ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ ಕಥೆಯೇ ನಾಗರಿಕತೆ.
ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ ಗುಣಗಳಿಂದಾಗಿಯೇ ಮಾನವ ಲಕಲಕಿಸುವ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ ಕಾಯಿಲೆಗಳ ವಿರುದ್ಧ ಹೋರಾಡಿ ಗೆದ್ದಿದ್ದು.ಸಪ್ತ ಸಾಗರಗಳನ್ನು ಜಯಿಸಿದ್ದು.ಚಂದ್ರನ ಮೇಲೆ ಹೆಜ್ಜೆ ಊರಿದ್ದು.ಟ್ರೇನ್ ಗಳು, ಏರೋಪ್ಲೇನುಗಳು ಮೊಬೈಲ್ಗಳು, ಕಂಪ್ಯೂಟರ್ ಗಳು, ಇತ್ಯಾದಿಗಳನ್ನು ಆಟಿಗೆಗಳನ್ನಾಗಿಸಿಕೊಂಡಿದ್ದು.ಹೀಗಾಗಿಯೇ ಎಂಥದ್ದನ್ನೂ ಬೇಕಾದರೂ ತಾನು ಎದುರಿಸಿ ನಿಲ್ಲಬಲ್ಲೆ ಎಂಬ ಭಾವನೆ ಮಾನವ ಮನಸ್ಸಿನಲ್ಲಿ ಮೂಡಿನಿಂತಿದೆ.
ಪ್ರಸಿದ್ಧ ಬ್ರಿಟಿಷ್ ನಾಟಕಕಾರ ಜೆಎಂ ಸಿಂಜ್ ನ ನಾಟಕ ರೈಡರ್ಸ್ ಟು ದಿ ಸೀ ದಲ್ಲಿ ಬರುವ ಮೌರ್ಯ ಎನ್ನುವ ಶೌರ್ಯದ ಮಹಿಳೆಯ ಪಾತ್ರ ಇಂತಹ ಮಾತು ಹೇಳುತ್ತದೆ. ಅವಳ ಮಕ್ಕಳೆಲ್ಲರನ್ನೂ ಮುಳುಗಿಸಿ ಹೋದ ಸಮುದ್ರಕ್ಕೆ ತಿರುಗಿ ನಿಂತು ಅವಳು ಸವಾಲು ಹಾಕುತ್ತಾಳೆ.” ನೀನು ನನ್ನನ್ನು ಒಮ್ಮೆ ಸೋಲಿಸಬಹುದು. ಆದರೆ ನಾಶ ಮಾಡಲಾಗುವುದಿಲ್ಲ”. ಇದೇ ಮಾತನ್ನೇ ಹೆಮಿಂಗ್ವೇನ ಕಾದಂಬರಿ ದ ಓಲ್ಡ ಮ್ಯಾನ್ ಎಂಡ್ ದ ಸೀ ಹೇಳುತ್ತದೆ. ಮನುಷ್ಯನನ್ನು ಸೋಲಿಸುವುದು ಸುಲಭವಲ್ಲ .
ಆದರೆ ಇಂತಹ ಆತ್ಮವಿಶ್ವಾಸದ , ಸಕಾರಾತ್ಮಕತೆಯ ಮಾತುಗಳನ್ನು ಹೇಳಿಕೊಳ್ಳುತ್ತಲೇ ನಾವು ಗಮನಿಸಿಕೊಳ್ಳಬೇಕು. ಏನೆಂದರೆ ಪ್ರಸ್ತುತದಲ್ಲಿ ಅತಿ ಭಾರಿ ದುರಂತವೊಂದರ ಮಧ್ಯೆ ನಾವು ಬದುಕಿದ್ದೇವೆ. ಮಾನವ ಕುಲವೇ ನಾಶವಾಗಿ ಹೋಗಬಹುದಾದ ಫನಘೋರ ಸಾದ್ಯತೆಯ ನಡುವೆ. ಬಹುಶ: ಪ್ರಸ್ತುತ ದುರಂತದ ಆಳ ಅಗಲಗಳು, ಕರಾಳತೆ ಮತ್ತು ಅಗಾಧತೆಗಳು ಇನ್ನೂ ಪೂರ್ತಿ ಬಿಚ್ಚಿಕೊಂಡಂತಿಲ್ಲ. ಪ್ರತಿದಿನವೂ ಹೊಸ ಹೊಸ ಕಪ್ಪು ಅಧ್ಯಾಯಗಳು ಅದಕ್ಕೆ ಸೇರಿಕೊಳ್ಳುತ್ತಲೇ ಇವೆ.ಇತಿಹಾಸದಲ್ಲಿ ಕಂಡು ಕೇಳರಿಯದಂತವುಗಳು.
