Site icon ಒಡನಾಡಿ

ಕಂಡೋಡಿಯ ಒಡಲ ಧ್ವನಿಯಾದ ಲಕ್ಷ್ಮಣ ಪಟಗಾರ ಮುಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ಇಲ್ಲಿಲ್ಲವೆಂಬುದನು! ಇಲ್ಲಿಯೇ ಅರಸುವುದು
ಇಲ್ಲಿಲ್ಲವಂದರಿಯಲೊಡನೆ ಜಗ
ವೆಲ್ಲ ಒಳಗಿಕ್ಕೂ ಸರ್ವಜ್ಞ!

ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅದು ಸತ್ಯವನ್ನಾಗಲಿ, ಜ್ಞಾನವನ್ನಾಗಲಿ ಎಂದುಕೊಂಡರೆ ಅದು ತಪ್ಪು. ನಮ್ಮ ಒಳಗಡೆಯೇ ಹುಡುಕಬೇಕು. ನಮ್ಮೊಳಗಿನ ಅರಿವಿನ ಸತ್ಯ ಅಡಗಿದೆ ಎಂಬ ನಂಬಿಕೆ ನಮಗಿದ್ದರೆ ಎಲ್ಲವೂ ಸಿಗಲು ಸಾಧ್ಯ ಎಂಬುದು ಸರ್ವಜ್ಞನ ವಚನವಾದರೆ, ನನ್ನೂರಿನ ಜನ ನನ್ನನ್ನೇ ಮರೆತು ಬೇರೆ ಕಡೆ ಜ್ಞಾನಾರ್ಜನೆಯ ನೆೆಲ ಹುಡುಕುತ್ತಿರುವುದು ಕಂಡರೆ ನನಗೆನನಿಸಬೇಡ.ಹೌದು! ನಾನು ತಾಲೂಕಿನಿಂದ ತುಂಬ ದೂರದಲ್ಲಿದ್ದೇನೆ. ಸುಮಾರು ೨೮ ಮೈಲು ದೂರದ ದುರ್ಗಮ ಪ್ರದೇಶ. ನನ್ನ ಹೆಸರು ಕಂಡೋಡಿ ಅಂದರೆ ಕಂಡು- ಓಡಿ ಎಂದರ್ಥ. ಏನನ್ನು ಕಂಡು, ಏಕೆ ಓಡಬೇಕು ಎನ್ನುವುದು?

ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ ಗೇರುಸೊಪ್ಪದಲ್ಲಿ ವಾಸವಿದ್ದ ಸಂದರ್ಭ. ಆಕೆ ಪೋರ್ಚುಗೀಸರ ಹಾಗೂ ಇತರ ರಾಜರ ದಾಳಿಗಳಿಂದ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ತನ್ನೂರಿನ ಸುತ್ತಮುತ್ತ ನಿರ್ಮಿಸಿದ ಕೋಟೆ ಕಾನೂರು. ಕಾಡಿನಿಂದ ಆವೃತ್ತವಾದ ಪ್ರದೇಶ “ಕಾನೂರು ಕೋಟೆ”ಎನಿಸಿಕೊಂಡಿತು. ರಾಣಿ ಇಲ್ಲದಿರುವ ಸಂದರ್ಭದಲ್ಲಿ ಪೋರ್ಚುಗೀಸ್ ಸೈನಿಕರು ಕಾನೂರಿನ ಮೇಲೆ ದಾಳಿ ಮಾಡಲು ದಟ್ಟವಾದ ಅರಣ್ಯ ಪ್ರವೇಶಿಸಿ ಗುಡ್ಡ ಏರುತ್ತಿರುವಾಗ ಕೋಟೆಯ ಮೇಲ್ಬಾಗದಿಂದ ಬೃಹದಾಕಾರದ ಗುಂಡನೆಯ ಕಲ್ಲು ಉರುಳಿ ಬರುತ್ತಿದ್ದವಂತೆ. ಇದರಿಂದ ಭಯಭೀತಗೊಂಡ ಪೋರ್ಚುಗೀಸರು ಪ್ರಾಣ ಭಯದಿಂದ ಕಲ್ಲು ಬರುವುದನ್ನು ಕಂಡು ಎಲ್ಲಿಯವರೆಗೆ ಓಡಿದರೋ ಆ ಪ್ರದೇಶವೇ ಇಂದು ಕಂಡೋಡಿ ಎಂದಾಗಿದೆ. ಇದು ನನ್ನ ಊರ ಹೆಸರಿಗೆ ಕಾರಣವಾಯಿತು ಎಂದು ಇತಿಹಾಸ ಹೇಳುತ್ತದೆ.

