ದಾಂಡೇಲಿ: ತಾಲೂಕಿನ ಬೊಮ್ನಳ್ಳಿ ಆಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನ ಮೃತದೇಹ ರವಿವಾರ ಮುಂಜಾನೆ ದೊರೆತಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿ ಬೊಮ್ನಳ್ಳಿಯ ಗ್ರಾ.ಪಂ. ಮಾಜಿ ಸದಸ್ಯ ಹಿಮ್ರಾನ್ ಕೆ.ಎಮ್. ಅಬ್ದುಲ್ಲಾ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ಮುಖಂಡರು ಮೃತ ದೇಹ ಇಟ್ಟು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಗುತ್ತಿಗೆದಾರನ ನಿರ್ಲಕ್ಷ್ಯ, ರಕ್ಷಣಾ ವ್ಯಸ್ಥೆಗಳಿಲ್ಲದಿರುವ ಬಗ್ಗೆ ಆಕ್ಷೇಪಿಸಿ, ಮೃತ ಕುಟುಂಭಕ್ಕೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಮೃತ ಕಾರ್ಮಿಕನ ಕುಟುಂಭ ಸದಸ್ಯರಿಗೆ ಅನುಕಂಪ ಆಧಾರದ ನೌಕರಿ ನೀಡುವ ಮೂಲಕ ಕುಟುಂಭಕ್ಕೆ ಸಹಾಯ ಮಾಡಬೇಕು. ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿದ್ದ ಕರ್ನಾಟಕ ವಿದ್ಯುತ್ ನಿಗಮದ ಸಿವಿಲ್ ವಿಭಾಗದ ಮುಖ್ಯ ಅಭಿಯಂತರ ಟಿ.ಆರ್. ನಿಂಗಣ್ಣರವರು ಗುತ್ತಿಗೆದಾರರಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರಲ್ಲದೇ ವಿಮಾ ಹಣ ಹಾಗೂ ಪಿ.ಎಪ್. ಹಣ ಕೂಡಾ ಕುಟುಂಭಕ್ಕೆ ಸಿಗಲಿದೆ ಎಂದರು.
ಸಿ.ಪಿ.ಐ ಮೋತಿಲಾಲ ಪವಾರ್ ಪ್ರತಿಭಟನಾ ಕಾರರ ಜೊತೆ ಮಾತನಾಡಿ ಸೌಹಾರ್ದಯುತವಾಗಿ ಬಗೆ ಹರಿಸುವಂತೆ ತಿಳಿಸಿದರು.
ಪ್ರತಿಭಟನಾಕಾರರ ಪಟ್ಟಿಗೆ ಮಣಿದ ಗುತ್ತಿಗೆದಾರ ಮೃತ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ ನೀಡುವ ಭರವಸೆ ನೀಡಿದರು. ನಿಗಮದವರೂ ಸಹ ಸಹಾಯ ಮಾಡುವುದಾಗಿ ತಿಳಿಸಿದರು. ನಂತರ ಪ್ರತಿಭಟಾನಾಕಾರರು ಪ್ರತಿಭಟನೆ ಕೈಬಿಟ್ಟು ಮೃತ ಕಾರ್ಮಿಕನ ಅಂತ್ಯಕ್ರಿಯೆ ನಡೆಸಲು ಮುಂದಾದರು.
ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಹಿಮ್ರಾನ ಕೆ.ಎಮ್. ಅಬ್ದುಲ್ಲಾ, ಪ್ರಮುಖರಾದ ವಿಠ್ಠಲ ಮಿಶಾಳೆ, ಮೆಹಬೂಬ ಸುಬಾನಿ, ಮೋಹನ ನಾಯರ್, ಪರಶುರಾಮ ಮಿರಾಶಿ, ಬಸವ ಅಂಬೇಡ್ಕರ ಸಹಕಾರಿಯ ಗುರು ದಾನಪ್ಪನವರ್, ಆದಿ ಜಾಂಬವಂತ ಸಂಘಟನೆಯ ಅಧ್ಯಕ್ಷ ಚಂದ್ರಕಾಂತ ನಡಿಗೇರ್, ಕರವೇ ಅಧ್ಯಕ್ಷ ಪ್ರವೀಣ ಕೊಠಾರಿ, ಜಾಫರ್, ನಾಗೇಶ, ವಿನಾಯಕ ಮುಂತಾದವರಿದ್ದರು.