ಕಳೆದು ಹೋಗುವುದು ಸುಲಭವೆಂದೆನಿಸಿದರೂ, ಒಂದು ಕ್ಷಣ ಮೈಮರೆವ ಭಾವಗಳು ಜಗತ್ತಿನ ಎಲ್ಲ ಜಂಜಾಟದಿಂದ ದೂರ ಸರಿಸಿ ಮೌನಗಳು ಗರಿಬಿಚ್ಚಿ ಆಗಸದ ತುಂಬ ನಲಿವ ಕಾಮನ ಬಿಲ್ಲ ನೋಡುವುದೇ ಹಬ್ಬ.ಗಂಡು ನವಿಲು ಆಗಾಗ ತನ್ನ ಸಾವಿರ ಕಂಗಳ ನಡುಗಣ್ಣ ನಿಲಿಸಿ ನೋಡುಗ ರ ಆಕರ್ಷಿಸಿದಂತೆ. ಎಂಥ ಅಧ್ಬುತ ಅನುಭವ ಆನಂದ, ರೋಮಾಂಚನ ಕಣ್ಮನಗಳಿಗೆ. ಪ್ರಕೃತಿಯೇ ಮೈ ಮರೆತಂತೆ ತನ್ನ ಸೌಂದರ್ಯದ ಗಣಿಗೆ.
ಅದೇ ನೋಟ ,ಅದೇ ತುಡಿತ, ಮಾತಿಗೆಲ್ಲ ಮೌನದ ಸಂಕೋಲೆ. ಪ್ರೀತಿಯ ಹೊರತು ಅರಿತಿದ್ದು ಕಡಿಮೆ ಬೆರೆತದ್ದು ನಿನ್ನ ಒಲುಮೆ ಮಾತ್ರ. ಆಗಾಗ ತಿದ್ದಿ ತೀಡುವ ನಿನ್ನ ಬೆರಳ ಚಲ್ಲಾಟಕೆ, ಬಿದಿರು ಕೊಳಲಾಗಿ ಮೀಟುವ ಗಾನಕೆ ಮುಂಗುರುಳಲಿ ಅವಿತ ನಿನ್ನುಸಿರಿನ ಸೊಲ್ಲುಗಳ ಮುತ್ತ ಹನಿಗಳು ಮೆಲ್ಲಗೆ ಜಾರಿದಂತೆಲ್ಲ, ತಂಗಾಳಿಯು ನಾಚಿ ನೀರಾಗಿ ದೂರ ಸರಿದಂತೆ. ನಿನ್ನ ಕಂಗಳ ಕಾಂತಿಯು ಪ್ರೇಮದ ಹೊಸ ಭಾಷ್ಯ ಬರೆದಂತೆಲ್ಲಾ, ಯುಗ ಯುಗಗಳು ತತ್ತರಿಸಿಹವು ನಿನ್ನಾಗಮನಕೆ. ಸುತ್ತುವ ಗ್ರಹಗಳು ದಿಕ್ಕು ತಪ್ಪಿ ದಿಕ್ಕೆಟ್ಟಿವೆ. ಕವಡೆಯ ಚಲನೆಯ ಬದಲಾಗಿದೆ. ನೀ ಮಾಯೆಯೋ ನಿನ್ನೊಳು ಮಾಯೆಯೋ ಅರಿಯದಂತಹ ಪರಿಸ್ಥಿತಿ ನನ್ನೆದೆಯೋಳಗೆ.
ಹುಚ್ಚು ಮನಸ್ಸಿನ ಕಲ್ಪನೆಗಳು ನೂರಾರು. ನೆತ್ತಿಮಾಸದ ಹಸಿಗೂಸಿನಂತೆ, ಒತ್ತಾಸೆಯಿಂದ ಕೊರೆದ ಬಾವಿಗಳು ವಿರಹದ ಬೇಗೆಯಲ್ಲಿ ಜಲವ ನೀಡಲು ಮರುಗುತಿಹವು. ನೀ ಬರದೇ ಹೋದರೆ, ಬರಗಾಲದ ಮುನ್ಸೂಚನೆ ನೀಡುವ ಒಳಸಂಚು. ಬಯಲಾಗಿಹುದು ಮನವು ಇಂದು. ನಿರ್ಮೋಹದ ದಂಡೆಯಲಿ. ಪ್ರೇಮವೆಂದೂ ಕಾಮವಲ್ಲ. ಶೃಂಗಾರದ ದಿವ್ಯಾನುಭೂತಿ ಕಂಡು ಕಾಣದಂತೆ.
