ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೋರ್ವರ ಹೆಸರನ್ನೇ ಬಳಸಿಕೊಂಡು ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಹಿರಿಯ ಅಧಿಕಾರಿಯೋರ್ವರಿಗೆ ಆನ್ಲೈನ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ ವಂಚಕರು ತಾನು ಸಿ.ಆರ್.ಪಿ.ಎಪ್. (ಕೇಂದ್ರ ಮೀಸಲು ಪಡೆ) ಅಧಿಕಾರಿ ಎಂದು ಹೇಳುವ ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿಯ ಹೆಸರನ್ನೇ ದುರ್ಬಳಕೆ ಮಾಡಿಕೊಂಡಿರುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ನಡೆದಿದ್ದೇನು ?:
ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಹಿರಿಯ ಅಧಿಕಾರಿಯೋರ್ವರು ಮೊಬೈಲ್ ನಲ್ಲಿ ಫೇಸ್ಬುಕ್ ವೀಕ್ಷಣೆ ಮಾಡುತ್ತಿರುವಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಪೊಲೀಸ್ ಅಧಿಕಾರಿಯೋರ್ವರು ಫೇಸ್ಬುಕ್ ನಲ್ಲಿ ಆನ್ ಲೈನ್ ನಲ್ಲಿರುವುದು ಕಂಡು ಬಂದಿದೆ. ಕಾಗದ ಕಂಪನಿಯ ಈ ಹಿರಿಯ ಅಧಿಕಾರಿಗೆ ಬೆಂಗಳೂರಿನ ಪೊಲೀಸ್ ಅಧಿಕಾರಿ ಪರಿಚಯವಿದ್ದರಿಂದ ಸಹಜವಾಗಿಯೇ ಕಾಗದ ಕಂಪನಿಯ ಅಧಿಕಾರಿ ಪೊಲೀಸ್ ವರಿಷ್ಠಾಧಿಕಾರಿಗೆ ‘ಹಾಯ್’ ಎಂದು ಕಳಿಸಿದ್ದಾರೆ. ಅದಕ್ಕೆ ಆ ಕಡೆಯಿಂದ ಪೊಲೀಸ್ ವರಿಷ್ಠಾಧಿಕಾರಿಯ ಹೆಸರಿನಲ್ಲಿದ್ದ ಖಾತೆಯಿಂದ ತಕ್ಷಣ ಪ್ರತಿಕ್ರಿಯೆ ಬಂದಿದ್ದು ‘ಹಾಯ್ ಬ್ರದರ್ ಹೇಗಿದ್ದೀರಾ’ ಅಂತ ಕೇಳಿದ್ದಾರೆ. ಅದಕ್ಕೆ ಕಾಗದ ಕಂಪನಿಯ ಅಧಿಕಾರಿ ‘ಸೂಪರ್’ ಎಂದು ಉತ್ತರ ಕೊಟ್ಟ ತಕ್ಷಣ ಆ ಕಡೆಯಿಂದ ‘ನಿಮ್ಮ ಮೊಬೈಲ್ ನಂಬರ್ ಕಳಿಸಿ’ ಎನ್ನುವ ಸಂದೇಶ ಬಂದಿದೆ. ಪೊಲೀಸ್ ಅಧಿಕಾರಿ ಪರಿಚಯದವರಾಗಿದ್ದರಿಂದ ಕಾಗದ ಕಂಪನಿಯ ಅಧಿಕಾರಿ ಸಹ ತಮ್ಮ ಮೊಬೈಲ್ ನಂಬರನ್ನು ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆಗ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿದ್ದ ಫೇಸ್ಬುಕ್ ಖಾತೆಯಿಂದ ಮತ್ತೆ ಇವರಿಗೆ ಮೆಸೇಜ್ ಬಂದಿದ್ದು, ‘ನನ್ನ ಪರಿಚಯದ ಒಬ್ಬ ಸ್ನೇಹಿತರು ಸಿ.ಆರ್.ಪಿ.ಎಪ್. (ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ) ನಲ್ಲಿ ಅಧಿಕಾರಿಯಾಗಿದ್ದು ಅವರು ಬೆಂಗಳೂರಿಂದ ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ. ಅವರ ಮನೆಯಲ್ಲಿ ಒಂದಿಷ್ಟು ಫರ್ನಿಚರ್ ಗಳಿವೆ. ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ನಿಮಗೆ ಬೇಕಿದ್ದರೆ ಅದನ್ನು ಖರೀದಿಸಬಹುದು’ ಎಂಬ ಮಾಹಿತಿ ಹಾಕಿದ್ದಾರೆ. ಇವರಿಗೂ ಫರ್ನಿಚರ್ ಅಗತ್ಯವಿದ್ದರಿಂದ ಅವರು ‘ಆಯ್ತು ಸರ್ ನೋಡ್ತೀನಿ’ ಎಂದಿದ್ದಾರೆ.
