Site icon ಒಡನಾಡಿ

ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೧

ಮಾರ್ನೆ ದಿನ ಬೆಳಿಗ್ಗೆಯೇ ಭಾರತಿ, ಮಂಜುನಾಥನ ಮನೆಗೆ ಪಾಠ ಕೇಳಲು ಹೋದಳು. ಮಂಜುನಾಥ ಹಾಸಿಗೆಯನ್ನು ಹಾಸಿ ಕುಳಿತುಕೊಳ್ಳಲು ಹೇಳಿ ಮೊಬೈಲ್ ತರಲು ಒಳಗೆ ಹೋದ. ಮಂಜುನಾಥನ ಆಬ್ಬೆ, ಅಪ್ಪ ಭಾರತಿಯನ್ನು ಮಾತನಾಡಿಸಿ, ‘ಎಲ್ಲೂ ಹೊರ್ಗೆ ಹೊಗ್ ಬ್ಯಾಡಿ, ಮಾನಿಲೆ ಓದ್ಕಂತಿ ಇರಿ’, ಎಂದೇಳಿ ಅವರು ತಮ್ಮ ತಮ್ಮ ಕೂಲಿ ಕೆಲಸಕ್ಕೆ ಹೊರಟರು. ಹೀಗೆ ಪ್ರತಿದಿನದ ಸಂವೇದ ಪಾಠ, ಹೋಮ್ ವರ್ಕ್ ನಡೆಯುತ್ತ ಸಾಗಿತು.

ಅವ್ನು ತುಂಬಾ ಹುಷಾರಿ ಸರ್. ನಾನೇ ಸ್ವಲ್ಪ ದಡ್ಡಿ. ನನ್ಗೆ ಗಣಿತದಲ್ಲಿ ಸಮಸ್ಯೆ ಏನಾದರೂ ಬಂದ್ರೆ ಅವನತ್ರ ಕೇಳ್ತೇನೆ. ಸರ್, ಸರ್, ಯಾಕೊ ಅವನ್ಮೆಲೆ ತುಂಬಾ ಪ್ರೀತಿ ಹುಟ್ಟಿದೆ. ಓದ್ಲಿಕ್ಕೆ, ಬರಿಲಿಕ್ಕೆ ಕುಂತ್ರೆ ಕಣ್ಣೆದ್ರಿಗೆ ಆವ್ನೆ ಬರ್ತಾ. ಅವನಿಲ್ಲದಿದ್ರೆ, ಅವ್ನನ್ನ ನೋಡ್ದಿದ್ರೆ ಏನೋ ಕಳಕೊಂಡ ಹಾಗೆ. ಅವ್ನನ್ನು ಬಿಟ್ಟಿರ್ಲಿಕ್ಕೆ ಆಗ್ತಾನೇ ಇಲ್ಲ ಸರ್.ಅವ್ನು ಅಷ್ಟೇ. ಇಡೀ ದಿನ ಹೋಂವರ್ಕ್ ಮಾಡ್ವ ಹೇಳಿ ನನ್ನ ಕರಿತಾನೆ ಇರ್ತಾ ಸರ್. ಏನ್ಮಾಡ್ಲಿ ಸರ್, ನೀವೆ ಹೇಳ್ಬೇಕು. ನನಗಂತೂ ತಾಲಿ ಕೆಟ್ಟಿ ಕೆರಾ ಹಿಡ್ದಬಿಟ್ಟದೆ. ಓದೂಕೆ,ಬರೂಕೆ ಮನ್ಸೆ ಇಲ್ಲ.’

