Site icon ಒಡನಾಡಿ

ಸರಕಾರಿ ಶಾಲೆಯಲ್ಲೇ ಓದಿ ಸಾಧನೆಯ ಶಿಖರವೇರಿದ ಗೇರಸೊಪ್ಪದ ಭೂಮಿಕಾ ನಾಯ್ಕ…. ಜಿಲ್ಲಾಧಿಕಾರಿಯಾಗುವ ಕನಸು ಈ ಕುವರಿಗೆ….

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಮೂಡಣಕ್ಕೆ ಸುಮಾರು ಹದಿನೆಂಟು ಮೈಲುಗಳಷ್ಟು ದೂರದಲ್ಲಿ ಶರಾವತಿ ನದಿಯ ದಂಡೆಯ ಮೇಲಿದೆ ಗೇರುಸೊಪ್ಪೆ. ಇಂದು ಗೇರುಸೊಪ್ಪೆ ಎಂದು ಕರೆಯಲಾಗುತ್ತಿರುವ ಊರು, ಹಿಂದೆ ನಗಿರೆ, ಕ್ಷೇಮಪುರ, ಭಲ್ಲಾತಕಿಪುರ, ಗೇರಸೊಪ್ಪೆ ಎಂದೆಲ್ಲ ಹೆಸರು ಪಡೆದಿತ್ತಂತೆ. ಇದು ನಗಿರಾ ರಾಜ್ಯದ ರಾಜಧಾನಿಯೂ ಆಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ತುಳು ದೇಶವೆಂಬ ಕಾಂತೆಯ ಮುಖದಲ್ಲಿನ ತಿಲಕದಂತೆ ನಗಿ ರಾಜ್ಯವು ಕಂಗೊಳಿಸುತ್ತಿತ್ತು ಎಂದು ಶಾಸನದಲ್ಲಿ ಹೇಳಲ್ಪಟ್ಟಿದೆ. ಪೋರ್ಚುಗೀಸರು ಶರಾವತಿ ನದಿಯನ್ನು ಗೇರಸೊಪ್ಪೆ ನದಿ ಎಂದು ಕರೆಯುತ್ತಿದ್ದರು. ಹೀಗಾಗಿ ಶರಾವತಿ ನದಿ ಜೋಗದ ಬಳಿ ಧುಮುಕುವ ಜಲಪಾತಕ್ಕೆ ಗೇರಸೊಪ್ಪೆ ಜಲಪಾತ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ.

ಈ ಜಲಪಾತದಿಂದ ಗೇರಸೊಪ್ಪೆ ಹಲವರಿಗೆ ಪರಿಚಯದ ಊರಾಯಿತು. ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿ ಗೇರುಸೊಪ್ಪೆಯ ಸಿಂಹಾಸನ ಏರಿದಾಗ ರಾಜ್ಯ ಉನ್ನತ ಸ್ಥಿತಿಗೆ ಏರಿದ ಕಾಲ. ಗೇರಸೊಪ್ಪೆಯಲ್ಲಿ ಇಂದು ಉಳಿದಿರುವ ಬಸಿದಿಗಳು ಆ ಕಾಲದ ದೊರೆಗಳ ಕಲಾ ಪ್ರೇಮಕ್ಕೆ ಸಾಕ್ಷಿಯಾಗಿದೆ. ಗೇರಸೊಪ್ಪ ಸಾಳ್ವ ಅರಸರ ಸ್ವಾತಂತ್ರ್ಯ ಪ್ರೇಮ, ಕೆಚ್ಚು, ಅಭಿಮಾನ, ಸಾಹಸ, ಕಲಾಭಿಮಾನ, ಮತ ಸಹಿಷ್ಣುತೆ, ಆರ್ಥಿಕ ಅಭಿವೃದ್ಧಿ ಮತ್ತು ಆಡಳಿತದಲ್ಲಿ ಇವರು ತೋರಿದ ಆಸಕ್ತಿ ಎಲ್ಲಾ ಕಾಲದಲ್ಲಿಯೂ ಮೇಲ್ಪಂಕ್ತಿಯಾಗಿದೆ.

