Site icon ಒಡನಾಡಿ

ಆಮೆಗತಿಯಲ್ಲಿ ಸಾಗುತ್ತಿರುವ ಬೈಲಪಾರ ಕೊಳಗೇರಿ ಗೃಹ ನಿರ್ಮಾಣ ಕಾರ್ಯ: ಹೇಳೋರಿಲ್ಲ ಕೇಳೋರಿಲ್ಲ…

ದಾಂಡೇಲಿ: ಕೊಳಗೇರಿ ನಿರ್ಮೂಲನಾ ಮಂಡಳಿಯವರಿಂದ ದಾಂಡೇಲಿ ನಗರಸಭೆ ವ್ಯಾಪ್ತಿಯ ಬೈಲಪಾರದಲ್ಲಿ  ನಡೆಯುತ್ತಿರುವ ಗೃಹ ನಿರ್ಮಾಣ ಕಾರ್ಯ ಕಳೆದೆರಡು ವರ್ಷಗಳಿಂದ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅರ್ಧಮರ್ಧ ನಿರ್ಮಾರ್ಮಾಣಗೊಂಡಿರುವ ಮನೆಗಳೊಳಗೇ ಫಲಾನುಭವಿಗಳು ಅರೆಬರೆಯಾಗಿ ವಾಸಿಸುತ್ತಿರುವ ಸ್ಥಿತಿ ಇಲಾಖೆಯ ನಿರ್ಲಕ್ಷದಿಂದ  ನಿರ್ಮಾಣವಾಗಿದೆ.

    ಅಂದು ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರ ಪ್ರಯತ್ನದಿಂದ ದಾಂಡೇಲಿಯ ಬೈಲಪಾರದಲ್ಲಿ 117 ಹಾಗೂ ಸುಭಾಶನಗರದಲ್ಲಿ 160 ಮನೆಗಳು ಕೊಳಚೆ ನಿರ್ಮಲನಾ ಮಂಡಳಿಯಿಂದ ಮಂಜೂರಾಗಿದ್ದವು. ಆದರೆ ಸುಭಾಶನಗರದಲ್ಲಿ ಇದು ಈವರೆಗೂ ಪ್ರಾರಂಭವಾಗಿಲ್ಲ.  ಇದು  ಕೊಳಗೇರಿ ಪ್ರದೇಶದ ಜನರಿಗಾಗಿಯೇ ಮೀಸಲಿಟ್ಟ ರಿಯಾಯತಿ ದರದ ಮನೆಗಳಾಗಿವೆ.

   ಬೈಲಪಾರದಲ್ಲಿ ಈ ಕೆಲಸ ಪ್ರಾರಂಭವಾಗಿ ಒಂದುವರೆ ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ. ಈ ಕಾಮಗಾರಿಯನ್ನು ಪೂರ್ಣಗೋಳಿಸಲು ಒಂದು ವರ್ಷದ ಅವಧಿ ನೀಡಲಾಗುತ್ತಾರೂ ಈಗಲೂ ಶೇ. 40 ರಷ್ಟು ಕೆಲಸ ಬಾಕಿಯಿದೆ. ಇದಕ್ಕೆ ಈ ಬಗ್ಗೆ ಪಲಾನುಭವಿಗಳನೇಕರು ಆಕ್ಷೇಪಿಸಿದ್ದಾರೆ.

