Site icon ಒಡನಾಡಿ

ಉಚ್ಛನ್ಯಾಯಾಲಯದ ನ್ಯಾಯದೀಶರಾಗಿ ಭಟ್ಕಳದ ಆರ್. ನಾಗೇಂದ್ರ : ಉನ್ನತ ಹದ್ದೆ ಅಂಕರಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ

ಮಣಿಯದಿಹ ಮನವೊಂದು
ಸಾಧಿಸುವ ಹಠವೊಂದು
ನಿಜದ ನೇರಕೆ
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು’

ವಿ. ಸೀತಾರಾಮಯ್ಯನವರ ಈ ಕವನದ ಸಾಲುಗಳು ಯಾವುದೇ ವ್ಯಕ್ತಿ ಸಾಧಿಸುವ ಛಲದೊಂದಿಗೆ ಮುನ್ನಡೆದರೆ ಖಂಡಿತ ಅದರಲ್ಲಿ ಯಶಸ್ಸುಗಳಿಸಬಹುದು ಎಂಬುದನ್ನು ಸಾಕ್ಷೀಕರಿಸುವಂತಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೋರ್ವ ತನ್ನ ಸಾಧನೆಯ ಮೂಲಕ ಅತ್ಯುನ್ನತ ಸ್ಥಾನಕ್ಕೇರಿ ಹೈಕೋರ್ಟ್ ನ್ಯಾಯಾಧೀಶರಾದವರು ಭಟ್ಕಳ ಮೂಲದ ಆರ್. ನಾಗೇಂದ್ರ ನಾಯ್ಕರವರು. ತಂದೆ ರಾಮಚಂದ್ರ ನಾಯ್ಕರವರು ಪ್ರೌಢಶಾಲೆಯ ಜವಾನರಾಗಿ ಸ್ವಂತ ಪರಿಶ್ರಮದ ಮೂಲಕ ತಮ್ಮ ದುಡಿತದ ಬಹುಪಾಲನ್ನು ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟು ಉನ್ನತಮಟ್ಟದ ಶಿಕ್ಷಣ ನೀಡಿರುವುದರ ಫಲವಾಗಿ ಇಂದು ಅವರ ಮಗ ಅಪ್ಪಟ ಗ್ರಾಮೀಣ ಪ್ರತಿಭೆ ಹೈಕೋರ್ಟ್ ನ್ಯಾಯಾಧೀಶರಾಗಿ ನಾಡಿಗೆ ನಾಡೇ ಹೆಮ್ಮೆಪಡುವಂತಾಗಿದೆ.

