Site icon ಒಡನಾಡಿ

ಅರಿವೇ ಗುರು….

‌‌ ‌‌‌‌‌‌‌ ಗುರುವೆಂಬ ದೀಕ್ಷೆಯ ಪಡೆದು, ಅರಿವಿನ ಹರಿವಾಣದಲಿ ಆಗ ತಾನೆ ಕಣ್ಣ ಪಿಳುಕಿಸುವ ಮುದ್ದು ಕಂದನ ಜಗತ್ತಿಗೆ ಪರಿಚಯಿಸುವ ಅಮ್ಮ ಮೊದಲ ಗುರು. ತೊದಲು ನುಡಿಯಲಿ ಬಳಪದೋರಣವು ಗೋಡೆ, ಕಟ್ಟೆ, ಕಂಬ, ಹಲಗೆ, ಅಂಗಳ, ಮೈಲೆಲ್ಲ,ಗೀಜಿ ಅಳಿದುಳಿದ ಭಾಗ ಅಮ್ಮನ ಕಣ್ಣ ತಪ್ಪಿಸಿ ಬಾಯಲಿ ಮೆಲ್ಲಗೆ ಅಗಿದು, ಕೊನೆಗೆ ಗಂಟಲಲ್ಲಿ ಸಿಕ್ಕು ಬಿಕ್ಕುವಾಗ ಗುದ್ದು ಬೆನ್ನ ಮೇಲೆ ಬಳಪ ಅಂಗಳಕೆ ಜಿಗಿದು ನಗುತ್ತಿತ್ತು. ಬಳಪ ತಿಂದೆಯಾ ಮಗಾ? ಅಂದಾಗ ನಾನಂ ತೂ ತಿಂದಿಲ್ಲ ಅಮ್ಮ ,ಅದು ಹೇಗೆ ಬಾಯಿಗೆ ಹೋಯಿತೊ ನಾ ಕಾಣೆ ಅಮ್ಮಾ ಎಂದು ತೊದಲು ನುಡಿವಾಗ, ಬಾಯಲಿ ಬೊಟ್ಟು ಹಾಕಿ ಅಳಿದುಳಿದ ಬಳಪದ ಚೂರ ಹೊರತಗೆದು ಬಾಯಿ ತೊಳಿಸಿದಾಗ ಖುಷಿಯೋ ಖುಷಿ. ಭಯವಿತ್ತು ಕೋಪಗೊಂಡು ಬಡಿಯುವಳೋ ಎಂದು ಅಮ್ಮನ ತೋ‌ಳಲಿ ಕಂದನಾಗಿ ಕಲಿತಿದ್ದು “ಅಮ್ಮ” ಎಂಬ ಸುಂದರ ಪದ. ತಿದ್ದುವಾಗಲೆಲ್ಲ ಅವಳ ಸೆರಗ ಹಿಡಿದು ಕುಣಿದಿದ್ದೇ ಬಂತು. ಹಾಗೆ ಹೀಗೆ ಬೆಳೆದು ರಾಶಿ ದೊಡ್ಡವಳಾದೆ. ಅಲ್ಲ… ಅಲ್ಲ ಶಾಲೆಗೆ ಹೋಗುವ ವಯಸ್ಸು ಆಯಿತೆಂದು ಐದು ವರ್ಷ ಆಗಿತ್ತು ಅಷ್ಟೇ. ನನಗೋ ಮನೆಯಲ್ಲಿದ್ದು ಅಮ್ಮನ ಕೈ ತುತ್ತು ಮೆಲ್ಲುವ ಆಸೆ ಆದರೆ…