    ಯೋಜನೆ ಹೇಗಿದೆ:  ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಡೆಯುವ ಈ ಮನೆಗಳ ನಿರ್ಮಾಣ ಕಾರ್ಯ ಪಲಾನುಭವಿಗಳು ಹಾಗೂ ಸರಕಾರದ ಸಹಭಾಗಿತ್ವದಲ್ಲಿ ಹಾಗೂ ಬ್ಯಾಂಕ್ ಸಾಲದಿಂದ ನಡೆಯುತ್ತದೆ.  ಆಯ್ಕೆಯಾದ ಫಲಾನಿಭವಿಗಳು ಸಾಮಾನ್ಯ ವರ್ಗದವರಿದ್ದರೆ 61 ಸಾವಿರ ರು.ಗಳನ್ನು ಅವರು ಭರಣ ಮಾಡಬೇಕು ಉಳಿದ 1,60,000 ರೂ. ಸಾಲ ಹಾಗೂ ಮತ್ತೆ ಉಳಿದಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಸತಿ ಯೋಜನೆಯಿಂದ ಭರಿಸಲಾಗುತ್ತದೆ. ಇನ್ನು ಆಯ್ಕೆಯಾದ ಪಲಾನುಭವಿಗಳು ಪ. ಜಾತಿ ಮತ್ತು ಪಂಗಡದವರಾಗಿದ್ದರೆ ಅವರು 51 ಸಾವಿರ ರೂ. ಭರಿಸಬೇಕು. ಉಳಿದಂತೆ 1,11,000 ರೂ. ಬ್ಯಾಂಕ್ ಸಾಲ ಹಾಗೂ ಉಳಿದದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಸತಿ ಯೋಜನೆಯಿಂದ ಭರಿಸಲಾಗುತ್ತದೆ. ಸಾಲವನ್ನು ಫಲಾನುಭವಿಗಳೇ ತುಂಬಬೇಕು.  ಆದರೆ ಈವರೆಗೂ ಕೆಲವರಿಗೆ ಬ್ಯಾಂಕುಗಳು ಸಾಲ ನೀಡಲು ಹಿಂದೆ ಮುಂದೆ ನೀಡುತ್ತಿರುವ ಬಗ್ಗೆಯೂ ಮಾಹಿತಿಯಿದೆ. 

ಎಸ್ಟಿಮೇಟ್‌ನಂತೆ ಕಾಮಗಾರಿ ಮಾಡದಿರುವುದು

   ಕಳಪೆ ಕಾಮಗಾರಿ:  ಈಮನೆಗಳನ್ನು ನಿರ್ಮಿಸುವಲ್ಲಿ ಗುತ್ತಿಗೆದಾರ ಕೊಳಚೆ ನಿರ್ಮೂಲನಾ ಮಂಡಳಿಯ ಹಾಗೂ ಸರಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರಿದೆ. ತಳಪಾಯ ತೆಗೆಯುವ ಸಂದರ್ಭದಲ್ಲಿ  ಎಸ್ಟಿಮೇಟ್‍ನಲ್ಲಿರುವಂತೆ ಹೊಂಡ ತೆಗೆಯುತ್ತಿಲ್ಲ. ಜೊತೆಗೆ ಸಮರ್ಪಕ ರೀತಿಯಲ್ಲಿ ಉಸುಕು ಸಿಮೆಂಟ್ ಬಳಸುತ್ತಿಲ್ಲ ಎಂಬ ಆಕ್ಷೇಪವಿದೆ.  ಕೆಲ ಮನೆಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಮೇಲ್ಚಾವಣಿ ಸರಿಯಾಗಿ ಹಾಕಿಲ್ಲ.

  ಅರ್ಧ ಮನೆಯಲ್ಲೇ ವಾಸ:    ತಮಗೆ ಕೊಳಚೆ ಮಂಡಳಿಯಿಂದ ಮನೆ ಸಿಗುತ್ತದೆ ಎಂದು ಹಲವರು  ಬಾಡಿಗೆ ಮನೆಯಲ್ಲಿದ್ದರು. ಆದರೆ ಈಗ ಕೆಲಸ ವಿಳಂಬವಾಗುತ್ತಿರುವುದರಿಂದ ಬಾಡಿಗೆಯನ್ನು ತಂಬಲಾಗದೇ ಸಮಸ್ಯೆಯಲ್ಲಿದ್ದಾರೆ. ಹಾಗಾಗಿ ಅರ್ಧ ನಿರ್ಮಾಣಗೊಂಡÀ ಮನೆಯೊಳಗಡೆಯೇ ಫಲಾನುಭವಿಗಳು ಪ್ರವೇಶಿಸಿದ್ದಾರೆ. ಇನ್ನೂ ಈ ಮನೆಗಳ ಪ್ಲಾಸ್ಟರ್ ಹಾಗೂ ಇತರೆ ಕಾರ್ಯಗಳಾಗಬೇಕಿದೆ. 

