Site icon ಒಡನಾಡಿ

ಕುಂಚ ಕಲೆಯ ಮೋಡಿಗಾರ ಸಂಜಯ ಗುಡಿಗಾರ

ಕಲ್ಲನ್ನು ಕೆತ್ತಿ ಸುಂದರ  ಸುಂದರ ವಿಗ್ರಹ ಗಳನ್ನು ಮಾಡುವ ಶಿಲ್ಪಕಲೆ, ಬೆಂಡಿನಿಂದ ಬಾಸಿಂಗ, ಹೂ ಹಾರಗಳನ್ನು, ಮಣ್ಣಿನಿಂದ ಗಣಪತಿ ವಿಗ್ರಹ, ದೇವಸ್ಥಾನ, ಮಠಗಳು ಇದ್ದ ಸ್ಥಳಗಳಲ್ಲಿ ತೇರಿನ ಗೆಡ್ಡೆ, ಪಲ್ಲಕ್ಕಿ, ತಟ್ಟಿ ಬರೆಯುವ ಕೆಲಸ, ದಿನ ಬಳಕೆಗೆ ಬೇಕಾಗುವ ಬಾಚಣಿಕೆ, ಕಡಗೋಲು ,ಲಟ್ಟಣಿಗೆ, ಬೀಸಣಿಗೆ, ರೊಟ್ಟಿ ಹಾಕುವ ತೊಟ್ಟಿಗಳು, ಅಲಂಕಾರಿಕ ವಸ್ತುಗಳ ತಯಾರಿಕೆಗಳನ್ನು ತಲೆತಲಾಂತರದಿಂದ ರೂಢಿಸಿಕೊಂಡು ಬಂದಿರುವ ಗುಡಿಗಾರರು ಶ್ರೀಗಂಧ ಕೆತ್ತನೆಯ ಕೆಲಸವನ್ನು ತಮ್ಮ ಕುಲಕಸುಬನ್ನಾಗಿ ಮಾಡಿಕೊಂಡು ದಕ್ಷಿಣ ಭಾರತ ಶೈಲಿಯ ಕುಸುರಿ ಕಲೆ ರೂಢಿಸಿಕೊಂಡು ಕಲಾಕ್ಷೇತ್ರವನ್ನು ಶ್ರೀಮಂತಗೊಳಿಸಿರುತ್ತಾರೆ.  ಅನಾದಿಕಾಲದಿಂದಲೂ ಶ್ರೀಗಂಧದ ಅವಿನಾಭಾವ ಸಂಬಂಧ ಹೊಂದಿ ಶ್ರೇಷ್ಠ ಕಲಾಕೃತಿಯನ್ನು ರೂಪಿಸಿ ಜಗತ್ತಿನಾದ್ಯಂತ ಶ್ರೀಗಂಧವನ್ನು ಬಹುಬೇಡಿಕೆಯ ವಸ್ತುವನ್ನಾಗಿ ಪರಿವರ್ತಿಸಿದರು ಗುಡಿಗಾರರು.

