ನಾಡಿನ ತುಂಬೆಲ್ಲ ಅಡಗಿರುವ ಅನರ್ಗ್ಯ ರತ್ನಗಳನ್ನು ಹುಡುಕಿ ಶಿಕ್ಷಕರಿಂದ, ಶಿಕ್ಷಕರಿಗಾಗಿ, ಶಿಕ್ಷಕರೇ ನಡೆಸುವ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದರ ಮೂಲಕ ನಮ್ಮ ನಡುವೆ ಇದ್ದು ನಮ್ಮಂತಾಗದೆ ಶಿಕ್ಷಣ ಇಲಾಖೆಯ ಸಂಪರ್ಕದ ಕೊಂಡೆಯಂತಿರುವ ಕ್ಷೇತ್ರ ಸಂಪನ್ಮೂಲ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಮಹತ್ಕಾರ್ಯಕ್ಕೆ ಮುಂದಾಗಿರುವುದು ನಾಡಿಗೆ ನಾಡೇ ಹೆಮ್ಮೆಪಡುವಂತಾಗಿದೆ. ಸಂಪನ್ಮೂಲ ವ್ಯಕ್ತಿಗಳೆಂದರೆ ಇಲಾಖೆಯ ದೃಷ್ಟಿಯಲ್ಲಿ ಅವರು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ಮನೋಧೋರಣೆ. ಅವರ ಅವಧಿ ಮುಗಿದ ಮೇಲೆ ಅವರನ್ನು ಶಾಲೆಗೆ ನಿಯೋಜನೆ ಮಾಡುವಾಗ ಇಲಾಖೆ ಅನುಸರಿಸುವ ನಿಯಮಾವಳಿಯೇ ಇದಕ್ಕೆ ಸಾಕ್ಷಿಯಾಗಿದೆ. ಇವೆಲ್ಲವನ್ನು ಮೀರಿ ಅವರ ಕಾರ್ಯಸಾಧನೆಯನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಪುರಸ್ಕಾರಕ್ಕೆ ಬಾಜನರಾಗಿರುವವರು ಕುಮಟಾ ತಾಲೂಕಿನ ಹೊಲನಗದ್ದೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾಗಿರುವ ಪ್ರದೀಪ ನಾಯಕರವರ ಮುಡಿಗೆ ಶಿಕ್ಷಣ ಸಾರಥಿ ಪ್ರಶಸ್ತಿ.
‘ಪುಂಗಿಗೆ ಹೆಡೆ ಬಿಚ್ಚುವ ಹಾವಾಡಿಗರಾಗುವುದು ಬೇಡ, ಆಗೋಣ ಹೂವಾಡಿಗರು’ ಎಂಬ ಕವಿ ವಾಣಿಯಂತೆ ಮಾನವೀಯ ಮೌಲ್ಯಗಳನ್ನು ಬಿತ್ತುವುದರ ಮೂಲಕ ಇಡೀ ಶಿಕ್ಷಕ ಸಮೂಹಕ್ಕೆ ಯಜಮಾನನಾಗಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಇಲಾಖೆಯ ವಿವಿಧ ಸ್ತರದ ಹುದ್ದೆಗಳನ್ನು ಅನುಭವಿಸುತ್ತಾ ‘ಆರಕ್ಕೆರದೇ ಮೂರಕ್ಕಿಳಿಯದ’ಸಜ್ಜನ ಸಂಪನ್ಮೂಲ ವ್ಯಕ್ತಿಗಳು ಕುಮಟಾದ ಪ್ರದೀಪ ರಾಮಚಂದ್ರ ನಾಯಕರವರು.
