Site icon ಒಡನಾಡಿ

ಮಹಾಕಾಳಿಯ ಪದದ ಅಬ್ಬರಗಳು- ವಿಕಾಸದ ಮುನ್ನುಡಿ…

ಮಹಾಕಾಳಿಯ ಪದದ ಅಬ್ಬರಗಳು ಪರಾಕಾಷ್ಠೆಯನ್ನು ತಳೆದಿರುವ ದಾರುಣದ ಘಟನೆಗೆ ಈ ಅವಧಿ ತಲ್ಲಣಗೊಳ್ಳುತ್ತಿದೆ. ಇಡೀ ಜಗತ್ತಿನ ಮಾನವ ಕುಲದ ಜೀವನವೇ ಅಲ್ಲೋಲ-ಕಲ್ಲೋಲಗೊಂಡಿದೆ. ಭರವಸೆಯ ಕಿರಣ ಯಾವ ಬದಿಯಿಂದ ಬರುವದು ಎನ್ನುವದರ ಬಗೆಗೂ ಸಂಕೇತಗಳು ಕಾಣದಂತಹ ಹತಾಶ ಸ್ಥಿತಿ ತುಂಬಿಕೊಂಡಿದೆ. ಕಂಕಾಳಿಯ ಈ ಪದದ ಅಪ್ಪಳಿಸುವಿಕೆಗಳಿಂದಾಗಿ ಪ್ರಳಯವೇ ಸಂಭವಿಸುತ್ತಿದೆಯೇನೋ ಎನ್ನುವ ಭಯವೂ ತುಂಬಿಕೊಂಡಿದೆ.

ಆದರೆ ಮಾತೆಯ ಪ್ರತಿಯೊಂದು ಕ್ರಿಯೆಯೂ ವಿಕಾಸಕ್ಕೆ ಇರುತ್ತದೆಯೇ ವಿನಾ ವಿನಾಶಕ್ಕಲ್ಲ. ಈ ರೀತಿಯ ಘೋರ ಅನುಭವದ ಮೂಲಕವೇ ಮಾತೆಯು ನಮಗೆ ಪಥ ನಿರ್ದೇಶನ ಮಾಡುತ್ತಿದ್ದಾಳೆ. ವಾತ್ಸಲ್ಯಮಯೀ ಮಾತೆ ಕೋಪಗೊಂಡರೂ ಸಹಿತ, ಶಿಕ್ಷೆ ಕೊಡುವ ಅನಿವಾರ್ಯತೆ ಬಂದರೂ, ತನ್ನ ಮಕ್ಕಳು ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಬೇಕೆಂದು ಎಂದಿಗೂ ಇಚ್ಛಿಸುವದಿಲ್ಲ. ಪಥ ವಿಚಲನೆಗೊಂಡ ಪ್ರಯಾಣದಲ್ಲಿ ಶಿಕ್ಷೆಯ ಮೂಲಕವೇ ಶಿಕ್ಷಣ ಕೊಡಬೇಕಾದ ಅನಿವಾರ್ಯತೆಯನ್ನು ಲೌಕಿಕವು ಸೃಷ್ಟಿಸಿಕೊಂಡಿರುತ್ತದೆಯೇ ವಿನಾ, ಅದು ಎಂದಿಗೂ ಮಾತೆಯ ಆಶಯವಾಗಿರುವದಿಲ್ಲ. ಪಥದಿಂದ ಸ್ವಲ್ಪವೇ ದೂರ ಹೋದಾಗಲೇ, ಮಾತೆಯು ಕೃಪೆಯಿಂದ, ಸೂಕ್ತ ದಾರಿಗೆ ಬರಲು ಉಪದೇಶಿಸುತ್ತಾಳೆ; ಈ ಸಣ್ಣ ವಿಚಲನೆಯೂ ಮಹಾ ಪತನಕ್ಕೆ ಕಾರಣವಾಗಬಾರದೆಂದು ನಸುಕೋಪದಿಂದಲೇ ಎಚ್ಚರಿಸಿದಾಗಲೆಲ್ಲ ಈ ರೀತಿಯ ಪ್ರಳಯ ಸದೃಶ ಘಟನೆಗಳು ಘಟಿಸುತ್ತವೆ. ಅದು ಅನಿವಾರ್ಯವೂ ಆಗಿರುತ್ತದೆ. ಇದನ್ನರಿಯದ ಮಾನವ ತಲ್ಲಣ-ಬೇಗುದಿಗಳಲ್ಲಿ ಬೇಯುತ್ತಾನೆ; ಮತ್ತೆ ಮಾತೆಯ ಕೃಪೆಗಾಗಿ ಹಂಬಲಿಸತೊಡಗುತ್ತಾನೆ.