ಹಾಗೆಂದು ಮಾನವತೆಗೆ ದುರಂತಗಳು ಗೊತ್ತಿಲ್ಲವೆಂದೇನೂ ಅಲ್ಲ. ಗೊತ್ತು. ಅವು ನಮ್ಮನ್ನು ನಿರಂತರ ಕಾಡಿವೆ.
ಇಥಿಯೋಪಿಯಾದ ಮಹಾ ಬರಗಾಲದಲ್ಲಿ ಮನುಷ್ಯರು ಹೊಟ್ಟೆಗಿಲ್ಲದೆ ನರಳಿ ನರಳಿ ಹುಳುಗಳಂತೆ ಸತ್ತಿದ್ದು ಗೊತ್ತು. ಸಮುದ್ರವೇ ಸುನಾಮಿಯಾಗಿ ಕಿತ್ತೆದ್ದು ಬಂದು ಜನರನ್ನು ಹೊಟ್ಟೆಯೊಳಗೆ ಸೆಳೆದುಕೊಂಡು ಹೋಗಿದ್ದನ್ನು ನೋಡಿದ್ದೇವೆ. ಒಂದನೆಯ ಎರಡನೆಯ ಮಹಾಯುದ್ಧಗಳ ಭೀಕರತೆ ನಮಗೆ ಗೊತ್ತಿದೆ. ರಷ್ಯಾದ ಚಳಿಯಲ್ಲಿ ಸಾವಿರಾರು ಜರ್ಮನ್ ಸೈನಿಕರು ಹಿಮದ ಗೊಂಬೆಗಳಾಗಿ ಸತ್ತು ನಿಂತ ದಾರುಣ ಕಥೆಗಳು ಗೊತ್ತಿವೆ. ದೇಶಗಳ ವಿಭಜನೆಗಳ ಸಂದರ್ಭಗಳಲ್ಲಿ ಲಕ್ಷ ಲಕ್ಷ ಮಹಿಳೆಯರನ್ನು, ಮಕ್ಕಳನ್ನು ಕೊಚ್ಚಿ ಹಾಕಿದ ಬರ್ಬರತೆಯ ವಿಷಯ ನಮಗೆ ಗೊತ್ತಿದೆ .ಹಿರೋಶಿಮಾದ ಮೇಲೆ ಬಾಂಬ್ ಬಿದ್ದು ಜನ ಬೂದಿಯಾಗಿ ಹೋಗಿದ್ದಾರೆ.
ಆದರೆ ಕರೋನಾ ದುರಂತ ಬಹುಶಃ ಅವೆಲ್ಲವುಗಳಿಗಿಂತಲೂ ದೊಡ್ಡದು ಮತ್ತು ಅಸಾಧಾರಣವಾದುದು. ಅದರ ಮಜಲುಗಳನ್ನು ಗಮನಿಸಿಕೊಳ್ಳಬೇಕು. ಒಂದನೆಯದು ಅದರ ನಿಗೂಢತೆ. ಆರಂಬವಾದ ಆರು ತಿಂಗಳ ನಂತರವೂ ತನ್ನ ನಿಜದ ವಿನಾಶಕಾರಿ ಶಕ್ತಿಯ ಒಳಗುಟ್ಟನ್ನು ಅದು ಬಿಟ್ಟು ಕೊಡುತ್ತಲೇ ಇಲ್ಲ. ಕರೋನಾ ತಂದಿಡಬಹುದಾದ ವಿಘಾತವನ್ನು ಅಳೆಯುವ ಸಾಧನವೇ ನಮ್ಮ ಬಳಿ ಇರುವಂತಿಲ್ಲ .