Site icon ಒಡನಾಡಿ

ವಚನ-ವಿಜ್ಞಾನ : ಪುಟ್ಟು ಕುಲಕರ್ಣಿಯವರ ಕಾವ್ಯ

1
ಸಾವ ತೊಟ್ಟಿಲಿನಲ್ಲಿ ಜೀವ ಶಿಶುವಿರಿಸಿ
ಆಗಸದ ತುಂಬೆಲ್ಲ ತೂಗಿ ತೂಗಿ
ಕಟ್ಟಿರುವ ಗುಬ್ಬಿಚಿಟ್ಟಿನ ತುಂಬ ಹೆಣೆದ ಮಣಿ ತಾರೆ-ಮಾಲೆ
ಚಂದ್ರಕಾಂತಿಯ ಗುಂಡು, ಹೊಳೆಹಿಳೆವ ಸೂರ್ಯ-ರತ್ನ
ಹಗಲು-ಇರುಳುಗಳ ಹಗ್ಗಕ್ಕೆ ಜರಿಯ ಲೇಪ
ಭರವಸೆಯ ಲಾಲಿ-ಜೋಗುಳದಲ್ಲಿ ಕಂಡ ಕಿರಣ
ಅರಳಗಣ್ಣಿಗೆ ಕಂಡು ಹಿಡಿಯ ಹೊರಟಿಹ ಬೆರಳು-ಮುಷ್ಠಿ
ಬೊಚ್ಚು ಬಾಯಿಗೆ ಸಿಕ್ಕರೂ ಜೊಲ್ಲು
ದಕ್ಕದಿದ್ದರೂ ಸುರಿದಿತ್ತು ಸತತ ಸೊಲ್ಲು
ತೂಗುತಿಹ ಕರವೆಲ್ಲೋ ವಿಜ್ಞಾನ-ದಾಸ?

2
ಸಂಗಮಿಸಬಲ್ಲವನ ಅಂಗ ವಿಚ್ಛೇದಿಸುತ
ರಂಗು-ರಂಗಿನಲಿ ಭಂಗಿಗೊಳಿಸಿದರಯ್ಯ
ಬಯಲು ಬಯಲಿನಲೆಲ್ಲ ವಿಷದ ಗಾಳಿಯ ತುಂಬಿ
ಮೊಗ್ಗುಗಳ ಸುಟ್ಟು ದರ್ಶನಕೆ ಇಟ್ಟರಯ್ಯ
ಮನ-ಮನವ ಮುರಿದು ಮನೆಯ ಕಟ್ಟಲೆಳಸುತಲೀಗ
ಅಡಿಪಾಯವನು ಸಹಿತ ಹುಡಿಗುಟ್ಟಿಸುತ ನಡೆದರಯ್ಯ
ಬೇರಿನಾ ಸಾರವದು ಬೇಡವೆಂದೆಂದು, ಕತ್ತರಿಸಿ ಕತ್ತರಿಸಿ
ಕೃತಕ-ಹೂಗಳ ಮಾಲೆ , ಹುಸಿಯ ಪರಿಮಳ ಸುರಿಸಿ
ಬಿತ್ತಿರುವ ಭ್ರಾಂತಿಗಿದೋ ಬಂದಿತ್ತು ಪ್ರಳಯ-ತೆನೆಯು
ಸಂಕರದ ಬೀಜಕ್ಕೆ ಶಂಕರನ ಭಾವ ಬರುವದುಂಟೇ ವಿಜ್ಞಾನ-ದಾಸ?

ಪುಟ್ಟು ಕುಲಕರ್ಣಿ

Exit mobile version