ಬೆಂಗಳೂರು: ಗಿಡ-ಮರಗಳನ್ನು ನೆಟ್ಟು, ಪೋಷಣೆ ಮಾಡಿದರೆ ದೇವಾಲಯ ಕಟ್ಟಿದ ಪುಣ್ಯ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನುಡಿದರು.
ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಕೆದಾರ ಸ್ನೇಹಿ ವೆಬ್ಸೈಟ್ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ರಾಜ್ಯದ ಜನತೆಗೆ ವಿಶ್ವ ಪರಿಸರ ದಿನದ ಶುಭಾಶಯ ತಿಳಿಸಿ ಮಾತನಾಡಿದ ಅವರು, ನಿಸರ್ಗ ಮತ್ತು ಮನುಷ್ಯನ ನಡುವೆ ಸಮತೋಲನ ಸಾಧಿಸಲು ಪರಿಸರವನ್ನು ಕಾಪಾಡುವುದು, ಬೆಳೆಸುವುದು ಬಹು ಮುಖ್ಯ. ಜೊತೆಗೆ ಜೀವ ವೈವಿಧ್ಯಗಳ ಉಳಿಕೆಯ ದೃಷ್ಟಿಯಿಂದಲೂ ಮರ ಗಿಡಗಳನ್ನು ಪೋಷಿಸುವ ಕರ್ತವ್ಯವನ್ನು ನಾವು ನಿಭಾಯಿಸಬೇಕು ಎಂದರು.
ಈ ಬಾರಿಯ ಪರಿಸರ ದಿನದ ಘೋಷ ವಾಕ್ಯ ‘ಜೀವವೈವಿಧ್ಯ’ ಬಹಳ ಅರ್ಥಪೂರ್ಣ ಹಾಗೂ ಮಹತ್ವಪೂರ್ಣವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ ನಿರ್ಮಲ, ಮಾಲಿನ್ಯರಹಿತವಾಗಿದ್ದರೆ ನಾವೂ ಆರೋಗ್ಯಪೂರ್ಣ ಜೀವನ ನಡೆಸಬಹುದು. ಪ್ರಕೃತಿಯನ್ನು ನಮ್ಮ ದುರಾಸೆಗಾಗಿ ಕಾಡುವುದು, ಪೀಡಿಸುವುದರ ಜೊತೆಗೆ ಅದನ್ನು ನಾಶ ಪಡಿಸಿದರೆ ನಮ್ಮನ್ನು ನಾವೇ ಸಾವಿನ ದವಡೆಗೆ ದೂಡಿದಂತಾಗುತ್ತದೆ ಎಂದರು.
ಈ ಸಂದಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಸೀಸರ, ಹಾಗೂ ಅಧಿಕಾರಿಗಳಿದ್ದರು.