲ್ಲಿ ಕಾದಿದೆ”, ಇವು ಜಾನಪದ ಸಂಬಂಧಿ ಕೃತಿಗಳಾಗಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ “ಹರಿಕಾಂತರ ಸಂಸ್ಕೃತಿ” ಒಂದು ಜನಾಂಗೀಯ ಅಧ್ಯಯನ ಕೃತಿಯಾಗಿದೆ. “ಕಾಸರಗೋಡಿನಲ್ಲಿ ಹಳೆ ಪೈಕರು” ಕೆಳದಿ ಸಂಸ್ಥಾನಕ್ಕೆ ಸೇರಿದ ಯೋಧ ಪರಂಪರೆಯ ಹಳೆಪೈಕರನ್ನು ಪರಿಚಯಿಸುವಂಥ ಲೇಖನಗಳಾಗಿವೆ.

ಓರೆಗಲ್ಲು”,”ಪ್ರತಿಸ್ಪಂದನ”, ಕನ್ನಡದಲ್ಲಿ “ಹನಿಗವನಗಳು”, “ತಾರ್ಕಣೆ” ಇವರ ವಿಮರ್ಶಾ ಗ್ರಂಥಗಳು.” ಬಿಡುಗಡೆ”, “ವಾಲಗ” ಅಂಕಣ ಸಂಗ್ರಹ ಕೃತಿಗಳಾಗಿವೆ. “ಚಿನ್ನದ ಪೆಟ್ಟಿಗೆ” ಕುಮಟಾ ಗೋವಿಂದ ನಾಯ್ಕರ ಯಕ್ಷಗಾನ ಮೇಳವೊಂದರ ಸಾಧನ ಪಥದ ಕಿರುಪರಿಚಯವುಳ್ಳ ಒಂದು ಅಪರೂಪದ ಕೃತಿಯಾಗಿದೆ. “ಕವಿಯಿಂದ ಕಿವಿಗೆ” ಚಿಂತನ ಕೃತಿಯಾಗಿದೆ. ಎದೆಗೆ ಸಂಬಂಧಿಸಿದ ಒಂದು ನೂರು ಕವನಗಳುಳ್ಳ “ನೆಲಗುಮ್ಮ” ಒಂದೇ ವಸ್ತುವನ್ನು ಇಟ್ಟುಕೊಂಡು ಓರ್ವ ಕವಿ ಭಾಷೆ, ಭಾವನೆ,ಅನುಭವ, ಕಲ್ಪನೆಗಳನ್ನು ತೊಡಗಿಸಿ ಹೇಗೆ ಬರೆಯಬಹುದು ಎನ್ನುವ ವಿಶಿಷ್ಟ ಕೃತಿಯಾಗಿದೆ.
ಎದೆ ಎದೆಗೂ!
ವ್ಯತ್ಯಯ!
ಹಾಳಾಗಲಿ!
ಎದೆ ಎದೆ!
ಗೂಡಲಿ!
ಹಾಲಾಗಲಿ!

ಅವರ ನಿವೇದನೆಯೂ ಕೂಡ.
ವಿ.ಗ.ನಾ.ರವರು ಕವಿಯಾಗಿ, ವಿಮರ್ಶಕರಾಗಿ,ಜಾನಪದ ವಿದ್ವಾಂಸರಾಗಿ,ಅಧ್ಯಾಪಕರಾಗಿ, ಸಂಘಟಕರಾಗಿ,ಚಿಂತಕರಾಗಿ, ಪ್ರಕಾಶಕರಾಗಿ, ಹೋರಾಟಗಾರರಾಗಿ ಕರ್ಮ ಕ್ಷೇತ್ರದ ವಿವಿಧ ಆಯಾಮಗಳ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಪರಿಚಯಿಸಿರುತ್ತಾರೆ.ಸುಮಾರು ಮೂರುವರೆ ದಶಕಗಳ ಕಾಲ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದು ಅಡ್ಯನಡ್ಕದ ಕಲ್ಲಂಗಳದ ಮಣ್ಣಿನಲ್ಲಿ. ಹಳ್ಳಿಗಾಡಿನಲ್ಲಿ ಚಿಗುರಿದ ಗಂಧದ ಮರವಾಗಿ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಸಾಹಿತ್ಯದ ಕಂಪು ಸುಸಿದವರು. ಸಾಹಿತ್ಯ ಪ್ರೀತಿಯ ಊರುಗೋಲಿನಿಂದ ಮತ್ತೆ ಬದುಕನ್ನು ಕಟ್ಟಿಕೊಂಡವರು.

ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ೧೫ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಪಟ್ಟವನ್ನು ನೀಡಿ ಗೌರವಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಬಂಟ್ವಾಳ ತಾಲೂಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ,ವರ್ಧಮಾನ ಸಾಹಿತ್ಯ ಪ್ರಶಸ್ತಿ, ಅರವಿಂದ ಕರ್ಕಿ ಕೋಡಿಯವರ ಹಣತೆ ಜಗುಲಿಯಿಂದ ಹೊನ್ನೂರ ಜಾಜಿ ಅಭಿನಂದನಾ ಗ್ರಂಥ ಸಮರ್ಪಿಸಿರುತ್ತಾರೆ. ಸ್ಮೃತಿ ಪ್ರಕಾಶನದ ಸಂಚಾಲಕರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಹಲವು ಮಾನ- ಸನ್ಮಾನಕ್ಕೆ ಪಾತ್ರರಾದ ವಿ.ಗ. ನಾ.ರವರು ಇಂದಿನ ಯುವ ಪೀಳಿಗೆಯವರಿಗೆ ಒಬ್ಬ ಆದರ್ಶ ಗುರುವಾಗಿ ಇಡೀ ಸಮಾಜಕ್ಕೆ ಹೆಮ್ಮೆಪಡುವ ವ್ಯಕ್ತಿತ್ವ ಅವರದ್ದಾಗಿದೆ.
ಜನಪದ ಸಾಹಿತ್ಯಕ್ಕೆ ವಿ.ಗ.ನಾಯಕರ ದುಡಿಮೆ- ಕೊಡುಗೆ ಗಮನಾಹ೯ವಾದುದು. ನಾಮಧಾರಿಗಳ ಚರಿತ್ರೆಯ ಕುರಿತು,ಸಂಪ್ರದಾಯ ಆಚರಣೆಗಳ ಕುರಿತು ಬರೆದ ಬರಹಗಳನ್ನು ಹಳೆಪಯ್ಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನಾ ಸಮಿತಿಯು “ವಿ.ಗ‌ ನಾಯಕರ ಬರಹಗಳಲ್ಲಿ ಜನಪದ ಸಾಹಿತ್ಯ” ಕೃತಿಯನ್ನು ಪ್ರಕಟಿಸಿರುತ್ತಾರೆ. ಅಡ್ಯನಡ್ಕದ ಅಭಿಮಾನಿಗಳೆಲ್ಲ ಸೇರಿ ಸಂಪಾದಿಸಿದ ನಾವಿಕ ಅಭಿನಂದನಾ ಗ್ರಂಥ ಅವರ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವ ಸಂಗ್ರಹ ಯೋಗ್ಯ ಕೃತಿಯಾಗಿದೆ.

ಸಣಕಲು ದೇಹದ ಸದಾ ಚೈತನ್ಯದ ಚಿಲುಮೆಯಂತಿರುವ ವಿನಾಯಕ ಗಣಪತಿ ನಾಯಕರ ತೀಕ್ಷ್ಣ ನೋಟ, ವಿಮರ್ಶಾತ್ಮಕ ಬುದ್ಧಿ, ಅರಳುಹರಿದಂತೆ ಮಾತು, ಅಚ್ಚು ಹಾಕಿಸಿದಂತೆ ಸ್ಪುಟವಾದ ಕೈ ಬರವಣಿಗೆ, ನೇರ ನಿಷ್ಠುರ ಭಾವಜೀವಿ, ನುಡಿದಂತೆ ನಡೆವ ನುಡಿ ಮಾಂತ್ರಿಕನ ಸರಳ ಜೀವನ ಶೈಲಿ ನಮ್ಮ ನಡುವೆ ಇದ್ದು ನಮ್ಮಂತಾಗದೆ ವಿಶಿಷ್ಟ ವ್ಯಕ್ತಿತ್ವದ ಮೂಲಕ ಕನ್ನಡ ಸರಸ್ವತ ಲೋಕದಲ್ಲಿ ಶಬ್ದಗಳ ದುಡಿತದ ಮೂಲಕ ಭಾಷೆಯಲ್ಲಿ ತುಡಿತವನ್ನುಂಟು ಮಾಡುವ ರಾಜ್ಯ ಕಂಡ ಅಪರೂಪದ ಈ ಸಾಧಕರ ಕೃತಿಯನ್ನು ಓದುವುದರ ಮೂಲಕ ಅವರನ್ನು ಪರಿಚಯಿಸಿಕೊಳ್ಳಬೇಕಾಗಿದೆ. ಪತ್ನಿ ಶಾಮಲಾ ಕರ್ಕಿಕೋಡಿಯವರೊಂದಿಗೆ ಕುಮಟಾದಲ್ಲಿ ವಾಸವಾಗಿರುವ ಇವರು ನೂರ್ಕಾಲ ಬಾಳಿ ಬದುಕಲೆಂದು ಹಾರೈಸುತ್ತೇನೆ.

ಲೇಖನ – ಪಿ.ಆರ್. ನಾಯ್ಕ, ಹೊಳೆಗದ್ದೆ

Exit mobile version