‘ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು’
– ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ ಗೋಪಾಲ ಕೆರಿಯಪ್ಪ ನಾಯ್ಕರು. ತಂದೆ ದಿವಂಗತ ಕೆರಿಯಪ್ಪ ನಾಯ್ಕರು ಕಾಗೋಡು ಸತ್ಯಾಗ್ರಹದಲ್ಲಿ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ ಅಪ್ಪಟ ಗ್ರಾಮೀಣ ನಾಟಿ ವೈದ್ಯರು. ಅವರ ಮಗ ಗೋಪಾಲ ನಾಯ್ಕರ ಬದುಕು ಅದಕ್ಕೆ ಹೊರತಾಗಿರಲಿಲ್ಲ. ಕೃಷಿ ಕುಟುಂಬದಲ್ಲಿ ಜನಿಸಿ ಬಾಲ್ಯದಿಂದಲೇ ತಂದೆ ತೋರಿದ ದಾರಿಯಲ್ಲಿ ಸಾಗುತ್ತಾ ಐವತ್ನಾಲ್ಕು ವಸಂತಗಳನ್ನು ಪೂರೈಸಿದವರು. ತಮ್ಮ ದುಡಿಮೆಯ ಕೆಲವು ಭಾಗವಾಗಿ ಪ್ರತಿವರ್ಷ ಮೂವತ್ತರಿಂದ,ನಾಲ್ವತ್ತು ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದರ ಮೂಲಕ ಬೆನ್ನುಕೊಟ್ಟು, ಬೆನ್ನು ತಟ್ಟಿ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಉದಾರ ಗುಣಹೊಂದಿರುವ ಗೋಪಾಲ ನಾಯ್ಕರು ಸಿದ್ದಾಪುರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಹಳ್ಳಿಬೈಲ್ ನಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹರಿಶ್ಚಂದ್ರ ಕಾವ್ಯದ ಕಲಿಕಾ ಕಿರುಚಿತ್ರ ರಚಿಸಿ ನಾಡಿನ ವಿದ್ಯಾರ್ಥಿಗಳಿಗೆ ಕಾವ್ಯದ ರುಚಿ ಉಣಿಸಿ ಕಲಾತ್ಮಕ ಬದುಕಿನತ್ತ ಹೆಜ್ಜೆ ಹಾಕಲು ಕಲಿಸಿದ ಸಾಧಕ ಗೋಪಾಲ ನಾಯ್ಕರು ಸತತ ಐದು ಬಾರಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವುದರ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸಿದವರು. ಸ್ವತ: ನಾಟಕ ಕಲಾವಿದರು, ಕೃತಿ ರಚನಾಕಾರರು, ಬಹುಮುಖ ಪ್ರತಿಭಾ ಸಂಪನ್ನರು ಪೌರ್ಣಿಮಾ ಸಾಹಿತ್ಯ ವೇದಿಕೆ ವಾಟ್ಸಪ್ ಗ್ರೂಪ್ ರಚಿಸಿ ನಾಡಿನ ಹಿರಿಯ ಸಾಹಿತಿಗಳೊಂದಿಗೆ ಸಂವಾದ ಏರ್ಪಡಿಸಿ ಶಿಕ್ಷಕರ ಪ್ರತಿಭೆಗೆ ಅವಕಾಶ ಕಲ್ಪಿಸಿದ ಕ್ರಿಯಾಶೀಲ ಶಿಕ್ಷಕರು. ಜಿಲ್ಲಾ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಚಿಣ್ಣರ ಅಂಗಳ ಮತ್ತು ಚಿನ್ನರ ಮೇಳದ ಯಜಮಾನರಾಗಿ ದುಡಿದು ಇಲಾಖೆಯ ಘನತೆ-ಗೌರವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
ಅಪ್ಪಟ ಗ್ರಾಮೀಣ ಪ್ರತಿಭಾವಂತರಾದ ಗೋಪಾಲ ನಾಯ್ಕರು ೧೯೬೭ ರಲ್ಲಿ ತಂದೆ ಕೆರಿಯಪ್ಪ ನಾಯ್ಕ, ತಾಯಿ ದೇವಮ್ಮ ನವರಿಗೆ ೬ನೇ ಮಗನಾಗಿ ಜನಿಸಿದರು. ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು , ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎಡ್ ಪದವಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ೧೯೯೦ ರಲ್ಲಿ ಹಾನಗಲ ತಾಲೂಕಿನ ಕಾಮನ ಹಳ್ಳಿಯಲ್ಲಿ ಸೇವೆ ಪ್ರಾರಂಭಿಸಿ, ೨೦೦೯ ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ ತಮ್ಮ ಸೇವೆಯ ಮೊದಲ ಹೆಜ್ಜೆ ಗುರುತಿಸಿದರು.
