“ಯೋಗ ಕರ್ಮಸು ಕೌಶಲಂ” ಇದೊಂದು ಭಗವದ್ಗೀತೆಯಲ್ಲಿ ಬರುವ ಸಾಲು. ಅಂದರೆ ತಾನು ಮಾಡುವ ಕರ್ತವ್ಯ ಕರ್ಮದಲ್ಲಿ ತನ್ಮಯನಾಗುವ ಕೌಶಲವೇ ಯೋಗ. ಮಾಡುವ ಕಾರ್ಯದಲ್ಲಿ ಸಂತೋಷ ಪಡುವುದೇ ಒಂದು ಸುಯೋಗ. ಹಾಗಾಗಿ ಕಾಯಕವೇ ಕೈಲಾಸ ಎಂಬ ಮಾತು ಅರ್ಥಪೂರ್ಣವಾಗಿ ವ್ಯಕ್ತಿಯನ್ನು ಆವರಿಸುತ್ತದೆ. ಇಂಥ ಅಪರೂಪದ ಕಾಯಕಯೋಗಿ ಮನೆಯಿಂದ ಸುಮಾರು ನೂರು ಕಿಲೋಮೀಟರ್ ದೂರದ ಹುಕ್ಕೊಳ್ಳಿ ಶಾಲೆಯಲ್ಲಿ ಹನ್ನೊಂದು ವಸಂತಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾದವರು ರಮಾನಂದ ಪಿ. ನಾಯ್ಕರವರು.
ಸಣಕಲು ದೇಹದ, ಸದಾ ಹಸನ್ಮುಖಿ, ತೃಪ್ತಿಯೇ ಸಿರಿತನದ ಲಕ್ಷಣವೆಂದರಿತು ತನಗೊಪ್ಪಿಸಿದ ಕೆಲಸವನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುವ ರಮಾನಂದ ಹುಕ್ಕೊಳ್ಳಿ ಜನರ ಮನಸ್ಸಿನಲ್ಲಿ ಸದಾ ಪರಮಾನಂದ ಉಂಟುಮಾಡುವ ಶಿಕ್ಷಕ. ಕಾಡಿನ ಮಧ್ಯದಲ್ಲಿ ಸುಮಾರು 60 ಕುಟುಂಬಗಳಿರುವ ಹುಕ್ಕೊಳ್ಳಿ ಶಾಲೆಗೆ ಸಿದ್ದಾಪುರದ ಜೊಗಿನಮಠದಿಂದ ವರ್ಗವಾಗಿ ಬಂದಾಗ ರಮಾನಂದ ನಾಯ್ಕರಿಗೆ ನಿತ್ಯ ಸಂಕಟ. ಆದರೆ ಬರ ಬರುತ್ತಾ ಮಕ್ಕಳು ತೋರಿಸಿದ ಪ್ರೀತಿ, ಪಾಲಕರ ದಯಾಗುಣ, ಊರಿನವರ ವಾತ್ಸಲ್ಯಗಳಿಂದ ಕರಗಿದ ಮನಸ್ಸು ಹಿಗ್ಗುವ ಕಡಲಾಗಿ, ವೃದ್ಧಿಸುವ ಸಂಪತ್ತಾಗಿ, ಹನ್ನೊಂದು ವಸಂತಗಳನ್ನು ಕಳೆದಿರುವದೇ ನನ್ನ ಬದುಕಿನ ಮಹತ್ವದ ಕ್ಷಣವೆಂದು ಹೇಳುತ್ತಾರೆ ರಮಾನಂದ ನಾಯಕರು.
