ಗ್ರಾಮೀಣ ಪ್ರತಿಭೆಯೊಂದು ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಅದಕ್ಕೊಂದು ನಿರಂತರ ತಪಸ್ಸು ಮಾಡಬೇಕಾದಿತು. ಸತತ ಪರಿಶ್ರಮ, ಕ್ರಮವರಿತ ಸಾಧನೆ, ಎದುರಾಳಿಯನ್ನು ಸೋಲಿಸುವ ಛಲ ಅತ್ಯಗತ್ಯ. ಕ್ರಮರಹಿತ ಸಾಧನೆ ಶರೀರ ನಾಶವೇ ಹೊರತು, ಶರೀರ ಸಂವರ್ಧನೆಯಲ್ಲ ಎಂಬುದೊಂದು ಮಾತಿದೆ. ಸುಪ್ತವಾಗಿ ತಮ್ಮಲ್ಲಡಗಿರುವ ಚೈತನ್ಯಕ್ಕೆ ದಾರಿ ತೋರಿಸಿದಾಗ ಅದು ಬಲಿಷ್ಠಗೊಳ್ಳಲು ಸಾಧ್ಯ. ತನಗರಿವಿಲ್ಲದ ಸುಪ್ತ ಪ್ರತಿಭೆಗೊಂದು ಸೂಕ್ತ ಅವಕಾಶ ಕಲ್ಪಿಸಿ ಆ ದಿಶೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಾಧನೆಯ ಗರಿ ಮುಡಿಗೇರಿಸಿಕೊಂಡರು ಹೊನ್ನಾವರ ತಾಲೂಕಿನ ಮಲ್ಲಾಪುರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಯಮುನಾ ವೆಂಕಟರಮಣ ನಾಯ್ಕರವರು.
ಬಾಲ್ಯದಲ್ಲಿ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಗುಂಡು,ಚಕ್ರ, ಜಾವಲಿನ ಎಸೆತಗಳಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಕ್ರೀಡಾಪಟು ಎಂದು ಗುರುತಿಸಿಕೊಂಡರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಗುಂಡು ಎಸೆತದಲ್ಲಿ ರಾಜ್ಯ, ರಾಷ್ಟ್ರ ಮಟ್ಟದವರೆಗೂ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದ ಹೆಮ್ಮೆ ಇವರದ್ದಾಗಿದೆ.
ಸಾಲ್ಕೋಡಿನ ವೆಂಕಟರಮಣ ನಾಯ್ಕ ಮತ್ತು ಗಣಪಿ ನಾಯ್ಕರವರ ಮಗಳಾಗಿ ಜನಿಸಿದ್ದು ೧೯೭೬ರಲ್ಲಿ. ಬಾಲ್ಯದ ಶಿಕ್ಷಣ ಊರಿನ ಸುತ್ತಮುತ್ತ ಶಾಲೆಯಲ್ಲಿ ನಡೆಯಿತು. ಮೂಲತಃ ಕೃಷಿ ಕುಟುಂಬದಿಂದ ಬಂದ ಈ ಗ್ರಾಮೀಣ ಪ್ರತಿಭೆ ಯಮುನಾ ನಾಯ್ಕರಿಗೆ ಈಗ ನಲವತ್ತೈದರ ಹರೆಯ. ಚಿಕ್ಕವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ ಮೌನ ಸಾಧಕಿ. ಉಜ್ಜುಗಲ್ಲು ಇರುವುದು ಕತ್ತಿಯನ್ನು ಹರಿತ ಗೊಳಿಸಲು ಮಾತ್ರ, ಕತ್ತಿಯನ್ನೇ ಮೊಂಡು ಮಾಡಲಿಕ್ಕಲ್ಲ ಎಂಬ ಮಾತನ್ನೇ ಬದುಕಿನಲ್ಲಿ ಸವಾಲಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಸಾಧನೆ ಮಾಡಲು ತಮ್ಮ ಮನೋಭೂಮಿಕೆಯನ್ನು ಸದೃಢಗೊಳಿಸಿ ಆ ದಿಶೆಯಲ್ಲಿ ಮುನ್ನುಗ್ಗಿದರು.೧೯೯೮ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮಲ್ಲಾಪುರ ಶಾಲೆಗೆ ನೇಮಕರಾದ ಮೇಲೆ ನೌಕರರಿಗಾಗಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಿ ಒಂದೊಂದೇ ಮೆಟ್ಟಿಲನ್ನು ಏರಿ, ಇಂದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧಕಿಯಾಗಿ ಹೊರಹೊಮ್ಮಿರುತ್ತಾರೆ. ಪ್ರತಿಭೆ ಎಂಬುದರಲ್ಲಿ ತೊಂಬತ್ತೊಂಬತ್ತು ಪಾಲು ಬೆವರು, ಒಂದು ಪಾಲು ಮಾತ್ರ ಸ್ಪೂರ್ತಿ ಎಂಬಂತೆ ೨೦೧೨ ಮತ್ತು ೨೦೧೩ ನೇ ಸಾಲಿನಲ್ಲಿ ನಡೆದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಸತತವಾಗಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದರೆ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಎರಡು ಬಾರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಇಲ್ಲಿಂದ ಪ್ರಾರಂಭವಾದ ಇವರ ಕ್ರೀಡಾ ಪಯಣದ ಹಾದಿ ಅಂತರಾಷ್ಟ್ರೀಯ ಮಟ್ಟದವರೆಗೂ ಮುಂದುವರಿಯುತ್ತಾ ಇವರ ಪ್ರತಿಭೆ ಬೆಳೆಯಲು,ಬೆಳಗಲು ಸಾಧ್ಯವಾಯಿತು.
