Site icon ಒಡನಾಡಿ

ನಮ್ಮಕ್ಳು…. ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ-1

ಮಕ್ಕಳೇ…, ಎಲ್ಲರೂ ಚೆನ್ನಾಗಿದ್ದೀರಿ ತಾನೆ ? ನೀವು ಚೆನ್ನಾಗಿದ್ದರೆ ನಾವು ಚೆನ್ನಾಗಿದ್ದಾಂಗೆ ಅಲ್ಲವೇ. ಆದರೆ ನೀವು ಚೆನ್ನಾಗಿರಬೇಕು ಏಕೆಂದರೆ ನಿಮ್ಮಿಂದಲೇ ನಮ್ಮ ಹೊಟ್ಟೆ, ಬಟ್ಟೆ, ಕಟ್ಟೆ…ಎಲ್ಲವೂ..

ನೋಡಿ ಮಕ್ಕಳೇ, ನಾವು ಎಂದೂ ನೋಡದ,ಕೇಳದ ಕೋರೋನಾ ಕಾಯಿಲೆ ಬಂದುಬಿಟ್ಟಿದೆ. ನಾವು ನೀವು ಸೇರಿ ಈ ಕಾಯಿಲೆಯನ್ನ ಓಡಿಸಲೇಬೇಕು. ಹಾಗಾದ್ರೆ ಹೇಗೆ ಓಡಿಸಬೇಕು ಎಂದು ನಾಗರತ್ನ ಕೇಳಿಯೇ ಬಿಟ್ಟಳು.

ನೋಡು ಮರಿ, ಈ ಕಾಯಿಲೆ ಬಗ್ಗೆ ತುಂಬಾ ಎಚ್ಚರಿಕೆವಹಿಸಬೇಕು. ಕಾಯಿಲೆಯ ಯಾವುದೇ ಲಕ್ಷಣ ಕಂಡು ಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನಾವು ಕಡ್ಡಾಯವಾಗಿ ಮಾಸ್ಕ ಧರಿಸಲೇಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹಾರ ಮಾಡಬೇಕು. ಆಗಾಗ ಕೈಯನ್ನು ಸೋಪಿನಿಂದ ತೊಳೆಯಬೇಕು. ಬಿಸಿ ಬಿಸಿ ನೀರನ್ನು ಕುಡಿಯಬೇಕು. ರಸ್ತೆ ಬದಿ ಗೂಡಂಗಡಿಲಿ ಸಿಗುವ ಕುರ್ಕುರೆ, ಬಿಂಗೋ, ಮ್ಯಾಗಿ, ಮಂಚು ಇನ್ನು ಕರಿದ,ಹುರಿದ ಪದಾರ್ಥ ತಿನ್ನಲೇಬಾರದು. ಬಿಸಿಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು.
ಮಕ್ಕಳೇ ಹೊರಗಡೆ ಓಡಾಡುವುದನ್ನು, ಗುಂಪುಗುಂಪಾಗಿ ಆಟ ಆಡುವುದನ್ನು ನಿಲ್ಲಿಸಬೇಕು. ಮದುವೆ, ಮುಂಜಿ, ಜಾತ್ರೆ, ಗಡಿಹಬ್ಬ,ಗಡಿ ಪೂಜೆ , ಕೋಳಿ ಊಟ ಇದಕ್ಕೆಲ್ಲ ವಿದಾಯ ಹೇಳಲೇಬೇಕು. ನಾವೆಲ್ಲ ಹೀಗೆ ಮಾಡೋದ್ರಿಂದ ನಮ್ಮ ರಕ್ಷಣೆ ಜೊತೆಗೆ ನಮ್ಮ ಸುತ್ತ ಮುತ್ತಲಿನ ಪರಿಸರ ಚೆನ್ನಾಗಿರಲು ಸಾಧ್ಯ. ನಾವೆಲ್ಲರೂ ಹಾಗೆ ಮಾಡೋಣವೇ..

ಹಾಗೇ ಮಾಡೋಣ ಎನ್ನುವವರು ಕೈಯೆತ್ತಿರಿ ಎಂದು ಮಾಸ್ತರರು ಹೇಳಿದಾಗ ಸುಬ್ಬು ಕೈ ಎತ್ತಲಿಲ್ಲ. ಅನನ್ಯ ಅರ್ಧ ಕೈ ಮಾತ್ರ ಎತ್ತಿದಳು. ಶರಣನ ಮುಖ ಸಪ್ಪೆಯಾಗಿತ್ತು .ಚರಣ್ ತನ್ನ ಕೈಯಿಂದ ಮುಖ ಮುಚ್ಚಿಕೊಂಡಿದ್ದ.

