Site icon ಒಡನಾಡಿ

ಗಣತಿದಾರರಿಗೆ “ಪ್ರಶಂಸನಾ ಪತ್ರ” ನೀಡಿ ಅಭಿನಂದಿಸಿದ ಹೊನ್ನಾವರದ ಅರ್ಬನ್ ಚಾರ್ಜ್ ಅಧಿಕಾರಿ

ಭಾರತದ ಜನಗಣತಿ ಇದು ರಾಷ್ಟ್ರದ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಅಗತ್ಯ ಮಾಹಿತಿಗಳನ್ನು ಪೂರೈಸುವ ಹಾಗೂ ಪ್ರಜಾಪ್ರಭುತ್ವಕ್ಕೆ ಅಡಿಪಾಯವನ್ನು ಒದಗಿಸುವ ಮೈಲುಗಲ್ಲಾಗಿದೆ. ಇಂತಹ ಪುಣ್ಯದ ಕಾರ್ಯದ ಅತಿ ದೊಡ್ಡ ಆಡಳಿತಾತ್ಮಕ ಮತ್ತು ಅಂಕಿ ಅಂಶಗಳ ಸಂಗ್ರಹ ಕಾರ್ಯದಲ್ಲಿ ಗಣತಿದಾರರಾಗಿ ಮನೆ ಪಟ್ಟಿ ಮತ್ತು ಮನೆ ಗಣತಿಯಲ್ಲಿ ಭಾಗವಹಿಸುವುದೇ ನಮ್ಮ ಪಾಲಿನ ಪುಣ್ಯದ ಕೆಲಸವಾಗಿದೆ.

ಹೊನ್ನಾವರ ಪಟ್ಟಣ ಪಂಚಾಯತಿಯ ವ್ಯಾಪ್ತಿಗೊಳಪಟ್ಟ ಗಣತಿದಾರಾದ ನಮಗೆ ಏಪ್ರಿಲ್ ಒಂದರಂದು ನಡೆದ ಮೊದಲ ಸಭೆಯಲ್ಲಿ ಅರ್ಬನ್ ಚಾರ್ಜ್ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ಏಸು ಎಸ್. ಬೆಂಗಳೂರುರವರ ಆತ್ಮವಿಶ್ವಾಸದ ಮಾತು ಪ್ರತಿಯೊಬ್ಬ ಗಣತಿದಾರರಿಗೂ ಮನ ಮುಟ್ಟಿ, ಮನತಟ್ಟಿ ಜಾಗೃತಿಗೊಳಿಸಿರುವುದಂತೂ ಸತ್ಯ.

ಏಪ್ರಿಲ್ 16,2026ರಿಂದ ಪ್ರಾರಂಭಿಸಲಾದ ಭಾರತದ ಜನಗಣತಿ 2027ರ ಮೊದಲ ಹಂತದ ಮನೆ ಪಟ್ಟಿ ಕಾರ್ಯವನ್ನು ಮಾಡಲು ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ 44 ಗಣತಿದಾರರನ್ನು, 7 ಜನ ಮೇಲ್ವಿಚಾರಕರ ತಂಡ ರಚಿಸಿ ಮನೆಮನೆ ಸರ್ವೆ ನಡೆಸಿ, ನಕ್ಷೆ ತಯಾರಿಸಲು ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾರ್ಗದರ್ಶನದಂತೆ ಗಣತಿ ಕಾರ್ಯವನ್ನು ನಿಗದಿತ ಸಮಯದೊಳಗೆ ಪೂರೈಸಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದೆವು.

ನಿಗದಿತ ಸಮಯದೊಳಗೆ ಮನೆ ಪಟ್ಟಿ ಕಾರ್ಯ ಮುಗಿಸಲು ನಮ್ಮ ನಮ್ಮ ವ್ಯಾಪ್ತಿಗೊಳಪಟ್ಟ ಮೇಲ್ವಿಚಾರಕರು ನೀಡಿದ ಮಾರ್ಗದರ್ಶನ ಈ ಹಿಂದೆ ನಡೆದ ಎಲ್ಲಾ ಗಣತಿ ಕಾರ್ಯದ ಕಹಿ ನೆನಪು ಮರೆಮಾಚಿ ಹೊಸ ಹುಮ್ಮಸ್ಸಿ ನೊಂದಿಗೆ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾದೆವು.

