Site icon ಒಡನಾಡಿ

ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಿಂದ ಆಕ್ಸಿಜನ್ ಪ್ಲಾಂಟ್: ಕೊರೊನಾತಂಕದಲ್ಲಿ ದಾಂಡೇಲಿಗರಿಗೆ ಕಾಗದ ಕಂಪನಿಯ ಗಿಪ್ಟ್…

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ಸರಿ ಸುಮಾರು 90 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ನಿರ್ಮಿಸುವ ಮೂಲಕ ಕೊರೊನಾತಂಕದ ಕಾಲದಲ್ಲಿ ದಾಂಡೇಲಿಯ ಜನರಿಗೆ ಅಮೂಲ್ಯವಾದ ಗಿಪ್ಟ್ ನ್ನು ನೀಡಿದ್ದಾರೆ. ಆಮೂಲಕ ಅವರ ಸಾಮಾಜಿಕ ಬದ್ದತೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಚಾಲನೆ ನೀಡುತ್ತಿರುವ ದೇಶಪಾಂಡೆ

ದಾಂಡೇಲಿಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣಗೊಂಡ ಈ ಆಕ್ಸಿಜನ್ ಉತ್ಪಾದನಾ ಘಟಕವನ್ನು ಶಾಸಕ ಆರ್.ವಿ. ದೇಶಪಾಂಡೆಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಂಪನಿಯ ಮಾಲಕರಾದ ಎಸ್.ಕೆ. ಬಂಗೂರ್ ಹಾಗೂ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ರವರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು ಕೊರೊನಾ ಸಂದರ್ಭದಲ್ಲಿ ಕಾಗದ ಕಂಪನಿ ಹಲವಾರು ಜನಸೇವಾ ಕಾರ್ಯಗಳನ್ನು ಮಾಡಿದೆ. ಅವುಗಳಲ್ಲಿ ಈ ಆಕ್ಸಿಜನ್ ಉತ್ಪಾದನಾ ಘಟಕ ಬಹಳ ಅಮೂಲ್ಯವಾದುದು. ಇದು ಪ್ರಾಣ ಉಳಿಸುವಂತಹ ಕಾರ್ಯವಾಗಿದೆ. ಪುಣ್ಯದ ಕಾರ್ಯವಾಗಿದೆ. ಕೊರೊನಾ ಸಂದರ್ಭದಲ್ಲಿ ಇದು ಬಹಳ ಪ್ರಯೋಜನಕಾರಿಯಾಗಲಿದೆ. ಹಲವು ಜನರ ಜೀವ ಉಳಿಸಲಿದೆ ಎಂದರು.

ಆಕ್ಸಿಜನ್ ಉತ್ಪಾದನಾ ಘಟಕ

ಅತ್ಯಾದುನಿಕ ತಂತ್ರಜ್ಞಾನದಿಂದ ನಿರ್ಮಿಸಲ್ಪಟ್ಟಿರುವ ಈ ಆಕ್ಸಿಜನ ಪ್ಲಾಂಟ್ ಆಸ್ಪತ್ರೆಯ 50 ಕ್ಕೂ ಹೆಚ್ಚು ಹಾಸಿಗೆಗಳಿಗೆ ನೇರವಾಗಿ ಆಕ್ಸಿಜನ್ ತಲುಪಿಸಲಿದೆ. ಕಂಪನಿಯ ಈ ಸಾಮಾಜಿಕ ಸೇವೆ ರಾಜ್ಯದ ಉದ್ಯಮಗಳಿಗೆ ಮಾದರಿಯಾದುದು. ಇದರ ಸದುಪಯೋಗ ಈ ಭಾಗದ ಜನರಿಗಾಗಲಿದೆ ಎಂದರು.

ಕಾರ್ಯಕ್ರಮದ ವಿಡಿಯೋ ನೋಡಿ….

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಗದ ಕಂಪನಿಯ ಕಾರ್ಯನಿರ್ವಾಹಕ  ನಿರ್ದೇಶಕ ರಾಜೇಂದ್ರ ಜೈನ್ ರವರು ಈ ಆಕ್ಸಿಜನ್ ಉತ್ಪಾದನಾ ಘಟಕ  ಪ್ರಾರಂಭಿಸಲು ನಮ್ಮ  ಮನವಿಗೆ ಕಂಪನಿಯ ಮಾಲಕರಾದ  ಎಸ್.ಕೆ. ಬಂಗೂರವರು ಸಮ್ಮತಿಸಿದರು.  ಆರ್.ವಿ. ದೇಶಪಾಂಡೆ ಯವರೂ ಸಹ ಕಂಪನಿಯ ಮಾಲಕರ ಹತ್ತಿರ ಮಾತನಾಡಿ  ಎಲ್ಲ ರೀತಿಯ ಸಹಕಾರ ನೀಡಿದರು. ಕೊರೊನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದಾಗಿ ಹಲವರು ಸಾವನ್ನಪಿರುವುದನ್ನು ಮನಗಂಡು ಈ ಘಟಕ ಪ್ರಾರಂಭಿಸಲಾಗಿದೆ. ದಾಂಡೇಲಿಯಲ್ಲಿ ಇದೀಗ ಭಾಗಶಹ ವೈದ್ಯಕೀಯ ಸೌಲಭ್ಯ ದೊರೆಯುವಂತಾಗಿದ್ದು, ಕಾಗದ ಕಂಪನಿಯೂ ಯಾವತ್ತೂ ಜನಹಿತ ಕಾರ್ಯಗಳಿಗೆ ಬದ್ದವಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಕಾಗದ ಕಂಪನಿಯ ತಾಂತ್ರಿಕ ವಿಭಾಗದ ಅಧ್ಯಕ್ಷ ಬಿ.ಎಚ್. ರಾಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್. ಹೆಗಡೆ, ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಪ್ರಸಾದ, ತಹಶೀಲ್ದಾರ ಶೇಲೇಶ ಪರಮಾನಂದ, ಪೌರಾಯುಕ್ತ ರಾಜಾರಾಮ ಪವಾರ್, ಡಿ.ವೈ.ಎಸ್.ಪಿ. ಕೆ.ಎಲ್ ಗಣೇಶ, ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಜಿ. ಗಿರಿರಾಜ , ರಾಜೇಶ ತಿವಾರಿ ಮುಂತಾದವರಿದ್ದರು.

ನಗರಸಭಾ ಸದಸ್ಯರು, ನಗರದ ಗಣ್ಯರು, ಕಂಪನಿಯ ಸಿಬ್ಬಂದಿಗಳು ಭಾಗವಹಿಸಿದ್ದರು.

Exit mobile version