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಭೂಮಿಕಾ ಕೃಷ್ಣ ನಾಯ್ಕ ಇವಳನ್ನು ಉಪನಿರ್ದೇಶಕ ಹರೀಶ ಗಾಂವ್ಕರ್ ಸನ್ಮಾನಿಸಿದರು.

ಐತಿಹಾಸಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದ ಗೇರಸೊಪ್ಪೆ ಇಂದು ಶೈಕ್ಷಣಿಕವಾಗಿ ನಾಡಿಗೆ ಗುರುತಿಸಿಕೊಂಡಿದೆ. ೧೯೯೮ ರಲ್ಲಿ ಪ್ರಾರಂಭವಾದ ಸರಕಾರಿ ಪ್ರೌಢಶಾಲೆ ಇಲ್ಲಿವರೆಗೆ ಹಲವು ಸಾಧಕರ ಹುಟ್ಟಿಗೂ ಕಾರಣವಾಗಿದೆ. ಕನ್ನಡ ಚಲನಚಿತ್ರದಲ್ಲಿ ಗೀತ ರಚನಾಕಾರರಾಗಿ ಹೆಸರು ಮಾಡಿದವರು ಈ ಶಾಲೆಯ ಪೂರ್ವ ವಿದ್ಯಾರ್ಥಿ ಸಂತೋಷ ಪರಮೇಶ್ವರ ನಾಯ್ಕ. ಕಳೆದ ೨೦೧೧ ರಲ್ಲಿ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ೫ನೇ ಸ್ಥಾನ ಪಡೆದವರು ಮಂಜುನಾಥ ಹೆಗಡೆ ಎನ್ನುವ ವಿದ್ಯಾರ್ಥಿ. ಆದಿತ್ಯ ಶಂಕರ ಹೆಗಡೆ ಕಾರವಾರ ಶೈಕ್ಷಣಿಕ ಜಿಲ್ಲೆಗೆ ೨೦೧೪ ರಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ. ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ ಬರೆದು ಭಾರತ ಬುಕ್ ಆಫ್ ರೆಕಾರ್ಡ್ ಮಾಡಿದವರು ಈ ಶಾಲೆಯ ಪೂರ್ವ ವಿದ್ಯಾರ್ಥಿ ಪ್ರದೀಪ ಮಂಜುನಾಥ ನಾಯ್ಕ. ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕುಮಾರಿ ಭೂಮಿಕ ಕೃಷ್ಣ ನಾಯ್ಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಅದೇ ಶಾಲೆಯ ಕುಮಾರಿ ದೀಕ್ಷಿತ ಮಹಾದೇವ ನಾಯ್ಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುತ್ತಾಳೆ. ಕಾವ್ಯ ನಾಗರಾಜ ನಾಯ್ಕ ಮತ್ತು ವನಿತಾ ಗಜಾನನ ನಾಯ್ಕ ಇವರು ರಾಜ್ಯದ ಟೋಫಟೆನ ಪಡೆದ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳಾಗಿರುತ್ತಾರೆ. ಕಳೆದ ೯ ವರ್ಷಗಳಿಂದ ಕೆ.ಇ.ಎಸ್. ಪದವಿ ಪಡೆದ ಶ್ರೀ ನಾಗರಾಜ ಹೆಗಡೆಯವರು ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯಾಧ್ಯಾಪಕರ ಮತ್ತು ಶಾಲಾ ಶಿಕ್ಷಕರ ನಿರಂತರ ಮಾರ್ಗದರ್ಶನದ ಮೂಲಕ ಶಾಲೆ ಎ ಗ್ರೇಡ್ ಪಡೆದು, ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಿದೆ.

ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿ ದಿಕ್ಷೀತಾ ನಾಯ್ಕ ಇವಳನ್ನು ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸನ್ಮಾನಿಸಿದರು.

ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬವೇ ಅಧಿಕವಾಗಿರುವ ಗೇರುಸೊಪ್ಪ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರೌಢಶಾಲೆ ದಾಸೋಹಕ್ಕೆ ತೆಗೆದುಕೊಂಡ ಸರಕಾರಿ ಸೌಲತ್ತುಗಳಾಗಿವೆ. ಇಲ್ಲಿಯ ವಿದ್ಯಾರ್ಥಿಗಳ ಸಾಧನೆ ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜಗತ್ತಿನಾದ್ಯಂತ ತಲ್ಲಣಗಳನ್ನು ಉಂಟುಮಾಡಿದ ಕೋರೋನಾ ಸಂದರ್ಭದಲ್ಲಿಯೂ ತನ್ನೆಲ್ಲ ಕಷ್ಟಗಳನ್ನು ಬದಿಗಿರಿಸಿ ನಿರಂತರ ಓದಿನ ಮೂಲಕ ಸಾಧನೆಯ ಶಿಖರವೇರಿದ ಭೂಮಿಕಾಳ ಕಾರ್ಯಸಾಧನೆ ರಾಜ್ಯಕ್ಕೆ ಮಾದರಿಯಾಗಿದೆ. ಬಹುಮುಖ ಪ್ರತಿಭೆಯೊಂದು ಬೊಮ್ಮನಕೊಡ್ಲು ಮಜರೆಯಲ್ಲಿ ಅನಾವರಣ ಕೊಂಡಿರುವುದು ಜಿಲ್ಲೆಗೆ ಹೆಮ್ಮೆ ಎನಿಸಿದೆ. ಅತಿಕ್ರಮಣದ ಅರಣ್ಯ ಪ್ರದೇಶದ ತುಂಡು ಜಮೀನಿನಲ್ಲಿ ವಾಸವಾಗಿರುವ ಕೃಷ್ಣ ನಾಯ್ಕ ಮತ್ತು ಗೌರಿ ನಾಯ್ಕ ಇವರು ನಿತ್ಯ ಕೂಲಿ ಮಾಡಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ. ಮಗಳು ಭೂಮಿಕಾ ಶಾಲೆಗೆ ಹೋಗಿ ಬರಲು ಪ್ರತಿನಿತ್ಯ ಹತ್ತು ಕಿಲೋಮೀಟರ್ ನಡೆಯಬೇಕು. ತುಂಬಾ ದುರ್ಗಮ ಪ್ರದೇಶ. ಕಡಿದಾದ ದಾರಿ. ಹಳ್ಳ ದಾಟಿ, ತೋಟದಲ್ಲಿ ನಡೆದು ರಸ್ತೆಗೆ ಹೋಗಬೇಕು. ಶಾಲೆ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಆನ್ಲೈನ್ ಪಾಠ ಕೇಳಬೇಕು. ಮನೆಯಲ್ಲಿ ಕುಳಿತರೆ ನೆಟ್ವರ್ಕ್ ಸಮಸ್ಯೆ. ಪಕ್ಕದ ಗುಡ್ಡದಲ್ಲಿ ಕುಳಿತು ಸಂವೇದ ಪಾಠ ಕೇಳಬೇಕು. ಶಿಕ್ಷಕರೊಂದಿಗೆ ಮಾತನಾಡಬೇಕೆಂದರೆ ಮತ್ತೆ ಗುಡ್ಡ ಹತ್ತಬೇಕು. ಒಟ್ಟಾರೆ ಭೂಮಿಕಾಳ ಓದು ಸುಲಭದ ಮಾತಾಗಿರಲಿಲ್ಲ. ಆದರೂ ಬಿಡದ ಪ್ರಯತ್ನ, ಸಾಧಿಸಬೇಕೆಂಬ ಹಟದೊಂದಿಗೆ ತನ್ನ ಗುರಿ ಸಾಧಿಸಿದ್ದಾಳೆ.

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಭುಮಿಕಾ ಕೃಷ್ಣ ನಾಯ್ಕ ಇವರ ಮನೆಗೆ ಗೇರುಸೊಪ್ಪ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶ್ರೀ ನಾಗರಾಜ ಹೆಗಡೆಯವರು ಭೇಟಿ ನೀಡಿ ಬಹುಮುಖ ಪ್ರತಿಭೆಯನ್ನು ಸನ್ಮಾನಿಸಿದರು. ಭೂಮಿಕಾಳ ತಂದೆ ಕೃಷ್ಣ ನಾರಾಯಣ ನಾಯ್ಕ ತಾಯಿ ಗೌರಿ ಕೃಷ್ಣ ನಾಯ್ಕ ತಮ್ಮ ಭುವನ ಕೃಷ್ಣನಾಯ್ಕ ರವರೊಂದಿಗಿನ ಒಂದು ಫೋಟೋ.