ಅಪ್ಪ-ಅಮ್ಮರಿಗೆ ನನ್ನ ಶಾಲೆಗೆ ಕಳಿಸುವ ಉಮೇದಿ ಬೇರೆ‌. ನನಗೋ ಇನ್ನೂ ಅಮ್ಮನ ಎದೆ ಹಾಲು ಕಡಿಯುವುದನ್ನು ಬಿಟ್ಟಿರದ ಗಳಿಗೆ. ಎಲ್ಲರೂ ಅಮ್ಮಗೆ ಬಯ್ಯುವವರೇ… ! ಇಷ್ಟು ವರ್ಷ ಹಾಲು ಕುಡಿಸಬಾರದು. ನಿನಗಂತೂ ಬುದ್ದಿಯಿಲ್ಲ. ನಿನ್ನ ಮಗಳೋ ನಿನ್ನ ಬೆನ್ನು ಬಿಡಾಕಿಲ್ಲ ಎಂದು ಬೇವಿನೆಲೆ, ಹಾಗಲ ಕಾಯಿ ರಸ, ಹಚ್ಚಿದರೂ ನಾನು ಅದನ್ನೆಲ್ಲ ಒರೆಸಿ ಕುಡಿಯುತ್ತಿದ್ದೆ. ಶಾಲೆಗೆ ದಾಖಲು ಮಾಡಿದಾಗಂತೂ ನನಗೆ ಮನೆಗೆ ಓಡಿ ಹೋಗಿಬಿಡಬೇಕೆಂದು ಅನ್ನಿಸುತ್ತಿತ್ತು. ಟೀಚರ್ ಕಂಡರೆ ಭಯ. ಛಡಿ ಚಂ ಚಂ,ವಿದ್ಯಾ ಗಂ ಗಂ ಅನ್ನುತ್ತಿ ದ್ದ ಮಾತು ಹಾಗೂ ಇತರರಿಗೆ ಬೀಳುವ ಏಟಿನ ಶಬ್ದ ನನಗೆ ಕುಂತಲ್ಲೆ ನಡುಕ ಬರುತ್ತಿತ್ತು. ಆಗ ತಾನೆ ಶಾಲೆಗೆ ಪಾದಾ ರ್ಪಣೆ ಮಾಡಿದ ನನಗೆ ದಿನ ಕಳೆದಂತೆ ಗುರುಗಳು ಹತ್ತಿರ ವಾಗುತ್ತಿದ್ದರು. ಕೈ ಹಿಡಿದು ಬರೆಸುವಾಗಂತೂ ಅಮ್ಮ ನೆನ ಪಾಗಿದ್ದಳು. ಭಯದಲ್ಲಿಯು ಪ್ರೀತಿ ತುಂಬಿರುತ್ತಿತ್ತು.

