Site icon ಒಡನಾಡಿ

ಉಮೇಶ ಕೆರೆಕಟ್ಟೆಯವರ ಹೆಗಲಿಗೆ ಭಟ್ಕಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಟ್ಟ

ಎಲ್ಲರ ನಡುವೆಯೂ ಪ್ರೀತಿಯ ಸೇತುವೆಗಳಾಗಲೂ ಪರಸ್ಪರ ಸಂಪರ್ಕಕ್ಕೆ ಅಡ್ಡ ನಿಲ್ಲುವ ಕೆರೆ-ಕಟ್ಟೆಗಳನ್ನೆಲ್ಲ ನೆಲಕ್ಕುರುಳಿಸಿ ಎಲ್ಲರ ಬದುಕು ಸಮರಸವಾಗಬೇಕು ಎಂಬ ಕನಸು ಕಟ್ಟಿದ ನಿಷ್ಕಲ್ಮಶ ಹೃದಯಿ ಮುರುಡೇಶ್ವರದ ಉಮೇಶ ಕೆರೆಕಟ್ಟೆಯವರಿಗೆ ಭಟ್ಕಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ ಒಲಿದು ಬಂದಿದೆ.

ತಾಲೂಕಿನಾದ್ಯಂತ ಕೆರಿಕಟ್ಟಿ ಎಂದೇ ಪರಿಚಿತರಾಗಿ ಎಲ್ಲೆರೊಳಗೊಂದಾಗಿ ಎಲ್ಲರಂತಾಗದೆ ದಾನ- ಧರ್ಮದ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಅಪ್ಪಟ ಗ್ರಾಮೀಣ ಪ್ರತಿಭೆ.

ಬಾಲ್ಯದ ಬದುಕಿನಲ್ಲಿ ಎದುರಾದ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಂತು “ತಲ್ಲಣಿಸದಿರು ಕಂಡ್ಯ ತಾಳು ಮನವೇ” ಎನ್ನುತ್ತ ಇಡೀ ಕುಟುಂಬದ ಜವಾಬ್ದಾರಿ ಹೊತ್ತು ಹೊಟ್ಟೆಪಾಡಿಗಾಗಿ ಪುಟ್ಟ ಹೋಟೆಲ್ ಪ್ರಾರಂಭಿಸಿ ಸಹೋದರರ ಜೊತೆಗೂಡಿ ಬಾಳಿ ಬದುಕಿದ ಸೋಲಿಲ್ಲದ ಸರದಾರರು.

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನ್ನು ನೀನು ನೆನೆ ನೆನೆದು ಕೆರಳಿ
ಧರೆಯೆಲ್ಲವನ್ನು ಶಪಿಸಿ ಮನದಿ ನರಕವ ನಿಲಿಸಿ
ನರಳುವುದು ಬದುಕೇನು?- ಮಂಕುತಿಮ್ಮ
ಡಿವಿಜಿ ಅವರ ಹೇಳಿಕೆಯಂತೆ “ಹಪಹಪಿಸುತ್ತಾ ಬದುಕುವುದು ಬದುಕಲ್ಲ” ಎಂದು ತೋರಿಸಿ ವೃತ್ತಿ ಬದುಕನ್ನು ಉಸಿರಾಗಿಸಿಕೊಂಡು ಮಕ್ಕಳ ಪಾಲಿನ ಆರಾಧ್ಯ ಶಿಕ್ಷಕರಾಗಿ ಇಲಾಖೆಯ ಘನತೆ ಗೌರವ ಹೆಚ್ಚಿಸಿದವರು. ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡು ಕಷ್ಟದಲ್ಲಿರುವವರಿಗೆ ತನ್ನ ಸಂಬಳದ ಕಾಸಿನಲ್ಲಿ ಒಂದಿಷ್ಟು ದಾನ ಮಾಡಿ “ದೀನಸೇವೆಯೇ ದೇವರ ಪೂಜೆ” ಎಂದು ನಂಬಿದ ಗೆಳೆಯ ಉಮೇಶನಿಗೆ ಒಲಿದ ಅಧ್ಯಕ್ಷ ಪಟ್ಟ ತಾಲೂಕಿನ ಶಿಕ್ಷಕರಲ್ಲಿ ಹೊಸ ಆಶಾ ಭಾವನೆ ಮೂಡಿಸಿದೆ.

ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಕುಟುಂಬದಲ್ಲಿ 1971ರಲ್ಲಿ ಮಾವಳ್ಳಿಯಲ್ಲಿ ಜನಿಸಿದ ಉಮೇಶ ಗಣಪತಿ ಕೆರೆಕಟ್ಟೆಯವರ ಬಾಲ್ಯದ ದಿನಗಳು ಕಷ್ಟಕರವಾಗಿತ್ತು. ಬಾಲ್ಯದಲ್ಲಿಯೇ ಏನನ್ನಾದರೂ ಸಾಧಿಸುವ ಛಲದೊಂದಿಗೆ ಮುಂದಡಿ ಇಡುತ್ತ ಮುರುಡೇಶ್ವರ ಸನ್ನಿಧಿಯಲ್ಲಿ ತಂದೆಯವರ ಆಶಯದಂತೆ ಪುಟ್ಟ ಹೋಟೆಲ್ ಪ್ರಾರಂಭಿಸಿ ಬದುಕಿನ ದಾರಿ ಕಂಡುಕೊಂಡರು. ಪ್ರಾಥಮಿಕ, ಪ್ರೌಢ, ವೃತ್ತಿ ಬದುಕಿನ ಶಿಕ್ಷಣ ಪೂರೈಸಿ 1995 ರಲ್ಲಿ ಭಟ್ಕಳ ತಾಲೂಕಿನ ಬೆಣಂದೂರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು.

