ದಾಂಡೇಲಿ : ಶಿರಸಿ ಶೈಕ್ಷಣಿಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ ನಾಯಕ, ಭಾವಿಕೇರಿ, ಜೋಯಿಡಾ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಯಶವಂತ ನಾಯ್ಕ, ಬಾಡ, ಹಳಿಯಾಳ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ ನಾಯಕ, ಬೇಲೇಕೇರಿಯವರನ್ನು ದಾಂಡೇಲಿಯ ಗೆಳೆಯರ ಬಳಗದವರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿರಸಿ ಶೈಕ್ಷಣಿಕ ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ, ಭಾವಿಕೇರಿಯವರು ನಾನೊಬ್ಬ ರೈತ ಕುಟುಂಬದಿಂದ ಬಂದಂತಹ ಸಾಮಾನ್ಯ ವ್ಯಕ್ತಿ. ನನಗೆ ಶಿಕ್ಷಕನಾಗುವ ಹಾಗೂ ಶಿಕ್ಷಕರ ಸಂಘಟನೆಯ ಮೂಲಕ ಶಿಕ್ಷಕರ ಸೇವೆ ಮಾಡುವ ಅವಕಾಶ ದೊರೆತಿದ್ದು ಅದು ನನ್ನ ಜೀವನದ ಭಾಗ್ಯದ ಕ್ಷಣ ಎಂದು ತಿಳಿದಿದ್ದೇನೆ. ಶಕ್ತಿ ಇರುವರೆಗೆ ಶಿಕ್ಷಕರ ಕುಂದುಕೊರತೆಗಳ ನಿವಾರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ನನ್ನ ವೃತ್ತಿ ಮತ್ತು ಸಂಘಟನೆಯಲ್ಲಿ ದಾಂಡೇಲಿಯ ಶಿಕ್ಷಕರು ತೋರಿದ ಪ್ರೀತಿ ಅನನ್ಯವಾದುದು. ಹಾಗೂ ಇಲ್ಲಿಯ ಗೆಳೆಯರ, ನಾಗರಿಕ ಬಂಧುಗಳ ಬಾಂದವ್ಯ ಹಾಗೂ ಎಲ್ಲರನ್ನ ಪ್ರೀತಿಸುವ ,ಗೌರವಿಸುವ ದಾಂಡೇಲಿಯ ಜನಸಂಸ್ಕೃತಿ ಕೂಡ ನನಗೆ ಇಷ್ಟವಾದದ್ದು. ದಾಂಡೇಲಿ ಈಗ ತಾಲೂಕಾಗಿದೆ. ನೂತನ ತಾಲೂಕುಗಳಲ್ಲಿ ಈ ವರೆಗೂ ಶಿಕ್ಷಕರ ಸಂಘ ರಚನೆಯಾಗಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವೂ ಆಗಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ದಾಂಡೇಲಿ ತಾಲೂಕು ಶಿಕ್ಷಕರ ಸಂಘವನ್ನು ಹೊಸದಾಗಿ ರಚನೆ ಮಾಡುವುದಾಗಿ ತಿಳಿಸಿದ ಸತೀಶ್ ನಾಯಕರು , ಇಲ್ಲಿ ಕ್ಷೇತ್ರಕ್ಷಣಾಧಿಕಾರಿಗಳ ಕಾರ್ಯಾಲಯ ಆಗುವಲ್ಲೂಯೂ ಕೂಡ ನನ್ನಿಂದಾದ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ಸನ್ಮಾನ ಸ್ವೀಕರಿಸಿದ ಹಳಿಯಾಳ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಶಾಂತ ನಾಯಕ, ಬೇಲೇಕೇರಿ ಹಾಗೂ ಜೋಯಿಡಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ, ಬಾಡರವರು ಮಾತನಾಡಿ ನಾವು ಶಿಕ್ಷಕರಿಗಾಗಿ ನಮ್ಮ ಸಂಘಟನೆ ಮೂಲಕ ಹಲವಾರು ಸೇವಾ ಕಾರ್ಯಗಳನ್ನು ಮಾಡಿದ್ದೇವೆ. ನಾವು ಅಧ್ಯಕ್ಷರಾದ ಸಂದರ್ಭದಲ್ಲಿ ದಾಂಡೇಲಿಯ ಗೆಳೆಯರ ಬಳಗದವರು ಕರೆದು ನಮ್ಮನ್ನ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ದೊರೆತಂತಹ ಸಂತಸವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಭಾಜಪ ಅಧ್ಯಕ್ಷ ಬುದ್ದಿವಂತ ಗೌಡ ಪಾಟೀಲ್, ತಾಮೀರ್ ಬ್ಯಾಂಕ್ ನಿರ್ದೇಶಕ ಮುಸ್ತಾಕ್ ಶೇಕ್ ಮುಂತಾದವರು ಮಾತಾಡಿ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮೊದಲ ಬಾರಿಗೆ ಹಳಿಯಾಳ – ದಾಂಡೇಲಿಯ ಅವಿಭಜಿತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಯ ಶಿಕ್ಷಕರಾದ ಸತೀಶ ನಾಯಕ ಭಾವಿಕೇರಿಯವರು ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವುದು ಈ ಭಾಗದ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. ನೂತನ ಮೂವರೂ ಅಧ್ಯಕ್ಷರು ಈ ಜಿಲ್ಲೆಯ ಹಾಗೂ ತಾಲೂಕಿನ ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಜೊತೆಗೆ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಕೂಡ ಅಧಿಕಾರಿಗಳ ಜೊತೆಗೆ ಸಮನ್ವಯದ ಕಾರ್ಯವನ್ನು ನಡೆಸಬೇಕು ಎಂದು ಹೇಳಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವ್ಕರ್ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ್ ವಂದಿಸಿದರು. ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಅಧ್ಯಕ್ಷರಾದ ನಾರಾಯಣ ನಾಯ್ಕ, ಗೌರವ ಕಾರ್ಯದರ್ಶಿ ಗುರುಶಾಂತ ಜಡೆ ಹಿರೇಮಠ, ಪ್ರವೀಣ್ ನಾಯಕ್, ವೆಂಕಮ್ಮ ಗಾಂವಕರ, ಸುರೇಶ್ ಕಾಮತ್ , ಸುರೇಶ ಪಾಲನಕರ ಮುಂತಾದವರು ನೂತನ ಅಧ್ಯಕ್ಷರನ್ನ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್.ಪಿ. ನಾಯ್ಕ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಂ. ಆರ್. ನಾಯಕ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸುರೇಶ ನಾಯಕ, ಮಾನವ ಹಕ್ಕುಗಳ ಸಂಘಟನೆಯ ನಿರ್ದೇಶಕ ಫಿರೋಜ್ ಪಿರಜಾದೆ, ಪ್ರಮುಖರಾದ ಅನಿಲ್ ದಂಡಗಲ , ರವಿ ಸುತಾರ, ಅನಿಲ್ ನಾಯ್ಕರ, ಆಶಾ ದೇಶಭಂಡಾರಿ, ಕಿಶೋರ್ ಕಿಂದಳ್ಕರ್, ದಿವಾಕರ್ ನಾಯ್ಕ, ರಾಮಲಿಂಗ ಜಾದವ್, ಉದಯ್ ಶೆಟ್ಟಿ, ಸುಭಾಷ್ ನಾಯಕ, ಎಸ್.ಎಸ್. ಕುರ್ಡೇಕರ ಮುಂತಾದವರು ಉಪಸ್ಥಿತರಿದ್ದರು.
