Site icon ಒಡನಾಡಿ

ನಿಗಿಕೆಂಡದ ಒಲೆಯ ಬೆಳಕು ನನ್ನವ್ವ…

ಸಂಜೆಯ ಕರಿ ಚಹಾದ ಘಮಲು ಮೂಗಿಗೆ ಬಡಿಯುತ್ತಲೆ ಎಲ್ಲಿಯೋ ಇದ್ದ ಮನಸು, ದೇಹ ಥಟ್ಟನೆ ಒಲೆ ಮುಂದೆ ಹಾಜರು . ಕಟ್ಟಿಗೆಯ ಒಲೆ ಮೇಲೆ ಕುದಿಯುತ್ತಿದ್ದ ಚಹಾ ಒಂದು ಕ್ಷಣ ಅವ್ವನ ಭೂತ ಭವಿಷ್ಯ ವರ್ತಮಾನ ಬದುಕು ಕಣ್ಣು ಮುಂದೆ ಸಂಜೆಯ ಸಿನೇಮಾದಂತೆ ಚಲಿಸಿ ಬಿಡುತ್ತಿತ್ತು. ಈ ಸಿನಿಮಾ ನಮ್ಮ ಪಾತ್ರ ಯಾವಾಗಿನಿಂದ ಎಂಬ ಕುತೂಹಲ ಇದ್ದೇ ಇರುತ್ತದೆ. ಅವ್ವ ತನ್ನ ಭೂತಕಾಲದ ಬುತ್ತಿಯನ್ನು ಬಿಚ್ಚಿ ತನ್ನ ಬಾಲ್ಯ ,ಯೌವನ, ಗಂಡನ ಮನೆ , ಬಡತನ, ಬದುಕಿನ ಹೋರಾಟ ಇಂತಹ ಗಂಭೀರ ವಿಷಯದ ಚಿತ್ರ ಮಾಲೆಯನ್ನು ಮೆರೆಯುತ್ತಿದ್ದು ,ನಾನು ಅಲ್ಲೇ ಜೊತೆಗೆ ಅವಳ ಬಾಲ್ಯ,ಯೌವನ, ಬದುಕಿನಲ್ಲಿ ಜನರ ನಡುವಳಿಕೆ ಅವರೊಂದಿಗೆ ವ್ಯವಹಾರಿಸುವ ರೀತಿ ಇನ್ನಾವುದೋ ವಿಷಯದಲ್ಲಿ ಬದುಕಿನ ಸತ್ಯವನ್ನು ಹೇಳಿ ಬಿಡುತ್ತಿದ್ದಳು. ನೀನು ನಾಲ್ಕು ಮಂದಿ ಮೆಚ್ಚುವಂತೆ ಬಾಳು, ಆದರೆ ನಿನ್ನತನವನ್ನು ಯಾವತ್ತು ಬಿಡಬೇಡ….

ಬದುಕಿನ ಸತ್ಯದ ಬೆಳಕಿನ ಜಲಕು ಜಾರಿಸುತ್ತಲೆ ಫಕ್ಕನೆ ನಕ್ಕು ಬಿಡುವ ಅವ್ವ. ವರ್ತಮಾನಕ್ಕೆ ಬಂದಾಗ ಬಿಸಿಕರಿ ಚಹಾ ನಾಲಿಗೆ ಸುಟ್ಟು ಹೊಟ್ಟೆಗೆ ಇಳಿದಿರುತ್ತಿತ್ತು. “ಯವ್ವಬೇ ನಿನ್ನ ನಾ ರಾಣಿಹಂಗ ನೋಡು ಕೊಂತೀನಿ ಬೇ ಚಿಂತಿ ಯಾಕೆ ಮಾಡತ್ತಿ”. ನಿನ್ನ ಬಡತನ ನಿನ್ನ ಕಾಲಕ್ಕೆ ಕೊನೆ ಬಿಡು. ಎಂದು ಹೇಳಿ ನಾನು ಹುರುಪಿಲೆ ಹೊರಬಂದಾಗ ಅನಿಸುತ್ತಿತ್ತು. ಏನಾದರೂ ಆಗಲಿ ಅವ್ವನ ಚೆನ್ನಾಗಿ ನೋಡಿಕೋ ಬೇಕು. ಮತ್ತೆ ಕೆಲಸದಲ್ಲಿ ಮಗ್ನನಾಗುತ್ತಿದ್ದೆ. ಕಾಲನ ನಿರ್ಧಾರಿತ ಜೀವನದ ದಾರಿಯಲ್ಲಿ ನನ್ನ ಬದುಕಿನ ಸಿನಿಮಾದಲ್ಲಿ ಅವ್ವನ ಪಾತ್ರ ನಡುಮಧ್ಯವೆ ಎದ್ದು ಹೋಯಿತು. ಕೊನೆಗೂ ಅವಳನ್ನು “ರಾಣಿಹಂಗ” ನೋಡಿ ಕೊಳ್ಳುವುದರಿಂದ ವಂಚತನಾದ ನತದೃಷ್ಟ ನಾನು.