ಹಾಗೆಯೇ ಇರುವುದು ಅದರ ವ್ಯಾಪ್ತಿ.ಹಿಂದಿನ ದುರಂತಗಳಿಗೆ ಈ ಕ್ಯಾನ್ವಾಸ್ ಇರಲಿಲ್ಲ. ವಿಶ್ವವೇ ವೇದಿಕೆ ಯಾಗಿರಲಿಲ್ಲ. ಆದರೆ ಈಗ ಹಾಗಿಲ್ಲ . ಜಗತ್ತೇ ಅದರ ವ್ಯಾಪ್ತಿಯಲ್ಲಿ ಬಂದುಹೋಗಿದೆ.ಯಾವ ದೇಶವೂ ಅಪಾಯದಿಂದ ಹೊರತಾಗಿಲ್ಲ. ಗಂಭೀರತೆಯ ಪ್ರಮಾಣವನ್ನು ಗಮನಿಸಿಕೊಳ್ಳಬೇಕು. ಜಗತ್ತಿನಾದ್ಯಂತ ಇಲ್ಲಿಯತನಕ ಎರಡೂ ಮುಕ್ಕಾಲು ಲಕ್ಷ ಜನ ಸಾವಿಗೆ ಬಲಿಯಾಗಿದ್ದಾರೆ. ಹತ್ತಿರ ಹತ್ತಿರ ಐವತ್ತು ಲಕ್ಷ ಜನ ಸೋಂಕಿತರಾಗಿದ್ದಾರೆ. ದುರಂತವೆಂದರೆ ಪ್ರತಿ ಐದು ದಿನಗಳಿಗೊಮ್ಮೆ ಹತ್ತು ದಿನಗಳಿಗೊಮ್ಮೆ ಸಂಖ್ಯೆ ದ್ವಿಗುಣವಾಗುತ್ತಿದೆ.ಅಂದರೆ ಮುಂದೆ ಸೋಂಕಿತರ, ಸಾವಿನ ಸಂಖ್ಯೆ ಕೋಟಿ ಕೋಟಿಯಾಗಿ ಬಿಡಬಹುದು. ಜೂನ್, ಜುಲೈ ಅವಧಿಯಲ್ಲಿ ಜಗತ್ತಿನಲ್ಲಿ ಕರೋನಾ ತುರೀಯಕ್ಕೆ ಹೋಗುತ್ತದೆ ಎಂದು ಜನರಾಡುವ ಮಾತು ನಮಗೆ ಗೊತ್ತಿದೆ.ವಾಸ್ತವವೆಂದರೆ ‘ತುರೀಯ’ ಎಂದರೆ ಏನು? ಇದೆಲ್ಲ ಎಲ್ಲಿ ಹೋಗಿ ನಿಲ್ಲುತ್ತದೆ ? ಎನ್ನುವುದು ಯಾರಿಗೂ ತಿಳಿದಿಲ್ಲ. ಅದು ತಿಳಿದಿರುವುದು ಕರೋನಾಗೆ ಮಾತ್ರ. ನಿಜವಾಗಿಯೂ ನಾವು ಇರುವುದು ಗಾಢಾಂಧಕಾರದ ಇರುಳಲ್ಲಿ. ಕಣ್ಣಿಗೆ ಬೀಳದೆ,ಸದ್ದು ಮಾಡದೆ, ವಾಸನೆ ಬೀರದೆ , ದುಷ್ಟ ಆಟವಾಡುತ್ತಿರುವ ಅಪಾಯಕಾರಿ ಪ್ರಬಲ ವೈರಿಯ ತೆಕ್ಕೆಯಲ್ಲಿ ನಾವಿದ್ದೇವೆ.