ಮೂಲತಃ ಹೊನ್ನಾವರ ತಾಲೂಕಿನ ಚಂದಾವರದವರಾದ ರಮಾನಂದ ನಾಯ್ಕರವರ ತಂದೆ ಫಂಡು ನಾಯ್ಕ, ತಾಯಿ ಲಲಿತ ನಾಯ್ಕ ರವರ ಮಗನಾಗಿ 1966 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಚಂದಾವರದಲ್ಲಿಯೂ, ಪ್ರೌಢ ಶಿಕ್ಷಣ ಮಲ್ಲಾಪುರದಲ್ಲಿಯೂ, ವೃತ್ತಿ ಬದುಕಿನ ಶಿಕ್ಷಣ ಕಡತೋಕಾದ ಜೂನಿಯರ್ ಕಾಲೇಜಿನಲ್ಲಿಯೂ, ಪದವಿ ಶಿಕ್ಷಣವನ್ನು ಕುಮಟಾದಲ್ಲಿ ಪೂರೈಸಿ 1988 ರಂದು ಹಾಸನ ಜಿಲ್ಲೆ ಆಲೂರು ತಾಲೂಕಿನ ಕಾರಿಗನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ಎರಡು ವರ್ಷಗಳ ಕಾಲ ಸೇವೆ ಪೂರೈಸಿ ನಂತರ ಸಿದ್ದಾಪುರ ತಾಲೂಕಿನ ಜೋಗಿನಮಠ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದು ಅಲ್ಲಿ ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಹೊನ್ನಾವರ ತಾಲೂಕಿನ ಹುಕ್ಕೊಳ್ಳಿಗೆ ವರ್ಗವಾಗಿ ಬಂದರು. ಸುಮಾರು ಹನ್ನೊಂದು ವಸಂತಗಳನ್ನು ಪೂರೈಸಿ ಇತ್ತೀಚೆಗೆ ನಿವೃತ್ತಿಯಾಗಿರುತ್ತಾರೆ.ಪತ್ನಿ ರೇಣುಕಾ ಮಕ್ಕಳಾದ ವಿಶ್ವಜಿತ್, ಶ್ರೀನಿಧಿಯೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ.
ಬಿದ್ದವನ ಎತ್ತಿ ಹಿಡಿ ಕಂಬನಿಯನೊರೆಸಿ ನುಡಿ
ಅಂಬಲಿಯ ಹಸಿದವನಿಗೆ ನೀಡು- ಎಂಬ ಮಾತಿಗೂ ಒಂದು ಹೆಜ್ಜೆ ಮುಂದೆ ಹೋಗಿ “ಅಕ್ಷರದ ರುಚಿ ಅಂಬಲಿಗಿಂತ ಮೇಲು” ಎಂಬುದನ್ನು ಅನಕ್ಷರಸ್ಥ ಪಾಲಕರಲ್ಲಿ ಬಿತ್ತಿ ಸುಮಾರು ನೂರು ಕಿಲೋ ಮೀಟರ್ ದೂರದ ಪ್ರಯಾಣಕ್ಕೂ ಜಗ್ಗದೆ, ಬಗ್ಗದೆ ವೃತ್ತಿ ಬದುಕನ್ನು ಪ್ರೀತಿಸಿದ ರಮಾನಂದ ಮಾಸ್ತರು ಹುಕ್ಕೊಳ್ಳಿ ಜನಮಾನಸದಲ್ಲಿ ಶಾಶ್ವತ ನೆನಪು. ಇತ್ತೀಚಿಗಷ್ಟೇ ರಜತ ಸಂಭ್ರಮಾಚರಣೆ ಆಚರಿಸಿ ಪಾಲಕರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಿದ ಅಪರೂಪದ ಸ್ನೇಹಮಯಿ ಹೃದಯವಂತ ಶಿಕ್ಷಕ. ಇತರರಿಗೆ ನೆರವಾಗುವುದರಲ್ಲಿ ಸಂತಸ ಕಂಡವರು. ಪರಪಿಡೆಗಿಂತ ದೊಡ್ಡ ಪಾಪ ಮತ್ತೊಂದಿಲ್ಲ ಎಂದು ನಂಬಿದವರು. ಕಾರ್ಯಸಾಧಕನ ಕೈಯಲ್ಲಿ ಕಡ್ಡಿಯು ಗುಡ್ಡವಾದಿತು! ಎಂಬ ಮಾತನ್ನು ಸತ್ಯವಾಗಿಸಿ, ಮಹಿಮೆ ಗ್ರಾಮದ ತುಂಬೆಲ್ಲ ಅಕ್ಷರದ ಬೀಜ ಬಿತ್ತಿ ಕಾಡಿನ ಜನರ ಮನದಲ್ಲಿ ಪರಮಾನಂದದ ಅಮೃತ ಸಿಂಚನಗೈದಿರುವುದು ಇಡೀ ಶಿಕ್ಷಕ ಕುಲಕ್ಕೆ ಹೆಮ್ಮೆ ಎನಿಸಿದೆ. ಇಂತಹ ಸರಳ ಸಜ್ಜನ ನಿವೃತ್ತ ಶಿಕ್ಷಕ ರಮಾನಂದ ಸರ್ವರಿಗೂ ಆನಂದವನ್ನುಂಟು ಮಾಡುತ್ತಾ, ನೂರ್ಕಾಲ ಬಾಳಿ ಬದುಕಲೆಂದು ಹಾರೈಸುತ್ತೇನೆ.
