Site icon ಒಡನಾಡಿ

ಆದಾಯ ಮತ್ತು ಖರ್ಚಿನ ನಡುವೆ ಸಮನ್ವಯದ ಲೆಕ್ಕಾಚಾರ ಇರಬೇಕು : ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಶಿರಸಿ: ಆದಾಯ ಮತ್ತು ಖರ್ಚಿನ ನಡುವೆ ಸರಿಯಾದ ಲೆಕ್ಕಾಚಾರ ಇರಬೇಕು. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಸಾಲ ಬಾಧೆಯಿಂದ ನರಳಬೇಕಾಗುತ್ತದೆ ಎಂದು ಸೊಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಶಿರಸಿ ತಾಲೂಕಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಬಕ್ಕಳದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶಿರ್ವಚನ ನೀಡಿದರು.

ಅಮೃತ ಮಹೋತ್ಸವವು ಮುಂದಿನ ದಿನಗಳಿಗೆ ಸಹಕಾರಿಯ ಪ್ರಗತಿಗೆ ಪೀಠಿಕೆಯಾಗಲಿದೆ. ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ ಆದರೆ ಬೆಳೆಸಿಕೊಂಡು ಹೋಗುವುದು ಸವಾಲು.
ಸಹಕಾರಿ ಸಂಸ್ಥೆ ಉಳಿಯಬೇಕಾದರೆ ಸದಸ್ಯರ ಸಂಖ್ಯೆ ಹೆಚ್ಚಿರಬೇಕು. ಸದಸ್ಯರ ಸಂಖ್ಯೆ ಹೆಚ್ಚಾಗಲು ಜನಸಂಖ್ಯೆ ಹೆಚ್ಚಳ ವಾಗಬೇಕು. ಹಳ್ಳಿಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಜನ‌ಸಂಖ್ಯೆ ಉಳಿಸಿಕೊಳ್ಳಬೇಕು. ದೇಶದ ವಿಚಾರಗಳ‌ ಜೊತೆಗೆ ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ಮರೆಯಬಾರದು ಎಂದರು.

ಹಳ್ಳಿಗಳಲ್ಲಿ ಜನಸಂಖ್ಯೆ ಹೆಚ್ಚಳ ವಾದರೆ ಮಾತ್ರ ಸಹಕಾರಿ ಸಂಘಗಳು ಉಳಿಯುತ್ತದೆ ಎಂದ ಅವರು, ಅಡಿಕೆ ಬೆಳೆಗಾರರಿಗೆ ಸಂಕಷ್ಟ ಕಾಲ ಎದುರಾಗಿದೆ. ಅಡಿಕೆ ಬೆಳೆ ವೇಗವಾಗಿ ಕಡಿಮೆ ಯಾಗಿದೆ. ತೋಟಗಳೇ ನಾಶವಾಗಿದೆ. ಬದುಕುವುದು ಹೇಗೆ ಎಂಬ ಪ್ರಶ್ನೆ ರೈತರಲ್ಲಿ ಎದುರಾಗಿದೆ. ಅಡಿಕೆ ಜೊತೆಗೆ ನಾಲ್ಕು ಬೆಳೆಗಳನ್ನು ಈ ಹಿಂದೆ ಬೆಳೆಯಲಾಗುತ್ತಿತ್ತು. ಉಪ ಬೆಳೆಗಳನ್ನು ಬೆಳೆಯಬೇಕು. ಮಿಶ್ರ ಕೃಷಿಯನ್ನು ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಕೃಷಿ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಮಠದಲ್ಲಿ ಕೃಷಿ ಜಯಂತಿಯನ್ನು ಕಳೆದ 18 ವರ್ಷಗಳಿಂದ ಆಚರಿಸಲಾಗುತ್ತಿದೆ.

ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯವಿದೆ. ಮಣ್ಣಿನ ಆರೋಗ್ಯ ಹಾಳಾದ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ವ್ಯಾಪಕವಾಗಿ ಹರಡಿದೆ. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿವರ್ಷ ಮಣ್ಣಿನ ತಪಾಸಣೆ ಮಾಡಿಸಬೇಕು. ಧಾರ್ಮಿಕ ಕಾರ್ಯಕ್ರಮಗಳನ್ನೂ ಮಠದಲ್ಲಿ ಮಾಡಲಾಗಿದೆ. ಕೃಷಿಯಲ್ಲಿ ಬದಲಾವಣೆಯಾದರೆ ಉತ್ತಮವಾಗಿರುತ್ತದೆ. ಕಾಫಿ ಬೆಳೆಯನ್ನು ಬೆಳೆಯಲು ಈಗಾಗಲೇ ರೈತರು ಆರಂಭಿಸಿದ್ದಾರೆ ಎಂದರು.
ಸೊಸೈಟಿ ಅಧ್ಯಕ್ಷ ಗಣಪತಿ ನರಸಿಂಹ ಹೆಗಡೆ ನಕ್ಷೆ ಪ್ರಾಸ್ತಾವಿಕವಾಗಿ ಮಾತನಾಡಿದರು .

Exit mobile version