ಸದ್ಯ ಭಾರತದಲ್ಲಿ ಸಾವಿನ ಸಂಖ್ಯೆ ಹತೋಟಿ ಯಲ್ಲಿರಬಹುದು.ಆದರೆ ಅದೆಲ್ಲ ಹೇಳಲಾಗುವುದಿಲ್ಲ.ಅಲ್ಲದೆ ಇಷ್ಟು ದಿನ ಸಮುದಾಯವನ್ನು ಪ್ರವೇಶಿಸುತ್ತಿಲ್ಲ , ಪ್ರವೇಶಿಸಿಲ್ಲ ಎಂದು ಹೇಳಲಾಗುತ್ತಿದ್ದ ಮಹಾಮಾರಿಗೆ ಈಗ ದಾರಿಯೂ ತೆರೆದುಕೊಂಡಿದೆ.ಅಲೆಮಾರಿ ಕಾರ್ಮಿಕರು,ಹಾಗೂ ದೇಶ ವಿದೇಶಗಳಿಂದ ಬಂದ ಜನ ಈಗ ನಮ್ಮ ಎಲ್ಲ ಮೂಲ ಮೂಲೆಗಳಿಗೂ, ಹಳ್ಳಿಗಳಿಗೂ ಈಗ ತಲುಪಿದ್ದಾರೆ. ಹಾಗೆಯೇ ಬ್ರಹನ್ ನಗರಗಳಿಂದ, ವಿದೇಶಗಳಿಂದ ಜನ ಆಗಮಿಸಿ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳು ಇತ್ಯಾದಿಗಳನ್ನು ತುಂಬಿಕೊಂಡಿದ್ದಾರೆ. ಅವರೆಲ್ಲರಿಗೂ ಊರಿಗೆ ಹೋಗಲು ಈಗ ಅನುಮತಿ ದೊರಕಿದೆ. ಈ ರೀತಿಯ ಬೃಹತ್ ಮಾನವ ಚಲನೆ ದೇಶದಲ್ಲಿ ಕರೋನ ವನ್ನು ಅತಿ ಗಂಭೀರ ಹಂತಕ್ಕೆ ಕೊಂಡೊಯ್ಯಬಹುದಾಗಿದೆ. ಹಾಗೆಂದು ಸರ್ಕಾರಗಳನ್ನು ನಾವು ದೂಷಿಸುವಂತೆ ಇಲ್ಲ. ಏಕೆಂದರೆ ಲಕ್ಷ ಲಕ್ಷ ಜನರನ್ನು, ಅಲೆಮಾರಿ ಕಾರ್ಮಿಕರನ್ನು ಮಹಾನಗರಗಳಲ್ಲಿ ಇಟ್ಟುಕೊಳ್ಳುವುದಾದರೂ ಹೇಗೆ? ಅವರಿಗೆಲ್ಲ ಊಟ ಉಣಬಡಿಸುವುದು ಹೇಗೆ? ವಸತಿ ಎಲ್ಲಿ ನೀಡುವುದು ? ಅಲ್ಲದೆ ಅಲ್ಲಿಯೇ ಒಮ್ಮೆ ಅವರಿಗೆ ಸೋಂಕು ತಗುಲಿದರೆ ಲಕ್ಷ ಲಕ್ಷ ಜನರಿಗೆ ಸೋಂಕು ಬರುವುದಿಲ್ಲವೇ ?.ಕರೋನಾ ದುರಂತ ನಾಟಕದ ಮಜಲುಗಳು ಇವು.
ದುರಂತದ ಇನ್ನೂ ಹಲವು ಆಯಾಮಗಳನ್ನು ಗಮನಿಸಬೇಕು. ಕರೋನಾ ನಮ್ಮ ಮುಂದೆ ತಂದಿಟ್ಟಿರುವ ಯುದ್ಧ ಗೆರಿಲ್ಲಾ ಯುದ್ಧ . ನೇರ ಯುದ್ಧವಲ್ಲ. ಹದಿನೆಂಟು ದಿನಕ್ಕೆ ಸೀಮಿತವಾದ ಯುದ್ಧವಲ್ಲ. ನಾವು ಲಾಕ್ ಡೌನನ್ನು ಘೋಷಿಸಿದಂತೆ ಅದು ಸುಮ್ಮನೆ ಕುಳಿತುಕೊಳ್ಳುತ್ತದೆ. ಶಸ್ತ್ರಾಸ್ತ್ರಗಳನ್ನು ಮಸೆಯುತ್ತಿರುತ್ತದೆ. ಕಾಯುತ್ತದೆ. ಲಾಕ್ ಡೌನ್ ಬಿಚ್ಚಿದಂತೆ ಮತ್ತೆ ನಮ್ಮ ಮೇಲೆ ನೂರು ಕಡೆಗಳಿಂದ ದಾಳಿ ಮಾಡುತ್ತದೆ. ಹೀಗೆ ಅದು ತೊಡಗಿರುವುದು ಸುದೀರ್ಘವಾದ ಯುದ್ಧದಲ್ಲಿ .ಅದಕ್ಕೆ ಎದುರಾಳಿಗಳ ವೀಕ್ನೆಸ್ ಚೆನ್ನಾಗಿ ಗೊತ್ತಿದೆ. ಎದುರಾಳಿಯನ್ನು ಆಟವಾಡಿಸಿ, ಸುಸ್ತು ಗೊಳಿಸಿ, ನಿತ್ರಾಣ ಗೊಳಿಸಿ ಸೋಲಿಸುವುದು ಅದಕ್ಕೆ ಗೊತ್ತಿದೆ .ನಿಜಕ್ಕೂ ನಮ್ಮ ಸವಾಲು ಇರುವುದು ಇಲ್ಲಿ.
ಇನ್ನೊಂದು ವಿಷಯ. ನಮ್ಮ ನಾಯಕತ್ವ ಮತ್ತು ಅಧಿಕಾರಿಗಳು ಇಲ್ಲಿಯವರೆಗೆ ನೀಡಿರುವ ಸೇವೆ ಅವಿಸ್ಮರಣೀಯವಾದದ್ದು . ಹಾಗೆಯೇ ವೈದ್ಯರು, ಇಲಾಖೆಗಳು, ಕಾರ್ಯಕರ್ತರು, ಕಾರ್ಯಕರ್ತೆಯರು ಗೈದ ಸೇವೆ. ಅವರು ತಮ್ಮ ದೈಹಿಕ, ಮಾನಸಿಕ ಶಕ್ತಿಯನ್ನೆಲ್ಲ ಪಣಕ್ಕಿಟ್ಟು ಇಲ್ಲಿಯವರೆಗೆ ದುಡಿದಿದ್ದಾರೆ. ಮುಂದಿನ ಸವಾಲು ಇರುವುದು ಈಗ. ತೀವ್ರ ಒತ್ತಡದಲ್ಲಿ ಈಗಾಗಲೇ ಸಿಲುಕಿರುವ ವೈದ್ಯರು, ಅಧಿಕಾರಿಗಳು ಇನ್ನು ಮುಂದೆ ಕ್ರಮೇಣ ತಮ್ಮ ತ್ರಾಣ ಕಳೆದುಕೊಂಡರೆ,ಸಡಿಲವಾದರೆ ಅಥವಾ ಸಡಿಲಬಿಟ್ಟರೂ ಆಶ್ಚರ್ಯವಿಲ್ಲ .ಇವೆಲ್ಲಾ ಮಾನವೀಯ .ಆದರೆ ಇವೆಲ್ಲ ಒಂದು ಘನ ಘೋರ ದುರಂತಕ್ಕೆ ದಾರಿ ಮಾಡಿಕೊಡಬಹುದಾದ ಸಾಧ್ಯತೆಗಳು.ಕರೋನಾ ತೆಗೆದುಕೊಳ್ಳುತ್ತಿರುವ ಸುದೀರ್ಘ ಸಮಯ ದುರಂತದ ಇನ್ನೊಂದು ಮುಖ.
ವೈರಸ್ ನಮ್ಮ ಮೇಲೆ ಸಾರಿರುವ ಸಮರದ ಇನ್ನೊಂದು ಪ್ರಮುಖ ಆಯಾಮ ಆರ್ಥಿಕತೆಯ ಮೇಲೆ ಅದರ ಧಾಳಿ. ನಮ್ಮ ಅರ್ಥಿಕತೆ ಯಾವ ದುಸ್ತಿತಿ ತಲುಪುತ್ತಿವೆ ಎಂದರೆ ಒಮ್ಮೆ ಹೀಗೆಯೇ ಮಂದುವರಿದಲ್ಲಿ ಜಾಗತಿಕವಾಗಿ ಮಹಾನ್ ಕ್ಷಾಮ ಎದುರಾಗಿ ಹೋಗಿಬಿಡಬಹುದು.
