Site icon ಒಡನಾಡಿ

ದಾಂಡೇಲಿಯಲ್ಲಿ ಮೊಸಳೆಗಳಿಗೊಂದು ಉದ್ಯಾನವನ… ರಾಜ್ಯದ ಮೊಟ್ಟ ಮೊದಲ ಕ್ರೊಕೊಡೈಲ್ ಪಾರ್ಕ್

ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ತಟದಲ್ಲಿ (ದಾಂಡೇಲಪ್ಪ ದೇವಸ್ಥಾನದ ಎದುರು) ವಿಶೇಷ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಕ್ರೊಕೋಡೈಲ್ ಪಾರ್ಕ ನಿರ್ಮಾಣಗೊಂಡಿದ್ದು, ಇದು ದೇಶದ ಎರಡನೆಯ ಹಾಗೂ ರಾಜ್ಯ ಮೊಟ್ಟ ಮೊದಲ ಕ್ರೊಕೊಡೈಲ್ ಪಾರ್ಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರ ಪ್ರಯತ್ನದ ಫಲವಾಗಿ, ಪ್ರವಾಸೋದ್ಯಮ ಇಲಾಖೆಯ ಸರಿ ಸುಮಾರು 3 ಕೋಟಿ ರು.ಗಳ ಅನುದಾನದಲ್ಲಿ, ಲೋಕೋಪಯೋಗಿ ಇಲಾಖೆಯ ನಿರ್ವಹಣೆಯಲ್ಲಿ, ಗುತ್ತಿಗೆದಾರರಾದ ಜಯಶಂಕರ ಶೆಟ್ಟಿ, ಹಾಗೂ ನಾರಾಯಣ ಹೆಗಡೆಯವರ ಸಾರಥ್ಯದಲ್ಲಿ ನಿರ್ಮಾಣಗೊಂಡ ಈ ಉದ್ಯಾನವನ ಈಗಾಗಗಲೇ ಬಹುಪಾಲು ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನದಲ್ಲಿ ಲೋಕಾರ್ಪಣೆಗೊಂಡು ಜನ ಬಳಕೆಗೆ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಈ ಕ್ರೊಕೊಡೈಲ ಪಾರ್ಕ ದಾಂಡೇಲಿಯ ಪ್ರವಾಸೋದ್ಯಮಕ್ಕೊಂದು ಕಳೆ ತರಲಿದೆ, ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಸಲಿದೆ, ಈ ಭಾಗದ ಪ್ರವಾಸೋದ್ಯಮದ ಆಕರ್ಷಣೆಯ ತಾಣವಾಗಿ ಬೆಳೆಯಲಿದೆ ಎಂದೇ ಹೇಳಲಾಗುತ್ತಿದೆ.