ಇಂತಹ ಅಪರೂಪದ ಸಾಧಕಿಯನ್ನು ಹಲವರು ಗೌರವಿಸಿರುತ್ತಾರೆ. ಆದರೆ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬ ತನ್ನ ಇಲಾಖೆ ಮತ್ತು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಹಂತದ ಅನುಷ್ಠಾನಾಧಿಕಾರಿಗಳಲ್ಲಿ ಧೈರ್ಯ ತುಂಬಿ, ಸೂಕ್ತ ಮಾರ್ಗದರ್ಶನ ನೀಡಿದಾಗ ಎಂತಹ ಕಠಿಣ ಸಂದರ್ಭಗಳನ್ನು ಎದುರಿಸಲು ಸಾಧ್ಯ ಎಂದು ತೋರಿಸಿ ಕೊಟ್ಟವರು ಉತ್ತರ ಕನ್ನಡ ಜಿಲ್ಲೆಯ ಉಪನಿರ್ದೇಶಕರ ಹುದ್ದೆಯಲ್ಲಿರುವ ಶ್ರೀ ಹರೀಶ ಗಾಂವ್ಕರವರು. ಶಿಕ್ಷಕರ ಬಗ್ಗೆ, ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸದಾ ಕ್ರಿಯಾಶೀಲ ಪ್ರವೃತ್ತಿಯೊಂದಿಗೆ ಮುನ್ನಡೆದು, ಗೆದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವಲ್ಲಿ ಹಿಂದೆ ಬೀಳುವವರಲ್ಲ ಶ್ರೀ ಹರೀಶ ಗಾಂವ್ಕರವರು. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಗೇರುಸೊಪ್ಪೆಯಂತ ಗ್ರಾಮೀಣ ಪ್ರತಿಭೆ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಾಗ ಹಿರಿಹಿರಿ ಹಿಗ್ಗಿದವರಲ್ಲಿ ಮೊದಲಿಗರು.ತಕ್ಷಣ ವಿದ್ಯಾರ್ಥಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿ ಅಭಿನಂದಿಸಿದಾಗ, ಅವಳ ಮಾತಿನಿಂದ ಬಂದ ಬೆಂಬಿಡದ ಬಡತನದ ಮಧ್ಯೆಯೂ ಓದಿ ಸಾಧನೆ ಮಾಡಿದೆ ಎಂಬ ಮಾತಿಗೆ ಮಮ್ಮಲ ಮರುಗಿ, ಮಾರನೇಯ ದಿನವೇ ಅವರ ಮನೆಗೆ ಭೇಟಿ ನೀಡಿ, ಅವಳ ಮುಖದಲ್ಲಿ ಗೆಲುವಿನ ನಗೆ ಬೀರುವಂತೆ ಮಾಡಿದವರು ಉತ್ತರ ಕನ್ನಡ ಜಿಲ್ಲೆಯ ಉಪನಿರ್ದೇಶಕರು. ಸಾಧನೆಗೆ ಯಾವುದು ಅಡ್ಡಿ ಬರುವುದಿಲ್ಲ ಎನ್ನುವುದು ಸಾಬೀತು ಪಡಿಸಿದ ಭೂಮಿಕಾಳನ್ನು ಶ್ಲಾಘಿಸಿ ಗೌರವಿಸಿದರು. ಕಡುಬಡತನದಲ್ಲಿ,ದುರ್ಗಮ ಹಾದಿ ತುಳಿದು ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುವ ನಿನ್ನ ಸಾಧನೆ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಲಿ ಎಂದು ಹಾರೈಸಿ,ನಿನ್ನ ಐ.ಎ.ಎಸ್. ಆಗುವ ಕನಸು ಈಡೇರಲಿ. ಆ ಗುರಿ ತಲುಪಲು ಇಂದಿನಿಂದಲೇ ತಯಾರಿ ನಡೆಸು ಎಂದು ಮಾಗ೯ದಶ೯ನ ಮಾಡಿದರು.

ಗೇರುಸೊಪ್ಪ ಪ್ರೌಢಶಾಲೆ ಶಿಕ್ಷಕ ವೃಂದವು ವಿದ್ಯಾರ್ಥಿಯನ್ನು ಸನ್ಮಾನಿಸುತ್ತಿರುವುದು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾಕ್ಟರ ಸವಿತಾ ನಾಯಕರವರು ಮಾತನಾಡಿ, ಕಡು ಬಡತನದಲ್ಲಿಯೂ ಇಂತಹ ಸಾಧನೆಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಿರುವ ಭೂಮಿಕಾ ನಮ್ಮ ತಾಲೂಕಿನ ಹೆಮ್ಮೆ ಎಂದರು.ಇನ್ನಷ್ಟು ಸಾಧನೆಯ ಮೂಲಕ ನಿನ್ನ ಕನಸು ಈಡೇರುವಂತಾಗಲಿ ಎಂದು ಶುಭ ಹಾರೈಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಮಾನ್ಯ ಉಪನಿರ್ದೇಶಕರು ಭೂಮಿಕಾ ಮತ್ತು ದೀಕ್ಷಿತರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಂ. ಹೆಗಡೆ,ಶಿಕ್ಷಣಾಧಿಕಾರಿ ಇಮಾಜ ಅಹಮದ್ ನದಾಫ್, ಮುಖ್ಯಾಧ್ಯಾಪಕ ನಾಗರಾಜ ಹೆಗಡೆ, ಶಿಕ್ಷಣ ಸಂಯೋಜಕ ಪ್ರಮೋದ ನಾಯ್ಕ, ಬಿ. ಆರ್. ಪಿ. ಸತೀಶ ನಾಯ್ಕ, ಸಿ.ಆರ್.ಪಿ.ರತ್ನಾಕರ ದೇಶಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

ಹೊನ್ನಾವರ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಆರ್.ಟಿ.ನಾಯ್ಕ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕರವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಭೂಮಿಕಾ ನಾಯ್ಕ ರವರಿಗೆ ಐದು ಸಾವಿರ ರೂಪಾಯಿಗಳ ಚೆಕ್ ನೀಡಿ ಗೌರವಿಸಿದರು.

ಸತತ ಪರಿಶ್ರಮದ ಮೂಲಕ ಗೇರುಸೊಪ್ಪ ಸರಕಾರಿ ಪ್ರೌಢಶಾಲೆಯ ಗ್ರಾಮೀಣ ಪ್ರತಿಭೆಯೊಂದು ಕೋರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಎಸ್.ಎಸ್.ಎಲ್.ಸಿ.ಯಲ್ಲಿ ಇತಿಹಾಸ ನಿಮಿ೯ಸಿರುತ್ತಾಳೆ. ಐಎಎಸ್ ಮಾಡಿ ಜಿಲ್ಲಾಧಿಕಾರಿ ಆಗುವ ಕನಸನ್ನು ಹೊತ್ತ ಕುಮಾರಿ ಭೂಮಿಕಾ ಮತ್ತು ಕುಮಾರಿ ದೀಕ್ಷಿತಾ ಇವರು ಸ್ವಪ್ರಯತ್ನದ ಮೂಲಕ ಓದಿನ ಕಿಚ್ಚನ್ನು ರೂಡಿಸಿಕೊಂಡು, ಗುರಿಯೆಡೆಗೆ ಸಾಗಿ ಸಾಧನೆ ಮಾಡಿಲಿ. ಅವರು ಬಯಸಿದ್ದೆಲ್ಲ ಈಡೇರಲಿ ಎಂದು ಹಾರೈಸೋಣ.

ಭೂಮಿಕಾಳ ಮನೆಗೆ ಭೇಟಿ ನೀಡಿ ಗೌರವಿಸಿದ ಡಿ.ಡಿ.ಪಿ.ಐ. ಹರೀಶ ಗಾಂವಕರ…, ಜಿಲ್ಲಾಧಿಕಾರಿಯಾಗುವ ಕನಸಿಗೆ ಪ್ರೋತ್ಸಾಹ… ಭೂಮಿಕಾಳ ಮನದಾಳದ ಮಾತು… ವೀಕ್ಷಿಸಲು ಈ ವಿಡಿಯೋ ನೋಡಿ…

ಪಿ.ಆರ್.ನಾಯ್ಕ.ಹೊಳೆಗದ್ದೆ ಕುಮಟಾ.

Exit mobile version