ಬಹುಶಃ ನನ್ನಂತಹ ಅದೆಷ್ಟೋ ಶಿಕ್ಷಕ/ ಶಿಕ್ಷಕಿ ಗಣತಿದಾರರು ಇಲಾಖೆ ಒಪ್ಪಿಸಿದ ಅದೆಷ್ಟೋ ಗಣತಿ ಕಾರ್ಯದಲ್ಲಿ ಭಾಗವಹಿಸಿ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ ಅನುಭವವಿದೆ.ಗಣತಿ ಕಾರ್ಯ ಮುಗಿದ ನಂತರ ಇಲಾಖೆಯ ಹಿರಿ, ಕಿರಿಯ ಅಧಿಕಾರಿಗಳು ಒಂದು ಕಡೆಯಾದರೆ, ನಮ್ಮಂತ ಗಣತಿದಾರರು ಇನ್ನೊಂದು ಕಡೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ? ಎನ್ನುವುದು ಇಲ್ಲಿಯ ತನಕ ನಡೆದುಕೊಂಡು ಬಂದಿರುವುದು ನಮಗೆಲ್ಲ ತಿಳಿದ ಸತ್ಯವಾಗಿದೆ. ಆದರೆ ಅಧಿಕಾರಿಗಳ ಮನಸ್ಥಿತಿ ಬದಲಾಗಿದೆ.

ಭಾರತದ ಜನಗಣತಿ 2027ರಲ್ಲಿ ಗಣತಿ ಕಾರ್ಯಕ್ಕಾಗಿ ರಚನೆಯಾದ ಮೊಬೈಲ್ ಆ್ಯಪ್ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ನಮ್ಮ ಕೆಲಸದ ವೇಗವನ್ನು ಹೆಚ್ಚಿಸಿ ಎಲ್ಲಿಯೂ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಲಿಲ್ಲ. ಇದು ಗಣತಿ ಕಾರ್ಯಕ್ಕೆ ನಮ್ಮನ್ನು ನಾವು ತೊಡಗಿಸಿ ಕೊಳ್ಳಲು ವಿಶೇಷ ಕಾರಣವಾದರೆ, ಕಾಲಕಾಲಕ್ಕೆ ಆ್ಯಪ್ ಅಪ್ಡೇಟ್ ಮತ್ತು ಇತರೆ ಡಿಜಿಟಲ್ ಮಾಹಿತಿ ನೀಡಿ ಪ್ರೋತ್ಸಾಹಿಸಿದವರು ವಿನಾಯಕ ಮೇಸ್ತ ಮತ್ತು ರಮ್ಯಾ ರವರು. ಯಾರಿಗೂ ಎಳ್ಳಷ್ಟು ಚ್ಯುತಿ ಬಾರದ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಪರಿಹರಿಸಿ ನಮಗೆ ಬೆಂಗಾವಲಾಗಿ ನಿಂತಿರುತ್ತಾರೆ. ಇವರನ್ನು ಸಮಸ್ತ ಗಣತಿದಾರರ ಪರವಾಗಿ ಅಭಿನಂದಿಸುತ್ತೇನೆ.

ಆದರೆ ಇವೆಲ್ಲವನ್ನು ಮೀರಿ ಗಣತಿದಾರರನ್ನು ಮತ್ತು ಮೇಲ್ವಿಚಾರಕರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ತಮ್ಮ ಮೃದು ಮಾತಿನಿಂದ ಹುರಿದುಂಬಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಅರ್ಬನ್ ಚಾರ್ಜ್ ಆಫೀಸರ್ ಆದ ಏಸು ಎಸ್. ಬೆಂಗಳೂರು ರವರು. ಗಣತಿದಾರರ ಹಾಗೂ ಮೇಲ್ವಿಚಾರಕರ ಕಾರ್ಯ ಶ್ಲಾಘಿಸಿ, ಅಭಿನಂದಿಸಿ “ಪ್ರಶಂಸನಾ ಪತ್ರ” ನೀಡಿ ಭಾರತದ ಜನಗಣತಿ 2027 ಯಶಸ್ವಿಗೊಳಿಸಲು ಎಲ್ಲರನ್ನು ಬಿಳ್ಕೊಟ್ಟಿರುವುದು ಗಣತಿದಾರರಾದ ಮತ್ತು ಮೇಲ್ವಿಚಾರಕರಾದ ನಮ್ಮ ಬದುಕಿನ ಅವಿಸ್ಮರಣೀಯ ಸಂದರ್ಭವಾಗಿತ್ತು.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ, ಅರ್ಬನ್ ಚಾರ್ಜ್ ಅಧಿಕಾರಿ ಏಸು ಎಸ್. ಬೆಂಗಳೂರು