ಮೊದಲು ಆಳಾಗುವುದನ್ನು ಕಲಿ, ಆಗ ನಾಯಕನ ಅರ್ಹತೆ ಬರುತ್ತದೆ. ಒಂದು ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರ ಮೂಲಕ ಶ್ರೇಷ್ಠ ಪ್ರತಿಫಲ ದೊರೆಯಲು ಸಾಧ್ಯ ಎಂಬ ಸ್ವಾಮಿ ವಿವೇಕಾನಂದರವರ ಮಾತಿನಂತೆ, ಪ್ರತಿಯೊಂದು ಕೆಲಸವನ್ನು ಶಿಸ್ತಿನಿಂದ ನಿಭಾಯಿಸುವ, ಹೊಣೆಯರಿತು ನಡೆಯುವ ಗೋಪಾಲ ನಾಯ್ಕರು ಕಾಮನಹಳ್ಳಿಯಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ,ನಂತರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ,೨೦೦೩ ರಂದು ಸಿದ್ದಾಪುರದ ಅರಂದೂರು ಶಾಲೆಯಲ್ಲಿ ೧೧ ವರ್ಷಗಳ ಕಾಲ ಸೇವೆ ಸಲ್ಲಿಸಿ, ೨೦೧೪ ರಿಂದ ಸರಕಾರಿ ಪ್ರೌಢಶಾಲೆ ಹಳ್ಳಿಬೈಲ್ ಗೆ ಬಡ್ತಿ ಹೊಂದಿದರು. ಸುಮಾರು ೨೪ ವರ್ಷಗಳ ಕಾಲ ಪ್ರಾಥಮಿಕ ಶಾಲೆಯಲ್ಲಿಯೂ, ಏಳು ವರ್ಷಗಳ ಕಾಲ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಗುರುಗಳಾಗಿರುತ್ತಾರೆ.
ತಮ್ಮ ಬಹುಮುಖ ಪ್ರತಿಭೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಕೈಯಾಡಿಸಿ ಸಾಹಿತ್ಯ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ರಾಜ್ಯ ಮಟ್ಟದ ಕವಿಗೋಷ್ಠಿ, ಉಪನ್ಯಾಸ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುತ್ತ ಸಂಘಟಕರಾಗಿಯೂ ಹೆಸರು ಮಾಡಿರುತ್ತಾರೆ.
ತಾರಾ ಮಂಡಲದ ಚಿತ್ರದುರ್ಗ ವಿಜ್ಞಾನ ಮತ್ತು ಮಾನವೀಯತೆ ಸಂಸ್ಥೆಯವರು ರಾಷ್ಟ್ರ ಮಟ್ಟದ ಉತ್ತಮ ಶಾಲೆ ಪ್ರಶಸ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇವರಿಂದ ಸಾವಿತ್ರಿಬಾಯಿ ಫುಲೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಹಸಿರು ಶಾಲೆ ಪ್ರಶಸ್ತಿ, ಕಲಿಕಾ ಆಂದೋಲನ ಪ್ರಶಸ್ತಿ ಮುಂತಾದ ಹಲವು ಪುರಸ್ಕಾರಕ್ಕೆ ಭಾಜನರಾದ ಶ್ರೀಯುತರು ತಮ್ಮ ವೃತ್ತಿಯ ಘನತೆ ಗೌರವ ಹೆಚ್ಚಿಸಿದ ಕ್ರಿಯಾಶೀಲ ಶಿಕ್ಷಕರು. ಸುಮಾರು ಆರು ವರ್ಷಗಳ ಕಾಲ ಎಸ್.ಎಸ್.ಎಲ್. ಸಿ. ಪರೀಕ್ಷೆಯ ಭಾಷಾ ವಿಷಯದಲ್ಲಿ ಶೇಕಡಾ ನೂರರಷ್ಟು ಸಾಧನೆ ಮಾಡಿರುವುದಕ್ಕಾಗಿ ಆಯುಕ್ತರಿಂದ ಪ್ರಸಂಶೆಗೆ ಒಳಗಾಗಿರುತ್ತಾರೆ. ಇಲಾಖೆ ನೀಡಿದ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವ ಮೂಲಕ ತಾಲೂಕಿನಾದ್ಯಂತ ಚಿರಪರಿಚಿತರಾದ ಗೋಪಾಲ ನಾಯ್ಕರವರು ಶಿಕ್ಷಕ ವೃತ್ತಿ ಬದುಕಿನ ಮೌನ ಸಾಧಕರು. ತನ್ನ ವೃತ್ತಿ ಬಗೆಗಿನ ಕರ್ತವ್ಯ ಪ್ರಜ್ಞೆಯಿಂದ ಹಾಗೂ ತಾನು ತನ್ನದು ಎನ್ನುವ ಸ್ವಾರ್ಥದ ಪರಿದಿಯಿಂದಾಚೆ ಸರಿದು ಸಮಾಜಮುಖಿ ಕಾರ್ಯಗಳತ್ತ ತುಡಿಯುವ ಕ್ರಿಯಾಶೀಲ ಇಂತಹ ಆದಶ೯ ಶಿಕ್ಷಕರನ್ನು ಇಲಾಖೆ ಗುರುತಿಸಿ ಗೌರವಿಸಬೇಕಾದ ಅಗತ್ಯತೆ ಇದೆ.
ಹೋರಾಟದಲ್ಲಿ ನಿಜವಾದ ಗೆಲುವು, ಹೋರಾಡಿ ಹೋರಾಡಿ ಸೋತರು ಚೆಲುವು ದಿನಕರ ದೇಸಾಯಿಯವರು ನಂಬಿದ ಬದುಕಿನ ಹಾಗೆ, ಎಲೆಮರೆಯ ಕಾಯಿಯಂತೆ ತನ್ನ ವೃತ್ತಿ ಬದುಕನ್ನು ಪ್ರೀತಿಸುತ್ತಾ, ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕೃಷಿ ಮಾಡುತ್ತಾ,ಮಾದರಿಯ ಗುರುವಾಗಿ ಶಿಷ್ಯವೃಂದಕ್ಕೆ ತನ್ನ ಜ್ಞಾನ ಸುಧೆ ಹರಿಸುತ್ತಾ, ಹಸಿರು ವನ ನಿರ್ಮಿಸಲೆಂದು ಶಿಕ್ಷಕ ದಿನಾಚರಣೆಯ ಶುಭಾಶಯಗಳೊಂದಿಗೆ ಹಾರೈಸುತ್ತೇವೆ.
–