ಅಂಕೋಲಾ : ಸಮಾಜ ಸುಧಾರಕ ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ ಸಿದ್ದತೆಗಳು ನಡೆಯುತ್ತಿದ್ದು, ಪಕ್ಷಾತೀತವಾಗಿ ಸರಕಾರವನ್ನು ಒತ್ತಾಯಿಸುವ ಹೋರಾಟಕ್ಕೆ ನಾರಾಯಣಗುರು ವೇದಿಕೆ ಅಣಿಯಾಗುತ್ತಿದೆ.
ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚಿಸುವಂತೆ ರಾಜ್ಯ ಸರಕಾರಕ್ಕೆ ಪ್ರತಿಭಟನೆಯ ಮೂಲಕ ಅನೇಕ ಬಾರಿ ಆಗ್ರಹಿಸಿದ್ದರೂ ಇನ್ನುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮರಾಠ ಸಮುದಾಯಕ್ಕೆ ಸೇರಿದಂತೆ ಹಲವು ಸಮುದಾಯಗಳಿಗೆ ಅಭಿವೃದ್ಧಿ ನಿಗಮ ರಚಿಸಿದ್ದಾರೆ. ಅವರಂತೆ ಈಡಿಗರಿಗೂ ಕೂಡ ಅನುಕೂಲವಾಗುವಂತೆ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚಿಸುವಂತೆ ಶ್ರೀ ನಾರಾಯಣಗುರು ವೇದಿಕೆ ವತಿಯಿಂದ ಆಗ್ರಹಿಸಿದ್ದಾರೆ.
ಬಿಜೆಪಿಯಲ್ಲಿ ಈಡಿಗ ಸಮಾಜದ ೬ ಶಾಸಕರಿದ್ದು, ಒಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಇವರಲ್ಲಿ ಇಬ್ಬರು ಸಚಿವರಿದ್ದಾರೆ. ಹಾಗೇ ಅನೇಕ ಮಠಾಧೀಶರಿದ್ದು, ಅವರಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಮಾತ್ರ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಆದರೆ ಈಡಿಗ ಸಮಾಜಕ್ಕೆ ನ್ಯಾಯ ಒದಗಿಸಲು ಸರಕಾರ ವಿಫಲವಾಗಿದೆ. ಹೀಗಾಗಿ ಕೂಡಲೇ ಸರಕಾರ ನಿಗಮ ಮಂಡಳಿ ರಚಿಸುವಂತೆ ಆಗ್ರಹಿಸಿ ತಾಲೂಕಿನಲ್ಲಿ ಪತ್ರ ಚಳುವಳಿ ನಡೆಸಲಾಗುವುದು ಎಂದು ಶ್ರೀ ನಾರಾಯಣ ಗುರು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ, ಕಾರ್ಯದರ್ಶಿ ಮಂಜುನಾಥ ಕೃಷ್ಣ ನಾಯ್ಕ ತಿಳಿಸಿದ್ದಾರೆ.