ಅಭಿನಂದನಾ ಪತ್ರದ ಗೌರವ ಪಡೆದ ಗಣತಿದಾರರು ಹಾಗೂ ಮೇಲ್ವಿಚಾರಕರು

ಜಾಗರಂತಾ ಸುಣಾತ್ಥೇತಂ
ಯೇ ಸುತ್ತಾಪೇ ಷಬುಜ್ಜತ
ಸುತ್ತಾ ಜಾಗರಿತಂ ಸೆಯ್ಯೋ
ನಾಷ್ಟಿ ಜಾಗರತೋ ಭಯಂ!
ಬುದ್ಧನ ಈ ಸಂದೇಶದಲ್ಲಿ ಜಾಗ್ರತರಾದವರು ಇನ್ನು ಜಾಗೃತರಾಗಬೇಕು. ನಿದ್ರಿಸುವವರು ಎಚ್ಚರಾಗಲಿ, ಮಲಗಿರುವುದಕ್ಕಿಂತ ಎಚ್ಚರಾಗಿರುವುದು ಲೇಸು, ಏಕೆಂದರೆ ಸದಾ ಎಚ್ಚರದಲ್ಲಿರುವವನಿಗೆ ಯಾವ ಭಯವು ಇಲ್ಲ. ಬುದ್ಧನ ಈ ಉಪದೇಶವು ನಮ್ಮನ್ನು ಸದಾ ಜಾಗೃತ ಸ್ಥಿತಿಯಲ್ಲಿರುವಂತೆ ಮಾಡುವಲ್ಲಿ ಸಾರ್ಥಕತೆ ಹೊಂದಬೇಕು. ನಿದ್ರೆ ಮಾಡದಿರುವುದೇ ಎಚ್ಚರದ ಸ್ಥಿತಿಯಲ್ಲ. ನಿದ್ದೆ ಬಾರದೆ ಸಂಕಟಪಡುವವರೆಲ್ಲ ಜಾಗ್ರತರಾಗಿದ್ದಾರೆಂದು ಅರ್ಥವಲ್ಲ. ಈ ಜಾಗೃತಿ ಎಂದರೆ ವಿವೇಕದ ಎಚ್ಚರ. ಭಾರತದ ಜನಗಣತಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಎಲ್ಲ ಜಾಗೃತ ಮನಸ್ಸುಗಳಿಗೆ ಒಂದಿಷ್ಟು ತಂಪನ್ನೆರಚುವ ಸಂತೋಷದ ಕ್ಷಣ. ಈ ಕ್ಷಣಕ್ಕಾಗಿ ತಮ್ಮನ್ನು ತಾವು ತೆರೆದುಕೊಂಡು ಎಲ್ಲ ಭಾಗಿದಾರರಿಗೆ ಭರವಸೆಯ ಬೀಜಗಳನ್ನು ಬಿತ್ತಿ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗನ್ನು ನೀಡಿ ಯಶಸ್ವಿಗೊಳಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಗಣತಿ ಕಾರ್ಯದ ಹೊನ್ನಾವರ ಅರ್ಬನ್ ಚಾರ್ಜ ಅಧಿಕಾರಿ ಏಸು ಎಸ್. ಬೆಂಗಳೂರುರವರು. ಇಂತಹ ಓರ್ವ ಅಪರೂಪದ ಅಧಿಕಾರಿಯ ನಿಷ್ಕಲ್ಮಶ ಹೃದಯವಂತರಾದ ಶ್ರೀಯುತರು ಗಣತಿ ಕಾರ್ಯದಲ್ಲಿ ಭಾಗವಹಿಸಿದ ಎಲ್ಲಾ ಗಣತಿದಾರರನ್ನು ಮತ್ತು ಮೇಲ್ವಿಚಾರಕರನ್ನು ಜೊತೆಯಲ್ಲಿ ಮೊಬೈಲ್ ಆ್ಯಪ್ ತಾಂತ್ರಿಕ ಸಿಬ್ಬಂದಿಗಳನ್ನು ಗಣತಿ ಮುಗಿದ ತಕ್ಷಣ ತನ್ನ ಕಚೇರಿಗೆ ಆಹ್ವಾನಿಸಿ ಅಭಿನಂದಿಸಿ, ಪ್ರತಿಯೊಬ್ಬರಿಗೂ “ಪ್ರಶಂಸನಾ ಪತ್ರ”ನೀಡಿ ಗೌರವಿಸಿರುವುದು ಇವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. 1994 ರಂದು ಪೌರಾಡಳಿತ ಸೇವೆಯಲ್ಲಿ ನೇಮಕಗೊಂಡು 2017 ರಿಂದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪುರಸಭೆ, ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣ ಪಂಚಾಯತ, ಬ್ಯಾಡಗಿ ಪುರಸಭೆಯ ಹಾಗೂ ಕಲಬುರ್ಗಿ ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಹೊನ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಯಶಸ್ವಿ 31 ವರ್ಷ ಪೌರಾಡಳಿತ ಇಲಾಖೆ ಸೇವೆಯನ್ನು ಪೂರೈಸಿ, ಇತ್ತೀಚೆಗೆ ಇಲಾಖೆಯ ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಶ್ರೇಣಿ ಒಂದು ಬಡ್ತಿ ಹೊಂದಿ ಅಂಕೋಲಾ ಪುರಸಭೆಗೆ ವರ್ಗಾವಣೆಗೊಂಡಿರುತ್ತಾರೆ. ಭಾರತದ ರಾಷ್ಟ್ರೀಯ ಕಾರ್ಯಕ್ರಮದಂತ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡ ಸರ್ವರನ್ನು ಅಭಿನಂದಿಸಿರುವುದು ನಿಜಕ್ಕೂ ಶ್ಲಾಘನೀಯ. ಗಣತಿದಾರರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಇವರನ್ನು ಸಮಸ್ತ ಗಣತಿದಾರರ ಪರವಾಗಿ ಮತ್ತು ಮೇಲ್ವಿಚಾರಕರ ಪರವಾಗಿ ಅಭಿನಂದಿಸುತ್ತೇವೆ. ಕೆಳಹಂತದ ನೌಕರರನ್ನು ಕಾರ್ಯವನ್ನು ಶ್ಲಾಘಿಸುವ, ಗೌರವಿಸುವ ಕಾರ್ಯ ಇತರರಿಗೆ ಮಾದರಿಯಾಗಲೆಂದು ಹಾರೈಸುತ್ತೇನೆ
.