ಯವ್ವಬೇ…

ನಿಗಿಕೆಂಡದ ಒಲೆಯ ಬೆಳಕು ನನ್ನವ್ವ
ರಾಟಿ ಚಕ್ರದ ದಿನಚರಿಯವಳು ನನ್ನವ್ವ
ಕಷ್ಟಕ್ಕೆ ಕಲ್ಲು ಮನಸು ಮುದ್ದಿಗೆ ಬೆಣ್ಣೆ ಮನಸು ನನ್ನವ್ವ…

ಬದುಕಿನ ಕಲೆಗಾರಿಕೆ ಕುಶಲಕರ್ಮಿ
ಬಡತನದಲ್ಲಿ ಬದುಕು ಕಟ್ಟಿದ ಮುಗ್ಧ ಪ್ರೀತಿಯ ಗಾರೆಯವಳು ನನ್ನವ್ವ
ಶಾಲೆ ಕಲಿಯದೆ ಗುರುವಾದವಳು ನನ್ನವ್ವ..

ಬಿಳಿ ಅನ್ನ ಕೆಂಪು ಸಾರಿಗಾಗಿ ಬೆವರ ಉಪ್ಪು ಮೂಟೆ ಸುರಿಸಿದವಳು ನನ್ನವ್ವ
ತಾನು ಅರೆ ಹೊಟ್ಟೆ ಉಂಡು ತಣ್ಣೀರನ್ನು ಅಮೃತವೆಂದು ಕುಡಿದವಳು ನನ್ನವ್ವ…

ಅಚ್ಚತೊಪೀನ ದಡಿ ಸೀರೆ ಶಾವಂತಿಗೆ ಬಣ್ಣ ಕುಬುಸ ಇಷ್ಟಪಟ್ಟುವಳು ನನ್ನವ್ವ
ನಾ ದುಡಿದು ಕುಡಿಟ್ಟ ಕಾಸಿನಲ್ಲಿ ತಂದುಕೊಡುವ ಮುಂಚೆ ನಿಗಿಕೆಂಡದ ಒಲೆಯ ಬೂದಿಯಾದಳು ನನ್ನವ್ವ…

(ವೃಶ್ಚಿಕ ಮುನಿ..)
-ಪ್ರವೀಣಕುಮಾರ ಸುಲಾಖೆ, ದಾಂಡೇಲಿ (ಗುಳೇದಗುಡ್ಡ)


ಲೇಖಕರ ಪರಿಚಯ: ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಪ್ರವೀಣಕುಮಾರ ಸುಲಾಖೆಯವರು, ಪ್ರವೃತ್ತಿಯಲ್ಲಿ ಬರಹಗಾರರು, ರಂಗಭೂಮಿ ಕಲಾವಿದರು. ಇವರ ಹಲವಾರು ಲೇಖನಗಳು ನಾಡಿನ ದಿನಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.

Exit mobile version