Site icon ಒಡನಾಡಿ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಉಪಯೋಗಿಸಲು ಅನುಮತಿ ನೀಡುವಂತೆ ದೇಶಪಾಂಡೆ ಮನವಿ

ಹಳಿಯಾಳ: ಹುಬ್ಬಳ್ಳಿ-ಅಂಕೋಲಾ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಉಪಯೋಗಿಸಲು ಅನುಮತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಪರಿಸರ ಸಚಿವರಾದ ಪ್ರಕಾಶ ಜಾವಡೇಕರ ಇವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅಂದಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಗಲ್ಲು ಹಾಕಿದ್ದರು. ಹುಬ್ಬಳ್ಳಿಯಿಂದ ಕಲಘಟಗಿವರೆಗಿನ ಟ್ರ್ಯಾಕನ ಒಂದು ಭಾಗ ಪೂರ್ಣಗೊಂಡಿದ್ದು, ಮುಂದಿನ ಭಾಗದ ಕಾಮಗಾರಿಯು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಕಾರವಾರ, ಯಲ್ಲಾಪುರ ಮತ್ತು ಧಾರವಾಡ ವಿಭಾಗದ ಸುಮಾರು 595.64 ಹೆಕ್ಟರ್ ನಷ್ಟು ಅರಣ್ಯ ಭೂಮಿ ಉಪಯೋಗಿಸಬೇಕಾಗುತ್ತದೆ. ಈಗಾಗಲೇ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಅರಣ್ಯ ಪ್ರದೇಶ ಬಳಕೆಗೆ ಅನುಮತಿ ನೀಡಲಾಗಿದ್ದು, ಸದರಿ ಪ್ರಸ್ತಾವನೆಯನ್ನು ಕೇಂದ್ರ ವನ್ಯಜೀವಿ ಮಂಡಳಿಗೆ ಅನುಮತಿಗಾಗಿ ಕಳುಹಿಸಲಾಗಿದೆ

ಹೀಗಾಗಿ ಹುಬ್ಬಳ್ಳಿ-ಅಂಕೋಲಾ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಉಪಯೋಗಿಸಲು ಅನುಮತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಪರಿಸರ ಸಚಿವರಾದ ಪ್ರಕಾಶ ಜಾವಡೇಕರ ಇವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ. ಅಲ್ಲದೇ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸುರೇಶ ಅಂಗಡಿ, ಸದಾನಂದ ಗೌಡ ಮತ್ತು ಪ್ರಲ್ಹಾದ ಜೋಶಿಯವರಿಗೂ ಕೂಡ ಪತ್ರದ ಮೂಲಕ ಮನವರಿಕೆ ಮಾಡಿಕೊಟ್ಟು, ಸಂಬಂಧಪಟ್ಟವರನ್ನು ಸಂಪರ್ಕಿಸಿ ಒತ್ತಡ ಹೇರುವಂತೆ ಒತ್ತಾಯಿಸಿದ್ದೇನೆ ಎಂದು ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

Exit mobile version