ಅರ್ಬನ್ ಚಾರ್ಜ್ ಅಧಿಕಾರಿಗಳು ಮತ್ತು ಎಲ್ಲಾ ಮೇಲ್ವಿಚಾರಕರು ಸೇರಿ ತಾಂತ್ರಿಕ ಸಲಹೆಗಾರ ವಿನಾಯಕ ಮೇಸ್ತರವರನ್ನು ಅಭಿನಂದಿಸಿದರು.

ವಿನಾಯಕ ಕೆ. ಮೇಸ್ತ ಮೂಲತಃ ಹೊನ್ನಾವರದ ಉದ್ಯಮ ನಗರದವರು. ವೃತ್ತಿಯಲ್ಲಿ ಪಟ್ಟಣ ಪಂಚಾಯತಿಯ ಡಾಟಾ ಆಪರೇಟರ್, ಹಾಗೂ ತಾಂತ್ರಿಕ ಪರಿಣಿತರು . “ಕರ್ತವ್ಯವೇ ದೇವರೆಂದು” ನಂಬಿ ಹೇಳಿದ ಕೆಲಸವನ್ನೆಲ್ಲ ತಲೆಯಾಡಿಸಿ ಕ್ಷಣಾರ್ಧದಲ್ಲಿ ಮಾಡಿ ಮುಗಿಸುವ ಚಾಣಾಕ್ಷರು ಕೂಡ. ಲೈಫ್ ಈಸ್ ಡ್ಯೂಟಿ ಎಂಬ ಪ್ರಜ್ಞೆಯೊಂದಿಗೆ ಭಾರತದ ಜನಗಣತಿ ಮೊದಲ ಡಿಜಿಟಲ್ ಗಣತಿಯಾಗಿದ್ದು ತಾಂತ್ರಿಕ ಸಲಹೆಗಾರರಾದ ವಿನಾಯಕರವರು ಗಣತಿದಾರರು ತಮ್ಮ ಮೊಬೈಲ್ ನಲ್ಲಿ ಮನೆ ಪಟ್ಟಿ ಮತ್ತು ಮನೆ ಗಣತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಸಂದರ್ಭದಲ್ಲಿ ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಾ ಸಮಸ್ಯೆ ಬಂದಾಗೆಲ್ಲ ತಕ್ಷಣ ಸ್ಪಂದಿಸಿ ತುಂಬಾ ಸಹಕರಿಸಿರುತ್ತಾರೆ. ಅವರ ಜೊತೆಯಲ್ಲಿ ಸಹಕರಿಸಿದ ರಮ್ಯಾ ಮೇಡಂ ರವರನ್ನು ಸಮಸ್ತ ಗಣತಿದಾರರ ಪರವಾಗಿ ಹಾರ್ದಿಕವಾಗಿ ಅಭಿನಂದಿಸುತ್ತೇವೆ. ಗಣತಿ ಆ್ಯಪನ್ನು ತಯಾರಿಸಿದವರಿಗೆ ದೊಡ್ಡದೊಂದು ಸಲಾಂ.

ಲೇಖನ – ಪಿ. ಆರ್. ನಾಯ್ಕ
ಗಣತಿದಾರರು
ಬ್ಲಾಕ್ ಸಂಖ್ಯೆ:43 ಹೊನ್ನಾವರ.

Exit mobile version