ಬಳಪದ ರಗಳೆ ಮುಗಿದಂತೆ ಪೆನ್ಸಿಲ್, ಪೆನ್ನು ಹಿಡಿದು ಬರೆ ಯುವಾಗಿನ ಮಜವೆ ಬೇರೆ. ರಬ್ಬರ್, ಪೆನ್ಸಿಲ್ ಕಾಣೆ ಯಾಗುತ್ತಿದ್ದರೂ ಬರೆಯುವ ಹಟ ಮಾತ್ರ ಹೆಚ್ಚುತ್ತಿತ್ತು.ನನಗೊಹಾಡೋ, ಮಾತಾಡೋ, ನೃತ್ಯ ಮಾಡೋ ಹುಚ್ಚು ಯಾರೆ ಹಾಡುತ್ತಿದ್ದರೂ ನಾನು ಹಿಂದಿನಿಂದಲೇ ಧ್ವನಿ ಸೇರಿಸುತ್ತಿದ್ದೆ. ಅವರದು ತಪ್ಪಾಗಿ ಹಾಡಿದರೂ ಗುಡ್ ಅಂದಾಗ ಜಗಳ ಮಾಡುತ್ತಿದ್ದೆ. ಹಾಗೆ ಮಾಡಬಾರದು ಹಟಮಾರಿ ನೀನು. ಹುಡುಗಿಯರು ಸ್ಟ್ರಾಂಗ್ ಆಗಿರಬೇಕು ಹಾಗಂತ ಬೇಕಂತ ಲೇ ಜಗಳ ಮಾಡಬಾರದೆಂದು ಕವಿ ಹಿಂಡಿದ್ದು ನೆನಪಾಗಿ ಈಗೂ ನಗು ಬರುತ್ತೆ. ನನ್ನ ಎದುರಿನ ಬೆಂಚ ಮೇಲೆ ಕುಳಿತ ಸಹಪಾಠಿ ಸ್ವಲ್ಪ ನಾನಿಟ್ಟ ಪಾಠಿಚೀಲ ಸರಿಸಿದ್ದ ಅಷ್ಟೇ. ನನಗೋ ಕೆಂಡದಂತ ಕೋಪ ಬಂದು ಅವನ ಪಾಠಿಚೀಲ ಎತ್ತಿ ಬಿಸಾಡಿದ್ದೆ. ಅವನೋ ಗೋಳೊ ಎಂದು ಅಳುತ್ತ ಟೀಚರ್ ಗೆ ಚಾಡಿ ಹೇಳಿ ನನಗೆ ಬಡಿಸಿದ್ದ. ಶಾಲೆ ಬಿಟ್ಟ ಮೇಲೆ ಪುನಃ ಅವನಿಗೆ ಧಮಕಿ ಹಾಕಿದ್ದಕ್ಕೆ ಜ್ವರ ಬೇರೆ ಬಂದಿತ್ತವ ಗೆ. ಆಗ ನನಗೆ ಸರಿ ಎನಿಸಿತ್ತು. ಅದು ತಪ್ಪು ಅನ್ನುವಾಗ ಸಮಯ ಜಾರಿ ಹೋಗಿತ್ತು. ಆದರೂ ನನಗೆ ಮುಖಾಮುಖಿ ಆಗೋ ಯೋಗವಿತ್ತು. ಅವನು ನನ್ನ ಕಂಡು ಕಾಣದಂತೆ ಮರೆಯಾಗುತ್ತಿದ್ದ. ನಾನೋ ಬಿಡದವಳು. ಎದುರಿಗೆ ಹೋಗಿ ನಿಂತು ಸಾರಿ ಅಂದೆ. ಅವನು ಅತ್ತ ಇತ್ತ ನೋಡುತ್ತಾ ನನಗಾ? ಅಂದ. ಹೌದು ನಾನು ಹಾಗೆ ಮಾಡಬಾರದಿತ್ತು. ಗುರುಗಳು ಹೇಳಿದ್ದು ಸತ್ಯ. ಸಹನೆ, ತಾಳ್ಮೆ ನನಗೆ ಕಡಿಮೆ. ನಾನು ಮಾಡಿದ್ದು ತಪ್ಪು. ಸಾರಿ. ಎಂದು ಓಡಿ ಬಂದಿದ್ದೆ. ಎನೋ ಮನಸ್ಸಿನ ಭಾರ ಇಳಿದಂತೆ. ಗುರುಗಳು ನಮ್ಮನ್ನು ಒಂದೇ ದೃಷ್ಟಿಯಿಂದ ನೊಡುತ್ತಿದ್ದರು. ಆಟದಲ್ಲಿ ಎರಡು ಗುಂಪು ಒಂದು ಹುಡುಗಿಯರದು, ಒಂದು ಹುಡುಗರದು. ಕೂಡಿ ಬಾಳುವ ಗುಣ ಇಬ್ಬರಲ್ಲೂ ಬರಬೇಕೆಂಬುದು ಆಶಯ. ಒಮ್ಮೆ ಹುಡುಗರ ಜೊತೆ ಕಬಡ್ಡಿ ಆಟದಲ್ಲಂತೂ ನನ್ನ ಔಟ್ ಮಾಡುವ ಆತುರ ಅವರಿಗೆಲ್ಲ ನಾನೋ ಕೈಗೆ ಸಿಗದೇ ಜಂಗನೆ ಹಾರಿ ಮಧ್ಯ ರೇಖೆಯ ಮುಟ್ಟಿ ಅವರ ತಂಡ ಸೋಲಲು ಕಾರಣವಾಗುತ್ತಿದ್ದೆ. ಹೀಗಾಗಿ ಹುಡುಗರಿಗೆ ನನ್ನ ಕಂಡರೆ ಆಗುತ್ತಿರಲಿಲ್ಲ. ಮಾತನಾಡುವ ಕಲೆಗೆ ಚೌಕಟ್ಟನ್ನು ಹಾಕಿಕೊಟ್ಟು, ಆಗಾಗ ತಿದ್ದಿ ತೀಡಿ ಹೇಳುತ್ತ ಓದಿನಲ್ಲಿ ಆಸಕ್ತಿ ಮೂಡಿಸಿದ ಗುರುಗಳ ಮರೆಯಲು ಸಾಧ್ಯವಾಗದ ಮಾತು.

