“ಸತ್ಪುರುಷರಾದವರು ಕುಸುಮದಂತೆ ಕೋಮಲ, ವಜ್ರದಂತೆ ಕಠಿಣ ” ಎನ್ನುವ ಮಾತಿದೆ. ಈ ಮಾತಿಗೆ ಸಾಕ್ಷಿಯಾಗಿ ತಮ್ಮ ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕ ವೃತ್ತಿಯಲ್ಲಿ ಅಪರಿಮಿತ ಸಾಧನೆಗೈದವರು ನಮ್ಮ ಹಳದೀಪುರದ ಶ್ರೀ ಎಚ್.ಎನ್. ಪೈರವರು. ಶಿಕ್ಷಣ- ವೃತ್ತಿ -ಪ್ರವೃತ್ತಿಯಲ್ಲಿ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಇಲಾಖೆಯ ಘನತೆ- ಗೌರವ ಹೆಚ್ಚಿಸಿಕೊಂಡು ವೃತ್ತಿ ಬದುಕನ್ನು ಪ್ರೀತಿಸಿ ಮೆರೆಸಿದವರು. ನಮ್ಮ ಹಳದೀಪುರ ಕ್ಲಸ್ಟರ್ ವ್ಯಾಪ್ತಿಯಲ್ಲಿ ಇಂತಹ ಒಬ್ಬ ಅಪರೂಪದ ಅಧ್ಯಾಪಕರು ಇರುವುದು ನಮ್ಮ ಪಾಲಿನ ಭಾಗ್ಯವೇ ಸರಿ.
ಜಗಲಿಯ ಮೇಲಿನ ಸಾಧಕರ ಎರಡನೇ ಮಾಲಿಕೆಯಲ್ಲಿ ಪೂಜ್ಯರನ್ನು ಪರಿಚಯಿಸುತ್ತಿದ್ದೇನೆ. ಪ್ರೌಢ ಶಾಲಾ ಅಧ್ಯಾಪಕರಾಗಿ, ಉತ್ತಮ ವಾಗ್ಮಿಗಳಾಗಿ, ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಗುರುಗಳಾಗಿ ಗುರುತಿಸಿಕೊಂಡವರು ನಮ್ಮೂರಿನ ಶ್ರೀ ಹರಿ ನಾಗೇಶ ಪೈರವರು. ಗಣಿತ ವಿಷಯದಲ್ಲಿ ಅಪರಿಮಿತ ಸಾಧನೆಗೈದು ಮಕ್ಕಳ ಪಾಲಿನ ಕಬ್ಬಿಣದ ಕಡಲೆಯಾದ ಗಣಿತವನ್ನು ಸುಲಿದ ಬಾಳೆ ಹಣ್ಣಿನಂತೆ ಸವಿ ಸವಿಯಾಗಿ ಕಲಿಸುವ ಜಾಣ್ಮೆ ಅರಿತವರು. ಕಲಿಕೆಯಲ್ಲಿ ಆಸಕ್ತಿ ಮೂಡಿಸಿ, ಅದನ್ನು ಸುಲಭೀಕರಿಸಿ ಹೇಳುವಲ್ಲಿ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ಹಂಚಿದ ಪುಣ್ಯಾತ್ಮರು. ಯಾವುದೇ ಪ್ರಚಾರ ಪ್ರಸಿದ್ಧಿಗೆ ಬಯಸದೇ ಕಾಯಕಯೋಗಿಗಳಾಗಿದ್ದರು.
ಗುರುತಿಸ ಬೇಡ ನನ್ನನ್ನು! ಪ್ರಶಸ್ತಿ ಪುರಸ್ಕೃತ ನೆಂದು! ಮಹಾಪಂಡಿತ, ಕವಿ ಸಾಹಿತಿಯೆಂದು!
ಗುರುತಿಸು ನನ್ನನ್ನು ಸಾಮಾನ್ಯರಲ್ಲಿ ಸಾಮಾನ್ಯನೆಂದು!
ಸಮಾಜಕ್ಕೆ ಎಷ್ಟೊಂದು ಉಪಕಾರಿಯೆಂದು ಗುರುತಿಸು ನನ್ನನ್ನು !
ಸ್ವಂತಿಕೆಯ ಮುದ್ರೆಯಿಂದ! ಅಪ್ಪಟ ಮಾನವತಾವಾದಿಯೆಂದು!