ಚಂದದ ವರ್ಲ ಆರ್ಟನಲ್ಲಿ

 ಕಾಡಿನಲ್ಲಿರುವ ಶ್ರೀಗಂಧವು ಇಡೀ ಕಾಡಿನ ಮೌಲ್ಯವನ್ನು ಹೆಚ್ಚಿಸಿದಂತೆ , ನಾಡಿನಲ್ಲಿರುವ ಗುಡಿಗಾರರು ತಮ್ಮ ಕೈಚಳಕದ  ಕಲಾವಂತಿಕೆಯ ಮೂಲಕ ಜಗತ್ತಿನ ಶ್ರೇಷ್ಠ ವ್ಯಕ್ತಿಗಳನ್ನೆಲ್ಲ ತನ್ನಡೆ ಆಕರ್ಷಿಸುವಂತೆ ಮಾಡಿರುತ್ತಾರೆ. ದಂತ,ಗಂಧದ ಮರದಿಂದ  ಅತ್ಯುತ್ಕ್ರಷ್ಟ ಕಲಾಕೃತಿಯನ್ನು ಸೃಷ್ಟಿಸಿರುವುದು ಗುಡಿಗಾರರ ಅರ್ಪಣ ಮನೋಭಾವ. ಪುರಾಣ ಪುಣ್ಯಕಥೆಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವುದರಿಂದ ಇವರ ಕಲಾವಂತಿಕೆ ವಿಶಿಷ್ಟ ಮಹತ್ವ ಪಡೆದಿದೆ. ರಾಮಾಯಣ, ಮಹಾಭಾರತ, ಭಾಗವತದ ದೃಶ್ಯ ಗಳನ್ನು ಒಂದು ದಂತದ ಅಥವಾ ಗಂಧದ ತುಂಡಿನಿಂದ ಕೆತ್ತಿ ನಿರ್ಮಿಸಿರುವ ಅಪೂರ್ವ ಕಲಾಕೃತಿ ಇತಿಹಾಸಪೂರ್ವ ಕಾಲದಿಂದಲೂ ರಾಜರನ್ನು ಮತ್ತು ಸಾಮಾನ್ಯ ಜನರನ್ನು ತನ್ನೆಡೆ  ಆಕರ್ಷಿಸಿ ವೃತ್ತಿ ಬದುಕಿನ ಪಾವಿತ್ರ್ಯತೆಯನ್ನು ಹೆಚ್ಚಿಸಿಕೊಂಡ ಕುಟುಂಬದವರಲ್ಲಿ ಕುಮಟಾದ ದೇವಿದಾಸ ಕುಟುಂಬವು ಒಂದು.  ಅವರ ಕುಟುಂಬದಲ್ಲಿ ಜನಿಸಿದ ಓವ೯ ಚಿತ್ರಕಲಾವಿದರು ಚಿತ್ರ-ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸಿ ಮಕ್ಕಳ ಬದುಕಿನಲ್ಲಿ ಶಾಶ್ವತವಾಗಿ ನೆಲೆನಿಂತು, ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆಗುರುತನ್ನು  ಗುರುತಿಸಿಕೊಂಡವರು ಶ್ರೀ ವಲಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಸಂಜಯ  ಗುಡಿಗಾರ.

ಜೇಡಿ ಮಣ್ಣಿನ ದುರ್ಗಾದೇವಿಯ ತಯಾರಿಯಲ್ಲಿ

 ಸಂಜೀವ…. ಕಲಾರಾಧನೆಯ ಮೂಲಕ ನಾಡಿನ ತುಂಬೆಲ್ಲ ಪರಿಚಿತ ಹೆಸರು. ಚಿತ್ರಕ್ಕೆ ಜೀವತುಂಬುವ ಬಣ್ಣಗಾರ, ಚಿತ್ರಗಾರ. ತಾನು ಬಿಡಿಸಿದ ಚಿತ್ರಕ್ಕೆ ಜೀವತುಂಬುವ ಶಕ್ತಿವಂತ, ಶ್ರದ್ಧಾವಂತ. ಅವರ ಹೆಸರಿನೊಂದಿಗೆ ಗುಡಿಗಾರಿಕೆ ಸೇರಿಕೊಂಡಿದೆ. ತಾತ ಮುತ್ತಾತನ ಕಾಲದಿಂದಲೂ ಚಿತ್ರಕಲಾವಿದರ ಕುಟುಂಬದಲ್ಲಿ ಜನಿಸಿದ ಸಂಜೀವ ಮಕ್ಕಳೊಂದಿಗೆ ಮಕ್ಕಳಾಗಿ, ಮಕ್ಕಳೊಟ್ಟಿಗೆ ಇದ್ದು ಚಿತ್ರಕ್ಕೆ ಜೀವತುಂಬುವ ಒಬ್ಬ ಅದ್ಭುತ ಕಲಾವಿದ. ಮಕ್ಕಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಿ ಆ ಕಲೆಯಲ್ಲಿ  ಮುಂದುವರಿದು ಜೀವನ ನಿವ೯ಹಣೆಗೆ ದಾರಿ ತೋರಿಸಿದ ಪ್ರಬುದ್ಧ ಕಲಾವಿದ.