ನಮ್ಮಂತ ಕಿಲಾಡಿ ಮಕ್ಕಳನ್ನು ಅವರು ಮರೆಯಲು ಸಾಧ್ಯವಾ? ಚಾಪೇರ ಹಣ್ಣು, ನೆಲ್ಲಿಕಾಯಿ, ಜಿಗಳಿ, ಹುಳಿ ಕದ್ದು ಮು ಚ್ವಿ ತಿನ್ನುವಾಗ ಅದನ್ನು ಹಿಡಿದು ಕೊಟ್ಟ ಸಾಚಾ ಗೆಳೆಯರಿಂದ ಬಿದ್ದ ಹೊಡೆತಗಳ ನೆನೆದರೆ ನಗು ಬರುತ್ತೆ. ಅದರಲ್ಲೂ ನನ್ನ ನೆಚ್ಚಿನ ಗುರುಗಳು ಶ್ರೀ ಡಿ.ವಿ ನಾಯಕ ಸರ್‌ ಅಂತೂ ನನಗೆ ತಿಳಿ ಹೇಳುವುದರಲ್ಲಿ ನಿಸ್ಸಿಮರು. ಒಮ್ಮೆ ನಾನು ಓಡುವಾಗ ಬಿದ್ದೆ. ಉಳಿದವರೆಲ್ಲ ನಕ್ಕರು. ಯ್ಯಾರು ಎಬ್ಬಿ ಸಲು ಬಂದಿರಲಿಲ್ಲ ಆದರೆ ಸರ್… ಓಡಿ ಬಂದು ತೆರೆಚಿ ರಕ್ತ ಸೊರುತ್ತಿದ್ದರೂ ನನ್ನ ಎತ್ತಕೊಂಡು ಕ್ಲಾಸಗೆ ಬಂದು ಪ್ರಥಮ ಚಿಕಿತ್ಸೆ ನೀಡಿ ಮುಖ ಒರೆಸಿ… ನನಗೆ ಚಾಕೊಲೇಟ್ ಅಂದರೆ ಪಂಚಪ್ರಾಣ ಅದನ್ನು ಸರ್ ಕೊಟ್ಟು ಆರೈಕೆ ಮಾಡಿದ್ದು, ಗಣಿತ ಕಬ್ಬಿಣದ ಕಡಲೇ ನನಗೆ ತಿಳಿದಿಲ್ಲವೆಂದು ಹೇಳಲು ಭಯ ಆಗ.,ಸರ್ ನನ್ನ ಸಮಸ್ಯೆ ತಿಳಿದು ಪ್ರೀತಿಯಿಂದ ಹೇಳಿಕೊಡುತ್ತಿದ್ದರು. ಆಗ ಧೈರ್ಯ ಬಂದಂತಾಗಿ ಲೆಕ್ಕಗಳನ್ನು ಬಿಡಿಸಿತ್ತಿದ್ದೆ. ಮನೆಯಲ್ಲಿ ಹೇಳಿ ಕೊಟ್ಟು ತೀಡುವವರಾರು ಇರಲಿಲ್ಲ… ಗುರುವೇ ನಿನಗೆ ಶರಣು. ಸ್ವ ಅನುಭವಕೆ ದಾರಿ ಮಾಡಿಕೊಟ್ಟು, ಅರಿವೇ ಗುರುವೆಂಬ ಜ್ಞಾನದ ಜ್ಯೋತಿಯ ಬೆಳಗಿಸಲು ಗುರುಬೇಕು.