ಊರು ಚಿಕ್ಕದಾದರೂ ಸಂಪತ್ತಿಗೆನೂ ಕೊರತೆ ಇಲ್ಲ. ವ್ಯವಸಾಯ, ತೋಟಗಾರಿಕೆ ಇಲ್ಲಿಯ ಜನರ ಮುಖ್ಯ ಕಸುಬಾಗಿದೆ. ಇಲ್ಲಿ ಅಡಿಕೆ, ತೆಂಗು, ಭತ್ತ, ಕಬ್ಬು ಹಾಗೂ ಗೇರು ಬೆಳೆಯುತ್ತಾರೆ. ನನ್ನೂರಿನಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಮರಾಠಿ, ನಾಮಧಾರಿ, ಹವ್ಯಕ ಸಮಾಜದ ೮೦ ಕುಟುಂಬಗಳಿದ್ದು ೬೮೦ ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಕೆಲವು ಮುಸ್ಲಿಂ ಯುವಕರು ದೂರದ ದುಬೈನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಶಾಂತಿ- ಸೌಹಾರ್ದತೆಗೆ ನನ್ನೂರಿನ ಜನ ಇಡೀ ಮಾನವಕುಲಕ್ಕೆ ಮಾದರಿಯಾಗಿರುತ್ತಾರೆ. ಇನ್ನೂ ಶಿಕ್ಷಣದ ಬಗ್ಗೆ ಅಷ್ಟೊಂದು ಕಾಳಜಿ ಇಲ್ಲದ ಸಂದರ್ಭದಲ್ಲಿಯೂ ಊರಿನ ಹಿರಿಯರು, ಶಿಕ್ಷಣ ಅಭಿಮಾನಿಗಳು ಸೇರಿ ಊರು ಅಂದಮೇಲೆ ಅಲ್ಲೊಂದು ದೇವಸ್ಥಾನ, ಮತ್ತೊಂದು ಶಾಲೆ ಇದ್ದರೆ ಚೆಂದ ಎಂದು ತಿಳಿದು ಸುಮಾರು ೨೮ ವರ್ಷಗಳ ಹಿಂದೆ ಊರಿನಲ್ಲಿ ಒಂದು ಶಾಲೆ ಬೇಕು ಎನ್ನುವ ಕಾರಣಕ್ಕಾಗಿ ಚಿಕ್ಕ ಗುಡಿಸಲಿನಲ್ಲಿ ಮಕ್ಕಳ ಶಿಕ್ಷಣಕ್ಕೆ ೧೯೯೮ ರಲ್ಲಿ ಶ್ರೀಕಾರ ಬರೆದೆ. ಆರಂಭದ ದಿನಗಳಲ್ಲಿ ೧೨ ಮಕ್ಕಳೊಂದಿಗೆ ಶಾಲೆಯನ್ನು ಪ್ರಾರಂಭಿಸಿ ೨೮ ವಸಂತಗಳನ್ನು ಪೂರೈಸಿದ್ದೇನೋ ನಿಜ. ಆದರೆ ನನ್ನ ಬದುಕಿನಲ್ಲಿ ಯಾರೂ ಪಡದ ಕಷ್ಟ, ನೋವು, ಸಂಕಟ ನಾನು ಪಡೆದಿರುವುದಂತೂ ಸತ್ಯ.