ಇಲ್ಲಿಂದಲೇ ಉಮೇಶರವರ ಬದುಕಿನ ದಿಕ್ಕೆ ಬದಲಾಯಿತು. ಹೋದಲೆಲ್ಲ ಉತ್ತಮ ಶಿಕ್ಷಕರೆಂದು ಮನೆಮಾತಾದರು. 2001 ರಿಂದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಹಾಡುವಳ್ಳಿ, ಕೋಣಾರ,ತೆಂಗಿನಗುಂಡಿ ಮುಂತಾದ ಕಡೆ ಸೇವೆ ಸಲ್ಲಿಸಿ ಶಿಕ್ಷಕರ ಪ್ರೀತಿಗೆ ಪಾತ್ರರಾದರು. ಇಲಾಖೆಯ ಪ್ರತಿಭಾ ಕಾರಂಜಿ, ಅಕ್ಷರ ದಾಸೋಹ, ಸರ್ವ ಶಿಕ್ಷಣ ಅಭಿಯಾನ ಕಾಮಗಾರಿಗಳ ಜವಾಬ್ದಾರಿ ಇವರ ಹೆಗಲಿಗೆರಿದಾಗ ದೃತಿಗೆಡದೆ ನಿಭಾಯಿಸಿ ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು. ನಂತರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೂರು ಇಲ್ಲಿಗೆ ವರ್ಗವಾಗಿ ಬಂದು ಸುಮಾರು 18 ವರ್ಷಗಳ ಸೇವೆ ಸಲ್ಲಿಸಿ ಈಗ ಗುಮ್ಮನ ಹಕ್ಕಲು ಶಾಲೆಯಲ್ಲಿ ವೃತ್ತಿ ಬದುಕನ್ನು ಮುಂದುವರಿಸಿರುತ್ತಾರೆ.

ತಮ್ಮ ವೃತ್ತಿ ಬದುಕಿನ ಜೊತೆಯಲ್ಲಿ ಮೂರು ಅವಧಿಗಳ ಕಾಲ ನೌಕರರ ಸಂಘದ ಪದಾಧಿಕಾರಿಗಳಾಗಿ ಒಂದು ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಶಿಕ್ಷಕ ಸಂಘಟನೆಯಲ್ಲಿ ಮೂರು ಬಾರಿ ಪದಾಧಿಕಾರಿಯಾಗಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ ಹಲವು ನಿದರ್ಶನಗಳಿವೆ. ಅತ್ಯಂತ ಕ್ರಿಯಾಶೀಲರಾದ ಉಮೇಶ ಕೆರೆಕಟ್ಟೆಯವರು ನಾಟಕ ಕಲಾವಿದರು ಕೂಡ. ಕಳೆದ ಎಂಟು ವರ್ಷಗಳಿಂದ ಸತತವಾಗಿ ಇವರ ನಾಟಕ ತಂಡ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ಜೀವನವೆಂದರೆ ಸಣ್ಣಪುಟ್ಟ ಸಂಗತಿಗಳ ಒಂದು ದೊಡ್ಡ ಮೊತ್ತ ಎಂಬ ಸತ್ಯದ ಅರಿವಿನ, ಸಾಮರಸ್ಯದ,ಸಾತ್ವಿಕ ಬದುಕಿನ ಸರದಾರ ಪ್ರತಿ ಕ್ಷಣದ ಕೆಲಸಕ್ಕೂ ಮಹತ್ವ ನೀಡಿದ ಅಪರೂಪದ ಸಂಘಟಕನಿಗೆ ಶಿಕ್ಷಕ ಸಂಘ ಅಧ್ಯಕ್ಷ ಪಟ್ಟ ಒಲಿದಿದೆ. ಶಿಕ್ಷಕರ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ “ಉಪ್ಪಿನಷ್ಟು ಒಳ್ಳೆಯವರಾಗದೆ, ಸೊಪ್ಪಿನಸ್ಟು ಹಸಿರಾಗಿ” ಶಿಕ್ಷಕರ ನೋವು- ನಲಿವಿಗೆ ಸ್ಪಂದಿಸಿ ಸಂಘ ಮಾದರಿ ಸಂಘವಾಗಲಿ ಎಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸೋಣ.

ಪಿ .ಆರ್. ನಾಯ್ಕ, ಹೊಳೆಗದ್ದೆ.

Exit mobile version