ಒಂದು ಶಿಕ್ಷಣ ಸಂಸ್ಥೆಯ ಯಶಸ್ಸನ್ನು ಅದರ ಕಟ್ಟಡಗಳು ಅಥವಾ ವಿದ್ಯಾರ್ಥಿಗಳ ಸಂಖ್ಯೆಯಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಉತ್ತಮ ಆಡಳಿತ, ದೂರದೃಷ್ಟಿಯ ನಾಯಕತ್ವ, ಗುಣಮಟ್ಟದ ಶಿಕ್ಷಣ, ಸಾಂಸ್ಕೃತಿಕ ವಾತಾವರಣ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೀಡುವ ಆದ್ಯತೆಯೇ ಆ ಸಂಸ್ಥೆಯ ನಿಜವಾದ ಹೆಗ್ಗಳಿಕೆ. ಈ ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ರೂಪ ನೀಡಿದ್ದ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಹಾಗೂ ಸಹಪ್ರಾಧ್ಯಾಪಕಿ ಡಾ. ವಿನಯ ಒಕ್ಕುಂದrವರು ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡಿದ್ದಾರೆ. ಇವರ ವರ್ಗಾವಣೆಯಿಂದ ಕಾಲೇಜು ಒಬ್ಬ ಸಮರ್ಥ ಆಡಳಿತಗಾರ ಹಾಗೂ ಇಬ್ಬರು ಆದರ್ಶ ಶಿಕ್ಷಕರ ಸೇವೆಯನ್ನು ಕಳೆದುಕೊಂಡಂತಾಗಿದೆ ಎಂಬ ಅಭಿಪ್ರಾಯ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳಿಂದ ವ್ಯಕ್ತವಾಗುತ್ತಿದೆ.
2013 ರಲ್ಲಿ ಆರಂಭವಾದ ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2017ರ ಆಗಸ್ಟ್ 17ರಂದು ಒಕ್ಕುಂದ ದಂಪತಿಗಳು ವರ್ಗಾವಣೆಯಾಗಿ ಬಂದರು. ಆಗ ಈ ಕಾಲೇಜು ಹಳೆಯ ನಗರಸಭೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆಗ ಬಿ.ಎ. ಹಾಗೂ ಬಿ.ಕಾಂ. ವಿಭಾಗಗಳು ಮಾತ್ರ ಇದ್ದು, ಸುಮಾರು 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಸವಾಲಿನ ಪರಿಸ್ಥಿತಿಯಲ್ಲಿದ್ದ ಕಾಲೇಜನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿರ್ವಹಿಸಿದರು. ನಂತರ ಇವರ ಪ್ರಯತ್ನದಿಂದಾಗಿ 2021 ಮತ್ತು, 2023 ರಲ್ಲಿ ಬಿ.ಎಸ್ಸಿ ಹಾಗೂ ಬಿ.ಸಿ.ಎ. ಕೋರ್ಸ್‌ಗಳು ಆರಂಭಗೊಂಡು, ಕಾಲೇಜಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಾತಾವರಣಕ್ಕೆ ಆಕರ್ಷಿತರಾಗಿ ಇಂದು ಕಾಲೇಜಿನಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ಗಮನಾರ್ಹ ಸಾಧನೆಯಾಗಿದೆ.
ಶಾಸಕ ಆರ್.ವಿ. ದೇಶಪಾಂಡೆಯವರ ಪ್ರಯತ್ನದಿಂದ ಅಂಬೇವಾಡಿಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡಕ್ಕೆ ಕಾಲೇಜು 2018 ರಲ್ಲಿ ಸ್ಥಳಾಂತರವಾದ ಬಳಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಿತು. ಸುಸಜ್ಜಿತ ತರಗತಿ ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಸೌಲಭ್ಯಗಳು ಹಾಗೂ ಉತ್ತಮ ಶೈಕ್ಷಣಿಕ ವಾತಾವರಣದಿಂದ ಸರ್ಕಾರಿ ಕಾಲೇಜು ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯಿತು. ಈ ಬೆಳವಣಿಗೆಯ ಹಿಂದೆ ಒಕ್ಕುಂದ ದಂಪತಿಗಳ ಹಾಗೂ ಯೋಜನಾಬದ್ಧ ಕಾರ್ಯವೈಖರಿ ಹಾಗೂ ಸಹೋದ್ಯೋಗಿಗಳ ಸಹಕಾರ ಪ್ರಮುಖ ಪಾತ್ರ ವಹಿಸಿತ್ತು.
ಶೈಕ್ಷಣಿಕ ಸಾಧನೆಯ ಜೊತೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿಗೆ ಅವರು ವಿಶೇಷ ಆದ್ಯತೆ ನೀಡಿದರು. ಸ್ವತಹ ಸಾಹಿತಿಗಳಾಗಿರುವ ಇವರು ಪ್ರತಿ ತಿಂಗಳು ಸಾಹಿತ್ಯ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸಿದರು. ರಾಜ್ಯದ ಹೆಸರಾಂತ ಸಾಹಿತಿಗಳು, ಕಲಾವಿದರು ಹಾಗೂ ಚಿಂತಕರನ್ನು ಕಾಲೇಜಿಗೆ ಆಹ್ವಾನಿಸಿ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಸಾಮಾಜಿಕ ಹೊಣೆಗಾರಿಕೆ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಪ್ರಯತ್ನ ನಡೆಸಿದರು.
