“ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜೀತವ“ ಪ್ರಿಯವಾದ ಮಾತು ಎಲ್ಲರನ್ನು ಸಂತೋಷಪಡಿಸುತ್ತದೆ. ಮಾತು ಪ್ರಿಯವಾಗಿದ್ದರಷ್ಟೇ ಸಾಲದು; ಅದು ಹಿತವಾಗಿರಬೇಕು. ಕೇಳುವುದಕ್ಕೆ ಆಕರ್ಷಕವೂ ಆಗಿರಬೇಕು. ಕೇಳಿದ ನಂತರ ಚಿಂತನೆಗೆ ಹಚ್ಚುವಂತಿರಬೇಕು. ನಾಲ್ಕು ಕಾಲ ನೆನಪಿಸುವಂತಿರಬೇಕು. ಹೀಗಾಗಬೇಕಿದ್ದರೆ ಮಾತನ್ನು ಕಲೆಯಾಗಿಸುವ ಕೌಶಲ್ಯ ಬೇಕು. ಇಂತಹ ಕೌಶಲ್ಯ ಮಾತಿನ ಮೂಲಕ ಶಿಕ್ಷಕರಲ್ಲಿ ಜಾಗೃತಿ ಮೂಡಿಸುವ ಶಕ್ತಿಯಾಗಿ, ವ್ಯಕ್ತಿಯಾಗಿ ಶಿಕ್ಷಣ ಇಲಾಖೆಯಲ್ಲಿ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ದುಡಿದವರು ಭಟ್ಕಳ ತಾಲೂಕಿನ ಬೆಳ್ಕೆಯ ಶ್ರೀ ದೇವಿದಾಸ ಮಂಜು ಮೊಗೇರರವರು.
ಯಾರ ಮಾತು ಹೃದಯವನ್ನು ಮುಟ್ಟುತ್ತದೋ, ಅವರನ್ನು ನಾವು ಮರೆಯುವುದಿಲ್ಲ; ಮರೆಯಲಾಗುವುದಿಲ್ಲ. ಮಾತು ಮಾಣಿಕ್ಯವಾಗುವುದು ಇಲ್ಲೇ. ನೂರಾರು ಬಗೆಯ ವ್ಯಕ್ತಿಯ ಮಾನಸಿಕ ಸ್ಥಿರತೆಗೆ ಒಲವಿನ ಮೆರಗನ್ನು ಹಚ್ಚಿ ಶಿಕ್ಷಕರಿಗೆ ತನ್ನ ಜವಾಬ್ದಾರಿಯ ಅರಿವನ್ನು ಮೂಡಿಸುವುದರ ಮೂಲಕ ಅಧಿಕಾರಿಯೆಂಬ ಗರ್ವದ ಅಂಚಿಗೂ ಸುಳಿಯದೇ ಮಾರ್ಗದರ್ಶನ ಮಾಡಿ ತಾಲೂಕಿನ ಸಮಸ್ತ ಶಿಕ್ಷಕರ ಪ್ರೀತಿಗೆ ಪಾತ್ರರಾದವರು ಶ್ರೀ ಡಿ.ಎಂ.ಮೊಗೆರವರು.
ಹೀಗೆ ಇರು ನೀ ಹೀಗೆ ನಗುತಿರು
ಹೇಗೆ ಬಿರಿದೆಯೋ ಹಾಗೆಯೇ! ಯಾವ ತುರುಬಿಗೂ ಯಾವ ದೇವಗೂ
ಯಾವ ದುಂಬಿಗೂ ಬಗ್ಗದೆ
ಸ್ವಂತಿಕೆ ಉಳಿಸಿಕೊಳ್ಳುವ ಬಗ್ಗೆ ಕವಿ ಹೂವಿಗೆ ಹೇಳಿದ ಗುಟ್ಟು. ಈ ಮಾತು ಶ್ರೀ ಡಿ.ಎಂ. ಮೊಗೆರವರ ಮೃದು ಮನಸ್ಸಿಗೆ ಅನ್ವಯಿಸದಿರಲಾರದು. ಹಿರಿ– ಕಿರಿಯರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ, ಬಾಯ್ತುಂಬಾ ನಗುವ ಚೆಲ್ಲುವ ವಿಶಾಲ ಹೃದಯಿಗಳು ಕೂಡ. ಆದರೆ ಕಠಿಣತೆಯೆಡೆಗೆ ಸಾಗುವ ದಿಟರು ಕೂಡ. ತನ್ನ ವೃತ್ತಿ ಬದುಕಿನಲ್ಲಿ ದೃಢ ನಿರ್ಧಾರದೊಂದಿಗೆ ನನ್ನ ತಾಲೂಕಿನಲ್ಲಿರುವ ಮಕ್ಕಳು ಸುಸಂಸ್ಕೃತರಾಗುವಲ್ಲಿ ಪೂರಕ ಶಿಕ್ಷಣವನ್ನು ನೀಡಬೇಕೆಂಬ ಮಹದಾಶೆ ಹೊತ್ತು ಹಗಲಿರುಳು ದುಡಿದು ದಣಿವರಿಯದ ಶ್ರೀ ಡಿ.ಎಂ.ಮೊಗೆರವರು ಮೇ 31 ರಂದು ಸೇವೆಯಿಂದ ನಿವೃತ್ತಿಯಾಗಿರುತ್ತಾರೆ.
