ಕಾರವಾರ: ಭಾರತ ದೇಶವನ್ನು ಜಾತಿ ಧರ್ಮಗಳ ಹೆಸರಿನಲ್ಲಿ ಒಡೆಯುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ದೇಶವನ್ನು ಮುನ್ನಡೆಸುವ ಬದಲು ಹಿಮ್ಮುಖವಾಗಿ ತಳ್ಳುತ್ತಿವೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬಾರದು, ಅವರ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೊಡಬಾರದು ಎಂಬ ಅತ್ಯಂತ ಅಪಾಯಕಾರಿಯಾದ ಸಾಂಸ್ಕೃತಿಕ ರಾಜಕಾರಣ ನಮ್ಮ ದೇಶದಲ್ಲಿ ನಡೆಯುತ್ತಿದೆ ಎಂದು ಅಭಿವೃದ್ಧಿ ಅರ್ಥಶಾಸ್ತ್ರ ವಿಶ್ಲೇಷಕರಾದ ಡಾ. ಚಂದ್ರ ಪೂಜಾರಿ ಕಳವಳ ವ್ಯಕ್ತಪಡಿಸಿದರು.
ಅವರು ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರೀತಿ ಪದ ( ಡಾ. ವಿಠ್ಠಲ ಭಂಡಾರಿ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ) ದ ಆಶ್ರಯದಲ್ಲಿ, ಸಹಯಾನ, ಕೆರೆಕೋಣ, ಎಸ್.ಸ್ಸಿ. ಎಸ್.ಟಿ. ನೌಕರರ ಸಂಘ, ಸಮುದಾಯ ಕರ್ನಾಟಕ, ಚಿಂತನ ಉತ್ತರ ಕನ್ನಡ, ಚಿಗುರುಗಳು ಮುಂತಾದ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರೀತಿ ಪದ (ಡಾ. ವಿಠ್ಠಲ ಭಂಡಾರಿ ಸಮಾಜ ಅಧ್ಯಯನ ಕೇಂದ್ರ) ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸ್ವಂತಕ್ಕೆ ಬದುಕಿದವರು ಉಸಿರಿರುವ ವರೆಗೆ ಬದುಕುತ್ತಾರೆ. ಪರರಿಗಾಗಿ ಬದುಕಿದವರು ಉಸಿರು ನಿಂತ ಮೇಲೂ ಬದುಕಿರುತ್ತಾರೆ. ಡಾ. ವಿಠ್ಠಲ ಭಂಡಾರಿ ಇಂತಹ ಕಾರ್ಯಕ್ರಮಗಳ ಮೂಲಕ ಉಸಿರು ನಿಂತ ಮೇಲೂ ಬದುಕುಳಿದಿದ್ದಾರೆ. ವಿಜ್ಞಾನ ಮತ್ತು ಸಮಾಜ ವಿಜ್ಷಾನಗಳಲ್ಲಿ ಮನುಷ್ಯತ್ವವೇ ಇಲ್ಲದಂತಾಗಿದೆ. ಬಡಜನರ ಬಹುದೊಡ್ಡ ಆಸ್ತಿ ಎಂದರೆ ಪ್ರೀತಿ ಪ್ರೇಮ, ಸಹಬಾಳ್ವೆ. ಭಾರತದ ಶೇ. ೭೦ ರಷ್ಟು ಜನ ಎರಡು ಹೊತ್ತು ಊಟಕ್ಕೆ ಪರದಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಬೇಕು. ಅದಕ್ಕಾಗಿ ಪ್ರೀತಿ ವಿಶ್ವಾಸ ಬೇಕು. ಕೋವಿಡ್ ನಂತರ ಶೇ. ೭೦ ರಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಬಿಲಿಯಾಧಿಪತಿಗಳ ಸಂಖ್ಯೆ ೧೩೨ ರಿಂದ ೧೪೦ ಕ್ಕೆ ಏರಿಕೆಯಾಗಿದೆ. ಬಡ ಜನ ಪ್ರತಿನಿತ್ಯ ಜಾತಿ ಧರ್ಮದ ಹೆಸರಿನಲ್ಲಿ ಕಿತ್ತಾಡುತ್ತಿದ್ದಾರೆ. ನಮ್ಮನ್ನು ಸೇರಿಸುವ, ಒಗ್ಗೂಡಿಸುವ ವಿಚಾರಗಳು ಬೇಕು. ಆದರೆ ನಮ್ಮಗಳ ನಡುವೆ ಪ್ರೀತಿಯ ಬದಲು ದ್ವೇಷವನ್ನು ತುಂಬಲಾಗುತ್ತಿದೆ. ನಂಬಿಕೆ ಬದಲು ಅಪನಂಬಿಕೆ ಬಿತ್ತಲಾಗುತ್ತಿದೆ. ಇಂತಹ ರಾಜಕಾರಣವು ನಮ್ಮತನವನ್ನು ನಾಶಮಾಡುತ್ತಿದೆ. ಇದನ್ನು ಬದಲಾಯಿಸದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ. ಇದೇರೀತಿಯ ವಾತಾವರಣ ಶ್ರೀಲಂಕಾದಲ್ಲಿ ನಿರ್ಮಾಣವಾಗಿದ್ದು ಭಾರತ ಹಿಂದುತ್ವಕೆ ಆದ್ಯತೆ ನೀಡದರೆ ಶ್ರೀಲಂಕಾ ಬುದ್ಧತ್ವಕ್ಕೆ ಮಹತ್ವ ನೀಡಿ ಈ ಸ್ಥಿತಿಗೆ ತಲುಪಿದೆ. ಶ್ರೀಲಂಕಾದಲ್ಲಿ ತಮಿಳರನ್ನು ದ್ವೇಷಿಸುವ ವಾತಾವರಣವನ್ನು ನಿರ್ಮಾಣ ಮಾಡಿ ಇಡೀ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದೆ. ಈಗ ಭಾರತದ ಬೆಳವಣಿಗೆಗಳನ್ನು ಗಮನಿಸಿದರೆ ನಾವೂ ಅದೇ ದಾರಿಯಲಿದ್ದೇವೆ ಎಂದೆನಿಸುತ್ತದೆ.
ಹೊಸ ವಿಚಾರಗಳನ್ನು ಸೃಷ್ಟಿಸಲು ಸಂಶೋಧನೆಗಳ ಅಗತ್ಯವಿದೆ, ಮಾದ್ಯಮಗಳು ಸಿನೇಮಾಗಳು ಜನರಿಗೆ ಶಿಕ್ಷಣವನ್ನು ಕೊಡಬೇಕು. ಆದರೆ ಈ ಕ್ಷೇತ್ರಗಳು ತಮ್ಮ ಜವಾಬ್ದಾರಿಯನ್ನು ಸಂಪೂರ್ಣ ಮರೆತಂತಿವೆ. ಅಸಮಾನತೆಯನ್ನು ಪ್ರಶ್ನೆಮಾಡಿ ಸಮಾನತೆಯನ್ನು ಸೃಷ್ಟಿಸುವ ಕೆಲಸವನ್ನು ಸಂಶೋಧನೆಗಳು ಮಾಡಬೇಕು.