ಸತ್ಪುರುಷ ದಾಂಡೇಲಪ್ಪ ದೇವಸ್ಥಾನ

ದಾಂಡೇಲಿಯಲ್ಲ್ಯಾಕೆ ಕ್ರೊಕೊಡೈಲ್ ಪಾರ್ಕ: ದಾಂಡೇಲಿಯ ಕಾಳಿನದಿಯ ಹಾಲಮಡ್ಡಿ ಬಳಿಯಲ್ಲಿ ಮಾನವ ಸ್ನೇಹಿ ಮೊಸಳೆಗಳಿರುವುದು ಹಳೆಯ ಮಾತು. ಇಲ್ಲಿರುವ ನೂರಾರು ಮೊಸಳೆಗಳು ಗುಂಪು ಗುಂಪಾಗಿ ಇದೇ ಕಾಳಿ ನದಿ ದಂಡೆಯಲ್ಲಿ ಬಿಸಿಲಿಗೆ ಮೈ ಆನಿಸಿ ಮಲಗಿಕೊಂಡಿರುವ ದೃಷ್ಯ ನೋಡಲು ಭಯಾನಕವೆನಿಸಿದರೂ ಮನಸ್ಸಿಗೆ ಮುದನೀಡುವಂತಿರುತ್ತವೆ. ದಂಡೆಯಲ್ಲಿ ಮಲಗಿಕೊಂಡಿರುವ ಜೊತೆಗೆ, ನದಿಯಲ್ಲಿ ಓಡಾಡುವ ಇವುಗಳ ಚಲನೆ, ಅಲ್ಲೇ ದಂಡೆಯಲ್ಲಿ ಬಿಲ ತೆಗೆದು ಮೊಟ್ಟೆಯಿಡುಸವ ಅಪರೂಪದ ದೃಷ್ಯ, ಆಗಾಗ ಜನವಸತಿ ಪ್ರದೇಶದಲ್ಲಿ ಓಡಾಟ ಇವೆಲ್ಲವೂ ದಾಂಡೇಲಿಗರಿಗೆ ಸಾಮಾನ್ಯವೆನಿಸಿದರೂ ಹೊರ ಊರಿನವರಿಗೆ ಇದು ಬಹಳವೇ ವಿಶೇಷವಾಗಿರುತ್ತದೆ. ಕೆಲವೊಮ್ಮೆ ಮೊಸಳೆಗಳ ಓಡಾಟ ನಂಬಲಸಾದ್ಯವೂ ಎನಿಸುತ್ತವೆ. ಹೀಗೆ ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿರುವ ಮೊಸಳೆಗಳ ವೀಕ್ಷಣೆಗೆ ಆಗಲೇ ಜನ ಬರುತ್ತಿದ್ದರು. ಖಾಸಗಿಯವರು ಮೊಸಳೆ ತೋರಿಸಿ ಹಣವನ್ನೂ ಮಾಡುತ್ತಿದ್ದರು. ಈ ವಿಷಯ ಅಂದು ಪ್ರವಾಸೋದ್ಯಮ ಸಚಿವರಿದ್ದ ಆರ್.ವಿ. ದೇಶಪಾಂಡೆಯವರ ಗಮನಕ್ಕೆ ಬಂದಾಗ ಅವರು ಇಲ್ಲೊಂದು ಮೊಸಳೆ ಪಾರ್ಕನ್ನೇ ನಿರ್ಮಿಸಿ ಇನಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿರ್ಧಾರಕ್ಕೆ ಬಂದರು. ಯೋಜನಾ ವರದಿ ತಯಾರಿಸಿ ಮೂರು ಕೋಟಿರೂ.ಗಳ ಹಣವನ್ನು ಮಂಜೂರಿ ಮಾಡಿದರು. ಇದೀಗ ಸ್ಥಳೀಯ ಪ್ರವಾಸೋದ್ಯಮಿಗಳ ಒತ್ತಾಸೆಯಂತೆ, ಶಾಸಕ ಆರ್.ವಿ. ದೇಶಪಂಡೆಯವರ ಪ್ರಯತ್ನದ ಫಲವಾಗಿ ಮೊಸಳೆ ಪಾರ್ಕ ಕಳೆಕಟ್ಟಿ ನಿಂತಿದೆ.