ಬಾಲ್ಯದಿಂದ ಬದುಕಿನ ದಿಟ್ಟ ಹೆಜ್ಜೆಯಿಡುವಾಗಲೆಲ್ಲ ದಾರಿ ದೀಪವಾದ ಶಿಕ್ಷಕರನ್ನು ನೆನೆಯುವುದು ನಮ್ಮ ಭಾಗ್ಯ. ಒಂದು ಕಗ್ಗಲ್ಲ ಕಟಿದು ಮೂರ್ತಿ ರೂಪ ಮಾಡಿ ಅದನು ಸಮಾಜದ ಎಲ್ಲರು ಪೂಜಿಸುವಂತೆ ಮಾಡುವ ಶಿಲ್ಪಿ. ಮತ್ಯಾರು ಅಲ್ಲ… ಅವರೇ ಗುರುಗಳು. ಎಲ್ಲ ದೇವತೆಗಳು ಮುನಿದರೂ, ಮುಂದೆ ಗುರಿಯಿಟ್ಟು, ಹಿಂದೆ ಗುರು ನಿಂತು ಸಲಹುವನು ಅನುದಿನ. ತಾಯಿ ಜನ್ಮ ಕೊಟ್ಟರೆ, ಗುರು ಮರು ಜನ್ಮ ನೀಡಿದವ ಬದುಕಿನ ಸುಖ ದುಃಖಗಳು ತಾಯಿಯ ಸಂಸ್ಕಾರದಿಂದ, ಗುರುವಿನ ವಿದ್ದೆಯಿಂದ, ಸಂಸ್ಕೃತಿಗಳ ಮಿಲನದಿಂದ ಜನ್ಮ ಪಾವನವೆಂಬುದು ದಿಟ. ಯಾರು ನಿಜವ ಅರುಹಿ, ಸತ್ಯಮಾರ್ಗದಲ್ಲಿ ನಡೆಸುವ ವರಾರೆ ಇದ್ದರೂ ಅವರು ಗುರುವಿಗೆ ಸಮಾನರು. ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಿಂದ ನಡೆದು ಗೌರವಿಸುವ ಮನೋಭಾವ ನಮ್ಮಲ್ಲಿ ಬರಬೇಕು.

ಐದು ಬೆರಳುಗಳು ಸಮವೇ? ಆದರೂ ಕೈ ತುತ್ತು ಐದು ಬೆರಳ ಸಮಾಗಮದಿಂದ ಪೂರೈಸುವುದು. ಮಕ್ಕಳಿಗೆ ಗುರುವಿನ ಮಹತ್ವದ ಅರಿವು ಮೂಡುವುದು. ಶಿಕ್ಷಣದಿಂದ ಕಲಿಸುವಾತನ ಕೈ ಹಿಡಿದು ನಡೆಯುವಾತ ಗುರಿ ತಲುಪಲು ಸಾಧ್ಯ.ಆದರೆ ಏಕಲವ್ಯನಂತಹ ನತದೃಷ್ಟರು,ಗುರುದಕ್ಷಿಣೆ ಗೆ ಬಲಿಯಾದ ಶಿಷ್ಯಂದಿರು ಇದ್ರೂ ಕೂಡ,ಅವ ಮಾಡಿದ ಕರ್ಮ ಅವನಡಿಗೆ ಬರುವುದನ್ನು ತಪ್ಪಿಸಲು ಸಾಧ್ಯವೆ?.. ಗುರುನಿಂದೆ ಮಹಾಪಾಪ…ಎನ್ನುವ ಮಾತೊಂದಿದೆ.. ಸಂಸ್ಕಾರಗಳು ಮನೆಯಂದ, ಶಾಲೆಗೆ, ಶಾಲೆಯಿಂದ ಸಮಾಜಕ್ಕೆ ಕೊಂಡಿಯಾಗಿ ಬೆಸೆದಿರುವುದರಿಂದ ತಂದೆ, ತಾಯಿ, ಗುರು ಈ ಮೂವರು ಸಮಾಜದ ಭದ್ರ ಬುನಾದಿ ಮಗುವಿನ ಬದುಕ ನಿರ್ಮಿಸಲು. ಹೀಗಾಗಿ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ವಾಕ್ಯ ಸರ್ವಕಾಲಕ್ಕೂ ಸತ್ಯ……

-ಶಿವಲೀಲಾ ಹುಣಸಗಿ, ಯಲ್ಲಾಪುರ

Exit mobile version