Site icon ಒಡನಾಡಿ

ಕಾಗಾಲ ಮಂಜುಗೊಲಿದ ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ

“ಕಾರ್ಯಸಾಧಕನ ಕೈಯಲ್ಲಿ ಕಡ್ಡಿಯು ಗುಡ್ಡವಾದೀತು!”ಎಂಬ ಹಿರಿಯರ ಮಾತೊಂದಿದೆ. ಯಾರು ಸೃಜನಶೀಲ ಮನಸ್ಥಿತಿಯುಳ್ಳವರೋ, ಕ್ರಿಯಾಶೀಲ ಪ್ರವೃತ್ತಿ ಹೊಂದಿರುತ್ತಾರೋ, ಕರ್ತವ್ಯವೇ ದೇವರೆಂದು ನಂಬಿರುತ್ತಾರೋ ಅಂತವರ ಪಾಲಿಗೊಲಿದ ಯಾವುದೇ ಹುದ್ದೆಯನ್ನಾದರೂ ಸಮರ್ಥವಾಗಿ ನಿಭಾಯಿಸಬಲ್ಲರು. ಇಂತಹ ಅಪರೂಪದ ವ್ಯಕ್ತಿತ್ವಕ್ಕೆ ಸಾಕ್ಷಿಯಾದವರು ಕಾಗಾಲ ಕಡ್ಲೆ ಮನೆಯ ಮಂಜುನಾಥ ನಾಗಪ್ಪ ನಾಯ್ಕರವರು. ವೃತ್ತಿ ಬದುಕನ್ನು ಅಪಾರವಾಗಿ ಪ್ರೀತಿಸುವ, ಇಲಾಖೆಯ ಕೆಲಸವನ್ನು ಎದೆಗಪ್ಪಿಕೊಂಡು ಕಾರ್ಯ ಸಾಧನೆಗಾಗಿ ಸದಾ ಜಾಗೃತ ಮನಸ್ಸಿನ ಸರದಾರರಿಗೆ ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ ಬಹುಮತದಿಂದ ಅವರಿಗೊಲಿದಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸುಮಾರು ಎರಡುವರೆ ದಶಕಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಹತ್ತು ಹಲವು ತರಬೇತಿ ಪಡೆದು ತರಗತಿ ಕೋಣೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಿ ಮಕ್ಕಳ ಪಾಲಿನ ಆರಾಧ್ಯ ಶಿಕ್ಷಕರೆನಿಸಿಕೊಂಡಿರುತ್ತಾರೆ. ಪಠ್ಯ- ಪಠ್ಯೇತರ ಚಟುವಟಿಕೆಗಳಲ್ಲಿಯೂ ಇವರ ಪ್ರತಿಭೆ ಮೆರೆದಿದೆ. ಓರ್ವ ಪ್ರಾಥಮಿಕ ಶಾಲಾ ಶಿಕ್ಷಕ ಮಕ್ಕಳ ಸ್ನೇಹಿ ಶಿಕ್ಷಕರಾಗಿ ಬಹುಮುಖ ಪ್ರತಿಭಾವಂತರಾದ ಇವರು ಶ್ರೀ ಶಕ್ತಿ ವೀರ ಮಾರುತಿ ಚಿಣ್ಣರ ಯಕ್ಷಗಾನ ಮಂಡಳಿಯ ಕಲಿಕಾ ಕೇಂದ್ರದ ಸಂಸ್ಥಾಪಕ ಸದಸ್ಯರಾಗಿ ಹುಟ್ಟೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಂದೆ ನಾಗಪ್ಪ ನಾಯ್ಕ, ತಾಯಿ ಗಂಗೆ ನಾಯ್ಕರ ಮಗನಾಗಿ 1978 ರಲ್ಲಿ ಕುಮಟಾ ತಾಲೂಕಿನ ಕಾಗಾಲನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕಾಗಾಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ, ಪ್ರೌಢ ಶಿಕ್ಷಣ ಶ್ರೀ ಲೋಕನಾಥ ಪ್ರೌಢಶಾಲೆಯಲ್ಲಿಯೂ, ಬಾಡದ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ವೃತ್ತಿ ಬದುಕಿನ ಶಿಕ್ಷಣ ಅಂಕೋಲದಲ್ಲಿ ಪೂರೈಸಿ 1999 ರಲ್ಲಿ ಮುಂಡಗೋಡ ತಾಲೂಕಿನ ಹರಗನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ಎಂಟು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ 2007ರಲ್ಲಿ ಕುಮಟಾ ತಾಲೂಕಿನ ದೀವಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದಿಷ್ಟು ದಿನಗಳ ಕಾಲ ಸೇವೆ ಸಲ್ಲಿಸಿ, ನಂತರ ಹುಣಸೆ ಕೊಪ್ಪ ಶಾಲೆಗೆ ವರ್ಗವಾಗಿ ಬಂದರು. ಅಲ್ಲಿ ಸುಮಾರು ನಾಲ್ಕುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಅಳಕೋಡ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಕಿಮಾನಿ ಉರ್ದು ಶಾಲೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ಈಗ ಕಳೆದ ಆರು ವರ್ಷಗಳಿಂದ ಅಘನಾಶಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಲೂಕು, ಜಿಲ್ಲೆ, ರಾಜ್ಯ ಹಂತದ ಇಲಾಖಾ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಅನುಭವಿದೆ. ಕೆ. ಎಸ್. ಕ್ಯೂ.ಎ.ಎ.ಸಿ.ಮೌಲ್ಯಾಂಕನದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಕಾ ತಂಡದಲ್ಲಿ ಭಾಗವಹಿಸಿರುತ್ತಾರೆ.