ಪ್ರಸ್ತುತದಲ್ಲಿ ವಿಶ್ವ ಆರ್ಥಿಕತೆಯ ಗೋಜಲು ಹೇಗಿದೆಯೆಂದರೆ ಎಲ್ಲ ದೇಶಗಳೂ ಒಂದು ಇನ್ನೊಂದರ ಮೇಲೆ ಅವಲಂಬಿಸಿವೆ. ಸಾಗಾಣಿಕೆ ಮತ್ತು ಬಳಕೆ ಕೂಡ ಇಂದು ಉತ್ಪನ್ನದ ಭಾಗವೇ. ಇಂದಿನ ಆರ್ಥಿಕತೆ ಒಂದು ಜಾಗತಿಕ ಸರಣಿ. ಒಂದು ಕೊಂಡಿ ತಪ್ಪಿದರೂ ಸಾಕು. ಎಲ್ಲವೂ ಕುಸಿದು ಬೀಳುತ್ತವೆ. ಉದಾಹರಣೆಗೆ ಕಚ್ಚಾ ತೈಲದ ಬೆಲೆಯಲ್ಲಿ ನಂಬಲಾರದ ರೀತಿಯ ಇಳಿಕೆ ಬಂದಿದ್ದನ್ನು ನಾವು ಗಮನಿಸಿಕೊಳ್ಳಬೇಕು.ಅದಕ್ಕೆ ಬೇಡಿಕೆಯೇ ಇರಲಿಲ್ಲ. ಕಾರಣವೆಂದರೆ ಬಳಕೆ, ಪೂರೈಕೆ ಎರಡೂ ಇರಲಿಲ್ಲ.ಅದರ ತೀವ್ರ ಪರಿಣಾಮ ಕೊಲ್ಲಿ ರಾಷ್ಟಗಳ ಮೇಲೆ ಕಂಡುಬಂದಿದೆ. ಗಮನಿಸಬೇಕಾದ ಅಂಶವೆಂದರೆ ಸರಣಿಯ ತುತ್ತ ತುದಿಯಲ್ಲಿರುವ ಬಳಕೆದಾರ ಕೊಂಡ ಹೊರತು ಉತ್ಪಾದನೆಗೆ ಅರ್ಥವಿಲ್ಲ.ಆದರೆ ಕೊಳ್ಳಲು ಆತನ ಬಳಿ ಹಣವಿಲ್ಲ. ಇದು ಒಂದು ವಿಷವರ್ತುಲ. ಹಣ ಬರುವುದು ಆತ ದುಡಿದಾಗ ಅಥವಾ ಆತ ಏನನ್ನೋ ಮಾರಿದಾಗ ಮಾತ್ರ. ಅಂತಹ ದುಡಿಮೆಯ ಮೂಲಗಳೆಲ್ಲವೂ ಈಗ ಬಂದಾಗಿ ಹೋಗಿವೆ.ಹಾಗಾಗಿಯೇ ಲಕ್ಷ ಲಕ್ಷ ಉದ್ಯೋಗಗಳು ಕಾಣೆಯಾಗಿ ಹೋಗಿವೆ .ದುರಂತವೆಂದರೆ ಹೀಗಾಗಿಯೇ ಜಾಗತಿಕ ಮಾರುಕಟ್ಟೆಗಳನ್ನು ಆರಂಭಿಸುವುದು ಕೋರೊನಾ ದೃಷ್ಟಿಯಿಂದ ಅಪಾಯಕಾರಿ ಎಂದು ತಿಳಿದಿದ್ದರೂ ನಾವು ಅವನ್ನು ಆರಂಭಿಸಲೇಬೇಕಿದೆ. ಇಲ್ಲವಾದರೆ ಇನ್ಪೊಸಿಸ್ನ ಮಾಜಿ ಅಧ್ಯಕ್ಷ ನಾರಾಯಣಮೂರ್ತಿ ಹೇಳುವಂತೆ ಈ ಸನ್ನಿವೇಶ ಕರೋನಾಕ್ಕಿಂತಲೂ ಹೆಚ್ಚಿನ ಸಂಕಟವನ್ನು ತಂದಿಡಬಹುದು. ಇವೆಲ್ಲವೂ ನಮ್ಮ ದುರಂತ ಅನಿವಾರ್ಯತೆಗಳು.ಜನ ಮಾರುಕಟ್ಟೆಗೆ ಬರದಿದ್ದರೆ ಸರ್ಕಾರಕ್ಕೆ ಬರುವ ಹಣ ನಿಂತು ಹೋಗುತ್ತದೆ.ಸರ್ಕಾರಕ್ಕೆ ಹಣ ಬರುವುದು ನಿಂತು ಹೋದರೆ ಬಡವರಿಗೆ ಸಹಾಯ ಮಾಡುವುದಾದರೂ ಹೇಗೆ? ಅಸಂಖ್ಯಾತ ಗೋಜಲುಗಳು. ನಮ್ಮ ದೇಶದ ಆರ್ಥಿಕತೆಯ ಕೇಂದ್ರಬಿಂದು ಮುಂಬೈ ನಗರವನ್ನು ಸುದೀರ್ಘ ಕಾಲ ಮುಚ್ಚಲಾಗುತ್ತದೆ ?ಹಾಗೆಯೇ ಅಂತಾರಾಜ್ಯ ಗಡಿಗಳನ್ನು ಅಂತರ್ ಜಿಲ್ಲಾ ಗಡಿಗಳನ್ನು ಮುಚ್ಚಲಾಗುತ್ತದೆ ?ಅವನ್ನು ಮುಚ್ಚಿದರೆ ನಮ್ಮ ವ್ಯಾಪಾರ ವಹಿವಾಟು ನಡೆಯುವುದಾದರೂ ಹೇಗೆ ? ಊಟ ಮಾಡುವುದಾದರೂ ಹೇಗೆ?
