Site icon ಒಡನಾಡಿ

ಆಕೆ ಮಗಳಾಗಿ ಏಕೆ ಬೇಡ ?

ಅವಳು ಮೌನವಾಗಿದ್ದಾಳೆ
ಏಕೆ ಎಂದು ಕೇಳಿದರೆ ಮಾತನಾಡುವುದಿಲ್ಲ
ನವಮಾಸದ ನೆಮ್ಮದಿ ತಣ್ಣಗೆ
ಸರಿಯುತಿದೆ ಹಗಲಿರುಳ ಬೇನೆಯಲಿ

ಮನಸ ಸುತ್ತಲೂ ಮನೆಮಾಡಿದ
ಸಾವಿನ ದುಗುಡ ಅವಳ ಬೆನ್ನು ಬಿಟ್ಟಿಲ್ಲ
ಬೆತ್ತಲೆಯ ಕರಾಳ ಛಾಯೆ
ಪೇಲವ ನಗುವಿನ ಹಿಂದೆ ನೋವಿನಾನೆರಳು

ಆ ಪರದೆಯಲಿ ಪತ್ತೆಯಾದ ಹೆಣ್ಣು ಭ್ರೂಣಕೆ
ಸಿಡಿಲು ಬಡಿದು ಬೇಯುತ್ತಿದೆ ಬಸಿರ ಒಡಲು
ಮಾಂಗಲ್ಯದೆಳೆಯು ಬಿಗಿಯುತ್ತಿದೆ ಕತ್ತಿನ ನರಗಳನು
ಮಾತುಗಳು ವಿಷ ಚೆಲ್ಲುತ್ತಿವೆ

ನರಕದಲ್ಲಿ ತೊಯ್ದು ಎಲುಬಿನ ಗೂಡಾಗಿದ್ದ ಕಾಯಕೆ
ಮಾನವೀಯ ಸ್ಪಂದನೆಗಳೇ ಮರೀಚಿಕೆ
ಭಾಗ್ಯವರಸುವ ಕಣ್ಣವೆಗಳು ದು:ಸ್ವಪ್ನ ಉಣ್ಣುತ್ತಿವೆ
ಬಯಕೆ ಬಡಿಸಿ ಕಳಿಸಿದ ತವರಿಗೆ ರೋಧನೆ
ಕೇಳುತ್ತಿಲ್ಲ

ಅವಳ ಬರುವಿಕೆಗೆ ಓಣಿ ದಣಪೆಗಳು ಕಾಯುತ್ತಿವೆ
ಮನೆಯಂಗಳದ ಕುಸುಮಗಳು
ನಿತ್ರಾಣಗೊಂಡಿವೆ
ತಾಯಿಯಾಗಿ ಬೇಕು ಹೆಂಡತಿಯಾಗಿ ಬೇಕು
ಆಕೆ ಮಗಳಾಗಿ ಏಕೆ ಬೇಡ ?ಎಂಬ ಮಿಡಿತ ಕಾಡುತ್ತಿದೆ

ಪ್ರೀತಿ ಬಯಕೆಗೆ ಮೊಳೆತ ಭ್ರೂಣಕೆ ಮಣ್ಣೆಳೆವ ಕ್ರೂರತನ
ಬಸಿರ ಬಗೆವ ರಾಕ್ಷಸ ಗುಣ
ಬೆಳಕು ಕಾಣಬೇಕಾದ ಜೀವವ ಮಸಣಕೆಳೆದ
ಹತ್ಯೆಯ ಕೆಂಪು ರಕ್ತ ಜಗತ್ತಿಗೆ ಸತ್ಯ ಸಾರಿದೆ

              

ಲೇಖಕರ ಪರಿಚಯ: ಜೋಯಿಡಾ ತಾಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ಹಿವಸುತ್ತಿರುವ ಎ.ಆರ್.‌ ಗೌಡ ತಾಳೆಬೈಲರವರು ಮೂಲತಹ ಅಂಕೋಲಾ ತಾಲೂಕಿನ ತಾಳೆಬೈಲ್‌ನವರು.
ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಬರಹಗಾರರು. ತಮ್ಮ ಮಕ್ಕಳ ಕಥೆ, ಕವನಗಳ ಮೂಲಕ ಪರಿಚಿತರಾದವರು. ಇವರ ಕೆಲ ಕೃತಿಗಳು ಪ್ರಕಟಗೊಂಡಿವೆ.

Exit mobile version