ಜನವರಿ 5, 1970ರಂದು ಜನಿಸಿದ ನಾಗೇಂದ್ರ ನಾಯ್ಕ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪುರವರ್ಗದಲ್ಲಿಯೂ, ಪ್ರೌಢಶಿಕ್ಷಣವನ್ನು ನ್ಯೂ ಇಂಗ್ಲಿಷ್ ಸ್ಕೂಲ್ ಭಟ್ಕಳದಲ್ಲಿಯೂ, ಪದವಿ ಶಿಕ್ಷಣವನ್ನು ಅಂಜುಮನ್ ಕಾಲೇಜಿನಲ್ಲಿಯೂ ಪೂರೈಸಿದರು. ಬೆಂಗಳೂರಿನ ದಯಾನಂದ ಸಾಗರ ಆಫ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಏಳು ವರ್ಷಗಳ ಕಾಲ ಖ್ಯಾತ ವಕೀಲರಾದ ಪಿ.ಎಸ್. ರಾಜಗೋಪಾಲ್ ರವರ ಅಡಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು .1993 ರಲ್ಲಿಯೇ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾಗಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ವೃತ್ತಿ ಬದುಕಿನಲ್ಲಿ ಅಪಾರ ಜ್ಞಾನ ಗಳಿಸಿದರು. ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ ದುಡಿದು ಎಲ್ಲವೂ ತಮ್ಮಿಚ್ಚೆಯಂತೆ ಸಾಧಿಸಲ್ಪಟ್ಟವು. 2000 ನೇ ಇಸ್ವಿಯಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿ ವೃತ್ತಿ ಜೀವನದ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಹಲವು ಅಪರಾಧಿ ಪ್ರಕರಣವನ್ನು ಭೇದಿಸಿ ಹಿರಿಯ ವಕೀಲರ ಮೆಚ್ಚುಗೆಗೆ ಪಾತ್ರರಾದರು. ಬೆಂಗಳೂರು ಮತ್ತು ಧಾರವಾಡದ ಲೋಕಾಯುಕ್ತ ನ್ಯಾಯಾಲಯದ ಸೆಷನಗಳು, ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಅಪರಾಧಿಗಳಿಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಲ್ಲಿ ಲಂಚ, ಅಧಿಕೃತ ಅಧಿಕಾರ ಮುಂತಾದ ಪ್ರಕರಣ ಭೇದಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ಕರ್ನಾಟಕ ಗೌರವಾನ್ವಿತ ಹೈಕೋರ್ಟ್ ಆಡಳಿತಾತ್ಮಕ ನ್ಯಾಯ ಮಂಡಳಿಗಳು, ರಾಜ್ಯ ಕಾರ್ಮಿಕ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಮಂಡಳಿ ಕಮ್-ಲೇಬರ ನ್ಯಾಯಾಲಯದ ಮುಂದೆ ಸೇವಾ ವಿಷಯಗಳಲ್ಲಿ ಸರಕಾರದ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿ ತಮ್ಮ ಅನುಭವ ದ್ವಿಗುಣಗೊಳಿಸಿ ಕೊಂಡಿರುತ್ತಾರೆ. ಮಕ್ಕಳ ಅಶ್ಲೀಲ ಚಿತ್ರಗಳ ಕುರಿತು ದೆಹಲಿಯ ಬಿಸಿಆಯ್ ದಾಖಲಿಸಿದ ಮೊದಲ ಮಾಹಿತಿ-ತಂತ್ರಜ್ಞಾನ ಪ್ರಕರಣದಲ್ಲಿ ರಕ್ಷಣಾ ವಕೀಲರಾಗಿ ವಿಚಾರಣೆ ನಡೆಸಿದ್ದಾರೆ. ಪ್ರೆಸರ ಟೌನ್ ಅತ್ಯಾಚಾರ ಪ್ರಕರಣದಲ್ಲಿ ರಾಜ್ಯ ಸರ್ಕಾರವು ವಿಶೇಷ ಪಬ್ಲಿಕ್ ಪ್ಯಾ ಸಿಕ್ಯೂಟರ್ ಆಗಿ ಇವರನ್ನು ನೇಮಕ ಮಾಡಿರುತ್ತಾರೆ. ಕರ್ನಾಟಕ ನ್ಯಾಯಮಂಡಳಿ 1994 ರಿಂದ ಸಿಎಟಿ ಮತ್ತು ಕೆಎಟಿ ಎರಡು ಆಡಳಿತಾತ್ಮಕ ನ್ಯಾಯಮಂಡಳಿಗಳ ಮುಂದೆ ವಾದ ಮಂಡಿಸಿದ್ದಾರೆ. ವಿಜಿಲೆನ್ಸ್ ನಿರ್ವಹಣೆಯ ಕುರಿತು ಸಲಹೆ ಪಡೆಯುತ್ತಾರೆ. ಆದಾಯ ಕಾನೂನು ವಿಷಯಗಳಲ್ಲಿ ಕರ್ನಾಟಕ ಸಾರ್ವಜನಿಕ ಭೂ ನಿಗಮದ ಸಮಿತಿಯ ವಕೀಲರಾಗಿ ಸೇವೆ ಸಲ್ಲಿಸಿರುತ್ತಾರೆ.

“ನಾಗೇಂದ್ರ “ಎಂಬ ಹೆಸರು ಸತ್ಯದ ಆಳಕ್ಕೆ ಇಳಿದಂತೆ ಅವರ ಕರ್ತವ್ಯ ಶಕ್ತಿಯ ಅನರ್ಘ್ಯ ರತ್ನಗಳ ಪರಿಚಯವಾಗುತ್ತದೆ. ತನ್ನ ಸ್ವ ಸಾಮರ್ಥ್ಯದ ಮೂಲಕ ನ್ಯಾಯಾಲಯದಲ್ಲಿ ಅನ್ಯಾಯದ ವಿರುದ್ಧ ಹೋರಾಡಿ ಅನೇಕರಿಗೆ ನ್ಯಾಯ ಒದಗಿಸಿ ಭಟ್ಕಳ ತಾಲೂಕಿನ ಹಡೀನ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ರಾಗಿರುವುದು ಅವರ ಕರ್ತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಒಳ್ಳೆಯ ಹೆಸರು ಹಣಕ್ಕಿಂತ ಬೆಲೆ ಬಾಳುವಂತದ್ದು ಎಂಬುದನ್ನು ಪರಿಚಯಿಸಿದ ಹೆಗ್ಗಳಿಕೆ ಇವರದ್ದಾಗಿದೆ.ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯಪರ ಚಿಂತನೆಯ ಮೂಲಕ ಸತ್ಯದ ಕಡೆ ಹೆಜ್ಜೆ ಹಾಕಿ ನ್ಯಾಯಾಂಗದ ಅತ್ಯುನ್ನತ ಸ್ಥಾನಕ್ಕೇರಿರುತ್ತಾರೆ.
ಜಗತ್ತನ್ನು ಪ್ರೀತಿಸುವ ಜನರನ್ನು, ಜನರ ಒಲವನ್ನು, ಆತ್ಮೀಯತೆಯನ್ನು ತನ್ನದಾಗಿಸಿಕೊಂಡು ಇಡೀ ದೇಶಕ್ಕೆ ಮಾದರಿಯಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ ಯಾಗಿದೆ.

ಲೇಖನಪಿ.ಆರ್.ನಾಯ್ಕ
ಹೊಳೆಗದ್ದೆ, ಕುಮಟಾ

Exit mobile version