“ಸತ್ವೇ ಸಿದ್ಧಿ: ನೋಪಕಣೇ” ಎನ್ನುತ್ತದೆ ಸಂಸ್ಕೃತದ ಉಕ್ತಿ. ಸತ್ವ ಉಳ್ಳವನು ಹೇಗಾದರೂ ಮಾಡಿ ಕಾರ್ಯ ಸಾಧಿಸಿಯೇ ಸಾಧಿಸುತ್ತಾನೆ. ಚೆನ್ನಾಗಿ ಕಾರ್ಯ ಸಾಧಿಸುವ ಪಣತೊಟ್ಟವನಿಗೆ ಉಪಕರಣಗಳು ಮುಖ್ಯವಾಗುವುದಿಲ್ಲ. ಆ ತಂಡದಲ್ಲಿರುವ ಇತರ ಸದಸ್ಯರ ಸಾಮೂಹಿಕ ತೀರ್ಮಾನವೇ ಪ್ರಮುಖವಾಗಿರುತ್ತದೆ. ಉತ್ತಮ ಕಾರ್ಯ ಸಿದ್ದಿಸುವ ತಂಡ ಇವರಲ್ಲಿದೆ. ಈ ಎಲ್ಲ ಜೊತೆಗಾರರು ಒಂದಾಗಿ ದುಡಿದರೆ ಯಶಸ್ಸು ತಾನಾಗಿಯೇ ಒಲಿಯುತ್ತದೆ. ಶಿಕ್ಷಕರಿಗೆ ಬೇಕಾಗಿರುವುದು ಸಂಘ- ಸಂಘಟನೆಯ ಶಿಕ್ಷಕರ ಪರವಾದ ಒಮ್ಮತದ ತೀರ್ಮಾನ ಮಾತ್ರ.

ಕಾಣುವ ಸತ್ಯವನ್ನು, ಕಾಣದಿರುವ ಸತ್ಯವನ್ನು ಸಮರಸಗೊಳಿಸುವ ಸಮನ್ವಯ ದೃಷ್ಟಿ ಎಲ್ಲರಲ್ಲೂ ಇದ್ದು ಸಮಚಿತ್ತದಿಂದ ದುಡಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಶಿಕ್ಷಕರ ಬೇಡಿಕೆಗಳು, ಸಮಸ್ಯೆಗಳು ಬೆಟ್ಟದಷ್ಟಿದೆ. ಸಮಚಿತ್ತದಿಂದ ಎಲ್ಲರ ಸಮಸ್ಯೆಗಳನ್ನು ಆಲಿಸಿ ಅದೊಂದು ಸವಾಲಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಿ ಶಿಕ್ಷಕರ ಸಮಸ್ಯೆಗೆ ನ್ಯಾಯ ಒದಗಿಸಿದಾಗಲೇ ಶಿಕ್ಷಕ ಸ್ನೇಹಿ ಸಂಘವಾಗಿ ಬೆಳೆಯಲು ಸಾಧ್ಯ.

“ಬಿದ್ದಲ್ಲಿಯೇ ಹುಡುಕಬೇಕು”, “ಇದ್ದಲ್ಲಿಯೇ ಅರಸಬೇಕು” ಆಗ ನಾವರಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಆದರೆ ಸಂಘ -ಸಂಘಟನೆಯಲ್ಲಿ ಬಿದ್ದ ಜಾಗ,ಇದ್ದ ಜಾಗ ಗೊತ್ತಿದ್ದರೂ ನಮ್ಮೊಳಗಿದ್ದು ನಮ್ಮಂತಾಗದೆ ಬೇರೆ ಜಾಗ ತೋರಿಸಿ ಚಂದ ನೋಡುವ ಚಂದಾದಾರರು ಇರುವಾಗ ಸಂಘಟನೆಯ ಮನಸ್ಸು ಸದಾ ಜಾಗೃತರಾಗಿ ಸಮಸ್ತ ಶಿಕ್ಷಕರ ಪರವಾಗಿ ಮುಂದಡಿ ಇಡಲೆಂದು ತಾಲೂಕಿನ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್.ನಾಯ್ಕ, ಹೊಳೆಗದ್ದೆ

Exit mobile version