ಇದಾದ ಕೆಲವೇ ಹೊತ್ತಿನಲ್ಲಿ ಒಂದು ನಂಬರ್ ನಿಂದ ಇವರಿಗೆ ಮೊಬೈಲಿಗೆ ಕಾಲ್ ಬಂದಿದೆ. ಮೊದಲು ಇಂಗ್ಲಿಷ್ ನಲ್ಲಿ ನಂತರ ಹಿಂದಿಯಲ್ಲಿ ಮಾತನಾಡಲು ಆರಂಭಿಸಿದ ಆ ಕಡೆಯವರು ‘ನಾನು ಸಿ.ಆರ್.ಪಿ.ಎಪ್. ಸಿಬ್ಬಂದಿಯಾಗಿದ್ದು ನನಗೆ ಪೊಲೀಸ್ ಅಧಿಕಾರಿ ಆತ್ಮೀಯ ಸ್ನೇಹಿತರು. ಅವರು ನಿಮಗೆ ಕರೆ ಮಾಡಲು ಹೇಳಿದರು. ನನಗೆ ಈಗ ಬೇರೆ ರಾಜ್ಯಕ್ಕೆ ವರ್ಗಾವಣೆಯಾಗಿದೆ. ನನ್ನ ಮನೆಯಲ್ಲಿರುವ ಫರ್ನಿಚರನ್ನು ನಾನು ಒಯ್ಯಲಾಗುತ್ತಿಲ್ಲ. ನನಗೆ ಅಲ್ಲಿ ಬೇರೆ ಫರ್ನಿಚರ್ ಇದೆ. ಹಾಗಾಗಿ ಈ ಫರ್ನಿಚರ್ ಕೊಟ್ಟು ಹೋಗುತ್ತೇನೆ’ ಎಂದಾಗ ಕಾಗದ ಕಂಪನಿ ಅಧಿಕಾರಿ ‘ಅದರ ಫೋಟೋಗಳನ್ನು ಕಳಿಸಿ’ ಅಂದಿದ್ದಾರೆ. ತಕ್ಷಣ ಇವರ ಮೊಬೈಲ್ ವಾಟ್ಸಪ್ ಗೆ ಆ ಫೀಠೋಪಕರಣಗಳ ಫೋಟೋಗಳು ಬಂದಿದೆ. ಅಲ್ಲಿ ಅತ್ಯಂತ ಬೆಲೆ ಬಾಳುವ ಡಬಲ್ ಕಾಟ್, ಸೋಫಾ ಸೆಟ್, ಡೈನಿಂಗ್ ಟೇಬಲ್, ಎಸಿ ಹಾಗೂ ಇತರೆ ಪಿಟೋಪಕರಣಗಳಿದ್ದವು. ಇವನ್ನೆಲ್ಲ ನೋಡಿದ ಕಾಗದ ಕಂಪನಿ ಅಧಿಕಾರಿ ಇದಕ್ಕೆ ಕನಿಷ್ಠ ಎಂದರು ಎರಡರಿಂದ ಮೂರು ಲಕ್ಷ ರು ಆಗಬಹುದೆಂಬ ಅಂದಾಜಿಸಿದ್ದಾರೆ. ಹಾಗೆ ಆ ಸಿ ಆರ್ ಪಿ ಎಪ್ ಸಿಬ್ಬಂದಿ ಹತ್ತಿರ ವಾಟ್ಸಾಪ್ನಲ್ಲಿ ‘ಇವುಗಳ ಅಮೌಂಟ್ ಎಷ್ಟು’ ಅಂತ ಕೇಳಿದಾಗ ಆತ ’90 ಸಾವಿರ’ ಎಂದಿದ್ದಾನೆ. ಇವರಿಗೂ ಫರ್ನಿಚರ್ ಗಳ ಅವಶ್ಯಕತೆ ಇರುವುದರಿಂದ ಹಾಗೂ ಬೆಲೆ ಕೂಡಾ ಕಡಿಮೆ ಆಯ್ತೆಂದು ಅನ್ನಿಸಿದ್ದರಿಂನದ ‘ ಆಯ್ತು ಕಳಿಸಿ’ ಎಂದು ಒಪ್ಪಿಕೊಂಡಿದ್ದಾರೆ.