ಏನೇನಿದೆ ಈ ಪಾರ್ಕನಲ್ಲಿ : ಸತ್ಪುರುಷ ದಾಂಡೇಲಪ್ಪ ದೇವಸ್ಥಾನದ ಎದುರುಗಡೆಯೇ ನಿರ್ಮಾಣಗೊಂಡಿರುವ ಈ ಮೊಸಳೆ ಪಾರ್ಕನಲ್ಲಿ ಕೇವಲ ಮೊಸಳೆ ವೀಕ್ಷಣೆಯಷ್ಟೇ ಅಲ್ಲ. ಇದರ ಆರಂಭದಲ್ಲಿ ಹಸಿರು ಹುಲ್ಲಿನ ಗಾರ್ಡನ್ ನಿರ್ಮಾಣವಾಗಿದೆ. ಈ ಗಾರ್ಡನ್‍ನಲ್ಲಿ, ಥೇಟ್ ಮೊಸಳೆ, ಜಿಂಕೆ, ಝಿರಾಫೆಗಳನ್ನೇ ಹೋಲುವ ಪ್ರಾಣಿಗಳ ಪ್ರತಿಮೆಗಳು, ಆಸನವ್ಯವಸ್ಥೆಯಿರುವ ಪೆರಾಗೋಲಾ, ಬಹುವರ್ಣದ ಕಾರಂಜಿ, ಗೆಜೆಬೋ, ಮಕ್ಕಳ ಆಟಿಕೆಗನುಕೂಲವಾಗುವ ಸೆಂಡ್ ಫಿಟ್ (ಮರಳಿನ ಹೊಂಡ) ಪಾಥ್‍ವೇ, ಭದ್ರತಾ ಹಾಗೂ ಟಿಕೆಟ್ ಕೌಂಟರ್, ಆವರಣ ಗೋಡೆ, ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಇದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಗಾರ್ಡನ್ ದಾಟಿ ಹೋದರೆ ಕಾಳಿ ನದಿ ದಂಡೆಯ ಮೇಲೆ ಸುಂದರವಾದ ವ್ಯೂವ್ ಡೆಕ್ (ವೀಕ್ಷಣಾ ಗೋಪುರ) ಒಂದನ್ನು ನಿರ್ಮಿಸಲಾಗಿದ್ದು ಇಲ್ಲಿ ಮೂರು ವೀಕ್ಷಣಾ ಸ್ಥಳ ಮಾಡಲಾಗಿದೆ. ಇಲ್ಲಿ ನೂರಾರು ಜನರು ನಿಲ್ಲುವ ವ್ಯವಸ್ಥೆಯಿದ್ದು, ಇಲ್ಲಿ ನಿಂತು ನದಿ ದಂಡೆಯಿಂದಾಚೆ ಗುಂಪಾಗಿ ಇರುವ ಮೊಸಳೆಗಳನ್ನು ಯಾವುದೇ ಭಯವಿಲ್ಲದೇ ಸುಲಭದಲ್ಲಿ ವೀಕ್ಷಿಸಬಹುದಾಗಿದೆ. ಈ ವ್ಯೂವ್ ಡೆಕ್‍ಗೆ ಮೇಲ್ಛಾವಣಿ ಅವಶ್ಯವಿದ್ದು, ಗುತ್ತಿಗೆದಾರರು ಹೆಚ್ಚುವರಿ ಹಣವನ್ನು ಇಲಾಖೆ ನೀಡಬಹುದೆಂಬ ಭರವಸೆಯಲ್ಲಿ ಅದನ್ನೂ ಮಾಡಿಸುತ್ತಿದ್ದಾರೆ. ಒಟ್ಟಾರೆ ಈ ಕ್ರೊಕೊಡೈಲ್ ಪಾರ್ಕ ದಾಂಡೇಲಿ ಪ್ವಾಸೋದ್ಯಮಕ್ಕೆ ಒಂದು ಬಲವಾಗಲಿದೆ. ಹೊರ ಪ್ರವಾಸಿಗರ ಜೊತೆಗೆ ಸ್ಥಳೀಯ ಜನರಿಗೂ ಇದೊಂದು ವಿಹಾರದಾಮದಂತಾಗಲಿದೆ.