ಗಮನಿಸಬೇಕು. ವಾಸ್ತವವಾಗಿಯೂ ಪ್ರಸ್ತುತ ಸಂದರ್ಭಕ್ಕೆ ಮಹಾ ಗ್ರೀಕ್ ದುರಂತ ಕಥೆಯೊಂದರ ಎಲ್ಲಾ ಲಕ್ಷಣಗಳೂ ಇವೆ. ಅಂದರೆ ಇಲ್ಲಿಯೂ ನಮ್ಮ ಮತಿ,ಮಿತಿ ಮೀರಿದ ದುರ್ವಿಧಿ ಸ್ರಷ್ಟಿಸಿರುವ ಒಂದು ವಾತಾವರಣ ಸಿದ್ದವಾಗಿ ಹೋಗಿದೆ. ನಾವು ಮಾನವರು ಕೇವಲ ವಿಧಿಯ ಒಂದು ದಾಳಗಳು. ವಿಧಿ ಆಡಿಸಿದಂತೆ ನಾವು ಅಡಬೇಕು.ಪ್ರಸಿದ್ದ ಗ್ರೀಕ್ ನಾಟಕ, ಸೋಫೋಕ್ಲಿಸ್ ನ ದುರಂತ ನಾಟಕ ಆ್ಯಂಟಿಗೋನ ದಲ್ಲಿ ನಡೆಯುವ ಹಾಗೆ. ಇಂತಹ ದುರಂತಗಳಲ್ಲಿ
ಬರುವ ಪಾತ್ರಗಳೆಲ್ಲರೂ ಅಸಹಾಯಕರು.ಶಪಿತರು.ಅಥವಾ ಒಂದು ಮಹತ್ತಾದ ದೋಷವುಳ್ಳವರು.ಬಹುಷ: ಇಲ್ಲಿನ ದೋಷ ನಮ್ಮ ನಾಗರಿಕತೆಯದ್ದೂ ಇರಬಹುದು. ಮಹಾಭಾರತದ ಕಥೆಯನ್ನೂ ನೋಡಿ. ನಡೆಯಲೇಬೇಕಾದ, ಕಾಲ ನಿರ್ಧರಿಸಿದ ಯಾವುದೋ ಒಂದು ಅಣತಿಗೆ ಎಲ್ಲರೂ ತಲೆ ಬಾಗಿ ನಡೆಯಲೇಬೇಕು. ಭೀಷ್ಮನಂತಹ,ಧರ್ಮ ರಾಜನಂತಹ, ಕೃಷ್ಣನಂತಹ ಪಾತ್ರಗಳು ಕೂಡ ಅಲ್ಲಿ ಒಟ್ಟಾರೆ ಯಾಗಿ ಅಸಹಾಯಕರೇ!ಯಾರಿಂದಲೂ ಯುದ್ದ ತಪ್ಪಿಸಲಾಗುವುದಿಲ್ಲ. ಸಂದರ್ಭದ ಒತ್ತಡದಲ್ಲಿ ಘಟನೆಗಳು ಕೈ ಜಾರಿ ಮಹಾನ್ ವ್ಯಕ್ತಿಗಳು ಕೂಡ ಮೂಕರಾಗಿ, ದುರಂತದ ಪ್ರೇಕ್ಷಕರಾಗಿ ನಿಲ್ಲಬೇಕಾಗುತ್ತದೆ. ಈಗ ಅಗಿರುವ ಹಾಗೆ.