ಕೆಲವೇ ಸಮಯದಲ್ಲಿ ಸಿ.ಆರ್.ಪಿ.ಎಪ್. ವಾಹವೊಂದರಲ್ಲಿ ಫರ್ನಿಚರ್ ಗಳನ್ನು ಲೋಡ್ ಮಾಡುತ್ತಿರುವ ಫೋಟೋ ಕಾಗದ ಕಂಪನಿಯ ಅಧಿಕಾರಿಯ ಮೊಬೈಲ್ ಗೆ ಬಂದಿದೆ. ಜೊತೆಯಲ್ಲಿಯೆ ‘ಈಗಲೇ ಲೋಡ್ ಮಾಡುತ್ತಿದ್ದೇನೆ. ನಿಮ್ಮ ವಿಳಾಸಕ್ಕೆ ಕಳುಹಿಸುತ್ತೇನೆ. ಒಂದು ಅರ್ಧದಷ್ಟು ಹಣವನ್ನು ಈಗ ಹಾಕಿ’ ಎಂದಿದ್ದಾರೆ. ಆಗ ಕಾಗದ ಕಂಪನಿ ಅಧಿಕಾರಿ ತನ್ನ ಮೊಬೈಲ್ ನಿಂದ 50 ಸಾವಿರ ರು.ಗಳನ್ನು ಅವರಿಗೆ ಗೂಗಲ್ ಪೇ ಮಾಡಲು ಪ್ರಯತ್ನಿಸಿದ್ದಾರೆ. ಅದರೆ ತಕ್ಷಣದಲ್ಲಿ ಇವರ ಖಾತೆಯಿಂದ ಅವರ ಖಾತೆಗೆ ಹಣ ಜಮಾ ಅಗದೇ ತಾಂತ್ರಿಕ ದೋಷ ತೋರಿಸಿದೆ. ಆಗ ಅವರು ಮೊದಲು 15 ಸಾವಿರ ರು ಹಾಕಿ ಎಂದಿದ್ದಾರೆ. ಇವರು ತಮ್ಮ ಬೇರೆ ಖಾತೆಯಿಂದ 15 ಸಾವಿರ ಆರಂಭದಲ್ಲಿ ಹಾಕಿದ್ದಾರೆ. ನಂತರ ತಮ್ಮ ಮತ್ತೊಂದು ಖಾತೆಯಿಂದ 15 ಸಾವಿರ ಹಾಕಿದ್ದಾರೆ. ಅಲ್ಲಿಗೆ ಒಟ್ಟು 30000 ಗಳನ್ನ ಆ ಸಿ. ಆರ್. ಪಿ. ಎಪ್. ಹೆಸರಿನ ವಂಚಕನ ಖಾತೆಗೆ ಜಮಾ ಆಗಿದೆ.
ಆತ ಉಳಿದ 20 ಸಾವಿರ ರು. ಹಾಕಲು ಮತ್ತೆ ಮತ್ತೆ ಒತ್ತಾಯಿಸುತ್ತಿದ್ದಂತೆ ಇವರಿಗೂ ಅನುಮಾನ ಬಂದಿದೆ. ಅವರು ಪರಿಚಯದ ಆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಲು ಹೋದರೆ ಅವರ ಮೊಬೈಲ್ ನಂಬರ್ ಬ್ಯುಸಿ ಬರುತ್ತಿತ್ತು. ಆದರೆ ಅದೇ ಪೊಲಿಸ್ ಅಧಿಕಾರಿಯ ಫೇಸ್ ಬುಕ್ ಖಾತೆಯಿಂದ ‘ಹಣ ಹಾಕಿ ಸಮಸ್ಯೆ ಇಲ್ಲ ಎಂಬ ಮೆಸೇಜ ಬರುತ್ತಿತ್ತು. ಆಗ ಕಾಗದ ಕಂಪನಿಯ ಅಧಿಕಾರಿಗೆ ಅನುಮಾನ ಖಚಿತವಾಗುತ್ತಿದ್ದಂತೆಯೇ ತನ್ನ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಆನ್ ಲೈನ್ ವಂಚಕರು ಈಗ ಬೇರೆಲ್ಲವನ್ನ ಮುಗಿಸಿ ಇದೀಗ ಆನ್ ಲೈನ್ ವಂಚನೆ ತಡೆಯುವ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರನ್ನೇ ಬಳಸಿ, ಕೇಂದ್ರ ಮೀಸಲು ಪಡೆಯ ಮ ಅಧಿಕಾರಿ ಎಂದು ಹೇಳಿಕೊಂಡು ಆನ್ಲೈನ್ ವಂಚನೆಗೆ ಮುಂದಾಗಿರುವುದೇ ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ಕೊನೆಯಲ್ಲಿ ಬೆಂಗಳೂರಲ್ಲಿರುವ ಆ ಪೊಲೀಸ್ ವರಿಷ್ಠಾಧಿಕಾರಿ ಕಾಗದ ಕಂಪನಿಯ ಅಧಿಕಾರಿಯ ಸಂಪರ್ಕಕ್ಕೆ ಬಂದಾಗ ಇವರು ನಡೆದ ವಿಷಯ ತಿಳಿಸಿದ್ದಾರೆ. ಆಗ ಆ ಪೊಲೀಸ್ ವರಿಷ್ಠಾಧಿಕಾರಿ ‘ಆತ ನನ್ನ ಹೆಸರು ಹೇಳಿಕೊಂಡು ಬಹಳಷ್ಟು ಜನರಿಗೆ ಹೀಗೆಯೇ ಮಾಡುತ್ತಿದ್ದಾನಂತೆ. ಮೊದಲು ದೂರು ನೀಡಿ’ ಎಂದಿದ್ದಾರಂತೆ.