ಇಂದಿನ ಎಲ್ಲಾ ಸಮಸ್ಯೆಗಳಿಗೆ ಸರ್ಕಾರಗಳ ನೀತಿಗಳೇ ಕಾರಣ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಯಾವುದು ಜನಪರ ಯಾವುದು ಜನವಿರೋಧಿ ಎಂಬುದು ಮುಖ್ಯ ಚರ್ಚೆಯಾಗಬೇಕು. ಕರ್ನಾಟಕದಲ್ಲಿ ನಾರಾಯಣಗುರು ಬಸವಣ್ಣ, ಪೆರಿಯಾರ್, ಕುವೆಂಪು ಇವರ ವೈಚಾರಿಕತೆಯ ವಿಚಾರಗಳನ್ನು ಪಠ್ಯದಿಂದ ಕೈಬಿಟ್ಟಿರುವ ಕಾರಣವೇನೆಂದರೆ ಅವರು ಈ ಸಮಾಜದ ಸನಾತನ ಜಿಡ್ಡುವ್ಯಸ್ಥೆಯನ್ನು ಪ್ರಶ್ನಿಸಿದ್ದರು. ನಾರಾಯಣಗುರುಗಳು ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದವರು. ಬಸವಣ್ಣನವರ ವಚನಗಳು ಅಸಮಾನತೆಯ ವಿರುದ್ಧ ಇವೆ. ಕುವೆಂಪುರವರು ಬರಹಗಳ ಮೂಲಕ ವೈಚಾರಿಕತೆ ಪ್ರತಿಪಾದಿಸಿದ್ದಾರೆ. ಪಸ್ತುತ ಎಲ್ಲವನ್ನೂ ನಿಷೇಧಿಸುವ ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ ಎಂದು ಆತಂಕ ವ್ಯಕ್ತೊಡಿಸಿದರು.
ಹಾಸ್ಟೇಲಿನ ಬಡ ವಿದ್ಯಾರ್ಥಿಗಳಿಗೆ ಅಕ್ಕಿ ಚೀಲ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕರಾವಳಿ ಮುಂಜಾವು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಗಂಗಾಧರ ಹಿರೇಗುತ್ತಿಯವರು ಮಾತನಾಡುತ್ತ ಪ್ರೀತಿ ಪದ ವ್ಯಕ್ತಿಗೆ ಸಂಬಂದಿಸಿದ್ದಲ್ಲ. ಅದು ಇಡೀ ಭೂಮಿಗೆ ಸಂಬಧಿಂಸಿದ್ದು, ಪ್ರೀತಿ ಎಂಬುದು ಸಂವಹನದ ಭಾವ. ಭಾರತವು ಸ್ವಾತಂತ್ರ್ಯ ಪೂರ್ವ ಮತ್ತು ನಂತರವೂ ಅನಾಥತೆಯ ಭಾವ ಅನುಭವಿಸುತ್ತಿದೆ. ಸ್ವಾತಂತ್ರ್ಯ ಭಾರತ ಬ್ರಿಟೀಷರ ನಂತರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕೇವಲ ರಸ್ತೆ, ಕಟ್ಟಡಗಳನ್ನೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿದ್ದೇವೆ. ನಾವು ಹಲವು ಪಲ್ಲಟಗಳನ್ನು ಕಂಡಿದ್ದೇವೆ. ನಮಗೆ ಮಾನವೀಯವಾಗಿ ಸ್ಪಂದಿಸುತ್ತಿದ್ದ ಡಾ.ಆರ್.ವಿ.ಭಂಡಾರಿಯವರು ನನ್ನ ಬದುಕಿನ ಹೀರೋ ಆಗಿದ್ದರು. ಆರ್.ವಿ.ಭಂಡಾರಿಯವರದ್ದು ಯಾರನ್ನೂ ವೈಯಕ್ತಿಕವಾಗಿ ನೋಯಿಸದ ಶ್ರೇಷ್ಠ ವ್ಯಕ್ತಿತ್ವ. ಮನುಷ್ಯ ಜನಾಂಗಕ್ಕೆ ಅನ್ಯಾಯವಾದಾಗ ಆರ್.ವಿ. ಯವರು ತಕ್ಷಣ ಪ್ರತಿಕ್ರಿಯಿಸುತ್ತಿದ್ದರು. ಅವರ ಅಗಲಿಕೆಯ ನಂತರ ಸೃಷ್ಟಿಯಾದ ನಿರ್ವಾತವನ್ನು ನಂತರದ ದಿನಗಳಲ್ಲಿ ವಿಠ್ಠಲ ಭಂಡಾರಿಯವರು ತುಂಬಿದ್ದರು. ಅವರ ಕೆಲಸ ತುಂಬಾ ವಿಸ್ತಾರವಾದುದನ್ನು ನಾವು ಸರಿಯಾಗಿ ಅರಿಯದೇ ಹೋದೆವು.