ಪ್ರದೀಪ ಈ ಹೆಸರಿನ ಹಿಂದೆ ದೀವಿಗೆ, ದೊಡ್ಡದೀಪ ಎಂಬರ್ಥಗಳು ಸೇರಿಕೊಂಡಿವೆ. ದೀವಿಗೆ ಹಿಡಿದು ಶಿಕ್ಷಣ ಇಲಾಖೆಗೆ ಬೆಳಕು ನೀಡುತ್ತಾ, ಶಿಕ್ಷಕರ ಬಾಳಿನಲ್ಲಿ ಮಾರ್ಗದರ್ಶನವೆಂಬ ಬೆಳಕು ಹಂಚಿದವರು. ಸಾಸಿವೆಯಷ್ಟು ಸುಖಕ್ಕೆ, ಸಾಗರದಷ್ಟು ದುಃಖವೇತಕ್ಕೆ? ಎಂದು ಸಾಂತ್ವನ ಹೇಳಿದ ಚಾವಡಿ ಚಿಂತಕರು. ಬೇಕು ಎನ್ನುವ ಬದುಕಿಗೆ ಬೆಳಕು ಎನ್ನುವ ಮಾರ್ಗದರ್ಶನ ಮಾಡಿದ ಪ್ರದೀಪ ನಾಯಕರು ೨೦೦೨ ರಲ್ಲಿಯೇ ಜೋಯ್ಡಾದಂತ ದಟ್ಟ ಕಾನನದ ಮಧ್ಯೆ ಇರುವ ಶಾಲೆ ಎಂಬ ಪವಿತ್ರ ಕ್ಷೇತ್ರಕ್ಕೆ ಸುತ್ತು ಹೊಡೆಯುವ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ದವರು. ತನ್ನ ವೃತ್ತಿ ಬದುಕನ್ನು ಪ್ರೀತಿಸುವುದರ ಜೊತೆಗೆ ಇಲಾಖೆ ನೀಡಿದ ಎಲ್ಲಾ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡವರು. ಒಳಿತಿನ ಶಕ್ತಿಯಲ್ಲಿ ದೃಢ ನಂಬಿಕೆಯಿಟ್ಟು ಮುನ್ನಡೆದು ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ, ಮಿತ ಭಾಷಿಕರಾಗಿ, ಕಟು ಮಾತಿನ ಮೂಲಕ ಮೈಚಳಿ ಬಿಟ್ಟು ದುಡಿದುದರ ಫಲವಾಗಿ ಇಂದು ‘ರಾಜ್ಯಮಟ್ಟದ ಉತ್ತಮ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ಶಿಕ್ಷಣ ಸಾರಥಿ’ ಪ್ರಶಸ್ತಿಗೆ ಪುರಸ್ಕೃತರಾಗಿರುವುದು ಇಡೀ ಶಿಕ್ಷಕ ಸಮುದಾಯಕ್ಕೆ ಹೆಮ್ಮೆ ತಂದಿದೆ.
ಮೂಲತಃ ಅಂಕೋಲಾ ತಾಲೂಕಿನ ಜುಗಾ ಗ್ರಾಮದವರಾದ ಪ್ರದೀಪ ನಾಯಕರವರ ತಂದೆ ರಾಮಚಂದ್ರ ನಾಯಕ, ತಾಯಿ ಪಾರ್ವತಿಯವರ ಮಗನಾಗಿ ೧೯೬೩ ರಲ್ಲಿ ಜನಿಸಿದರು. ತಂದೆ ತಾಯಿಯರಿಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವುದರಿಂದ ಮಗ ಪ್ರದೀಪನು ಸಹ ಅವರ ಆಶಯದಂತೆ ೧೯೮೮ ರಲ್ಲಿ ಶಿರಸಿಯ ರೇವಣಕಟ್ಟಾ ಶಾಲೆಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕರಾದರು.
ಮಾತನಾಡುವುದಕ್ಕಿಂತ ಮಾಡಿ ತೋರಿಸುವ ವ್ಯಕ್ತಿತ್ವದ ಶಿಕ್ಷಕ ಪ್ರದೀಪ ನಾಯಕರು ಸುಮಾರು ಆರು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ, ನಂತರ ಜೋಯಿಡಾ ತಾಲೂಕಿನ ರಾಮನಗರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಹೋದಮೇಲೆ ಇವರ ಶೈಕ್ಷಣಿಕ ಬದುಕಿನ ದಾರಿ, ಹೆದ್ದಾರಿಯಾಗಿ ಪರಿವರ್ತನೆಯಾಗಿ ಒಂದೊಂದೇ ಮೆಟ್ಟಿಲನ್ನು ಸಮರ್ಪಕವಾಗಿ ದಾಟುತ್ತ ಮುನ್ನಡೆದರು.