೧೯೯೮ ರಲ್ಲಿ ಪ್ರಾರಂಭವಾದ ನಾನು ೧೩ ವಸಂತಗಳನ್ನು ಹೇಗೋ ಪೂರೈಸಿರುತ್ತೇನೆ. ಆದರೆ ೨೦೧೧-೧೨ ರಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೊರತೆ ಹಾಗೂ ಶಿಕ್ಷಕರ ವರ್ಗಾವಣೆಯಿಂದ ನನ್ನ ಬಾಗಿಲು ಮುಚ್ಚಿ ಬಚ್ಚಿಟ್ಟರು. ನನ್ನ ಅಸ್ತಿತ್ವವೇ ಇಲ್ಲದಂತಾಯಿತು. ಇರುವ ನಾಲ್ಕೈದು ಮಕ್ಕಳು ಅಲ್ಲೋ ಇಲ್ಲೋ ನೆಂಟರ ಮನೆ ಸೇರಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದರು. ಶಾಲೆಯ ಮಹತ್ವವನ್ನು ಅರಿತು ಊರಿನ ಹಿರಿಯರೆಲ್ಲರೂ ನಮ್ಮೂರಿನ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸಬೇಕೆಂದು ಶಾಲೆಯನ್ನು ಪುನಃ ಆರಂಭಿಸುವ ಯೋಚನೆ ಮಾಡಿ ತಾತ್ಕಾಲಿಕ ನಿಯೋಜನೆ ಮೇರೆಗೆ ಶಾಲೆ ಪುನ: ಆರಂಭವಾಯಿತು. ಪಾಪ!ಬೇರೆ ಯಾವುದೋ ಶಾಲೆಯಿಂದ ಬಂದ ಮಾಸ್ತರರು ಇಲ್ಲಿಯ ಉಸಾಬರಿ ನನಗೇಕೆ? ಎಂದು ಶಾಲೆಗೆ ಬೀಗ ಜಡಿದು ಮಾಯವಾಗಿ ಬಿಟ್ಟರು.

ಕಷ್ಟಗಳು ಬರುವುದು ನಮ್ಮನ್ನು ಕುಗ್ಗಿಸಲು ಅಲ್ಲ. ನಮ್ಮಲ್ಲಿ ಅಡಗಿರುವ ಧೈರ್ಯವನ್ನು ಹೊರ ತರಲು ಎಂಬ ಹಿರಿಯರ ಮಾತು ಜೊತೆಗೆ ಆದರ್ಶಕ್ಕಾಗಿ ಬದುಕುವ ಒಬ್ಬ ಅಪರೂಪದ ಮಾಸ್ತರರ ಪಾದಾರ್ಪಣೆ ೨೦೧೬ರಲ್ಲಿ ಆಯಿತು. ಇಲ್ಲಿಂದಲೇ ನನ್ನ ಭಾಗ್ಯದ ಬಾಗಿಲು ತೆರೆದಂತಾಯಿತು. ಪ್ರತಿನಿತ್ಯ ಬಸ್ಸನ್ನಿಳಿದು ಐದು ಕಿ.ಮೀ.ಗೂ ಹೆಚ್ಚು ನಡೆದುಕೊಂಡೆ ಬಂದು ನನ್ನ ಉಳುವಿಗಾಗಿ, ಮಕ್ಕಳ ಒಳಿತಿಗಾಗಿ ಪಾಲಕರಲ್ಲಿ ಜಾಗೃತಿ ಮೂಡಿಸಿ ಒಂದು ವಿದ್ಯಾರ್ಥಿ ಇದ್ದ ಶಾಲೆಯನ್ನು ೨೮ ವಿದ್ಯಾರ್ಥಿಗಳಾಗುವಂತೆ ಶ್ರಮಿಸಿದವರು ಕುಮಟಾದ ಹೆಗಡೆ ಗ್ರಾಮ ಮಚಗೋಣದ ಲಕ್ಷ್ಮಣ ಮಂಜುನಾಥ ಪಟಗಾರರವರು. ಬಿ.ಎ.,ಬಿ.ಎಡ್., ಎಂ.ಎ.ಪದವಿದರರಾದ ಇವರು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಹುದ್ದೆಗೆ ರಾಜೀನಾಮೆ ನೀಡಿ, ಮಕ್ಕಳಿಗೆ ಶಿಕ್ಷಣವನ್ನು ನೀಡಲೇಬೇಕೆಂದು ಖಾಯಂ ಮಾಸ್ತರಿಗೆ ಇಲ್ಲದ ನಮ್ಮೂರಿಗೆ ಮಾಸ್ತರಿಕೆಗಾಗಿ ಬಂದು ಮುಚ್ಚಿದ ಶಾಲೆಯ ಬಾಗಿಲು ತೆರೆದು ಒಮ್ಮೆ ಇಣುಕಿ ನೋಡಿ ಮತ್ತೆ ತಲೆಯೆತ್ತಿದವರು ಇಂದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಅವರ ಪ್ರಾಮಾಣಿಕ ಕರ್ತವ್ಯಕ್ಕೆ ಸಂದ ಗೌರವವಾಗಿದೆ ಎಂದು ನನ್ನ ಭಾವನೆ.