ಪುನರುತ್ಥಾನವನ್ನು ಎಂದಿಗೂ ತಪ್ಪಿಸಲು ಸಾಧ್ಯವಿಲ್ಲ. ವಿಕಾಸದ ಪ್ರಕ್ರಿಯೆಯಲ್ಲಿ-ಅದು ಉತ್ಕ್ರಾಂತಿಯ ಸ್ವರೂಪದ್ದೇ ಆಗಿದ್ದರೂ ಸಹಿತ, ಮಧ್ಯೆ ಮಧ್ಯೆ “ಕ್ರಾಂತಿ’ಕಾರಕ ಘಟನೆಗಳು, ಈ ಉತ್ಕ್ರಾಂತಿಯ ವೇಗವನ್ನು ತಡೆಯಲ್ಲಿ ಇನ್ನಿಲ್ಲದ ಅಬ್ಬರವನ್ನು ಸೃಷ್ಟಿಸುತ್ತವೆ. ಆದರೆ ನಿಯತಿಯ ಆಣತಿಯಂತೆ ನಿರ್ದಿಷ್ಟವಾದ ಉತ್ಕ್ರಾಂತಿಯ ಪಥವು, ಪುನರುತ್ಥಾನಕ್ಕಾಗಿಯೇ ರೂಪುಗೊಂಡಿರುತ್ತದೆ. ಆಧುನಿಕ, ವೈಜ್ಞಾನಿಕ ಆಯಾಮಗಳಲ್ಲಿ, ಭೌತಿಕ ಪ್ರಪಂಚದ ಯಾಂತ್ರಿಕ ಸುಖೋಪಭೋಗಗಳ ಪರಾಕಾಷ್ಠೆಯಲ್ಲಿ, ನಮ್ಮ ಈ ವಿಚಲನದ ಹಾದಿ ‘ಭಯಾವಹ’ವಾಗಿರುವದು ಸಹಜವಾಗಿರುತ್ತದೆ. ಭ್ರಾಂತಿ-ಭ್ರಾಂತಿಗಳ ತುಕಡಿಗಳನ್ನೇ ಕಟ್ಟಿಕೊಂಡು ಅಂಧರಾಗಿ , ನಿಯತಿಯನ್ನೂ ಮೀರಿದ್ದೇವೆ ಎಂದು ಜಯಭೇರಿ ಬಾರಿಸುತ್ತೇವೆ. ಕಾಲ-ಮಿತಿಯನ್ನು ಮರೆತು, ನಿಗದಿತದ ಗಡಿ-ಗೋಡೆಗಳನ್ನೂ ಹುಡಿಗುಟ್ಟಿಸಿ, ಇಡೀ ಲೋಕವನ್ನೇ ನುಂಗಿ ನೊಣೆಯುವ ಝಂಝಾವಾತವನ್ನು ಸೃಷ್ಟಿಸತೊಡಗಿದಾಗ, ರಣಭೇರಿಗೆ ಲೋಕವೆಲ್ಲವನ್ನೂ ಕಣ್-ಕಣ್ ಬಿಡುವಂತೆ ಮಾಡಿದಾಗ, ಇಡೀ ಮಾನವ ಕುಲವೇ ದಹಿಸಿ ಹೋಗುವ ಸಂದರ್ಭ ಬಂದಾಗ, ಮಾತೆಯು ಸಹಜವಾಗಿಯೇ ತನ್ನ ಕೋಪವನ್ನು ತೋರ್ಪಡಿಸಲೇಬೇಕಾಗುತ್ತದೆ.

ಆದರೆ ಇಂತಹ ತಲ್ಲಣದ ಸಮಯದಲ್ಲಿಯೇ ಹೊಸ ಆಶಾ ಕಿರಣದ ಭರವಸೆಯೂ ಅಡಗಿರುತ್ತದೆ. ಅದು ಗೋಚರಕ್ಕೂ ಬರುತ್ತದೆ. ಹೃದಯವನ್ನೇ ದಿಗ್ಬಂಧಗೊಳಿಸುವಂತಹ ರಕ್ಕಸ ಶಕ್ತಿ ಇದ್ದರೂ, ಜಾಗ್ರತಿಯ ಕ್ರಿಯೆಗಳು ಮತ್ತೆ ಆತ್ಮಶಕ್ತಿಯನ್ನು ಉದ್ದೀಪನಗೊಳಿಸುತ್ತವೆ, ನವಯುಗಕ್ಕೆ ನಾಂದಿ ಹಾಡುತ್ತವೆ. ಆ ವಿಷಣ್ಣ ಪರಿಸ್ಥಿತಿಯಿಂದ ಯಶಸ್ವಿಯಾಗಿ ಹೊರಬರುವ ದಾರಿಯನ್ನೂ ಮಾತೆಯೇ ತೋರುತ್ತಾಳೆ. ಅವಳ ಹಿತೋಪದೇಶಗಳನ್ನು ಆತ್ಮಪೂರ್ವಕವಾಗಿ ಅನುಷ್ಠಾನಿಸಲು ಸಿದ್ಧರಾದಲ್ಲಿ, ಈ ಪ್ರಳಯಕಾರೀ ಘಟನೆಗಳೇ ‘ನವಯುಗಕ್ಕೆ” ಬರೆದ ಮುನ್ನುಡಿಯಾಗುತ್ತವೆ.


-ಪುಟ್ಟು ಕುಲಕರ್ಣಿ

[ ‘ಅಖಿಲ ಭಾರತ ಪತ್ರಿಕೆ ,ಎಪ್ರಿಲ 2020 ರಲ್ಲಿ ಪ್ರಕಟ]
Exit mobile version