ಕಾರ್ಯಸಾಧನೆಯ ತಂತ್ರದಲ್ಲಿ ಅವರದ್ದೇ ವಿಶಿಷ್ಟ ಶೈಲಿ. ಮಾಡಬೇಕಾದುದನ್ನು ಮಾಡಿಯೇ ತೋರಿಸುವ ಗಟ್ಟಿ ಹಠವಿದ್ದರೂ ಎಗರಿಕೊಳ್ಳದೇ, ನೇರ ವಿರೋಧ ಉಂಟುಮಾಡಿಕೊಳ್ಳದೇ ಸಹಮತ ನಿರ್ಮಿಸಿಕೊಳ್ಳುವುದು ಅವರ ವಿವೇಕದ ಯಶಸ್ಸು . ನಿನಗಿಂತ ಘನವಾದ
ಎಂದು ಕಡಲಲೆಗಳ ಕೈ ಹಿಡಿದು ಮಾತನಾಡಿಸಬಲ್ಲ ಎದೆಗಾರಿಕೆಯೊಡನೆ ಇಲಾಖೆಯ ಒಳ–ಹೊರವನ್ನು ಅರಿತು ಶಿಕ್ಷಕರ ಮಾರ್ಗದರ್ಶಿಯಾಗಿ,ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹುದ್ದೆ ಅಲಂಕರಿಸಿರುವುದೇ ಅವರ ಕರ್ತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
“ಏಳು ಬೆಳಕಿದೆ ನಿನ್ನ ಪಾಲಿಗೆ: ನಿಲ್ಲು ಶಕ್ತಿಯಿದೆ ನಿನ್ನ ಕಾಲಿಗೆ“
ತೋರಿದ ಮೇಲೂ ಇದೆಯೆಂದು
ಮುಖದ ಒಳಗೆ ಮತ್ತೊಂದು ಮುಖ“
ಎನ್ನುವ ಗೋಸುಂಬಿ ವ್ಯಕ್ತಿಗಳಿಗೆ ಮಣೆ ಹಾಕದೆ ಸಮಾಜಮುಖಿ ಚಿಂತನೆಯ ಮೂಲಕ
“ಮಣಿಯದಿಹ ಮನವೊಂದು
ಸಾಧಿಸುವ ಹಠವೊಂದು
ನಿಜದ ನೇರಕೆ ನಡೆವ
ನಿಶ್ಚಲತೆಯೊಂದನ್ನು“ಬೆನ್ನಿಗಂಟಿಸಿಕೊಂಡು ಬದುಕಿನ ಕಠಿಣ ಹಾದಿಯನ್ನು ಹೂವಿನ ಹಾಸಿಗೆಯನ್ನಾಗಿ ಮಾಡಿಕೊಂಡು ಮಡದಿ ಕಾವೇರಿ, ಮಕ್ಕಳಾದ ಸೂರಜ್, ಧೀರಜ್ ಇವರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ‘ಜಾತಿಯಿಲ್ಲದ ಜ್ಯೋತಿಯಾಗಿ‘ಶಿಕ್ಷಣ ಇಲಾಖೆಯಲ್ಲಿ ಸಾರ್ಥಕ ಬದುಕು ಸಾಗಿಸಿದ ಶ್ರೀ ದೇವಿದಾಸ ಮಂಜು ಮೊಗೇರರವರು ನೂರ್ಕಾಲ ಬಾಳಿ ಬದುಕಲೆಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.
-ಪಿ.ಆರ್. ನಾಯ್ಕ