“ಬಯಸಿದ್ದು ಸಿಕ್ಕರೆ ಅದ್ಭುತ, ಕಳೆದುಕೊಂಡಿದ್ದು ಮತ್ತೆ ಸಿಕ್ಕರೆ ಪರಮಾದ್ಭುತ” ಎಂಬಂತೆ ನನ್ನ ಆನಂದಕ್ಕೆ ಮಿತಿಯೇ ಇರಲಿಲ್ಲ. ಹೆಸರು ಲಕ್ಷ್ಮಣ. ಆಳೆತ್ತರದ ವ್ಯಕ್ತಿಯಾಗಿರದೇ ಕುಳ್ಳಕಿದ್ದರೂ, ಅವರು ಮಾಡುವ ಕೆಲಸದಲ್ಲಿ ಶ್ರೀ ರಾಮನಷ್ಟೇ ಪರಿಶುದ್ಧ ಮನಸ್ಸು. ಊರಿನ ಹಿರಿಯರು, ಶಿಕ್ಷಣ ಅಭಿಮಾನಿಗಳು, ಜೊತೆಗೆ ಎಸ್ಡಿಎಂಸಿ ಅವರು ಸೇರಿ ಪುನ: ಆರಂಭಿಸಿದ ಶಾಲೆಯ ಒಡೆತನಕ್ಕೆ ಲಕ್ಷ್ಮಣ ಸಾರಥಿಯಾದರು. ಇಂತಹ ಸಾರಥ್ಯವಹಿಸಿ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಲಕ್ಷ್ಮಣ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವರ ಜೊತೆಯಲ್ಲಿ ನಿಂತು ಕೈಜೋಡಿಸಿ, ಧನಿಗೂಡಿಸಿದವರು ಇನ್ನೋರ್ವ ಶಿಕ್ಷಕ ಆರ್. ಜಿ. ಹೆಗಡೆಯವರು.

ಊರಿನ ಪ್ರತಿ ಮನೆಮನೆಗೆ ಭೇಟಿ ನೀಡಿ ಮಕ್ಕಳ ಪಾಲಕರ ಮನವೊಲಿಸಿದ ಲಕ್ಷ್ಮಣ ಊರೂರು ಸುತ್ತಿ ಹೈರಾಣಾದರೂ ಧೃತಿಗೆಡದೆ, ತುಂಬಾ ಕಷ್ಟವಾದ ದಾರಿಗಳೇ ನಮ್ಮನ್ನು ಯಾರೂ ನೋಡದ ಸುಂದರ ತಾಣಗಳಿಗೆ ಕರೆದೊಯ್ಯುತ್ತದೆ ಎಂಬ ನಂಬಿಕೆಯ ಮೇಲೆ ಕುಗ್ಗಿದ ಶಾಲೆಗೆ, ಹಿಗ್ಗಿದ ಚೈತನ್ಯ ನೀಡುವಲ್ಲಿ ಇವರ ಶ್ರಮ ಸಾರ್ಥಕವಾಗಿದೆ. ಮಕ್ಕಳ ಸಂಖ್ಯೆಯನ್ನು ಎರಡಂಕಿಯ ಗಡಿದಾಟಿಸಿದ ಪುಣ್ಯಾತ್ಮರಾದರು. ಶಾಲಾ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ, ಪೂರ್ವ ವಿದ್ಯಾರ್ಥಿಗಳ ಸಹಕಾರದಿಂದ ಆಟೋ ವ್ಯವಸ್ಥೆ ಮಾಡಿ ಹಾಜರಾತಿ ಕೊರತೆಯನ್ನು ನೀಗಿಸಿದರು. ಶಾಲೆಯ ಆವರಣವನ್ನು ಅಭಿವೃದ್ಧಿಗೊಳಿಸಿ, ಎಲ್ಲರ ಕಣ್ಣು ಶಾಲೆಯತ್ತ ಅರಳುವಂತೆ ಮಾಡಿದರು. ಬೋಧನೆಗೆ ಕಂಪ್ಯೂಟರ್ ಬಳಕೆ ಮಾಡುವುದರ ಮೂಲಕ ಆಟದ ಮೂಲಕ ಪಾಠಕ್ಕೆ ಅಣಿಯಾದರು, ಇದರ ಜೊತೆಗೆ ಪ್ರೊಜೆಕ್ಟರ್, ರೇಡಿಯೋ, ಮೊಬೈಲ್ ಅಪ್ಲಿಕೇಶನ್ ಬಳಸಿ ಗುಣಾತ್ಮಕ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದರು.

