ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವಾರ್ಷಿಕವಾಗಿ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಪರಿಚಯಿಸಲು ಕರ್ನಾಟಕ ಸರ್ಕಾರ ಸಿದ್ಧವಾದಂತಿದೆ.
ಈಗಾಗಲೇ ಬಿಹಾರ ರಾಜ್ಯ 1992ರಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಪರಿಚಯಿಸಿದ್ದು, ಪ್ರತಿ ತಿಂಗಳು ಎರಡು ದಿನಗಳ ರಜೆ ಒದಗಿಸಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮುಟ್ಟಿನ ರಜೆ ವಿವಿಧ ಸ್ವರೂಪದಲ್ಲಿದೆ. ಇದೀಗ ಕರ್ನಾಟಕದಲ್ಲೂ ಈ ಕುರಿತು ರಾಜ್ಯ ಸರ್ಕಾರ ಮಹತ್ವ ನಿರ್ಧಾರವನ್ನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರ ರಜೆ ನೀಡುವ ವಿಚಾರದಲ್ಲಿ ಸರ್ಕಾರ ದ್ವಂದ್ವದಲ್ಲಿ ಸಿಲುಕಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಒಮ್ಮತಾಭಿಪ್ರಾಯ ಮೂಡಿದರೆ ಮುಂದಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲು ಕಾರ್ಮಿಕ ಇಲಾಖೆ ಬಯಸಿದೆ. ಋತುಚಕ್ರ ರಜೆ ಕೊಡಬೇಕೆಂಬ ಚಿಂತನೆ ಮೊಳಕೆಯೊಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಡಾ. ಸಪ್ಪಾ ಮುಖರ್ಜಿ ನೇತೃತ್ವದ ತಂಡ ರಚಿಸಿತ್ತು. ಆ ಸಮಿತಿ ವಿವಿಧ ವರ್ಗದವರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದೀಗ ಸರ್ಕಾರದ ಮಟ್ಟದಲ್ಲಿ ವಿಮರ್ಶೆ ನಡೆದಿದ್ದು, ಪರ ವಿರೋಧದ ಅಭಿಪ್ರಾಯ ಕೇಳಿಬಂದಿದೆ.
ಇನ್ನೂ ರಜೆ ಕುರಿತು ಈಗಾಗಲೇ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಈ ಕಾರಣದಿಂದಾಗಿ ಸಂಪುಟ ಸಭೆಯಲ್ಲಿ ವಿಷಯ ಮುಂದಿಟ್ಟು, ಚರ್ಚೆಗೆ ಅವಕಾಶ ಮಾಡಿಕೊಡಲು ಕಾರ್ಮಿಕ ಇಲಾಖೆ ಉದ್ದೇಶಿಸಿದೆ. ಆರಂಭಿಕವಾಗಿ ಖಾಸಗಿ ವಲಯದಲ್ಲಿ ಜಾರಿಗೆ ತರುವುದು ನಂತರ ಸರ್ಕಾರಿ ವ್ಯವಸ್ಥೆಗೂ ವಿಸ್ತರಿಸಲು ಉದ್ದೇಶವಿದೆ ಎಂದು ವಿವರಿಸಿದ್ದಾರೆ. ರಜೆ ವಿಷಯ ಸುಪ್ರಿಂಕೋರ್ಟ್‌ನಲ್ಲಿ ಪ್ರಸ್ತಾಪವಾಗಿ ಈ ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು.
ರಾಜ್ಯದಲ್ಲಿ ನೀತಿ ರೂಪಿಸುವ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಉತ್ಸುಕರಾಗಿದ್ದರು. ಪ್ರತಿ ತಿಂಗಳು ಮೂರು ದಿನ ರಜೆ ಕೊಡಬೇಕೇ? ಎರಡು ದಿನ ಸಾಕೇ ಅಥವಾ ವರ್ಷಕ್ಕೆ ಇಂತಿಷ್ಟು ರಜೆ ಎಂಬುದರ ಬಗ್ಗೆ ಸ್ಪಷ್ಟತೆ ತಂದುಕೊಂಡಿಲ್ಲ. ಹಾಗೆಯೇ, ಮುಟ್ಟಿನರಜೆ ನೀಡುವುದರಿಂದ ಸಣ್ಣ ಖಾಸಗಿ ಸಂಸ್ಥೆ ಸರ್ಕಾರದ ಸಣ್ಣ ವ್ಯವಸ್ಥೆಯಲ್ಲಿ ಆಗಬಹುದಾದ ಪರಿಣಾಮದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರತಿ ತಿಂಗಳು ಮೂರು ಹೆಚ್ಚುವರಿ ರಜೆ ಮಹತ್ವದ ತೀರ್ಮಾನವಾಗಲಿದ್ದು, ಮಾದರಿ ಎನಿಸಲಿದೆ. ಇತರ ರಾಜ್ಯಗಳು ಅನುಸರಿಸಬಹುದು. ಈ ತೀರ್ಮಾನ ಕೈಗೊಂಡರೆ ಮಹಿಳಾ ಉದ್ಯೋಗಿಗಳ ವರ್ಗ ಖುಷಿಪಡಬಹುದು, ಭವಿಷ್ಯದಲ್ಲಿ ಎನ್‌ಕ್ಯಾಶ್ ಮಾಡಿಕೊಳ್ಳಲು ಅವಕಾಶ. ಮಹಿಳೆಯರ ಬಗ್ಗೆ ಕಾಳಜಿ ನೀಡಿದ್ದು ಮೈಲುಗಲ್ಲಾಗಬಹುದು. ರಾಜಕೀಯವಾಗಿಯೂ ಲಾಭ ತಂದುಕೊಡಬಹುದು ಎಂದು ಹೇಳಲಾಗಿದೆ.