ಅಂಕೋಲಾ ತಾಲೂಕಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 20, ಶುಕ್ರವಾರದಂದು ಅಂಕೋಲೆಯ ನಾಡವರ ಸಮುದಾಯ ಭವನದಲ್ಲಿ ನಡೆಯುತ್ತಿದೆ.
ಕರ್ನಾಟಕದ ಎರಡನೆಯ ಬಾರ್ಡೋಲಿ ಎಂಬ ಹೆಗ್ಗಳಿಕೆ ಹೊಂದಿರುವ, ರೈತ ಹೋರಾಟದ ಮೂಲಕ ಚಳುವಳಿಯ ಗಟ್ಟಿತನ ತೋರಿರುವ, ಕರಿ ಇಷಾಡ ಮಾವಿನ ಹಣ್ಣಿನ ಮೂಲಕ ವಿಶ್ವದ ಗಮನ ಸೆಳೆದಿರುವ, ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ, ಯಕ್ಷಗಾನದ ಗಟ್ಟಿ ನೆಲವಾಗಿರುವ, ಸುಗ್ಗಿಯ ಸೊಗಡಿರುವ, ಕೃಷಿಯನ್ನೇ ಬದುಕಾಗಿಸಿಕೊಂಡ ರೈತಾಬಿ ಕುಟುಂಭವೇ ಹೆಚ್ಚಿರುವ, ಹಲವು ಜನ ಸಂಸ್ಕøತಿಯೊಂದಿಗೆ ಭಾವೈಖ್ಯತೆಯಿಂದಿರುವ ಅಂಕೋಲಾ ತಾಲೂಕು ಭೌಗೋಳಿಕವಾಗಿಯೂ ಅಷ್ಟೇ ಸುಂದರವಾದ ಪ್ರದೇಶ. ‘ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು, ನಡು ಮದ್ಯದಲಿ ಅಡಿಕೆ ತೆಂಗುಗಳಾ ಮಡಿಲು’ ಎಂದು ಕವಿ ದಿನಕರ ದೇಸಾಯಿಯವರು ಹೇಳಿದ ಹಾಗೆಯೇ ಮೈದುಂಬಿಕೊಂಡಿರುವ ಸುಂದರ ತಾಲೂಕಿದು. ಇಂತಹ ವೈವೈದ್ಯತೆಯ ತಾಲೂಕಿನಲ್ಲಿ ಜನವರಿ 20 ರಂದು ತಾಲೂಕಾ 9 ನೆಯ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
ಮಹಿಳಾ ಸಾಹಿತಿ ಸಮ್ಮೇಳನಾಧ್ಯಕ್ಷೆ
ಅಂಕೋಲಾ ತಾಲೂಕು 9 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾದ್ಯಕ್ಷರಾಗಿ ಅಂಕೋಲೆಯ ಹಿರಿಯ ಸಾಹಿತಿ ಹೊನ್ನಮ್ಮ ನಾಯಕರು ಆಯ್ಕೆಗೊಇರುವುದು ಕೂಡಾ ಸಕಾಲಿಕವೇ ಆಗಿದೆ. ಜೊತೆಗೆ ಈ ಸಮ್ಮೇಳನವನ್ನು ನಾಡಿನ ಹಿರಿಯ ಸಾಹಿತಿ, ಶ್ರೇಷ್ಠ ಚಿಂತಕಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಉದ್ಘಾಟಿಸಲಿದ್ದಾರೆ. ಮೆರವಣಿಗೆ, ಉದ್ಘಾಟನೆ ಸಮಾರೋಪದ ನಡುವೆ ಹಲವು ಮಹತ್ವಪೂರ್ಣವಾದ ವಿಚಾರಗೋಷ್ಠಿಗಳು, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ತಾಲೂಕು ಹಾಗೂ ಜಿಲ್ಲೆಯ ಸಾಹಿತಿಗಳು, ಕ್ಷೇತ್ರದ ರಾಜಕೀಯ ಮುಖಂಡರು, ಜನಪ್ರತಿನಿದಿಗಳು, ಹಾಗೂ ಸಾಹಿತ್ಯಾಸಕ್ತರೆಲ್ಲರೂ ಭಾಗವಹಿಸುತ್ತಿದ್ದಾರೆ.
ಸಮ್ಮೇಳನದ ಯಶಸ್ಸಿಗಾಗಿ ಈಗಾಗಲೇ ಅಂಕೋಲಾ ತಾಲೂಕು ಕಸಾಪ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕರ ನೇತೃತ್ವದಲ್ಲಿ, ಗೌರವ ಕಾರ್ಯದರ್ಶಿಗಳಾದ ಜಗದೀಶ ನಾಯಕ, ಜಿ.ಆರ್. ತಾಂಡೇಲ, ಗೌರವ ಕೋಶಧ್ಯಕ್ಷ ಡಾ. ಸಿದ್ದಲಿಂಗ ವಸ್ತ್ರದ ಹಾಗೂ ಕಾರ್ಯಕಾರಿ ಸಮಿತಿಯ ಇಡೀ ತಂಡ ಹಾಗೂ ತಾಲೂಕಿನ ಎಲ್ಲ ಸಹೃದಯಿ ಸ್ನೇಹಿತರು ಶ್ರಮಿಸುತ್ತಿದ್ದಾರೆ. ಸ್ವಾಗತ ಸಮಿತಿಯ ಸದಸ್ಯರೂ ಕೂಡಾ ಸಮ್ಮೇಳನದ ಯಶಸ್ಸಿಗಾಗಿ ಸಹಕರಿಸುತ್ತಿದ್ದಾರೆ.
ಈ ಸಮ್ಮೇಳನದಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ಸಾಗಿತ್ಯಾಸಕ್ತರೆಲ್ಲರೂ ಭಾಗವಹಿಸಿ ಚಂದಗಾಣಿಸುವಂತೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.
ವಿಡಿಯೋ ವೀಕ್ಷಿಸಿ…