ಸಂಜಯರವರ ಪೆನ್ಸಿಲ್ ಆರ್ಟ

ಸಂಜೀವ ಗುಡಿಗಾರರು ಹುಟ್ಟಿದ್ದು ಕುಮಟಾದ ಗುಡಿಗಾರಗಲ್ಲಿಯಲ್ಲಿ. ತಂದೆ ದೇವಿದಾಸ ಗುಡಿಗಾರ,ತಾಯಿ ಸುಮನಾರವರಿಗೆ  ಮುದ್ದಿನ ಮಗನಾಗಿ 1966 ರಲ್ಲಿ ಜನಿಸಿದರು. ಕಾರವಾರದ ಟಾಗೋರ್ ಸ್ಕೂಲಿನಲ್ಲಿ ಎರಡು ವರ್ಷದ ಡಿಎಂಸಿ ಚಿತ್ರಕಲಾ ಪದವಿಯನ್ನು, ಮೂರುವರ್ಷದ ವರ್ಷದ ಆರ್ಟ್ಸ್ ಮಾಸ್ಟರ್ ಪದವಿ ಪಡೆದು 1991ರಲ್ಲಿ ಕರಾವಳಿ ಪ್ರೌಢಶಾಲೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿ  ನಂತರ 2004 ರಿಂದ ಶ್ರೀ ವಲಿ ಪ್ರೌಢಶಾಲೆ ಚಿತ್ರಾಪುರದಲ್ಲಿ ಚಿತ್ರಕಲಾ ಶಿಕ್ಷಕರಾಗಿ ನೇಮಕರಾದ ಮೇಲೆ ಅವರ ಜೀವನ ಚಕ್ರ ಏರುಗತಿಯಲ್ಲಿ ತಿರುಗಿತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರಾರಂಭದಲ್ಲಿ ಗೀಚುವುದು,ಸೊನ್ನೆ ಸುತ್ತುವುದು, ಗೆರೆ ಎಳೆಯುವುದರ ಮೂಲಕ ಕಲಿಕೆಯಲ್ಲಿ ಆಸಕ್ತಿ ಮೂಡಿಸಿದರು. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನಹರಿಸಿ ಅವರ ಬದುಕಿಗೆ ಆಸರೆಯಾಗಬಲ್ಲ ಎಲೆ, ಬಳ್ಳಿಗಳ  ಚಿತ್ರ ಬಿಡಿಸಿ ಅವರ ಬದುಕಿನಲ್ಲಿ ಬಣ್ಣ ತುಂಬಲು ಪ್ರಯತ್ನಿಸಿದರು.ಇದರ ಪರಿಣಾಮವೇ ಅವರಿಂದ ಕಲಿತ ಅನೇಕ ವಿದ್ಯಾರ್ಥಿಗಳು ಸ್ವತಂತ್ರವಾಗಿ ತಮ್ಮ ಬದುಕಿನಲ್ಲಿ ಬಣ್ಣ ತುಂಬಿಸಿಕೊಳ್ಳುತ್ತಿದ್ದಾರೆ.