ಒಂದೊಂದು ಮಕ್ಕಳು ಒಂದೊಂದು ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರುವುದನ್ನು ನೋಡಿದ ಮಾಸ್ತರರಿಗೆ ಯಾಕೋ ಗೊಂದಲವಾಯಿತು. ಆದರೂ ಮಕ್ಕಳಲ್ಲವೇ? ಮಕ್ಕಳೆಂದರೆ ಹಾಗೆ ! ಹಾಗೆ ಇರಬೇಕು ಕೂಡ… ಎಂದು ಮನಸ್ಸಿನಲ್ಲಿ ಅಂದುಕೊಂಡು ಮಕ್ಕಳನ್ನೇ ಕೇಳಿದರಾಯ್ತು ಎಂದು ನಗೆಯಾಡುತ್ತಾ,ಸುಬ್ಬು ಯಾಕೆ ಮಗ ಕೈ ಎತ್ತಲ್ಲಿಲ್ಲ? ಕೋರೋನಾ ಓಡಿಸಲಿಕ್ಕೆ ನಿನಗೆ ಮನಸ್ಸಿಲ್ಲವೋ ಏನು? ನೋಡು ನಿನ್ನ ಗೆಳತಿ ಆರತಿ, ನಾಗಶ್ರೀ, ಸಿಂಚನ, ಕಾರ್ತಿಕ, ವಿನಾಯಕ ಎಲ್ಲರೂ ಕೈ ಎತ್ತಿದ್ದಾರೆ. ನೀನು ಯಾಕೆ ಎತ್ತಲಿಲ್ಲ ಹೇಳು ಮರಿ ಎಂದಾಗ, ಸುಬ್ಬು ಒಂದೇ ಸವನೆ ಅಳಲು ಪ್ರಾರಂಭಿಸಿದ. ಬಿಕ್ಕಿಬಿಕ್ಕಿ ಅಳುತ್ತಿರುವಾಗ ಮೂಗಿನಲ್ಲಿ ಸಿಂಬಳ ಇಳಿಯುತ್ತಿತ್ತು. ಹಾಗೆ ಕೈಯಿಂದ ತಿಕ್ಕಿಕೊಂಡಾಗ ಒಂದು ಮುದ್ದೆ ಸಿಂಬಳ ಕೆಳಗೆ ಬಿತ್ತು. ತಕ್ಷಣ ಆರತಿ ಅಲ್ಲಿಂದ ಎದ್ದು ಓಡಿದಳು. ಉಳಿದವರೆಲ್ಲಾ ಹೋ…. ಎಂದು ನಗತೊಡಗಿದರು. ಮಕ್ಕಳಿಗೆ ಸಮಾಧಾನ ಹೇಳಿ, ಸಿಂಬಳ ಮುದ್ದೆಯನ್ನು ಪೇಪರ್ನಲ್ಲಿ ಒರೆಸಿ ಕಿಡಕಿಯಲ್ಲಿ ಎಸೆದಾಗ ಸುಬ್ಬುವಿನ ಅಳು ನಿಂತಿತು. ನಿಧಾನವಾಗಿ ಅಂಗಿಯಿಂದ ಮತ್ತೊಮ್ಮೆ ಮೂಗನ್ನು ವರೆಸಿಕೊಂಡು , ಸರ್ ಶಾಲೆ ಮೆಟ್ಟಿಲು ಹತ್ತದೆ ಒಂದು ವರ್ಷ ಆಯ್ತು. ನಾವು ಆಡುವ ಆಟ, ಓದಿದ ಪುಸ್ತಕ ಎಲ್ಲ ಮರೆತು ಹೋಯ್ತು. ನನ್ನ ಗೆಳೆಯ ವೆಂಕಟೇಶನನ್ನು ನೋಡಿದೆ ಒಂದು ವರ್ಷ ಆಯ್ತು ಸಾರ್. ಶಾಲೆ ಯಾವಾಗ…..ಯಾವಾಗ ಶುರುವಾಗುತ್ತದೆ…..ಸರ್.