ಭಾರತೀಯ ಮನಸ್ಸನ್ನು ಅರ್ಥೈಸಿಕೊಂಡು ಮಾಸ್ತರರು, ‘ಭಾರತಿ ಅವನು ಕೊಟ್ಟ ಚೀಟಿ ಕೊಡು’ ಎಂದರು. ‘ಚೀಟಿ ಬೇಡ ಸರ್, ಸರ್ ನನಗ್ಯಾಕೋ ಭಯ ಆಗ್ತದೆ’. ‘ಭಯ ಪಡ್ಬಾರ್ದು. ಕೊಡು ಚೀಟಿ’ ಎಂದು ಕೈ ಮುಂದೆ ಚಾಚಿದಾಗ ಅನಿವಾರ್ಯವಾಗಿ ಚೀಟಿಯನ್ನು ಮಾಸ್ತರರಿಗೆ ನೀಡಿದಳು. ಚೀಟಿಯನ್ನು ಓದಿದ ಮಾಸ್ತರರು ದಂಗಾಗಿಹೋದರು. ‘ಭಾರತಿ ನೀನಿನ್ನು ಓದುವ ವಿದ್ಯಾರ್ಥಿ. ನಿನ್ನ ತಂದೆ -ತಾಯಿಯವರಿಗೆ, ಕಲಿಸಿದ ಗುರುಗಳಿಗೆ ಒಳ್ಳೆಯ ಹೆಸರು ತರಬೇಕೆಂದರೆ ನೀನು ಚೆನ್ನಾಗಿ ಓದಬೇಕು. ಓದುವ ವಯಸ್ಸಿನಲ್ಲಿ ಪ್ರೀತಿ-ಪ್ರಣಯದ ಬೆಂಕಿಯಲ್ಲಿ ಬಿಳಬಾರದು. ವಿದ್ಯಾರ್ಥಿ ಜೀವನದಲ್ಲಿ ನಮ್ಮ ಭವಿಷ್ಯದ ಬದುಕಿಗೆ ನಾವೇ ಕೊಡಲಿ ಹಾಕಬಾರದು. ಓದಿ ಗುರಿ ಮುಟ್ಟುವುದೊಂದೇ ನಿನ್ನ ಕನಸ್ಸಾಗಿರಲಿ. ಈ ವಯಸ್ಸಿನಲ್ಲಿ ನೀನು ದಾರಿ ತಪ್ಪಿದರೆ ಜೀವನಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.’

ನೋಡು ಭಾರತಿ, ಇಂದಿನಿಂದ ಅವ್ನ ಗೆಳೆತನ ಬಿಟ್ಬೀಡು. ಅವ್ನ ಮನೆಗೆ ಇವತ್ನಿಂದ ಹೋಗ್ಲೆ ಬಾರ್ದು. ಓದಿನ ಕಡೆಗೆ ಆಸಕ್ತಿ ವಹಿಸು. ನಿನಗೆ ಎಂಬ್ರಾಯ್ಡ್ ಮೊಬೈಲನ್ನು ನಾನು ತಂದು ಕೊಡ್ತೆ. ನಾಳೆಯಿಂದ ನಿನ್ನ ಓದು ನಿನ್ನ ಮನೆಯಲ್ಲಿ ನಡೆಯಲಿ. ನಿನಗೆ ಏನಾದರೂ ಸಮಸ್ಯೆಯಾದರೆ ನನಗೆ ಫೋನ್ ಮಾಡು’, ಎನ್ನುತ್ತಿರುವಾಗಲೇ ಅಪ್ಪ ಜಟ್ಟಿ ಮಗಳ ಕಡೆಗೆ ಬರುತ್ತಿದ್ದ. ಮಗಳ ವಿಚಾರ ತಿಳಿಸಿದಾಗ ಅವಳಿಗೆ ಬುದ್ಧಿ ಹೇಳಿ ಮನೆಗೆ ಕರೆದುಕೊಂಡು ಹೋಗುತ್ತಿರುವಾಗ, ಭಾರತಿ ಹಿಂತಿರುಗಿ ನೋಡಿ, .ಸರ್ ಶಾಲೆ ಯಾವಾಗ ಪ್ರಾರಂಭವಾಗುತ್ತದೆ. ನನ್ನ ಸಮಸ್ಯೆ ಪರಿಹಾರ ಆಗ್ಬೇಕಂದ್ರೆ ಮೊದಲು ಶಾಲೆ ಪ್ರಾರಂಭ ಆಗಲೇಬೇಕು. ಈ ಲಾಕ್ ಡೌನ್ ಈಗಾಗಲೇ ನನ್ನ ಬದುಕನ್ನೆ ಲಾಕ್ಮಾಡಲು ಬಿಡುವುದಿಲ್ಲ’ ಎಂದು ಹೇಳುತ್ತಾ ಮನೆಕಡೆ ಹೋಗುತ್ತೀರುವಾಗ ಮಾಸ್ತರರು ಕೈಬೀಸುತ್ತಾ ಸುಮ್ಮನೆ ನಿಂತಿದ್ದರು….



– ಪಿ.ಆರ್. ನಾಯ್ಕ, ಹೊಳೆಗದ್ದೆ

……. ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)

Exit mobile version