ಪ್ರಾಚಾರ್ಯ ಡಾ. ಎಮ್.ಡಿ. ಒಕ್ಕುಂದರವರ ಆಡಳಿತ ಹಾಗೂ ಕಾಲೇಜಿನ ಸಾಧನೆಯನ್ನು ಪರಿಗಣಿಸಿ ಪಿ.ಎಂ. ಉಷಾ ಯೋಜನೆಯಡಿ ಐದು ಕೋಟಿ ರೂ. ಅನುದಾನ ಮಂಜೂರಾಗಿದ್ದು, (ರಾಜ್ಯದ 20 ಕಾಲೇಜುಗಳಲ್ಲಿ ಈ ಕಾಲೇಜು ಒಂದು ) ಕಂಪ್ಯೂಟರ್ ಪ್ರಯೋಗಾಲಯ, ಬಾಸ್ಕೆಟ್‌ಬಾಲ್ ಕೋರ್ಟ್, ಕಟ್ಟಡ ನವೀಕರಣ, ಕ್ಯಾಂಪಸ್ ಸೌಂದರ್ಯೀಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಡಾ. ವಿನಯ ಒಕ್ಕುಂದ ಅವರ ವಿಶೇಷ ಆಸಕ್ತಿಯಿಂದ ಕಾಲೇಜು ಆವರಣದಲ್ಲಿ 600ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಒಳಗೊಂಡ ಔಷಧಿ ವನವೂ ನಿರ್ಮಾಣಗೊಂಡಿದೆ.
ಎನ್.ಎಸ್.ಎಸ್., ಎನ್.ಸಿ.ಸಿ., ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಕಾಲೇಜು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ ಎಲ್ಲ ಸಾಧನೆಗಳ ಹಿನ್ನೆಲೆಯಲ್ಲಿ ಈ ಕಾಲೇಜಿಗೆ ಮೊದಲ ಬಾರಿಗೆ 2022 ರಲ್ಲಿ ನ್ಯಾಕನಿಂದ ಬಿ ಪ್ಲಸ್ ಮಾನ್ಯತೆ ದೊರೆತಿರುವುದು ಉಲ್ಲೇಖಾರ್ಹ.
ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೆಳವಣಿಗೆಯ ಇತಿಹಾಸದಲ್ಲಿ ಡಾ. ಎಂ.ಡಿ. ಒಕ್ಕುಂದ ಹಾಗೂ ಡಾ. ವಿನಯ ಒಕ್ಕುಂದ ದಂಪತಿಗಳ ಸೇವೆ ಒಂದು ಮಹತ್ವದ ಅಧ್ಯಾಯವಾಗಿ ಉಳಿಯಲಿದೆ. ಅವರು ಹಾಕಿಕೊಟ್ಟ ಅಭಿವೃದ್ಧಿಯ ಭದ್ರ ಅಡಿಪಾಯ ಮುಂದಿನ ದಿನಗಳಲ್ಲಿಯೂ ಕಾಲೇಜಿನ ಪ್ರಗತಿಗೆ ದಾರಿದೀಪವಾಗಲಿದೆ ಎಂಬುದು ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳ ಆಶಯವಾಗಿದೆ.
ದಾಂಡೇಲಿಯ ಪ್ರೀತಿ ಮರೆಯಲಾರೆವು
“ದಾಂಡೇಲಿಯ ಜನರು, ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಹಾಗೂ ವಿಶೇಷವಾಗಿ ಶಾಸಕ ಆರ್.ವಿ. ದೇಶಪಾಂಡೆಯವರ ಸಹಕಾರದಿಂದ ಕಾಲೇಜನ್ನು ಈ ಮಟ್ಟಕ್ಕೆ ಬೆಳೆಸಲು ಸಾಧ್ಯವಾಯಿತು. ಈ ಕಾಲೇಜು ಮತ್ತು ದಾಂಡೇಲಿಯನ್ನು ಬಿಟ್ಟು ಹೋಗುವುದು ನೋವಾಗುತ್ತಿದೆ. ಆದರೆ ಇಲಾಖೆಯ ನಿಯಮವನ್ನು ಗೌರವಿಸಿ ವರ್ಗಾವಣೆಯನ್ನು ಸ್ವೀಕರಿಸುತ್ತಿದ್ದೇವೆ. ಕಾಲೇಜಿನ ಪ್ರಗತಿಗಾಗಿ ನಮ್ಮೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರನ್ನೂ ಹಾಗೂ ದಾಂಡೇಲಿಯ ಪ್ರೀತಿಯನ್ನು ಮರೆಯಲಾರೆವು ” ಎನ್ನುತ್ತಾರೆ ವರ್ಗಾವಣೆಗೊಂಡ ಪ್ರಾಚಾರ್ಯ ಡಾ.ಎಂ.ಡಿ. ಒಕ್ಕುಂದರವರು.