ಶಾಲೆ ಶುರುವಾಗದಿದ್ದರೆ ನಮಗೇನೂ ತೊಂದರೆ ಇಲ್ಲ. ನಾನು ,ಕಿರಣ, ಶರಣ ದಿನಾಲು ಗಾಳ ಹಾಕುಕೆ ಹೊತ್ರು ಸರ್ . ನೆಂಜುಳಿ ಹಿಡ್ದು ಗಾಳಕೆ ಯೆರಿ ಹಾಕಿಬಿಟ್ರೆ ಸಾಡಿ ಮರಿ ಬಂದು ಕುಟ್ಟಿ ಕುಟ್ಟಿ ಎರೆ ತಿನ್ಕೊಂಡು ಹೋಗ್ತದೆ.ಒಂದೊಂದ್ಸಲ ಗಾಳ ಒಕ್ಕೊಂಡು ಕಲ್ಲಡಿಗೆ ಹೋಗ್ಬಿಟ್ರೆ ನಾವು ಒಗದಾಡಿ,ಒಗದಾಡಿ ಗಾಳ ತಪ್ಪಿಸಬೇಕು. ಮೊನ್ನೆ ಚರಣ ಗಾಳಕ್ಕೆ ಕೊಳಾವು ಸಿಕ್ಕಿತ್ತು ಸರ್, ನಾವೆಲ್ಲ ಹೆದರಿಕೊಂಡು ಗಾಳದಿಂದ ತಪ್ಪಿಸಲೇ ಇಲ್ಲ .ಕssಡಿಗೆ ಚರಣನ ಅಪ್ಪ ಮಂಜುನಾಥಣ್ಣ ಬಂದು ಗಾಳ ಸೆಡಿ ಹಿಡಿದು ಕೊಳಾವನ್ನು ನೆಲಕ್ಕೆ ಕುಟ್ಟಿ ಕುಟ್ಟಿ ಕೊಂದು ಹಾಕಿ ಗಾಳ ತಪ್ಪಿಸಿಕೊಟ್ಟ ಸಾರ್. ನಾವು ಗಾಳ ಹಾಕು ಜಾಗದಲ್ಲಿ ಮಂಡ್ಲಿಮರಿ ರಾಶಿ ಆದೆ ಸರ್. ನನ್ನ ಗಾಳಕೆ ಐದಾರು ಮಂಡ್ಲಿ ಆದ್ರೂ ಹಿಡಿದೇ ಹಿಡಿತದೆ. ನನ್ನ ಕೈ ಗೌವ್ಲ ಕೈ ಸರ್. ನಾವು ಹನ್ನೆರಡು ಗಂಟೆವರೆಗೂ ಗಾಳಹಾಕಿ ಕssಡಿಗೆ ಮನೆಗೆ ಹೋದರೆ ನಮ್ಮ ಆಬ್ಬಿ ಉಪ್ಪು ,ಹುಳಿ ಹಾಕಿ ಕಟ್ಗೇ ಸಾರು ಮಾಡಿ ಬಡಿಸುತ್ತಾಳೆ. ಶಾಲೆ ಶುರುವಾಗದೆ ಇದ್ರೂ ಚಲೋ ಆಯ್ತು ಸರ್ .ಚಂಜಿಕೆ ಅಪ್ಪ ಕೆಲಸ ಬಿಟ್ಟು ಬರುವಾಗ ತಿಂಬುಕೆ ತಾಕಂಡೆ ಬರ್ತಾ ಎಂದು ಸುಬ್ಬು ತನ್ನ ಗಾಳದ ಕಥೆ ಹೇಳಿಯೇ ಬಿಟ್ಟ. ಪುಸ್ತಕ ಏನಾದ್ರೂ ಓದಿದ್ಯಾ ಅಂತ ಕೇಳಿದ್ರೆ ,ಸರ್ ನನಗೆ ಮಗ್ಗಿ ಬರೋದಿಲ್ಲ .ಹಾಡೆಲ್ಲ ಮತೆ೯ ಹೋಗ್ದೆ.ಎಬಿಸಿಡಿ,ಗಾಳಸೆಡಿ, ಏಡಿಹಿಡಿ,ಕೊಂಬುಮುರಿ,ಕುಕ್ಕೀಲಿ ಹಾಕು ಇದೊಂದೆ ಇಂಗ್ಲೀಷು ಬರ್ತದೆ ಸರ್. ನಮ್ಮ ಕಥಿ ಕೇಳ್ದರೇ ನಿಮ್ಗೆ ಯೆಥಿ.ನಮ್ಮಪ್ಪ ಹೇಳ್ತಿದ್ದ, ಶಾಲೆಗೆ ಹೋಗಿ ಉದ್ಧಾರ ಆದಂಗೆ.ಈ ಕೊರೋನಾ ರೋಗ ಮಕ್ಕಳು ಶಾಲೆಗೆ ಬರದಾಂಗೆ ಮಾಡ್ಬಿಡ್ತು. ಬಾಗಿಲಿ ದೊಡ್ಡ ಆಗಲಿ ಅಂತ ಕಾಯ್ತಿದ್ದೆ.ಇಲ್ಲಂದ್ರೆ ಅವನನ್ನು ಕರ್ಕೊಂಡು ಕೆಲ್ಸಕೆ ಹೋಗ್ತಿದ್ದೆ ಎಂದು ಹೇಳ್ತಿದ್ದ….. ಸರ್………..

ಪಿ.ಆರ್. ನಾಯ್ಕ, ಹೊಳೆಗದ್ದೆ
ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)

Exit mobile version