೩೦೧೪ ರಲ್ಲಿ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಅಥ್ಲೇಟಿಕ್ ನಲ್ಲಿ ಸ್ಪರ್ಧಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು,ಗೋವಾದ ಬಾಂಬೊಲಿಯಂ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. ಮೂವತ್ತಾರನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಫ್ರಾನ್ಸ್ನಲ್ಲಿ ನಡೆದಾಗ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧಕಿಯಾಗಿ ಭಾರತದ ತುಂಬೆಲ್ಲ ಗುರುತಿಸಿಕೊಂಡರು.
೨೦೧೮ ನೇ ಸಾಲಿನಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟವೂ ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ , ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಮೂರನೇ ಬಾರಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ೨೦೧೬ ರಲ್ಲಿ ಅಖಿಲ ಭಾರತ ನಾಗರಿಕ ಸೇವಾ ರಾಷ್ಟ್ರಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಪುಣೆಯ ಶಿವಛತ್ರಪತಿ ಕ್ರೀಡಾಂಗಣದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿರುತ್ತಾರೆ.
೧೯ನೇ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸಿಂಗಾಪುರದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ನಮ್ಮ ನಾಡಿನ ಹಿರಿಮೆ,ಗರಿಮೆಗೆ ಪಾತ್ರರಾಗಿ ರಾಜ್ಯ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಾಧಕಿ ಸರಳ ಸಜ್ಜನಿಕೆಗೆ ಹೆಸರಾಗಿರುತ್ತಾರೆ. ೨೦೧೮ ನೇ ಸಾಲಿನಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ,ಜಾವಲಿನ್ ನಲ್ಲಿ ದ್ವಿತೀಯ ಸ್ಥಾನ ಪಡೆದು ನಾಲ್ಕನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
೨೦೧೯ ನೇ ಸಾಲಿನಲ್ಲಿ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದವರಿಗೆ ರಾಷ್ಟ್ರಮಟ್ಟಕ್ಕೆ ಐದನೇ ಬಾರಿಗೆ ಆಯ್ಕೆಯಾದ ಏಕಮೇವ ಪ್ರತಿಭೆಯಾಗಿ ಹೊರಹೊಮ್ಮಿದರು. ೨೦೨೦ ನೇ ಸಾಲಿನಲ್ಲಿ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ, ಗುಂಡು ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಆರನೇ ಬಾರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅಹ೯ತೆ ಪಡೆದು ಸೆಪ್ಟೆಂಬರ್ -೨೦೨೧ ರಂದು ಹರಿಯಾಣದ ಕಣ೯ ಕ್ರೀಡಾಂಗಣದಲ್ಲಿ ನಡೆದ all India civil services athletic championship ನಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದ ಶಿಕ್ಷಕ ಶಿರೋಮಣಿ ಯಮುನಾ ನಾಯ್ಕರವರ ಸಾಧನೆ ಕ್ರೀಡಾ ಜಗತ್ತಿನಲ್ಲೇ ಇತಿಹಾಸ ನಿರ್ಮಿಸಿದ ಖ್ಯಾತಿಗೆ ಪಾತ್ರರಾಗಿರುತ್ತಾರೆ.
ತಾಲೂಕು, ಜಿಲ್ಲಾ ಮಟ್ಟದ ಸಂಘಟನೆಗಳಿಂದ ಸನ್ಮಾನಕ್ಕೊಳಗಾದ ಯಮುನಾ ನಾಯ್ಕರವರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮಲ್ಲಾಪುರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತ ಕ್ರೀಡೆಯಲ್ಲಿ ಮಾಡಿದ ಸಾಧನೆ ಜಾಗತಿಕ ಮಟ್ಟದ ದಾಖಲೆಯಾಗಿ ಉಳಿದಿದೆ. ಅವರ ಪತಿ ರಮೇಶ ನಾಯ್ಕರವರು ಪ್ರಾಥಮಿಕ ಶಾಲಾ ಶಿಕ್ಷಕರು. ಪ್ರಾಥಮಿಕ ಶಾಲಾ ಶಿಕ್ಷಕಿಯ ಅಪರೂಪದ ಕ್ರೀಡಾ ಸಾಧನೆ ಇನ್ನಷ್ಟು ಉತ್ತುಂಗಕ್ಕೆರಲಿ ಎಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.