ಒಂದೆರಡು ಕೊರತೆ: ಇಲ್ಲಿ ಸುಂದರವಾದ ಮೊಸಳೆ ಪಾರ್ಕ ಏನೋ ನಿರ್ಮಾಣವಾಗಿದೆ. ಆದರೆ ಇಲ್ಲಿ ಕುಡಿಯುವ ನೀರಿನ ಹಾಗೂ ಇಲ್ಲಿಯ ಗಿಡಗಳಿಗೆ ಅವಶ್ಯವಿರುವಂತಹ ನೀರಿನ ಸೌಲಭ್ಯವಿಲ್ಲ. ನದಿ ನೀರಿನ ಬಳಕೆ ಸಾದ್ಯವಾಗುತ್ತಿಲ್ಲ. ಜೊತೆಗೆ ವಿದ್ಯುತ್ ಸಂಪರ್ಕದ ಸಮಸ್ಯೆಯೂ ಇದೆ. ಸದ್ಯ ಗುತ್ತಿಗೆದಾರರು ತಾತ್ಕ್ಕಾಲಿಕವಾಗಿ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡಿರುವರಾದರೂ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ರಾಜ್ಯದ ಮೊದಲ ಮೊಸಳೆ ಪಾರ್ಕ: ಎಲ್ಲದರ ಪಾರ್ಕ ಮಾಡಬಹುದು. ಆದರೆ ಮೊಸಳೆ ಪಾರ್ಕ ಮಾಡುವುದು ಬಹಳ ಸಾಹಸದ ಕೆಲಸ. ಮೊಸಳೆ ಎಂದರೆ ಎಲ್ಲರಲ್ಲೂ ಭಯಾನಕತೆಯಿದೆ. ಅಂತಹ ಭಯಾನಕ ಪ್ರಾಣಿಗೊಂದು ಪಾರ್ಕ ಮಾಡುವುದು ಒಂದು ಸಾಹಸವೇ ಸರಿ. ದೇಶದಲ್ಲಿ ತಮಿಳುನಾಡಿನಲ್ಲೊಂದೊ ಮೊಸಳೆ ಪಾರ್ಕ ಇದೆ. ಅದರ ನಂತರ ನಿರ್ಮಾಣವಾಗಿರುವುದು ದಾಂಡೇಲಯಲ್ಲಿ. ದಾಂಡೆಲಿಯಲ್ಲಿ ನಿರ್ಮಾನಗೊಂಡಿರುವ ಈ ಮೊಸಳೆ ಪಾರ್ಕ ದೇಶದಲ್ಲಿ ಎರಡನೆಯಾಗಿದ್ದರೆ, ರಾಜ್ಯದಲ್ಲಿ ಮೊಟ್ಟ ಮೊದಲನೆಯಾಗಿದೆ. ಈ ಹೆಗ್ಗಳಿಕೆ ದಾಂಡೇಲಿ ಮೊಸಳೆ ಪಾರ್ಕಿಗೆ ಸಲ್ಲುತ್ತದೆ.

ಪ್ರವಾಸೋದ್ಯಮದ ಅಭಿವೃದ್ದಿಗಾಗಿ…
ದಾಂಡೇಲಿಯನ್ನು ಪ್ರವಾಸೋದ್ಯಮ ನಗರವನ್ನಾಗಿ ಅಭಿವೃದ್ದಿ ಪಡಿಸಬೇಕೆಂಬ ಮುನ್ನೋಟವನ್ನಿಟ್ಟುಕೊಂಡು ಹಲವು ಯೋಜನೆಗಳನ್ನು ತಂದಿದ್ದೇನೆ. ಪ್ರವಾಸೋದ್ಯಮ ಸಚಿವನಾಗಿದ್ದಾಗ ಹಲವು ಕೊಡುಗೆ ನೀಡಿದ್ದೇನೆ. ಮೊಸಳೆ ಪಾರ್ಕ ಕೂಡಾ ಅದರ ಒಂದು ಭಾಗ. ಈ ಮೊಸಳೆ ಪಾರ್ಕ ರಾಜ್ಯದ ಮೊಟ್ಟ ಮೊದಲ ಮೊಸಳೆ ಪಾರ್ಕ ಆಗಿದ್ದು, ಇದು ದಾಂಡೇಲಿಯ ಹೆಮ್ಮೆಯಾಗಲಿದೆ ಎಂದಿದ್ದಾರೆ ಶಾಸಕ ಆರ.ವಿ. ದೇಶಪಾಂಡೆ.

ಮೊಸಳೆ ಪಾರ್ಕನ ವಿಹಂಗಮ ನೋಟ ವಿಡಿಯೋದಲ್ಲಿ ನಿಮಗಾಗಿ…

Exit mobile version