ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ತಾಲೂಕು ಘಟಕಕ್ಕೆ ಚುನಾವಣೆ ಘೋಷಣೆಯಾಗಿದ್ದು ಮೇ 24 ರಂದು ಚುನಾವಣೆ ನಡೆಯಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಸ್.ಜಿ.ಬಿರಾದಾರ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕಕ್ಕೆ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಸಮಿತಿಗೆ 13 ಪುರುಷ ಸದಸ್ಯರು ಮತ್ತು 7 ಮಹಿಳಾ ಸದಸ್ಯರುಗಳ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಒಟ್ಟು 478 ಮತದಾರರಿದ್ದಾರೆ. ಏ.29ರ ಬುಧವಾರ ಬೆಳಗ್ಗೆ 10:30 ಗಂಟೆಯಿಂದ ನಾಮಪತ್ರವನ್ನು ಸ್ವೀಕರಿಸಲಾಗುತ್ತದೆ. ಮೇ.06 ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿರುತ್ತದೆ. ಮೇ.07 ರಂದು ಬೆಳಿಗ್ಗೆ 10:30 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 10ರಂದು ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ 24ರಂದು ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೋಗಿಲಬನದಲ್ಲಿರುವ ಶ್ರೀ ಮೃತ್ಯುಂಜಯ ಮಠದ ಸಭಾಭವನದಲ್ಲಿ ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತ ಎಣಿಕೆ ಕಾರ್ಯ ನಡೆದು ಅಂದೇ ಪಲಿತಾಂಶ ಪ್ರಕಟವಾಗಲಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರಾಗಿದ್ದವರು ಮತದಾನಕ್ಕೆ ಅರ್ಹತೆ ಹೊಂದಲಿದ್ದು, ಸದಸ್ಯತ್ವದ ದಾಖಲೆ ಕಡ್ಡಾಯವಾಗಿರುತ್ತದೆ. ನಾಮಪತ್ರ ಹಾಗೂ ಇನ್ನಿತರ ಚುನಾವಣಾ ಕಾರ್ಯನಿರ್ವಹಣೆಗಾಗಿ ಶ್ರೀ ಮೃತ್ಯುಂಜಯ ಮಠದ ಯಾತ್ರಿ ನಿವಾಸದಲ್ಲಿ ಚುನಾವಣಾ ಕಾರ್ಯಾಲಯವನ್ನು ತೆರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಸಹಾಯಕರುಗಳಾದ ಬಿ.ಎ. ನಾಗಶೆಟ್ಟಿಕೊಪ್ಪ ಮತ್ತು ವಿಜಯ ವಿ.ಕಣವಿ ಉಪಸ್ಥಿತರಿದ್ದರು.