ಅವರ ಶಾಲೆಯಲ್ಲಿ ರೂಪಗೊಂಡ ಆರ್ಟ ಗ್ಯಾಲರಿ

ರಾಜ್ಯ ಪಠ್ಯಪುಸ್ತಕ ಸಂಘ ಇವರ ಪ್ರತಿಭೆಯನ್ನು ಮೆಚ್ಚಿ ಶಾಲಾ ಪಠ್ಯ ಪುಸ್ತಕ ರಚನೆಯಲ್ಲಿ ಚಿತ್ರಕಲಾ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಾಡಿ ಅನೇಕ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಒಮ್ಮೆ ಬೆಂಗಳೂರಿಗೆ ಪುಸ್ತಕಕ್ಕೆ ಚಿತ್ರ ಬಿಡಿಸಲು ಹೋದಾಗ ಅಲ್ಲಿಯ ಆರ್ಟ್ ಗ್ಯಾಲರಿಯನ್ನು ನೋಡಿ ನಮ್ಮ ಶಾಲೆಯಲ್ಲಿಯೂ ಇಂತಹ ಆರ್ಟ್ ಗ್ಯಾಲರಿ ಅವಶ್ಯಕತೆಯಿದೆಯೆಂದು ತಿಳಿದು ಶಾಲಾ ಸಮಿತಿಯವರೊಂದಿಗೆ ಇದನ್ನು ನಿರ್ಮಿಸಿಕೊಡಿ ಎಂದು ವಿನಂತಿಸಿದಾಗ ಮೂರು ಲಕ್ಷಕ್ಕೂ ಅಧಿಕ ಖರ್ಚು ಬರಿಸಿ ಅತ್ಯುತ್ತಮ ಕಲಾಕುಸುಮ ಆರ್ಟ್ ಗ್ಯಾಲರಿ ನಿರ್ಮಿಸಿದರು. ಇದು ಮಕ್ಕಳ ಕಲಿಕೆಗೆ ತುಂಬಾ ಪರಿಣಾಮ ಬೀರಿದೆ ನನ್ನ ಕನಸಿನಂತೆ ಇದನ್ನು ನಿರ್ಮಿಸಲಾಗಿದೆ ಎಂದು ಸಂಜೀವ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸಂಜಯ ಗುಡಿಗಾರರ ವಿವಿಧ ಕಲಾಕೃತಿಗಳು

ಸಂಜೀವ  ಎಂದರೆ “ತಿರುಗಿ ಜೀವ ಕೊಡುವ” ಈ ಹೆಸರಿಗೆ ತಕ್ಕಂತೆ ಚಿತ್ರಕ್ಕೆ ಜೀವ ತುಂಬುವ ಕೆಲಸದಲ್ಲಿ ನಿರತರಾಗಿ ಶ್ರೀ ವಲಿ ಪ್ರೌಢಶಾಲಾ  ಇತಿಹಾಸದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ  ಸ್ಪರ್ಧೆಯಲ್ಲಿ  11 ಬಾರಿ ಭಾಗವಹಿಸಿ ಆರು ಬಾರಿ ಪ್ರಶಸ್ತಿ ಪಡೆದ ಏಕೈಕ ಶಾಲೆ ಇದಾಗಿದೆ. ಇವರ ಕಲಾ ಪ್ರತಿಭೆಯನ್ನು ಮೆಚ್ಚಿ 2002 ರಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, 2008 ರಲ್ಲಿ ರೋಟರಿ ಕ್ಲಬ್ ಪ್ರಶಸ್ತಿ, 2014 ರಲ್ಲಿ ಭಟ್ಕಳ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡಿರುತ್ತಾರೆ.

1 / 10

 ಎಲೆಮರೆಯ ಕಾಯಿಯಂತೆ ಕರ್ತವ್ಯವೇ ದೇವರೆಂದು ತಿಳಿದು ಮಕ್ಕಳ ಒಳಿತಿಗಾಗಿ ಸದಾ ಮಿಡಿಯುವ ಹೃದಯ ವೈಶಾಲ್ಯತೆ ಹೊ0ದಿದ ಸಂಜೀವ ರನ್ನು ಇಲಾಖೆ ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಸಂಜೀವರು ಪತ್ನಿ ಶಿಲ್ಪಾ, ಮಕ್ಕಳಾದ  ಗೌತಮಿ ಮತ್ತು ಅನ್ವಿತಾ ರೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ .ಮಕ್ಕಳ ಬಾಳಿಗೆ ಬೆಳಕಾದ ಸಂಜೀವ ಇನ್ನಷ್ಟು ಪ್ರಜ್ವಲಿಸಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ.

ಲೇಖಕರು- ಪಿ.ಆರ್. ನಾಯ್ಕ, ಹೊಳೆಗದ್ದೆ

Exit mobile version