ಪತ್ರಕರ್ತರು ಸಿದ್ದಮಾದರಿಯ ಸುದ್ಧಿಗಳನ್ನು ಬಿಟ್ಟು ನಿಜವಾದ ಸುದ್ಧಿಗಳನ್ನು ಹುಡುಕುವ ಕೆಲಸವನ್ನು ಮಾಡುತ್ತಿಲ್ಲ. ದೊಡ್ಡಪತ್ರಿಕೆಗಳು ಸಂಕಷ್ಟದಲ್ಲಿರುವಾಗಲೇ ಸಣ್ಣಪತ್ರಿಕೆಗಳು ಕುಸಿತವನ್ನು ಕಾಣುತ್ತಿವೆ. ಮನುಷ್ಯನ ಸಾಮರ್ಥ್ಯ ಸರಿಯಾಗಿ ಬಳಕೆಯಾಗುತ್ತಿಲ್ಲ. ಪರ್ತಕರ್ತರು ಸಮಾಜಮುಖಿಗಳಾಗದೆ, ವ್ಯವಸ್ಥೆಯ ಮೇಲಿನ ಸಿಟ್ಟನ್ನು ಬರೆಯಲಾಗದ ಸ್ಥಿತಿಯಲ್ಲಿದ್ದಾರೆ. ದುಷ್ಟ ವ್ಯವಸ್ಥೆಯ ವಿದುದ್ಧ ಪ್ರತಿರೋಧ ಇಲ್ಲದಿದ್ದರೆ ಸ್ವಾಸ್ಥ್ಯ ಸನಿರ್ಮಾಣವಾಗುವುದಿಲ್ಲ. ವಿಠ್ಠಲ ಭಂಡಾರಿಯಬವರು ಸಂವಿಧಾನ ಓದು ಕೃತಿಯನ್ನು ರಾಜ್ಯಾದ್ಯಂತ ತಲೆಮೇಲೆ ಹೊತ್ತು ನಡೆದರು. ಎಲ್ಲರೂ ಸಮಾನತೆಗಾಗಿ ಮನುಷ್ಯರಾಗಿ ಕೆಲಸ ಮಾಡೋಣ ಎಂದರು.
ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಿರಣ ಗಾಜನೂರು ಮಾತನಾಡಿ, ಭಾರತೀಯರಾದ ನಾವು ಅಪ್ರಜಾತಾಂತ್ರಿಕ ಯುದ್ಧವನ್ನು ಪ್ರಜಾತಾಂತ್ರಿಕವಾಗಿ ಎದುರಿಸುವ ಹಂತದಲ್ಲಿದ್ದೇವೆ. ಖಾಸಗಿಕರಣ ಸೃಷ್ಟಿಸಿರುವ ಉದ್ಯೋಗದ ಸ್ವರೂಪ ಅತ್ಯಂತ ಅಮಾನವೀಯವಾಗಿದ್ದು ಹೆಣ್ಣು ಮಕ್ಕಳೂ ಸೇರಿಸದಂತೆ ಯುವಕರನ್ನು ಹೆಚ್ಚು ಶೋಷಣೆಗೆ ಒಳಪಡಿಸಲಾಗುತ್ತಿದೆ. ಉತ್ತರ ಭಾರತ, ಈಶಾನ್ಯ ರಾಜ್ಯಗಳ ಯುವಜನರು ಉದ್ಯೋಗಗಳನ್ನು ಅರಸಿ ರಾಜ್ಯದ ಹೊಟೆಲ್ ಗಳಲ್ಲಿ ಅತ್ಯಂತ ಸಂಕಷ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಮಾಜ ಮತ್ತು ಮುಂದಿನ ತಲೆಮಾರು ಎದುರಿಸುತ್ತಿರುವ ಸವಾಲುಗಳ ಕುರಿತು ಅಧ್ಯಯನ ಸಂಶೋಧನೆಗಳನ್ನು ನಡೆಸುವುದು ಪ್ರೀತಿಪದದ ಉದ್ದೇಶ. ಅಸಮಾನ ವ್ಯವಸ್ಥೆಯ ವಿರುದ್ಧ ಪ್ರಶ್ನೆಗಳನ್ನು ಎತ್ತಬಾರದೆನ್ನುವ ಮನಃಸ್ಥಿತಿಯು ನಿರ್ಮಾಣವಾಗುತ್ತಿದ್ದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರುಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದೆಲ್ಲದಕ್ಕೆ ಉತ್ತರವೆಂಬಂತೆ ಜನಚಳುವಳಿಗಳು ಜನರ ಮಧ್ಯೆಯೇ ರೂಪುಗೊಳ್ಳಬೇಕು. ಸಮಾಜ ಜಾತ್ಯಾತೀತ ಸೌಹಾರ್ದ ಆಗಿಲ್ಲದಿದ್ದರೆ ಅಲ್ಲಿ ಪ್ರಜಾಪ್ರಭುತ್ವವೇ ಇರುವುದಿಲ್ಲ ಎಂಬುದನ್ನು ದೃಷ್ಟಾಂತಗಳ ಮೂಲಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎನ್. ವಾಸರೆ ಮಾತನಾಡಿ, ಜನತೆಯನ್ನು ಸಂವಿಧಾನದಲ್ಲಿ ಸಾಕ್ಷರರನ್ನಾಗಿಸಲು ಜನರೆಡೆಗೆ “ಸಂವಿಧಾನ ಓದು” ಪುಸ್ತಕ ಹೊತ್ತೊಯ್ದವರು ವಿಠ್ಠಲ ಭಂಡಾರಿ ಎಂದು ಹಿರಿಯ ನ್ಯಾಯಮೂರ್ತಿ ಜಸ್ಟಿಸ್ ನಾಗಮೋಹನ ಹೇಳಿದ್ದರು. ವಿಠ್ಠಲ ಈ ದೇಶದ ಬಹುತ್ವವನ್ನು ನಂಬಿದವರು. ಅವರ ಕನಸುಗಳನ್ನು ನನಸು ಮಾಡಿ ಜೀವಂತವಾಗಿರಿಸಿಕೊಳ್ಳಬೇಕಾದ ತುರ್ತು ಅನಿವಾರ್ಯತೆಯಿದೆ. ಇಂದು ಬರಹಗಾರರು ಬರೆಯುವಾಗ ಪ್ರಭುತ್ವದ ಮುಲಾಜಿಗೆ ಒಳಗಾಗುತ್ತಿದ್ದಾರೆ. ನೇರ ನಿಷ್ಟುರವಾಗಿ ಬರೆದು ಜಿಲ್ಲೆಯಲ್ಲಿ ಸಾಂಸ್ಕೃತಿಕ ಆಂದೋಲನವನ್ನು ಕಟ್ಟಿ ಮುನ್ನಡೆಸುವಲ್ಲಿ ವಿಠ್ಠಲರ ಪಾತ್ರ ದೊಡ್ಡದು. ಇದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಈ ಜಿಲ್ಲೆಯ ಪ್ರಜ್ಞಾವಂತರ ಮೇಲಿದೆ. ಇಂದು ಪ್ರಶ್ನೆ ಮಾಡುವವರನ್ನ ದೇಶ ವಿರೋಧಿಗಳನ್ನಾಗಿ ಬಿಂಬಿಸಲಾಗುತ್ತಿದೆ. ಸೌಹಾರ್ದತೆಗೆ ದಕ್ಕೆಯಾದಾಗ ಪ್ರಶ್ನೆ ಮಾಡಲೇ ಬೇಕು. ಇಲ್ಲವೆಂದರೆ ಮುಂದೆ ಅಪಾಯ ನಿಶ್ಚಿತ. ಎಲ್ಲರನ್ನೊಳಗೊಂಡು ಬದುಕುವ ಸಮಾಜವನ್ನು ನಾವೆಲ್ಲ ಸೇರಿ ಕಟ್ಟಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ರಾಮಾ ನಾಯ್ಕ ಸ್ವಾಗತಿಸಿದರು. ಪ್ರೀತಿ ಪದದ ಯಮುನಾ ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ಭಿಷ್ಟಣ್ಣವರ್ ನಿರ್ವಹಿಸಿದರು. ಸಹಯಾನದ ಮಾಧವಿ ಭಂಡಾರಿ, ಕಸಾಪ ಗೌರವ ಕಾರ್ಯದರ್ಶಿ ಜೊರ್ಜ ಫರ್ನಾಂಡೀಸ್, ಕಲ್ಲೂರು ಶಿಕ್ಷಣ ಸಂಸ್ಥೆಯ ಇಬ್ರಾಹಿಂ ಕಲ್ಲೂರು, ಜನಶಕ್ತಿ ಮೀಡಿಯಾದ ನವೀನ ಕುಮಾರ, ಹಾಸನ ಶುಭಾಶಯಕೋರಿ ಮಾತನಾಡಿದರು. ಗಣೇಶ್ ರಾಠೋಡ ವಂದಿಸಿದರು. ಪ್ರಾರಂಭದಲ್ಲಿ ಪಿ.ಆರ್. ನಾಯ್ಕ, ಡಾ. ಮಹೇಶ ಗೋಳಿಕಟ್ಟಿ, ಜಿಡಿ ಮನೋಜೆ, ಎಂ.ಎ. ಖತೀಬ್, ಅಲ್ತಾಫ್ ಶೇಖ್, ಎನ್.ಜಿ. ನಾಯ್ಕ, ಜಿ.ಡಿ. ಪಾಲೇಕರ್, ಮೋಹನ ಕಿಂದಳಕರ್ ಪುಸ್ತಕ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದ ಮಧ್ಯೆ ಹಿರಿಯ ಕಲಾವಿದರಾದ ನುಗ್ಲಿ ಗೌಡ ಸಂಗಡಿಗರು ಹಾಗೂ ಲಕ್ಷ್ಮಿ ಸಿದ್ದಿ ಜೊನ್ ಬಿಳ್ಕಿಕರ್ ರಿಂದ ಶ್ರಮಜೀವಿ ಸೌಹಾರ್ದ ಸಾಂಸ್ಕೃತಿಕ ಅಭಿವ್ಯಕ್ತಿ ನಡೆಯಿತು. ಜಿಲ್ಲೆಯ ವಿವಿದೆಡೆಯಿಂದ ಸಹೃದಯಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು. ಪ್ರೀತಿಪದಕ್ಕೆ ಶಾಂತಾರಾಮ ನಾಯಕ, ವಿಷ್ಣು ನಾಯ್ಕ, ಡಾ. ಸಬಿತಾ ಬನ್ನಾಡಿ, ಯು. ಬಸವರಾಜ, ಡಾ. ಕೆ.ಆರ್. ದುರ್ಗಾದಾಸ್, ಡಾ. ಕೇಶವ ಶರ್ಮ, ವಸಂತರಾಜ್, ಮೀನಾಕ್ಷಿ ಬಾಳಿ, ವಿಮಲಾ ಕೆಎಸ್, ಡಾ. ರಾಜೇಂದ್ರ ಚೆನ್ನಿ, ಡಾ. ಮೇಟಿ ಮಲ್ಲಿಕಾರ್ಜುನ, ಮುನೀರ ಕಾಟಿಪಳ್ಳ, ಜಾಂಪಣ್ಣ ಅಶಿಹಾಳ, ಡಾ. ಶಿವಕುಮಾರ್ ಕಂಪ್ಲಿ, ಜಗನ್ನಾಥ ಮೊಗೇರ, ವಿವಿಧ ಕಾಲೇಜುಗಳ ಅಧ್ಯಾಪಕರು, ಸಾಹಿತಿ ಸ್ನೇಹಿತರು ಶುಭಕೋರಿ ಸಂದೇಶ ಕಳಿಸಿದ್ದರು.