ಮೇಲಿನ ಮಾತುಗಳನ್ನು ಹೇಳಿದ್ದು ಜನರನ್ನು ಭಯಗೊಳಿಸಲು ಅಲ್ಲ. ವಿಷಯಗಳನ್ನು ಸೆನ್ಸೇಷನಲ್ ಮಾಡಿ ವಿಕೃತ ಆನಂದ ಅನುಭವಿಸಲಿಕ್ಕಂತೂ ಅಲ್ಲವೇ ಅಲ್ಲ . ಹೇಳುತ್ತಿರುವ ಮುಖ್ಯ ಕಾರಣವೆಂದರೆ ಮಾನವತೆ ಈ ವಿಷಯಗಳನ್ನು ಅರಿತು ಎದ್ದು ನಿಲ್ಲಬೇಕಿದೆ .ವೈಯಕ್ತಿಕ ಶಿಸ್ತು ಸಾಮಾಜಿಕ ಪ್ರಜ್ಞೆ ಇಟ್ಟುಕೊಂಡು ಬದುಕಬೇಕಿದೆ. ಕಡಿಮೆ ಖರ್ಚಿನಲ್ಲಿ ಸರಳವಾಗಿ ಬದುಕಲು, ಅವಶ್ಯವಿದ್ದಲ್ಲಿ ನೆರೆಹೊರೆಯವರಿಗೆ ಸಹಾಯ ನೀಡಲು ಯೋಚಿಸಲೇಬೇಕಿದೆ .ಗಮನಿಸಬೇಕು. ಈ ಸಂದರ್ಭದಲ್ಲಿ ಮಾನವೀಯತೆಯನ್ನು ಕಾಯ ಬಲ್ಲವು ಮಾನವೀಯತೆಯ ಮೂಲ ಮೌಲ್ಯಗಳು. ಬ್ರಹದಾರಣ್ಯಕ ಉಪನಿಷತ್ತು ಹೇಳುವ ತ್ಯಾಗ, ಕರುಣೆ ಮತ್ತು ಆತ್ಮನಿಗ್ರಹದಂತವುಗಳು : ದತ್ತ , ದಯತ್ವಂ, ದಮ್ಯತ. ಎಲಿಯಟ್ ನ ಕವಿತೆ ದ ವೇಸ್ಟಲ್ಯಾಂಡ್ ಕೂಡ ಯುದ್ಧೋತ್ತರ ಸ್ಥಿತಿಯಲ್ಲಿ ಈ ಮೌಲ್ಯಗಳ ಅಗತ್ಯತೆಯನ್ನು ಹೇಳುತ್ತದೆ. ದತ್ತ ಅಂದರೆ ಕೈ ಬಿಚ್ಚಿ ಮನಬಿಚ್ಚಿ ನೀಡು. ಸಹಾಯಮಾಡು. ದಯತ್ವಂ ಅಂದರೆ ಸುತ್ತಮುತ್ತಲಿರುವ ಮನುಷ್ಯ ಪ್ರಾಣಿ, ಪಕ್ಷಿಗಳು, ಪರಿಸರ ಇವೆಲ್ಲವುಗಳ ಕುರಿತು ದಯವಿರಲಿ.ದಮ್ಯತ ಅಂದರೆ ಆತ್ಮ ಸಂಯಮವಿರಲಿ.ಬಹುಶಃ ವ್ಯಾಕ್ಸಿನ್ ಬರುವ ತನಕ ನಮ್ಮನ್ನು ಭಾರಿ ದುರಂತದಿಂದ ಕಾಪಾಡಬಲ್ಲ,ಸದ್ದ್ಯದ ದುರಂತಕ್ಕೆ ಪರಿಹಾರ ನೀಡಬಲ್ಲ ಮಾನವ ಮೌಲ್ಯಗಳ ಚೌಕಟ್ಟುಗಳು ಇವು.ನಡವಳಿಕೆ ಯ ದಾರಿದೀಪಗಳು ಇವು.
- ಡಾ. ಆರ್.ಜಿ. ಹೆಗಡೆ