ಹಿರಿಯ ಕವಿವಾಣಿಯಂತೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ, ಅಸಮಾನ್ಯ ವ್ಯಕ್ತಿತ್ವ ಹೊಂದಿದ ಶ್ರೀ ಹರಿ ಪೈರವರು ತಮ್ಮ ಸೇವಾಮನೋಭಾವದ ಮೂಲಕ ಜಿಲ್ಲೆಯಾದ್ಯಂತ ಪರಿಚಿತರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರನ್ನು ಅಪಾರವಾಗಿ ಪ್ರೀತಿಸುವ, ಸೌಜನ್ಯದಿಂದ ಮಾತನಾಡಿಸುವ ಸರಳ ಸಜ್ಜನರು. ಮನುಷ್ಯರ ದ್ವಂದ್ವದ, ಅನೀತಿಯ ಬದುಕನ್ನು ಕಂಡು ಅವರು ಸಿಡಿಮಿಡಿಗೊಳ್ಳುತ್ತಾರೆ. ಮಾನವೀಯತೆಯಲ್ಲಿ ಅಪಾರ ನಂಬಿಕೆ ಇರುವ ಶ್ರೀಯುತರು ಸದಾ ಹಸನ್ಮುಖಿ ಗಳು.ಸಮಾಜ ಎದುರಿಸುತ್ತಿರುವ ಹತ್ತು ಹಲವು ತಲ್ಲಣಗಳ ನಡುವೆಯೂ ಬೆಳಕನ್ನು ಅರಸುವ ಮನೋಧರ್ಮ ಅವರದ್ದು.
೧೯೫೭ರಲ್ಲಿ ತಂದೆ ನಾಗೇಶ ಹರಿ ಪೈ, ತಾಯಿ ಶಾಂತಾಬಾಯಿಯವರ ಮುದ್ದಿನ ಮಗನಾಗಿ ಜನಿಸಿ ಬಾಲ್ಯದ ಶಿಕ್ಷಣವೆಲ್ಲ ಹುಟ್ಟೂರಿನಲ್ಲಿಯೇ ನಡೆಯಿತು. ಬಿಎಸ್ಸಿ ಪದವಿಯನ್ನು ಡಾ. ಎ.ವಿ ಬಾಳಿಗಾ ಕಾಲೇಜಿನಲ್ಲಿಯೂ, ಬಿಎಡ್ ಪದವಿಯನ್ನು ಕಮಲಾ ಬಾಳಿಗಾ ಕಾಲೇಜಿನಲ್ಲಿಯೂ, ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ಎಂ.ಎಡ್. ಪದವಿ ಶಿಕ್ಷಣವನ್ನು ಪೂರೈಸಿದರು. ತಾನು ಬೆಳೆಯಬೇಕು ಎನ್ನುವ ಕನಸಿನೊಂದಿಗೆ, ಇನ್ನೊಬ್ಬರನ್ನು ಬೆಳೆಸಬೇಕೆನ್ನುವ ಮನಸ್ಸಿನೊಂದಿಗೆ ಮುನ್ನಡೆದು ತನ್ನ ವೃತ್ತಿ ಬದುಕಿನಲ್ಲಿ ಅದೆಷ್ಟೋ ಜನರಿಗೆ ದಾರಿದೀಪ ದಂತಾದ ಶ್ರೀ ಎಚ್. ಎನ್. ಪೈರವರು ೧೯೭೮ ರಿಂದ ಹಳದೀಪುರದ ಆರ್.ಈ.ಎಸ್. ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಸುಮಾರು ೩೭ ವರ್ಷಗಳ ಕಾಲ ಪ್ರೌಢಶಾಲಾ ಅಧ್ಯಾಪಕರಾಗಿ ಪಾಠ ಬೋಧಿಸಿದ ಅನುಭವವಿದೆ. ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು ಏಳು ವರ್ಷಗಳ ಕಾಲ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡಿರುತ್ತಾರೆ.
“ತಾಳ್ಮೆ ಎಂಬ ಹೂ ಎಲ್ಲರ ತೋಟದಲ್ಲಿ ಅರಳುವುದಿಲ್ಲ” ಎನ್ನುವ ಮಾತೊಂದಿದೆ. ಆದರೆ ಶ್ರೀ ಹರಿ ಪೈರವರು ತಮ್ಮ ತೋಟದಲ್ಲಿ ತಾಳ್ಮೆ ಎಂಬ ಹೂ ಅರಳಿಸಿ ಸುದೀರ್ಘ ಶಿಕ್ಷಕ ವೃತ್ತಿಯಲ್ಲಿ ಎಂದು ಹೂ ಬಾಡದೇ ಬಾಳಿತು ಬೆಳಗಿತು. ತನ್ನೊಳಗಿನ ಬೆಳಕಿನಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದರು .
ಇವರ ಗಣಿತದ ವಿಷಯದ ಆಳವನ್ನರಿತ ಶಿಕ್ಷಣ ಇಲಾಖೆ ಗಣಿತ ಪಠ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿತು. ಗಣಿತ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿಯೂ, ಚಿಣ್ಣರ ಮೇಳದ ಸಂಪನ್ಮೂಲ ವ್ಯಕ್ತಿಯಾಗಿಯೂ, ಭಾರತೀಯ ಜನಗಣತಿ ಮಾಸ್ಟರ್ ಟ್ರೈನರ್ ಆಗಿಯೂ ಸೇವೆ ಸಲ್ಲಿಸಿರುತ್ತಾರೆ. ೨೦೧೫ ರಿಂದ ಮಾರಥೊಮ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶಿ ಯಾಗಿ ಸೇವೆಸಲ್ಲಿಸುತ್ತಿದ್ದಾರೆ.
ಇವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ,ಉತ್ತಮ ಸಮಾಜ ಸೇವಕ ,ಬೆಸ್ಟ್ ಟೀಚರ್ ಅವಾರ್ಡ್, ಹೈದರಾಬಾದ್ ನಲ್ಲಿ ನಡೆದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಮುಂತಾದ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ. “ಜೀವನದಲ್ಲಿ ಆನಂದ ಬೀರೋಣ” ಅನುವಾದ ಕೃತಿ ರಚಿಸಿರುತ್ತಾರೆ.
೧೯೮೨ ರಲ್ಲಿ ಮಂಗಳ ಪ್ರಭುರವರೊಂದಿಗೆ ವಿವಾಹವಾಗಿ ವಿದ್ಯಾ, ದಿವ್ಯ ಎಂಬೆರಡು ಮಕ್ಕಳನ್ನು ಪಡೆದಿರುತ್ತಾರೆ.ಒಬ್ಬ ಆದರ್ಶ ಶಿಕ್ಷಕರಾಗಿ ತುಂಬು ಜೀವನ ಸಾಗಿಸುವ ಶ್ರೀ ಎಚ್.ಎನ್. ಪೈರವರು ತುಂಬಿದ ಕೊಡದಂತೆ. ಸಮಾಜದ ಶಿಲ್ಪಿಯಾಗಿ, ಭವಿಷ್ಯದ ಬಾಳಿನ ಮಾರ್ಗದರ್ಶಕರಾಗಿ, ಎಳೆಯ ಹೃದಯಗಳನ್ನು ಪ್ರೀತಿಸುವ, ಗೌರವಿಸುವ ಮೇಧಾವಿ ಆಗಿರುತ್ತಾರೆ. ಕ್ಷಮಾಗುಣ ,ಶಿಸ್ತು, ಕರ್ತವ್ಯ ತತ್ಪರತೆ ಯನ್ನು ಮೈಗೂಡಿಸಿಕೊಂಡು ಅಧ್ಯಯನ, ಅಧ್ಯಾಪನ, ಸಂಶೋಧನೆಯ ಮೂಲಕ ವೃತ್ತಿ ಬದುಕಿನಲ್ಲಿ ಮೇರುಪರ್ವತದಂತೆ ಮಿಂಚಿದವರು. ಅನೇಕ ಶಿಕ್ಷಕರಿಗೆ ಅತ್ಯುತ್ತಮ ಮಾರ್ಗದರ್ಶಕರಾದವರು. ಇಂತಹ ಒಬ್ಬ ಶಿಕ್ಷಣ ತಜ್ಞರು ನಮ್ಮ ಹಳದೀಪುರ ಕ್ಲಸ್ಟರ್ ವ್ಯಾಪ್ತಿಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮಂತ ಅದೆಷ್ಟೊ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಿ ಸದಾ ನಮ್ಮೊಂದಿಗೆ ನೂರ್ಕಾಲ ಬಾಳಿ ಬದುಕಲೇಂಬುದೇ ನಮ್ಮೆಲ್ಲರ ಹಾರೈಕೆ ಯಾಗಿದೆ.