ಅಕ್ಷರ ವಂಚಿತ ಜನರ ಬಾಳಿನಲ್ಲಿ ಅಕ್ಷರ ಬೀಜ ಬಿತ್ತುವ ತಾಲೂಕಾ ಸಾಕ್ಷರತಾ ಸಂಯೋಜಕರಾಗಿ ನಿಯೋಜನೆ ಹೊಂದಿ ಸುಮಾರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಇಡೀ ಜೋಯಿಡಾ ತಾಲೂಕಿನ ಜನರ ಪ್ರೀತಿ ವಿಶ್ವಾಸ ಗಳಿಸಿದರು. ನಂತರ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನಿ ಯಲ್ಲಿ ಸೇವೆ ಸಲ್ಲಿಸಿ ಮಕ್ಕಳ ಪ್ರೀತಿ ಗಳಿಸಿದರು. ಅಲ್ಲಿಂದ ಜೋಯಿಡಾ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ೨೦೦೭ ರಲ್ಲಿ ಭಟ್ಕಳ ತಾಲೂಕಿನ ತೆಂಗಿನಗುಂಡಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು. ನಂತರ ಮೂರು ವರ್ಷಗಳ ಕಾಲ ತೆನ೯ಮಕ್ಕಿ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ೨೦೧೪ ರಲ್ಲಿ ಕುಮಟಾದ ಮಂಜುಮನೆ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು. ಚೈತನ್ಯದ ಚಿಲುಮೆಯಂತಿರುವ ಪ್ರದೀಪ ನಾಯಕರ ಪಯಣ ಇಲ್ಲಿಗೆ ಮುಗಿಯಲಿಲ್ಲ. ೨೦೧೬ ರಿಂದ ಸುಮಾರು ಐದು ವರ್ಷಗಳ ಕಾಲ ಕುಮಟಾದ ಹೊಲಗದ್ದೆ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾದರು.
ಒಟ್ಟಾರೆ ಕ್ಷೇತ್ರ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಸುಮಾರು ಹನ್ನೊಂದು ವರ್ಷಗಳ ಕಾಲ ಶಿಕ್ಷಣ ಇಲಾಖೆಯ ಸುಧೀರ್ಘ ಪಯಣದಲ್ಲಿ ಎಲ್ಲಿಯೂ ಎಚ್ಚರ ತಪ್ಪದೇ, ಎಡವದೆ,ತನ್ನ ಪ್ರಾಮಾಣಿಕ ಕರ್ತವ್ಯಕ್ಕೆ ಎಂದು ಚ್ಯುತಿ ಬಾರದ ರೀತಿಯಲ್ಲಿ ದುಡಿದು,ದಣಿವರಿಯದ ನಾಯಕರು ಮಾತಿನಲ್ಲೂ, ಕೆಲಸದಲ್ಲೂ ಚುರುಕಾಗಿ ಶಿಕ್ಷಕರ ಪ್ರೀತಿ ವಿಶ್ವಾಸುವುದರ ಮೂಲಕ ಇಲಾಖೆಯ ಒಂದು ಭಾಗವಾಗಿ ತೊಡಗಿಸಿಕೊಂಡಿದ್ದರು.
ಆಲೋಚನೆಯ ಕೂಸು ಅನುಭವ,ಕೆಲಸದ ಕೂಸು ಆಲೋಚನೆ ಎಂಬಂತೆ ಸದಾ ಒಂದಲ್ಲೊಂದು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಎಲೆಮರೆಯ ಕಾಯಿಯಂತಿರುವ ಪ್ರದೀಪ ನಾಯಕರಿಗೆ ‘ರಾಜ್ಯಮಟ್ಟದ ಶಿಕ್ಷಣ ಸಾರಥಿ’ ಪುರಸ್ಕಾರಕ್ಕೆ ಒಳಗಾಗಿರುವುದು ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ, ಪ್ರಾಮಾಣಿಕ ಕರ್ತವ್ಯಕ್ಕೆ ಸಂದ ಗೌರವವಾಗಿದೆ. ಪ್ರಚಾರ ಪ್ರಸಿದ್ಧಿ ಬಯಸಿದೆ, ಸದ್ದಿಲ್ಲದೆ ದುಡಿದ ಕಾಯಕ ಯೋಗಿಯನ್ನು ಗುರುತಿಸಿ ಗೌರವಿಸುವ ಸತ್ಕಾಯ೯ಕ್ಕೆ ಮುಂದಾಗಿರುವ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಪಿ. ಮಹೇಶ ಮತ್ತು ಬಳಗದವರಿಗೆ ಜಿಲ್ಲೆಯ ಪರವಾಗಿ ಅಭಿನಂದನೆಗಳು. ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಪ್ರದೀಪ ನಾಯಕರವರನ್ನು ಅರಸಿ ಬರಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.