ಎಲ್ಲಡಗಿರುವಿ ಸುಳಿವು ಕೊಡದೇ, ಕಾಣದೇ…ಮೋಹದ ಚಲುವ. ವಿಶಾಲ ನಭದೊಳು. ಕಾದಿರುವೆ, ಪರಿತಪಿಸಿರುವೆ ನಿನ್ನ ತುಟಿಯಂಚಿನ ಕಿರುನಗೆಗೆ ಕೊಳಗಳು ತುಂಬಿ ತುಳು ಕಲು ಹಾತೋರೆದಿಹವು. ಹಕ್ಕಿಗಳ ಇಂಚರ, ಕೋಗಿಲೆ ಯ ಮಧುರ ಧ್ವನಿಯು ಛೇಢಿಸುತಿದೆ. ಕಳ್ಳ ನೀನು ಮಳ್ಳ ನಗೆಯ ಚಲ್ಲುತ ಹುಣ್ಣಿಮೆಯ ಶಶಿಗೆ ಪೈಪೋಟಿ. ಪ್ರೇಮ ಪರೀಕ್ಷಿಸಲು ನೀ ಹೂಡುವ ತಂತ್ರಗಳು. ಮಾಯಾ ರೂಪದಲಿ ನನಗರಿವಿಲ್ಲದೇ ಇಂದ್ರನ ಜಾಲ ಬೀಸಿ ಒಳ ಸುಳಿದವರ ಹೆಜ್ಜೆ ಹೆಜ್ಜೆಗೂ ಗುರುತಿಸ ಬಲ್ಲೆ, ನಾನಂತೂ ಅಹಲ್ಯೆಯಲ್ಲ. ಕಪಟಿ ಋಷಿಯಾದ ರಾವಣನಾದರೂ ಸರಿ ಮೋಸ ಹೋಗಲು ಸೀತೆಯಂತು ಅಲ್ಲವೇ ಅಲ್ಲ. ನಿನ್ನ ಪ್ರಾಣ ಸಖಿ.
ನೀ ಬಿತ್ತಿದ ಬೆಳೆದ ಲೋಕದ ಪ್ರೇಮಾನುರಾಗದ ದಾಸಿ. ಚಿತ್ತ ಚೋರ ಅರಿವೆಯಾ? ಕಳೆದು ಹೋಗುವಾಗೆಲ್ಲ ಚಿಂತೆಯಿಲ್ಲ, ಜಗತ್ತಿನ ಅರಿವಿಲ್ಲ. ಗಾಳಿಗುಂಟ ಬಂದು ಬಂಧಿಸುವ ನಿನ್ನ ಸ್ಪರ್ಶವೇ ವಿಚಿತ್ರ ಸಚಿತ್ರ. ಹೇಳಿಕೊಳ್ಳಲು ಗೋಣಗಲು, ಹರಟಲು ನಿನ್ನ ಸುಳಿವಿಲ್ಲ. ನೊಂದು ಬಸವ ಳಿದಾಗ ಹಣೆಗೆ ಮುತ್ತಿಕ್ಕಿ ಜೋಗುಳ ಹೇಳುವವ ಅಂದ ಮೇಲೆ ಕಳೆದು ಹೋಗುವುದೇ ಸೂಕ್ತವೆಂದೆನಿಸಿದೆ. ಭಯವಿಲ್ಲ, ಅನುಮಾನವಿಲ್ಲ, ಪ್ರತಿಕ್ಷಣ ನಿನ್ನ ಜಪಿಸುವ ಜಪಮಾಲೆ ಹೃದಯದ ಬಡಿತವಾಗಿರುವುದು. ಎಂಥಹ ಸುಖದಾನುಭವ. ನಿನ್ನ ಪ್ರೀತಿಯ ಮುಂದೆ ಜಗವೇ ಮಂಕಾ ಗಿಹುದು. ಪ್ರೇಮವೆಂದರೆ ನಿರ್ಮಲ ಜಲವೆನ್ನಲೇ? ಕುಡಿದಷ್ಟು ಪಾವನ ತನುಮನ.
ಬೆತ್ತಲಾದ ಬಯಲಿಗೆ ಮಡಿಯುಂಟೇ. ಖಗ, ಮೃಗಗಳಿಗೆ ಅಂಗಿ ತೊಡಿಸಿದ್ದುಂಟೇ, ಹರಿವ ನದಿಗೆ ಸೀರೆಯುಡಿಸಿ ಶೃಂಗಾರ ಗೊಳಸಿದ್ದುಂಟೇ, ಮರಗಿಡಗಳ ಹಸಿರುಡುಗೆಯ ಲಿ ಮೈ ಚಾಚಿ ಮಲಗಿರುವ ಪ್ರಕೃತಿಯು ಮೇಘನ ಸ್ಪರ್ಶದಾ ಕಾತುರತೆಗೆ ಹಗಲಿರುಳು ಹಂಬಲಿಸಿದಂತೆ. ತೊಟ್ಟಿಕ್ಕುವ ಹನಿಗಳು ಕಾದ ವಿರಹದೆದೆಯ ತಂಪಾಗಿಸಲು ಹವಣಿ ಸಿದಂತೆ ಪ್ರೇಮಾನುಭಾವ. ಈ ಭಾವಕೆ ಸೃಷ್ಟಿ ಕರ್ತನು ನೀನೇ.. ನೀಲಮೇಘ ಶ್ಯಾಮಾ…ನಿನ್ನ ಅಧಿನವಿ ಭಾಮಾ…
ಪ್ರೇಮವೆಂದರೆ ಶಕ್ತಿ, ಧೈರ್ಯ ಪ್ರೇಮವೇ ಜಗತ್ತಿನ ಭಾಷೆ. ಅಳಿವು, ಉಳಿವಿಗೂ ಪ್ರೇಮವೇ ಮೂಲ. ಕಳೆದು ಹೋಗುವುದು ಪರಮಸುಖದ ಪರಮಾವಧಿ… ನಿನ್ನ ಹೊರತು ನನಗೇನಿದೇ… ವಿಶ್ವದೊಡೆಯ ನನ್ನಾತ್ಮದ ನೆಲೆಗಾರ ಎಲ್ಲವ ತೊರೆದು ನಿನ್ನಡಿಗೆ ಒರಗುವೆ ಶ್ಯಾಮ…