ಇಲಾಖೆ ಹಾಗು ದಾನಿಗಳ ನೆರವಿನಿಂದ ಸುಮಾರು ೧೭ ಲಕ್ಷದ ವಿವಿಧ ಕಾಮಗಾರಿಗಳ ಅಭಿವೃದ್ಧಿ ಕಾರ್ಯಾ ಹಾಗೂ ದಾನಿಗಳ ನೆರವೆನಿಂದ ೯ಲಕ್ಷದ ಶಾಲಾ ಭೌತಿಕ ಸೌಲಭ್ಯಗಳನ್ನು ಒಟ್ಟು ಸುಮಾರು ೨೬ ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ವೆಚ್ಚ ಮಾಡಿ ನನ್ನನ್ನು ಅಭಿವೃದ್ಧಿಪಡಿಸಿ ಮಾದರಿ ಶಾಲೆಯನ್ನಾಗಿ ಮಾಡಿದ ಕೀರ್ತಿ ಇವರದ್ದಾಗಿದೆ. ನನ್ನ ಮೇಲ್ಚಾವಣಿ ದುರಸ್ತಿ ಮಾಡಿ, ತರಗತಿ ಕೋಣೆಗೆಲ್ಲ ಟೈಲ್ಸ್ ಅಳವಡಿಸಿರುತ್ತಾರೆ. ಹೊರಗಡೆ ಇಂಟರ್ಲಾಕ್, ರ್ಯಾಂಪ, ಆಟದ ಮೈದಾನ, ಕಾಂಪೌಂಡ್ ನಿರ್ಮಿಸಿದರು. ನನ್ನ ಕಣ್ಗಾವಲಿಗಾಗಿ ಸಿ.ಸಿ.ಕ್ಯಾಮೆರಾ ಅಳವಡಿಸಿದರು. ಕಂಪ್ಯೂಟರ್, ಹೊಸ ಅಡುಗೆಮನೆ, ಮಿಕ್ಸರ್, ಕುಕ್ಕರ್, ನಲಿ-ಕಲಿ ರ್ಯಾಂಪ, ಮತ್ತು ನಲಿ-ಕಲಿ ಟೇಬಲ್, ಕುರ್ಚಿ, ಕಪಾಟು ,ಕಲರ್ ಪ್ರಿಂಟರ್ ಇವೆಲ್ಲವೂ ದಾನಿಗಳ ನೆರವಿನಿಂದ ಶಾಲಾ ಕೋಣೆ ಪ್ರವೇಶಿಸಿತು. ಮಕ್ಕಳ ಕಲಿಕೆಗೆ ಪ್ರೇರೇಪಿಸಿತು. ಶಾಲೆಯಲ್ಲಿ ಬೆಳೆದ ತರಕಾರಿಗಳನ್ನು ಹಾಗೂ ಮಾವಿನಕಾಯಿಯ ಉಪ್ಪಿನಕಾಯಿಗಳನ್ನು ಶಾಲೆಗೆ ಬಳಸುವ ಜೊತೆಗೆ ತಮ್ಮ ಸುತ್ತಮುತ್ತಲಿನ ಶಾಲೆ ಮತ್ತು ಅಂಗನವಾಡಿಗಳಿಗೆ ಉಚಿತವಾಗಿ ನೀಡುತ್ತಿದ್ದುದು ಮತ್ತೆಲ್ಲಿಯೂ ನೋಡಲು ಸಾಧ್ಯವಿಲ್ಲ. ಶಾಲಾ ಸುತ್ತಮುತ್ತ ಕೈತೋಟ..ಒಂದೋ..ಎರಡೋ ಎಲ್ಲರೂ ನನ್ನನ್ನು ಕಂಡು ಓಡುವುದನ್ನು ಬಿಟ್ಟು, ನನ್ನ ಅಭಿವೃದ್ಧಿಯನ್ನು ಕಂಡು ಇಡೀ ಜಿಲ್ಲೆ ಬೆರಗುಗಣ್ಣಿನಿಂದ ನೋಡುವಂತಾಯಿತು. ಊರಿನವರ ಹೆಜ್ಜೆ “ಶಾಲೆಯ ಕಡೆ ನಮ್ಮ ನಡೆ”ಎಂಬಂತಾಯಿತು. ಈಗ ೨೮ ಕ್ಕೇರಿದ ಮಕ್ಕಳ ಸಂಖ್ಯೆ ಮುರಾರ್ಜಿ, ನವೋದಯ ಪರೀಕ್ಷೆಯಲ್ಲಿ ಸಾಧನೆ ಮಾಡಿ ಕೆಲವರು ತಮ್ಮ ಸಾಧನೆಗೆ ತಕ್ಕ ವಿದ್ಯಾರ್ಜನೆಯಲ್ಲಿ ತೊಡಗಿದ್ದಾರೆ.