   ಗುಣಮಟ್ಟ ಕೇಳಿದರೆ ಗುತ್ತಿಗೆದಾರನ ಧಮಕಿ :  ಬಸವರಾಜ ಎಂಬವರು ಇದರ ಗುತ್ತಿಗೆ ಪಡೆದಿದ್ದು. ಫಲಾನುಭವಿಗಳು  ತಮ್ಮ ಮನೆಗಳ ನಿರ್ಮಾಣದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದರೆ ಆತ ಬಾಯಿಗೆ ಬಂದ ಹಾಗೆ ದಬಾಯಿಸುತ್ತಾನೆ, ಧಮಕಿ ಹಾಕುತ್ತಾನೆ. ಈ ಮನೆ ನಿರ್ಮಿಸುವ ಸಂದರ್ಭದಲ್ಲಿ ಗುತ್ತಿಗೆದಾರನದ್ದೇ ದರ್ಬಾರ ಆಗಿದೆ. ಯಾರಾದರೂ ಕೇಳಿದರೆ ಏನು ಮಾಡಿಕೊಳ್ಳೂತ್ತೀರೋ ಮಾಡಿಕೊಳ್ಳಿ, ಯಾರಿಗೆ ಹೇಳುತ್ತಿರೋ ಹೇಳಿ ಎಂಬ ಧಿಮಾಕಿನ ಮಾತನಾಡುತ್ತಾನೆ ಎನ್ನುತ್ತಾರೆ. ಫಲಾನುಭವಿಗಳು. ನಗರಾಡಳಿತ ಇದು ತಮಗೆ ಸಂಬಂದವಿಲ್ಲದೆಂಬಂತಿದೆ. 

        ಕಳಪೆ ಕಾಮಗಾರಿ ಪರಿಶೀಲಿಸುವವರಿಲ್ಲ 

 ನಮಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆ ಸಿಗುವುದು ಸಂತಸದ ವಿಚಾರ. ಹಾಗೆಂದು ಮನೆಯನ್ನು ಗುಣಮಟ್ಟದಲ್ಲಿ ನಿರ್ಮಿಸಿಕೊಡುವುದು ಗುತ್ತಿಗೆದಾರನ ಹಾಗೂ ಇಲಾಖೆಯ ಜವಾಬ್ದಾರಿ. ಆದರೆ ಇಲ್ಲಿ ಕಳಪೆ ಕಾಮಗಾರಿಯೇ ನಡೆಯುತ್ತಿದೆ. ಕೇಳಲು ಹೋದರೆ ನಮ್ಮ ಮೇಲೆಯೇ ಧಮಕಿ ಹಾಕುತ್ತಾರೆ. ಈ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವವರೇ ಇಲ್ಲದಂತಾಗಿದೆ.

           -ಗಣೇಶ ಕೆಸರಕರ, ಮನೆಯ ಫಲಾನುಭವಿ

ಸರಕಾರದಿಂದ ಬಿಲ್ ಬಿಡುಗಡೆಯಾಗಯತ್ತಿಲ್ಲ 

 ಬೈಲಪಾರದ ಕೊಳಗೇರಿ ಮನೆಗಳ ನಿರ್ಮಾಣದಲ್ಲಿ ವಿಳಂಬವಾಗಿದ್ದು ನಿಜ. ಈಗ ಅವಧಿ ವಿಸ್ತರಿಸಲಾಗಿದೆ. ಸರಕಾರದಿಂದ ಬಿಲ್ ಆಗಲು ವಿಳಂಬವಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ.  ಕೆಲವರಿಗೆ ಇನ್ನೂ ಬ್ಯಾಂಕುಗಳಿಂದ ಸಾಲ ಮಂಜೂರಿಯಾಗಿಲ್ಲ. ಕಾಮಗಾರಿ ಗುಣಮಟ್ಟದ್ದೇ ನಡೆಯುತ್ತಿದೆ. ಕಾಲ ಕಾಲಕ್ಕೆ ಪರಿಶೀಲಿಸಿದ್ದೇವೆ.

                       -ಪ್ರತೀಕ, ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿ

Exit mobile version