ತಮ್ಮದೇ ಕಾರ್ಯಾಲಯದಲ್ಲಿ ಸಹ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಮಹಿಳಾ ಅಧಿಕಾರಿಯೋರ್ವರಿಗೆ ಮೊಬೈಲ್ ಮೂಲಕ ಅಶ್ಲೀಲ ಸಂದೇಶ ರವಾನಿಸಿದ್ದರ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಯೋರ್ವರ ವಿರುದ್ದ ದೂರು ದಾಖಲಾಗಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ರಾಜಿ ಸಂಧಾನ ನಡೆಸುವ ಯತ್ನ ಕೂಡಾ ಕೆಲವರಿಂದ ನಡೆಯುತ್ತಿದೆ.
ಘಟನೆ ನಡೆದಿರುವುದು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬಿಕಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಅಂಬಿಕಾನಗರ ಕರ್ನಾಟಕ ವಿದ್ಯುತ್ ನಿಗಮದ ಯೋಜನಾ ಪ್ರದೇಶದ ಕಾಮಗಾರಿ ವಿಭಾಗದ ಅಧೀಕ್ಷಕ ಅಭಿಯಂತರ ಶಂಕರ್ ಶಾಜಪ್ಪ ಲಮಾಣಿ ಎಂಬವರ ಮೇಲೆ, ಅವರ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಹೀನಾ ಅಮಿತ್ ಅಲಿ ರಕ್ಕಸಗಿ ಎಂಬ ಮಹಿಳಾ ಅಧಿಕಾರಿಯೇ ದೂರು ದಾಖಲಿಸಿದವರಾಗಿದ್ದಾರೆ.
ದೂರಿನಲ್ಲೇನಿದೆ:
ತಾನು 2022ರ ಜುಲೈ 21 ರಿಂದ ಅಂಬಿಕಾನಗರ ವಿದ್ಯುತ್ ನಿಗಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ಹಿರಿಯ ಅಧಿಕಾರಿಗಳಾದ ಶಂಕರ್ ಲಮಾಣಿ ಎಂಬವರು ತನ್ನ ಮೊಬೈಲಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದಲ್ಲದೆ, ಮಾನಸಿಕ ಕಿರುಕುಳ ನೀಡುವ ಜೊತೆಗೆ ವೈಯಕ್ತಿಕ ಗೌರವಕ್ಕೂ ಧಕ್ಕೆ ತಂದಿದ್ದಾರೆ. ವ್ಯಂಗ್ಯವಾದ ಶಬ್ದಗಳಿಂದ ಮಾತನಾಡುತ್ತಾ ಹಲವು ದಿನಗಳಿಂದ ಕಿರುಕುಳ ನೀಡುತ್ತಾ ಬಂದಿದ್ದಾರೆ. ಏಪ್ರಿಲ್ 17 ರ ರಾತ್ರಿ 9 ಗಂಟೆಯಿಂದ ಏಪ್ರಿಲ್ 18ರ ಮುಂಜಾನೆಯ 5:30ರವರೆಗೆ ಅವರ ಮೊಬೈಲಿಂದ ನನ್ನ ಮೊಬೈಲಿಗೆ ನಿರಂತರವಾಗಿ ಲೈಂಗಿಕ ಶಬ್ದಗಳನ್ನು ಬಳಸಿ ಮಾನಸಿಕ ಹಿಂಸೆ ನೀಡುವಂತಹ ಮೆಸೇಜುಗಳನ್ನು ರವಾನಿಸಿದ್ದಾರೆ. ಇವರಿಂದ ತನ್ನ ಆತ್ಮ ಗೌರವಕ್ಕೂ ಧಕ್ಕೆಯಾಗಿದ್ದು, ಇವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿರುವ ಮಹಿಳಾ ಅಧಿಕಾರಿ ಹೀನ ರಕ್ಕಸಗಿ ಯವರು ತನ್ನ ಪತಿ ಹಾಗೂ ಸಂಬಂಧಿಕರ ಜೊತೆ ಚರ್ಚಿಸಿಲು ವಿಳಂಬವಾಗಿರುವ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ಕೂಡ ದೂರಿನಲ್ಲಿ ದಾಖಲಿಸಿದ್ದಾರೆ.
ಅಂಬಿಕಾ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ನಸ್ರೀನ್ ತಾಜ್ ಚಟ್ಟರಕಿ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