ಹಳೆ ವಿದ್ಯಾರ್ಥಿ ಸಂಘ, ಎಸ್. ಡಿ.ಎಂ.ಸಿ.ಊರ ನಾಗರಿಕರೆಲ್ಲರೂ ಸೇರಿ ಕಳೆದ ವರ್ಷ ನನ್ನ ರಜತ ಮಹೋತ್ಸವ ಹತ್ತು ಲಕ್ಷಕ್ಕೂ ಮಿಕ್ಕಿ ಖರ್ಚು ಮಾಡಿ ವಿಜೃಂಭಣೆಯಿಂದ ಆಚರಿಸಿರುತ್ತಾರೆ. ನನ್ನನ್ನು ಇಡಿಯಾಗಿ ಸಿಂಗರಿಸಿ ನನ್ನ ಕೀರ್ತಿ ಬೆಳಗುವಂತೆ ಮಾಡಿದ್ದಾರೆ. ೨೦೨೫-೨೬ ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ “ಬೆಸ್ಟ್ ಎಸ್‌ಡಿಎಂಸಿ” ಪ್ರಶಸ್ತಿ ನೀಡಿ ಗೌರವಿಸಿದೆ. ಅದರ ಹೊರತಾಗಿಯೂ “ಬೆಸ್ಟ್ ಪ್ರಾಕ್ಟೀಸ್ ಸ್ಕೂಲ್” ಎಂಬ ಪ್ರಶಸ್ತಿಯು ನನ್ನ ಮುಡುಗೇರಿದೆ. ಮುಚ್ಚಿದ ಶಾಲೆ ಎಂಬ ಪಟ್ಟಕೇರಿಸದೇ, ನನ್ನ ಭಾಗ್ಯದ ಬಾಗಿಲನ್ನು ತೆರೆದು ಇಡೀ ಜಿಲ್ಲೆ ನನ್ನಂತ ನೋಡುವಂತೆ ಮಾಡಿದ ಪ್ರಾಮಾಣಿಕ ಶಿಕ್ಷಕ, ಸಾಧಕ ಶಿಕ್ಷಕರಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಅವರ ಮುಡಿಗೇರಿರುವುದು ನನ್ನ ಮಡಿಲು ಹೊನ್ನ ಕಲಶದಂತಾಗಿದೆ. ನನ್ನೂರಿನ ಪುಟಾಣಿ ಮಕ್ಕಳ ಆರಾಧ್ಯ ದೈವದಂತಿರುವ ಲಕ್ಷ್ಮಣ ಇನ್ನಷ್ಟು ಶಕ್ತಿವಂತರಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂಬುದು ನನ್ನ ಹಾರೈಕೆಯಾಗಿದೆ. ಈಗ ನನ್ನ ಪಾಲಿನ ವ್ಯಥೆ ಹೊರಟುಹೋಗಿ ಕಥೆ ಮಾತ್ರ ಬಾಕಿ ಇದೆ. ಎಲ್ಲರಿಗೂ ಶುಭವಾಗಲಿ.

ಶಾಲೆಯ ಒಳಿತಿಗಾಗಿ, ಮಕ್ಕಳ ಭವಿಷ್ಯತ್ತಿಕ್ಕಾಗಿ, ಊರಿನ ಅಭಿವೃದ್ಧಿಗಾಗಿ, ಪಾಲಕರ ಹಿತಕ್ಕಾಗಿ ತನ್ನ ಬದುಕನ್ನೇ ಪಣವಾಗಿಟ್ಟು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿದ ಲಕ್ಷ್ಮಣ ಪಟಗಾರರವರು ನೂರ್ಕಾಲ ಬಾಳಿ ಬದುಕಲೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ
ನಲಿ-ಕಲಿ ಶಿಕ್ಷಕ, ಹೊನ್ನಾವರ.

Exit mobile version